ಕವಿ – ಗೋಪಾಲಕೃಷ್ಣ ಅಡಿಗ

೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ

೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ;
ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೇ?

ವಿವಶವಾಯಿತು ಪ್ರಾಣ ; ಹಾ! ಪರವಶವು ನನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

***     ***       ***       ***        ***

38 thoughts on “ಮೋಹನ ಮುರಲಿ – ಗೋಪಾಲಕೃಷ್ಣ ಅಡಿಗ”

  1. ಅದು ‘ಯಾವ ಮೋಹನ ಮುರಳಿ ಕರೆಯಿತು’ ಇರ್ಬೇಕು ಅಲ್ವಾ?

    ‘ಮುರಲಿ’ ಅಂತ ಉಚ್ಚಾರಣೆ ಇರೋದು ಹಿಂದಿಯವರಲ್ಲಿ ಮಾತ್ರಾ ಯಾಕೇಂದ್ರೆ ಅವರು ಆ ಹೆಸರಿನವರನ್ನ ಹಾಗೇ ಉಚ್ಚರಿಸೋದು, ಇನ್ನು ‘ಮುರಳಿ’ ಅನ್ನೋದು ನಮ್ಮವರು ಉಚ್ಚರಿಸುವುದು. ಮುರಳೀಗಾನ, ಮುರಳೀಕೃಷ್ಣ, ಮುರಳೀಧರ ಅಂತ ಕರೆಯೋದು ವಾಡಿಕೆ. ‘ಳಿ’ ಬಂದಿರುವೆಡೆ ‘ಲೀ’ ಉಪಯೋಗ ಸ್ವಲ್ಪವೂ ಚನ್ನಾಗಿ ಕೇಳೋಲ್ಲ. ಅಡಿಗರು ಬರ್ದಿರೋದು ‘ಮುರಲೀ’ ಅಂತಾನೇನಾ?

    ನನಗೆ ಈ ಹಾಡೆಂದರೆ ಅಷ್ಟಕ್ಕಷ್ಟೆ. ರಾಗವೇ ಬೋರುಉಉಉಉಉಉಉಉಊ…ಆದರೆ ಇದು ಅತ್ಯಂತ ಜನಪ್ರಿಯ ಗೀತೆ ಅನ್ನೋದು ಗೊತ್ತಿರುವ ವಿಷಯ.

  2. ಮೀರಾ, “ಮುರಲಿ” ಅನ್ನೋದೇ ಸರಿ ಅನ್ನಿಸುತ್ತಿದೆ. ನನ್ನ ಹತ್ತಿರ ಇದ್ದ “ಹೊಸಗನ್ನಡ ಕವಿತೆಗಳು” ಅನ್ನುವ ಸಂಕಲನದಲ್ಲಿ ಈ ಕವಿತೆ ಇತ್ತು. ಈಗೆಲ್ಲಿದೆಯೋ ಸಿಗುತ್ತಿಲ್ಲ.

    ಯಾರಲ್ಲಾದರೂ ಈ ಕವಿತೆ ಇದ್ದರೆ, ಅದು ಕನ್ನಡದ ಮುರಳಿಯೋ, ಹಿಂದಿಯ ಮುರಲಿಯೋ ಸ್ವಲ್ಪ ನೋಡಿ ಹೇಳುತ್ತೀರಾ? 🙂

  3. ‘ಮುರಳಿ’ ಅನ್ನೋದರಲ್ಲಿ ಇರೋ ಸವಿ ‘ಮುರಲಿ’ ಅನ್ನೋದ್ರಲ್ಲಿ ಇಲ್ಲ, ಕನ್ನಡದಲ್ಲಿ ಮುರಲೀ ಅನ್ನೋ ಪದ ಮೊದಲ ಬಾರಿಗೆ ಕೇಳುತ್ತಿರೋದು, ಈ ಹಾಡನ್ನ ‘ಮುರಲೀ’ ಅನ್ನೋ ಪದ ಬಳಸಿ ಕೇಳೋಕ್ಕೆ ಕಿವಿಗೆ ಒಂಥರಾ ಕಿರಿಕಿರಿ, ಮುದ್ದಾದ ‘ಮುರಳಿ’ಗೆ ಎಂಥಾ ಗತಿ.

    ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ‘ಮುರಳಿ’ಯೇ, ಕನ್ನಡದ ಕವಿತೆಯಲ್ಲಿ ‘ಮುರಲಿ’ಗೆ ಏನು ಕೆಲಸಾ?

  4. ಭಾಗ 1: ನೇರನುಡಿ.
    ————-
    ನಾನು ಮೀರಾ ಅವರ ಮಾತನ್ನು ಅನುಮೋದಿಸುತ್ತೇನೆ. ‘ಮುರಳಿ’ ಕೇಳಿದರೆ ಮರಳಿ ಮರಳಿ ಬರುವ ಖುಶಿ ‘ಮುರಲಿ’ ಎಷ್ಟೇ ಇಂಪಾಗಿ ಬರಲಿ, ಅದರಲ್ಲಿರುವುದಿಲ್ಲ. ಅಡಿಗರು ಬರೆದ ಸಾಹಿತ್ಯದ ಪ್ರತಿ ನನ್ನ ಬಳಿ ಇಲ್ಲ, ಹಾಗಾಗಿ ಅವರು ‘ಮುರಳಿ’ ಎಂದಿದ್ದಾರೋ ‘ಮುರಲಿ’ ಎಂದಿದ್ದಾರೋ ಗೊತ್ತಿಲ್ಲ.

    ತ್ರಿವೇಣಿಯವರು ಕೊಟ್ಟಿರುವ ಎರಡು ಹೈಪರ್‌ಲಿಂಕ್‌ಗಳ ಪೈಕಿ, ರತ್ನಮಾಲಾ ಪ್ರಕಾಶ್ ಧ್ವನಿಯಲ್ಲಿ ‘ಮುರಳಿ’ ಎಂದಿದೆ; ಸಂಗೀತಾ ಕಟ್ಟಿ ಮತ್ತು ರಾಜು ಸ್ವಾಮಿ ‘ಮುರಲಿ’ ಎಂದೇ ಉಚ್ಚರಿಸಿದಂತಿದೆ.

    ಭಾಗ 2: ವಾರೆನುಡಿ. 🙂
    ——————

    ತ್ರಿವೇಣಿ ಉವಾಚ: “ನನ್ನ ಹತ್ತಿರ ಇದ್ದ ‘ಹೊಸಗನ್ನಡ ಕವಿತೆಗಳು’ ಅನ್ನುವ ಸಂಕಲನದಲ್ಲಿ ಈ ಕವಿತೆ ಇತ್ತು. ಈಗೆಲ್ಲಿದೆಯೋ ಸಿಗುತ್ತಿಲ್ಲ.”

    ಅಂದರೆ? ಈಗ ಆ ಕವನಸಂಕಲನದಿಂದ ಕವಿತೆ ತಪ್ಪಿಸಿಕೊಂಡು ಎಲ್ಲೋ ಹೋಗಿದೆಯೇ? ಯಾವುದೋ ಮುರಳಿ (ಮುರಲಿ) ಕರೆಯಿತೆಂದು ಕವಿತೆ ಸಹ ದೂರತೀರಕ್ಕೆ ಹೋಯಿತೋ ಹೇಗೆ?

    * * *

    ತ್ರಿವೇಣಿ ಉವಾಚ: “ಮೀರಾ, ‘ಮುರಲಿ’ ಅನ್ನೋದೇ ಸರಿ ಅನ್ನಿ ಸತ್ತೆ.”

    ಮೀರಾ ಅವರಲ್ಲಿ ಕಳಕಳಿಯ ವಿನಂತಿ. ಯಾವುದೇ ಕಾರಣಕ್ಕೂ ‘ಮುರಲಿ’ ಅನ್ನೋದೇ ಸರಿ ಎನ್ನಬೇಡಿ. ತ್ರಿವೇಣಿ ನೂರ್ಕಾಲ ಬಾಳಲಿ, ತುಳಸಿವನದ ಕಂಪನ್ನು ಹರಡಲಿ!

    * * *

  5. Etymological roots of the word “murali” happens to be in Sanskrit language. Please note that it is for all purposes spelled as “muralii” “ಮುರಲೀ”. The Digital South Asia Library at the University of Chicago has listed on it online dictionaries the following…

    S मुरली muralī, vulg. murlī, s.f. Flute, fife, pipe; whistle:–murlī bajānā, To play the flute, &c.:–murlī bajnā or baj-jānā (-kī), To pipe away (one’s) life, to pass (one’s life) amidst pipe and song:–murlī-dhar, s.m. The flute-bearer, an epithet of Krishṇ:–murlī-manohar, s.m. ‘Who delighted the heart with his flute,’ an epithet of Krishṇ (who delighted Rādhā and the cowherdesses with his performances on the flute).
    (http://dsal.uchicago.edu/cgi-bin/philologic/getobject.pl?c.6:1:5301.platts.1910403)

    Most dictionaries for Hindi, Marathi and Sanskrit list the murali as “ಮುರಲೀ” and not as “ಮುರಳೀ” except for Tamil dictionaries.
    ( Marathi – http://dsal.uchicago.edu/cgi-bin/romadict.pl?query=murali&display=simple&table=molesworth)

    The vastly respected Cologne Monier Williams Sanskrit dictionary maintained at University of Koeln, Denmark has the same listing as found on University of Chicago-DSAL dictionary above. The same is the case with Vaman Apte’s dictionary too for Sanskrit and Marathi. The Resource Center For Indian Language Technology Solution (CCFILT, IIT Mumbai) which is responsible for Hindi and Marathi dictionaries too corroborate the above.

    However the University of Madras which maintains the Tamil dictionaries both online and at DSAL-UIC lists below … The Tamil language does not have the seed word “la” “ಲ” instead it is “lza” which is almost “ಳ”. It is not a pure “ಳ”. It has an breath element of “ಹ” embedded. So it should sound as “ಳ್ಹ”.

    murali [ murali ] {*}, murali, s. a flute, utukuzal; 2. a small flute blown by the nose, 3. a flute made of a joint of bomboo, veyngkuzal

    முரலி (p. 3277) [ murali ] n murali . See முரளி, 1. (W.)

    முரளி (p. 3277) [ muraḷi ] n muraḷi .

    So it possible that the vast influence of Tamil kings introduced “la” in difficult Sanskrit words is a moot point.

    So just as the we say ವಭಯೋರಭೇದ:, could we say “ಲಳಯೋರಭೇದ:” so everyone is happy ?

  6. ಜೋಶಿಯವರೆ ನಿಮ್ಮ ಕಳಕಳಿಗೆ ಧನ್ಯವಾದಗಳು.

    ನಿಮ್ಮಂತಹ ಹಿತೈಷಿಗಳ ಹಾರೈಕೆ ನನಗಿರುವಾಗ, ನಾನು ನೂರ್ಕಾಲ ಬಾಳುವುದರಲ್ಲಿ, ತುಳಸಿವನದ ಕಂಪು, ಕನ್ನಡದ ಇಂಪು ಹರಡುವುದರಲ್ಲಿ ಸಂದೇಹ ಬೇಕಿಲ್ಲ.

    ನನ್ನ ಹೇಳಿಕೆಯನ್ನು ಬದಲಿಸಿಕೊಂಡಿದ್ದೇನೆ. 🙂

  7. ಮೊದಲನೇ ಲಿಂಕ್ ಕೇಳಿದಾಗ ಅದು ‘ರತ್ನಮಾಲಾ’ ಅಂತ ನಂಬೋಕ್ಕೆ ಕಷ್ಟವಾಯ್ತು, ವಿಚಿತ್ರವಾಗಿದೆ ಧ್ವನಿ. ಅವರು ಅದ್ರಲ್ಲಿ ‘ಮುರಳೀ’ ಅಂತಾನೆ ಹೇಳ್ತಾರೆ, ಆದ್ರೆ ಎರಡನೇದನ್ನ ಕೇಳಿದಾಗ ಅದ್ರಲ್ಲಿ ‘ಮುರಲಿ’ ಅಂತ ಉಚ್ಚರಿಸುತ್ತಾರೆ. ಎರಡರ ಬಳಕೆ (ಮುರಳೀ ಮತ್ತು ಮುರಲೀ) ಎರಡೂ ಹಾಡುಗಳಲ್ಲಿ ಕೇಳಿದಾಗ ವ್ಯತ್ಯಾಸ ಚೆನ್ನಾಗಿ ಗೊತ್ತಾಗತ್ತೆ.

    ಜೋಷಿಯವರು ಹೇಳಿದಂತೆ ‘ಮುರಳಿ’ ಯಲ್ಲಿನ ಸವಿ ‘ಮುರಲಿ’ ಯಲ್ಲಿ ಇಲ್ಲ. ಎಷ್ಟೋ ‘ಪ್ರಸನ್ನದಾಸರ’ ಕೃತಿಗಳಲ್ಲಿ ‘ಮುರಳೀ’ ಅನ್ನುವ ಹೆಸರನ್ನ ಬಳಸಿದ್ದಾರೆ, ಉದಾ: ‘ಮುರಳಿಯ ನಾದವ ಕೇಳೀ ಬನ್ನೀ, ಮುರಳೀ ಬಾರಿಸೋ ಮಾಧವಾ, ಇದನ್ನು ಹಾಡುವಾಗ ‘ಳಿ’ ಬದಲಿಗೆ ‘ಲಿ’ ಪ್ರಯೋಗ ಮಾಡಿದರೆ ಹಾಡು ಹೇಗಿರಬಹುದು?

  8. ಜೋಶಿಯವರ ಶೈಲಿಯನ್ನು “copy” ಮಾಡುತ್ತಾ :

    ನುಡಿ : ಳಿ ಬದಲಿಗೆ ಲಿ ಪ್ರಯೋಗ ಮಾಡಿದರೆ

    ಕಿಡಿ : ಅದಕ್ಕೇ ಪಂಡಿತೋತ್ತಮರು (ನನ್ನ ಹಾಗೆ) ಹೇಳಿದ್ದು – ಕನ್ನಡ ಪ್ರಾಕೃತ ಭಾಷೆ ಅಂದು !!

    ವೈನಾಗಿ ಮುರಲೀ ಅನ್ನೋ ಅಭ್ಯಾಸ ಬೆಳೆಸಿಕೊಳ್ಳದೆ ಮುರಳೀ ಅಂಬೋದೇ ?

  9. ಮೀರಾ, ನಾನೂ ದಾಸರ ಹಾಡುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದೆ. ನೀನು ಕೊಟ್ಟ ಎರಡು ಹಾಡುಗಳು ಮಾತ್ರ ನೆನಪಾಯಿತು.

    ಪುರಂದರದಾಸರ ಬಹಳಷ್ಟು ಕೀರ್ತನೆಗಳಲ್ಲಿ ಮುರಳಿಯ ಬದಲು “ಕೊಳಲು” ಎಂಬ ಪದವೇ ಬಳಕೆಯಾಗಿದೆ. ಕೊಳಲನೂದುತ ಬಂದ…ಇತ್ಯಾದಿ. ಇನ್ನು ಕೆಲವು ಕಡೆ “ವೇಣು” ಇದೆ. ವೇಣು ವಿನೋದನ ಗಾನಪ್ರಿಯನ..(ಯಾರೆ ರಂಗನ), ಇದಲ್ಲದೆ “ಪಿಳ್ಳಂಗೋವಿ” ಎಂಬ ಪದವೂ (ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ?) ಬಳಕೆಯಾಗಿದೆ. 

    “ಮುರಳಿ” ಪದ ಕನ್ನಡಕ್ಕೆ ಯಾವಾಗ ಸೇರಿತೋ? “ಇಗೋ ಕನ್ನಡ” ವೆಂಕಟಸುಬ್ಬಯ್ಯನವರೇ , ನೀವೇ ಗತಿ 🙂

  10. ಜೋಶಿಯವರೇ ಕಾಲು ಎಳೆಯುವುದರಲ್ಲಿ ನಿಮ್ಮನ್ನ ಮೀರಿಸುವವರು ಯಾರು? ವಾಕ್ಯವನ್ನ ಹಿಂದು ಮುಂದು ಮಾಡಿದ್ದಕ್ಕೆ ಕ್ಷಮೆ ಇರಲಿ. ಅದು ‘ಪ್ರಸನ್ನ ದಾಸರ’ ಎಷ್ಟೋ ಕೃತಿಗಳಲ್ಲಿ ಅಂತ ಇರ್ಬೇಕಿತ್ತು, ದಾಸರಾದ್ರೆ ಇವರೊಬ್ಬರೇ ಗೊತ್ತಿರೋದು, ಇದೇ ಹೆಸರಿನವರಾದ್ರೆ ತುಂಬಾ ಜನ ಗೊತ್ತು.

    ಪುರಂದರದಾಸರು, ಕನಕದಾಸರ ಕೀರ್ತನೆಗಳಲ್ಲಿ ‘ಮುರಳಿ’ ಎಂಬ ಪರ ಬಳಕೆ ತುಂಬಾ ಕಡಿಮೆ. ಆದರೆ ‘ಪ್ರಸನ್ನ ತೀರ್ಥರ’ ರಚನೆಗಳಲ್ಲಿ ನಾನು ತುಂಬಾ ಕೇಳಿದ್ದೇನೆ. ಇವೆರಡು ಹಾಡು ತಕ್ಷಣ ನೆನಪಿಗೆ ಬಂತು. ಇನ್ನೂ ಒಂದು ನೆನಪಿಗೆ ಬಂತು ..

    ಯಾರಿರಬಹುದೀತ ಗೆಳತೀ ಯಾರೆಂದರಿಯದೆ ಪೋಗದೇ ಕೊರತೇ..||ಪ||

    ಸರಳನೋ ದುರುಳನೋ ಅರಿಯುವುದೆಂತೇ ||ಚರಣ||
    ಕರೆಯದೇ ಹೋದರೆ ಜರೆಯಲು ಬಹುದೇ
    ‘ಮುರಳಿ’ಯ ನಾದದ ಕರೆ ಬಂದರೆ ನಾ..
    ಬರುವೆನೆಂದರುಹೇ ಸರಸ ಪ್ರಸನ್ನೇ….

    ಇವರ ಎಷ್ಟೋ ರಚನೆಗಳಲ್ಲಿ ‘ಮುರಳಿ’ ಅಂತಾನೇ ಇದೆ. ನಮ್ಮ ಅಮ್ಮನ ಹತ್ತಿರ ಒಂದು ಹಳೆಯ ದೇವರನಾಮದ ಪುಸ್ತಕ ಇದೆ, ಅದ್ರಲ್ಲಿ ಇವರ ಸುಮಾರು ಹಾಡುಗಳು ಇವೆ, ಇವರು ‘ಮುರಳಿ’ ಎಂಬ ಹೆಸರನ್ನ ತುಂಬಾ ಇಷ್ಟಪಡುತ್ತಿದ್ದರು ಅಂತ ಕಾಣತ್ತೆ ಅದಕ್ಕೇ ಅವರು ಮಾಮೂಲಿ ಪದಗಳಾದ ಕೃಷ್ಣನ ಕೊಳಲು, ವೇಣು ಅನ್ನುವ ಬದಲು ಕೃಷ್ಣನ ‘ಮುರಳಿ’ ಅಂತ ಬಳಸುತ್ತಿದ್ದರು ಅನ್ನಿಸತ್ತೆ. ಇನ್ನು ಬೇರೆ ದಾಸರುಗಳು ಈ ಪದವನ್ನ ಬಳಸಿದ್ದಾರೋ ಇಲ್ಲವೋ ಅನ್ನೋದನ್ನ ಯಾವುದಾದರೂ ಪುಸ್ತಕ ಹುಡುಕೇ ನೋಡಬೇಕು.

    ಇನ್ನು ‘ಪ್ರಸನ್ನ ದಾಸರು’ ‘ಪ್ರಸನ್ನ ವೇಂಕಟದಾಸರು’ ಬೇರೆ ಬೇರೆ ಅಲ್ವಾ? ಪ್ರಸನ್ನ ದಾಸರ ಹಾಡುಗಳಲ್ಲಿ ಬರೀ ‘ಪ್ರಸನ್ನ’ ಅಂತ ಬರತ್ತೆ, ಇನ್ನೊಂದು ‘ಪ್ರಸನ್ನ ವೇಂಕಟ’ ಅಂತಲೇ ಬರೋದು.

    ‘ಮುರಳಿ’ ಅನ್ನೋ ಪದ ಇಲ್ಲೇ ಹುಟ್ಟಿ ಕನ್ನಡಕ್ಕೆ ಯಾವತ್ತೋ ಸೇರಿಹೋಗಿದೆ ಅನ್ನಿಸತ್ತೆ.

  11. ವಿವರಗಳಿಗೆ ಧನ್ಯವಾದಗಳು ಮೀರಾ. ಪ್ರಸನ್ನ ವೆಂಕಟದಾಸರ ಕುರಿತು ದಾಸ ಸಾಹಿತ್ಯ ತಾಣದಲ್ಲಿ ಮಾಹಿತಿ ಲಭ್ಯವಿದೆ.  ಪ್ರಸನ್ನ ದಾಸರ ಬಗ್ಗೆ ನನಗೇನೂ ತಿಳಿದಿಲ್ಲ. ಇವರ ಬಗ್ಗೆ ಏನಾದರೂ ಗೊತ್ತಿದ್ದರೆ ತಿಳಿಸು.

    ಈಗ ಅಡಿಗರ ಕವಿತೆಗೆ ಮರಳುವುದಾದರೆ –

    ಈ ತಾಣದಲ್ಲಿ “ಮೋಹನ ಮುರಲಿ” ಕವಿತೆಯನ್ನು ಸುಂದರವಾಗಿ ವಿಶ್ಲೇಷಣೆ ಮಾಡಲಾಗಿದೆ. ಇಲ್ಲೂ “ಮುರಲಿ” ಎಂದೇ ಇದೆ. ಈ ಬ್ಲಾಗಿನ ಲೇಖಕರು ಅಡಿಗರ ಮೂಲ ಕವಿತೆಯನ್ನುನೋಡಿಯೇ ಬರೆದಿರಬಹುದೆಂದು ಭಾವಿಸಿದ್ದೇನೆ.

  12. ನಾನು ಎರಡು ದಿವಸದಿಂದ ಇಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಿ ಸುಸ್ತಾದೆ. ಇವತ್ತು ಸೂಪ್ರ ಬರೆಯಲು ಪುನರ್ ಪ್ರಯಾಸ.

    ೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ

    ಇದ್ರಲ್ಲಿ ಭಾವನೆ ಸತ್ ಹೋಗಿದೆ.

    ೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ

    ಇದ್ರಲ್ಲಿ ನಿರ್ಲಿಪ್ತತೆಯೆ ಒಂದು ಭಾವನೆ ಆಗಿದೆ.

    ಆದರೆ, ಇರ್ಬೇಕಾಗಿದ್ದು, ಇರಿಸು ಮುರಿಸಿನ ಭಾವನೆ.
    ಬದಲಾಗಿದ್ದು ತಪ್ಪು, ಬದಲಾಗದಿದ್ದಿದರೂ ತಪ್ಪಾಗುತ್ತಿತೇನೊ?

    ಒಮ್ಮೆ ಎಮ್.ಡಿ. ಪಲ್ಲವಿಯವರ ದ್ವನಿಯಲ್ಲಿ ಕೇಳಿದ್ದೆ. ಅದ್ಭುತವಾಗಿ ಹಾಡಿದ್ರು. ಯಾರ ರಾಗ ಸಂಯೋಜನೆಯೊ ತಿಳಿಯದು.

    ಮುರಳಿ/ಮುರಲಿ ಯಲ್ಲಿ, ಮುರಳಿಯೇ ಸೂಕ್ತ ಎನ್ನಿಸುವುದು.

    ಇಂತಿ
    ಭೂತಪ್ಪ

  13. ಭೂತಪ್ಪನವರು ಬರಬೇಕು! ಎಲ್ಲಿ ಹೋಗಿದ್ರಿ ಇಷ್ಟು ದಿನ?

    “ನಾನು ಎರಡು ದಿವಸದಿಂದ ಇಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಿ ಸುಸ್ತಾದೆ. ಇವತ್ತು ಸೂಪ್ರ ಬರೆಯಲು ಪುನರ್ ಪ್ರಯಾಸ”

    _ ನಿಮ್ಮ ಸಮಸ್ಯೆ ಏನೆಂದು ತಿಳಿಯಲಿಲ್ಲ. ನನಗೂ ಅನ್ವೇಷಿಗಳ ಬ್ಲಾಗಿನಲ್ಲಿ ಕಾಮೆಂಟ್ ಹಾಕಲು ಕೆಲವು ಸಲ ಕಷ್ಟವಾಗುತ್ತದೆ.

  14. ಕೆಲವು ಪ್ರತಿಕ್ರಿಯೆಗಳು:
    (೧) “ಮುರಲಿ” “ಮುರಳಿ” — ವ್ಯಾಕರಣ ರೀತಿಯಿಂದ ಕನ್ನಡದಲ್ಲಿ ಎರಡೂ ಸರಿ. ಆದರೆ ಆಡುಮಾತಿನಲ್ಲಿ, ರೂಢಿಯಲ್ಲಿ “ಮುರಳಿ” ಹೊಂದಿಕೊಂಡು ಹೋಗಿದೆ. ಮೂಲ ಸಂಸ್ಕೃತ ಪದ “ಮುರಲಿ”, ಅಲ್ಲಿ “ಳ”ಕಾರ ಇಲ್ಲ. ಕನ್ನಡೀಕರಿಸಿದಾಗ “ಮುರಳಿ”ಯಾಗಿದೆ. ಕನ್ನಡದಲ್ಲೂ “ಮುರಲಿ” ಪ್ರಯೋಗ ತಪ್ಪಲ್ಲ, ನಮಗೆ ರೂಢಿಯಾಗಿಲ್ಲ, ಅಷ್ಟೆ. ಇಲ್ಲಿ, ಶ್ರೀನಿ ಹೇಳಿಕೆ- “ಲಳಯೋರಬೇಧಃ” ಸರಿಯಾದ ಸಮಾಧಾನ.

    (೨) ರತ್ನಮಾಲಾ ಹಾಡು ಮೈಸೂರು ಅನಂತಸ್ವಾಮಿಯವರ ಸಂಗೀತದಲ್ಲಿ, ಭಾವ ಸರಿಯಾಗಿಲ್ಲ, ಒಪ್ಪಿದೆ. ವಿರಹ, ವಿಷಾದಗಳು ಭರ್ತಿಯಾಗಿವೆ. ಸಂಗೀತಾ-ರಾಜು ಯುಗಳ ಗೀತೆ “ಅಮೇರಿಕಾ ಅಮೇರಿಕಾ” ಚಲನಚಿತ್ರಕ್ಕಾಗಿ ಹೊಂದಿಸಿಕೊಂಡದ್ದರಿಂದ ಅಲ್ಲೂ ಕವಿತೆಯ ಮೂಲ ಭಾವ ಪೂರ್ಣವಾಗಿ ಸೇರಿಕೊಂಡಿಲ್ಲ. ಚಿತ್ರದ ಕಥಾಚೌಕಟ್ಟಿಗೆ ಸರಿಯಾಗಿ ಇದರ ಭಾವವನ್ನು `ಹೊಂದಾಣಿಕೆ’ ಮಾಡಿಕೊಳ್ಳಲಾಗಿದೆ. ಕವಿತೆಯ ಪೂರ್ಣ ಧ್ವನಿ ನಮ್ಮ ಲೌಕಿಕ ಅರ್ಥವನ್ನೂ ಮೀರಿದ್ದು. ಈ ಭೌತಿಕ ಪ್ರಪಂಚದಿಂದ ಹೊರಕ್ಕೆ, ಆಧ್ಯಾತ್ಮಿಕ ಲೋಕದ ಬಳಿಗೆ ಒಯ್ಯಬಲ್ಲ ಶಕ್ತಿ, “ಕಾಣದ ಮಿಂಚಿನ ಕೈ” ನುಡಿಸುವ “ಮೋಹನ ಮುರಳಿ”ಯೇ ಇದರ ಮರ್ಮ.

    (೩) ಪಿಳ್ಳಂಗೋವಿ ಅಚ್ಚಗನ್ನಡ ಪದ. ಹಾಗೇ, ನನಗೆ ತಿಳಿದಂತೆ, ಕೊಳಲು ಕೂಡಾ ಕನ್ನಡ ಪದವೇ. ವೇಣು ಮಾತ್ರ ಸಂಸ್ಕೃತದ ಕೊಡುಗೆ.

    (೪) ವೇಣಿ ಕೊಟ್ಟ `ಹೊಸ ಬ್ಲಾಗಿನ ಲೇಖನ’ ನಾನಿನ್ನೂ ಓದಿಲ್ಲ, ಓದಿ ಮತ್ತೆ ಬರೆಯುತ್ತೇನೆ.

  15. ಮತ್ತೊಂದು ಪ್ರತಿಕ್ರಿಯೆ, ಎಮ್.ಡಿ. ಪಲ್ಲವಿ ಅವರು ಹಾಡಿದ “ಯಾವ ಮೋಹನ ಮುರಳಿ”ಯ ಲಿಂಕ್ ಇದೆಯಾ? ಅದು ಬಹುಶಃ ಸಿ.ಅಶ್ವಥ್ ಅವರ ಸಂಗೀತ ಸಂಯೋಜನೆ ಇರಬೇಕು….!? ಸರಿಯಾಗಿ ತಿಳಿದವರು ನಮಗೂ ತಿಳಿಸಿ.

  16. ತ್ರಿವೇಣಿಯವರೇ,

    ಅದು ಮುರುಳಿ ಇರಲಿ ಅನ್ನೋರ ಪಕ್ಷಕ್ಕೆ ನನ್ನದೊಂದು ಓಟು !

    ಅದು ಏನೇ ಇರಲಿ..ಈ ಕವನ ಮಾತ್ರ ನಿಜಕ್ಕೂ ಸೂಪರ್..ಅದರಲ್ಲಿ ಬರೋ ಸಾಲುಗಳು ಎಂತಹ ಅರ್ಥಗರ್ಭಿತ..”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?”

    ಅಂದಾಗೆ ಇಲ್ಲಿ ಉಪಯೋಗಿಸಿರುವ ‘ರಿಂಗಣ’ ಪದದ ಅರ್ಥವೇನು?
    >ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ

  17. ಶಿವ್ ಪ್ರಶ್ನೆ (“ಅಂದಾಗೆ ಇಲ್ಲಿ ಉಪಯೋಗಿಸಿರುವ ‘ರಿಂಗಣ’ ಪದದ ಅರ್ಥವೇನು?
    >ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ).

    ನನಗೆ ಗೊತ್ತಿರುವಂತೆ (ಅಥವಾ ನಾನೇ ಸಿದ್ಧಪಡಿಸಿ ಪ್ರತಿಪಾದಿಸುವಂತೆ) ಉತ್ತರ:

    ‘ರಿಂಗಣ’ ಪದವು Ringing ಪದದ ತದ್ಭವ.

    ಕರಣಗಣದಿ ರಿಂಗಣ = “it’s still ringing in my ears”…

  18. ಸಂಸ್ಕೃತದ ಪ್ರಕಾರ ಮುರಲಿ, ಕನ್ನಡದಲ್ಲಿ ಮುರಳಿ ಎಂದಾಗಿರಬಹುದು ಅಲ್ವೇ? ಏನೇ ಇರಲಿ, ಸೂತ್ರ ಮಾತ್ರ ಬಹಳ ಸೊಗಸಾಗಿದೆ. 🙂

    ಯಾರೂ ರಾಯರ ಮಾತನ್ನೇ ಕಿವಿಯ ಮೇಲೆ ಹಾಕಿಕೊಂಡಿಲ್ಲ. ದಂಪತಿಗಳ ಮುಂದೆ ನಾವೆಲ್ಲರೂ ಒಬ್ಬೊಬ್ಬರೇ ಆಗಿ ದಮ್ಮು ಕಟ್ಟಲಾಗುತ್ತಿಲ್ಲ. ನಾನೇನೋ ಸೋತೆ ಎಂದೊಪ್ಪಿಕೊಳ್ಳುತ್ತಿರುವೆ.

    ಸುಂದರ ಕವನವನ್ನು ಕೊಡುಗೆಯಾಗಿ ನೀಡಿದುದಕ್ಕೆ ಮೇಡಂ ಅವರಿಗೆ ವಂದನೆಗಳು.

    ವೆಂಕಟೇಶ ಯಾರು ಅಂತ ಮತ್ತೆ ತಲೆಕೆರೆದುಕೊಳ್ಳಬೇಡಿ. ಕೆ.ಏ.ನ ವೆಂಕಟೇಶಕನ್ ಇಲ್ಲಿ ವೆಂಕಟೇಶ. ಆ ವೆಂಕಟೇಶನಿಲ್ಲದೇ ನಾನಿಲ್ಲ. ಅವನೇ ನನ್ನ ಸರ್ವಸ್ವವೆಲ್ಲಾ. 🙂

  19. ಜ್ಯೋತಿ, ಎಂ.ಡಿ.ಪಲ್ಲವಿಯವರು ಇಲ್ಲಿಗೆ ಬಂದಿದ್ದಾಗ ಈ ಹಾಡು ಹಾಡಿದ್ದರು. ಆದರೆ ಅದು ರತ್ನಮಾಲಾ ಹಾಡಿದ ಧಾಟಿಯಲ್ಲೇ, – ಅಂದರೆ ಮೈಸೂರು ಅನಂತಸ್ವಾಮಿ ಸಂಗೀತ – ಇತ್ತು. ನನಗೆ ತಿಳಿದಮಟ್ಟಿಗೆ ಸಿ.ಅಶ್ವಥ್ ಈ ಹಾಡಿಗೆ ರಾಗಸಂಯೋಜನೆ ಮಾಡಿಲ್ಲ. ಮಾಡಿದ್ದರೆ ನನಗೆ ಗೊತ್ತಿಲ್ಲ.

    ಅಶ್ವಥ್ ಈ ಹಾಡಿಗೆ ರಾಗ ಸಂಯೋಜಿಸಿದ್ದೇ ಆದರೆ, ಸಪ್ತ ಸಾಗರದ ಜೊತೆಗೆ ರೇರೇರೇ….. ಮೊರೆತವೂ ಸೇರಿ ಕೇಳುಗರಿಗೆ ವಿಶಿಷ್ಟ ಅನುಭವ ನೀಡಲಿದೆ! 🙂

    ರತ್ನಮಾಲಾ ಹಾಡಿದ ಈ ಹಾಡನ್ನು ಬಹಳ ಜನ ಅತ್ಯದ್ಭುತ ಎಂದು ಮೆಚ್ಚಿಕೊಂಡಿದ್ದನ್ನು ಕೇಳಿದ್ದೇನೆ. ಈಗ ಬಂದಿರುವ ಪ್ರತಿಕ್ರಿಯೆಗಳಲ್ಲಿ “ರತ್ನಮಾಲಾ ಹಾಡು ಸಪ್ಪೆ” ಎಂದಿರುವುದನ್ನು ನೋಡಿದರೆ  ಆ – ಈ ತಲೆಮಾರಿನವರ ಅಭಿರುಚಿ ನಿಜಕ್ಕೂ ಬದಲಾಗಿದೆ ಅನ್ನಿಸುತ್ತಿದೆ 🙂

  20. ಶಿವು ಪ್ರಶ್ನೆಗೆ ಜೋಶಿಯವರು ಆಗಲೇ ಉತ್ತರಿಸಿದ್ದಾರೆ 🙂

    ಈ ತಾಣಕ್ಕೆ ಹೋಗಿ ನೋಡಿದರೆ ಕವನದ ಸಾಲುಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಲಿದೆ.

    ನೀವು ಯಾವ ಪಕ್ಷಕ್ಕೆ ಓಟ್ ಮಾಡಿದರೆ ಏನಂತೆ ಶಿವಾ? ಅಡಿಗರು “ಮುರಲಿ” ಎಂದು ಬರೆದು, ಪೆನ್ನು ಮುಚ್ಚಿಟ್ಟು, ಹೊರಟು ಹೋಗಿದ್ದಾರೆ. ಈಗ ಯಾರೂ ಏನೂ ಮಾಡುವ ಹಾಗಿಲ್ಲ! (ಮೂಲ ಕವಿತೆ ಇನ್ನೂ ನಾನು ನೋಡಿಲ್ಲ)

  21. ತವಿಶ್ರೀಯವರೆ,ಈ ಸುಂದರ ಕವನವನ್ನು ಕೊಡುಗೆಯಾಗಿ ನೀಡಿದ್ದು ನಾನಲ್ಲ. ಅಡಿಗರು. 🙂

    ಕನ್ನಡ ಕವಿತೆಗಳು ಅಂತರ್ಜಾಲದಲ್ಲಿ ಲಭ್ಯವಿರಲಿ ಎಂಬ ಉದ್ದೇಶದಿಂದ ನನ್ನಲ್ಲಿರುವ ಕವಿತಾ ಕುಸುಮಗಳನ್ನು ಆಗೀಗ ಇಲ್ಲಿ ತಂದು ಪೋಣಿಸಿಡುತ್ತಿದ್ದೇನೆ ಅಷ್ಟೇ.  

    ನಿಮ್ಮ ಹೆಸರು confuse ಆಗಬಾರದೆಂದೇ ನಾನು ತವಿಶ್ರೀ ಎಂಬ ಕೋಡ್ ಇಟ್ಟುಕೊಂಡಿದ್ದೇನೆ. ತ-ವಿ-ಶ್ರೀ – ಎಂದರೆ ಶ್ರೀನಿವಾಸ ಎಂದು ನೆನಪಾಗುತ್ತದೆ. 🙂

  22. ಜೋಶಿಯವರೇ, ಕರಣಗಣದಿ ರಿಂಗಣ- ಇದಕ್ಕೆ ಅರ್ಥ ಬರೆಯುವಾಗ ನೀವು ears ಮಾತ್ರ ತಂದಿದ್ದೀರಿ.

    ಅಡಿಗರು ಉಪಯೋಗಿಸಿರುವ “ಕರಣಗಣ” ಎಂಬ ಪದ ಇಂದ್ರಿಯಗಳ ಗಣ,ಸಮೂಹ,ಗುಂಪು ಎಂಬ ಅರ್ಥವನ್ನು ಸೂಚಿಸುವಂತಿದೆ ಅಲ್ಲವೇ?

  23. “ಕರಣಗಣದಿ ರಿಂಗಣ” = ಇಲ್ಲಿ, ವೇಣಿ ಹೇಳಿದಂತೆ, `ಕರಣಗಣ’ ಅಂದರೆ ಇಂದ್ರಿಯಗಳ ಸಮೂಹ, ರಿಂಗಣ ಎಂದರೆ ಕುಣಿತ. ರಿಂಗಣ ಪದದ ಶಬ್ದಾರ್ಥ ಮೊರೆತ, ringing; ಭಾವಾರ್ಥ ಕುಣಿತ, ಅಟ್ಟಹಾಸ, ಅಬ್ಬರ… ಎಲ್ಲ.

    `ಕರಣಗಣದೀ’ ಆಗಬೇಕೇನೋ ಅನ್ನುವ ಸಂಶಯವೊಂದಿದೆ, ಕವನದ ಪ್ರತಿ ಇರುವವರು ತಿಳಿಸುವಿರಾ?

  24. “ರಿಂಗಣ” – ಪದದ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು ಜ್ಯೋತಿ. ನಿಘಂಟಿನಲ್ಲಿ ಈ ಪದ ಸಿಗಲಿಲ್ಲ.

    ಆದರೆ ಕೆಲವು ಕಥೆ/ಕಾದಂಬರಿಗಳಲ್ಲಿ “ರಿಂಗಣಗುಣಿತ” ಎಂಬ ಪದ ಬಳಕೆಯನ್ನು ಗಮನಿಸಿದ್ದೇನೆ.

    ರಿಂಗಣ ಎಂದರೆ ಕುಣಿತ ಎಂದ ಮೇಲೆ,ಮತ್ತೆ ಅದರ ಜೊತೆಗೆ ಕುಣಿತ ಯಾಕೆ?

  25. ಜೋಶಿಯವರೇ,
    ನಮ್ಮ ರಿಂಗಣ ಶಬ್ದ ತದ್ಬವವಾಗಿ ringing ಆಯ್ತೇ ..ಇದ್ದರೂ ಇರಬಹುದು..ಜ್ಯೋತಿಯವರು ಹೇಳಿದ್ದು ಅದನ್ನೇ..ಆದರೆ ರಿಂಗಣ ಶಬ್ದದ ಮೂಲ ಗೊತ್ತಾಗಲಿಲ್ಲ..

    ತ್ರಿವೇಣಿಯವರೇ,
    ಅಡಿಗರಂತೆ ಕುವೆಂಪು ಸಹ ‘ಜಯ ಭಾರತ ಜನನಿ’ ಬರೆದು ಪೆನ್ನು ಮುಚ್ಚಿಟ್ಟು ಹೋಗಿದ್ದಿರು.ಆಮೇಲೆ ಅದರ ಬಗ್ಗೆ ಎನೇಲ್ಲಾ ಅವಾಂತರ ಮಾಡಿದರೂ ಅಂತಾ ನೆನಪಿದೆಯಲ್ಲವಾ.

  26. ಪ್ರ: ರಿಂಗಣ ಎಂದರೆ ಕುಣಿತ ಎಂದ ಮೇಲೆ,ಮತ್ತೆ ಅದರ ಜೊತೆಗೆ ಕುಣಿತ ಯಾಕೆ?
    ಉ: (೧) ದ್ವಿರುಕ್ತಿಗಾಗಿ ಹಾಗೆ ಬಳಸಿರಬಹುದು.

    (೨) `ರಿಂಗಣ’ವನ್ನು ಅಬ್ಬರ ಅಥವಾ ಅಟ್ಟಹಾಸ ಎಂಬ ಅರ್ಥದಲ್ಲಿ ಬಳಸಿರಬಹುದು, ಆಗ ರಿಂಗಣಗುಣಿತ ಸರಿಯಾದ ಪ್ರಯೋಗ (ಅಬ್ಬರದ, ಅಟ್ಟಹಾಸದ ಕುಣಿತ ಎಂದಾಗುತ್ತದಲ್ಲವೆ?). ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ನಾವು ಅರ್ಥೈಸಬೇಕಾಗುತ್ತದೆ.

    “ಕರಣಗಣದಿ” ಅಥವಾ “ಕರಣಗಣದೀ”– ಯಾವುದು ಸರಿ? ಈ ಸಂಶಯ ಪರಿಹಾರವಾಗಿಲ್ಲ. (ಇಲ್ಲಿ ಅದನ್ನು ಬದಲಾಯಿಸಿದ್ದೀ, ಪದ್ಯದ ಪ್ರತಿ ಸಿಕ್ಕಿತೇ? ಅಡಿಗರ ಸಂಕಲನ ನನ್ನಲ್ಲಾವುದೂ ಈಗ ಇಲ್ಲ.)
    `ಕರಣಗಣದಿ’ ಸರಿಯಾದರೆ, ಇಂದ್ರಿಯಗಳ ಆಗರವಾದ ಈ ದೇಹದಲ್ಲಿ (ಆಸೆಗಳ / ಭಾವಗಳ ಕುಣಿತ ನಡೆಯುತ್ತಿದೆ) ಎಂಬ ಅರ್ಥ ಬರುತ್ತದೆ.
    `ಕರಣಗಣದೀ’ ಸರಿಯಾದರೆ, ಇಂದ್ರಿಯಗಳ ಕುಣಿತ ನಡೆಯುತ್ತಿದೆ ಎಂಬ ಅರ್ಥ ಬರುತ್ತದೆ. ಹೊರನೋಟಕ್ಕೆ ಎರಡೂ ಒಂದೇ ಥರ ಕಂಡರೂ ಒಳಸ್ತರದಲ್ಲಿ ವ್ಯತ್ಯಾಸವಿದೆ.

    ನೀನು ಕೊಟ್ಟ ಲಿಂಕ್’ನ ಲೇಖನ ನಿನ್ನೆ ಓದಿದೆ. ಅಲ್ಲಿನ ವಿವರಣೆ ಬಹಳಷ್ಟು ಸರಿಯಾಗಿದೆ, ಆದರೂ, ಸಾಮಾನ್ಯ ಅರ್ಥ, ಯೌವನ-ಪ್ರೇಮ-ಕಾಮಗಳನ್ನು ಮೀರಿದ್ದು ಎಂದು ನನ್ನ ಅನಿಸಿಕೆ. ಪೂರ್ಣ ಕವಿತೆಯಲ್ಲಿ- ನಮ್ಮೊಳಗೆ ಭೌತಿಕ-ಲೌಕಿಕದ ಮುಖಾಮುಖಿ ಆಧ್ಯಾತ್ಮಿಕ ಅನುಭೂತಿಯೊಡನೆ ನಡೆಯುವ (ಪ್ರಾಪಂಚಿಕ ಮೋಹ vs ದೈವತ್ವದ ಸೆಳೆತ), ಒಮ್ಮೊಮ್ಮೆ ಯಾವುದೋ ತಿಳಿಯದ ಕಾರಣಕ್ಕೆ ಭುಗಿಲೇಳುವ, ಮತ್ತೆ ತಣ್ಣಗಾಗುವ (ಭಾರತೀಯ ಸುಸಂಸ್ಕೃತ `ಆತ್ಮ’ದ ಒಳತೋಟಿಯ, `ಇಹ-ಪರ ತತ್ವ’ಗಳ ತಾಕಲಾಟದ) ಪ್ರಕ್ರಿಯೆಯ ಛಾಯೆಯೇ ಮೂಲ ಸ್ರೋತ ಎಂದು ನನ್ನ ಅಭಿಪ್ರಾಯ. ಸಪ್ತಸಾಗರ, ಸುಪ್ತಸಾಗರ, ಮೊಳೆಯದಲೆ, ಮೂಕಮರ್ಮರ…. ಇವೆಲ್ಲ `ಪರಲೋಕದ’ ಬಗೆಗೆ ನಮ್ಮೊಳಗೆ ಹುದುಗಿರುವ ಜ್ಞಾನದ ತುಣುಕುಗಳ ಪ್ರತೀಕಗಳು. ಪಂಚೇಂದ್ರಿಯಗಳನ್ನು ಮೀರಿದ ಜ್ಞಾನೇಂದ್ರಿಯವಾದ ಒಳಮನಸ್ಸಿಗೆ ಇವೆಲ್ಲದರ ಅರಿವಿರುತ್ತದೆ, ಆದರೆ ಹೊರಮನಸ್ಸಿಗೆ ಇರುವುದಿಲ್ಲ, ಇವೆಲ್ಲ ಮನೋವೈಜ್ಞಾನಿಕವಾಗಿಯೂ ಸಿದ್ಧವಾಗಿರುವ ವಿಷಯಗಳು.

    ಈ ಕವನದ ಅರ್ಥವನ್ನು ತುಣುಕುಗಳಲ್ಲಿ ವಿವರಿಸುವ ಪ್ರಯತ್ನ ಕುರುಡರು ಆನೆಯನ್ನು ವಿವರಿಸುವಂತೆ… ಪೂರ್ಣವಾಗಲಾರದು. ಅಂತೆಯೇ, ಅಡಿಗರಂತೆ ಮೇಧಾವಿಗಳಲ್ಲದ ನಮಗೆ ಅದರ ಸಂಪೂರ್ಣ ಹಿಡಿತ ಸಿಗುವ ಸಾಧ್ಯತೆಗಳೂ ವಿರಳ. ನಮ್ಮ ಅಲ್ಪಮತಿಗೆ ಹೊಳೆದದ್ದನ್ನಷ್ಟೇ ಹೇಳಬಹುದು.

    ಕೊನೆಯೊಗರು: ಎಲ್ಲ ಆಧ್ಯಾತ್ಮಿಕ ನೆಲೆಯನ್ನೂ ಹೊರಗುಳಿಸಿ ಈ ಕವಿತೆಯನ್ನು ವಿಮರ್ಶಿಸುವುದಾದರೆ, ಇದು ನಮ್ಮಂಥ ಅನಿವಾಸಿಗಳನ್ನು ಗುರಿಯಾಗಿರಿಸಿ ಬರೆದದ್ದೆಂದೂ ಹೇಳಬಹುದು. ಹುಟ್ಟಿದ ಮಣ್ಣಿನ ಸೆಳೆತ ಬಿಟ್ಟು, ಕಾಣದ ವೃಂದಾವನದೆಡೆ ಓಡಿ ಬಂದು, ಮತ್ತೆ ಇರದುದನ್ನು ಹಂಬಲಿಸುವ ನಾವು ಅನುಭವಿಸುವ ತುಡಿತ ಅಲ್ಲಿದೆ ಎಂದರೂ ನಡೆಯುತ್ತೆ.

  27. ‘ರಿಂಗಣ’ಕ್ಕೆ ನಾನು ಈಮೊದಲು ಹೇಳಿದ್ದ Ringing ಗಿಂತಲೂ Reverberation ಅಥವಾ Resonance ಇನ್ನೂ ಸನ್ನಿಹಿತವಾದ ಅರ್ಥ ಕೊಡಬಲ್ಲವು ಎಂದು ಅನಿಸುತ್ತದೆ.

  28. ಅಡಿಗರ “ಮೋಹನ ಮುರಲಿ” ಕವಿತೆಯ ಮುದ್ರಿತ ಪ್ರತಿ ಈಗ ನನ್ನಲ್ಲಿದೆ.

    “ಮುರಲಿ” – ಎಂದು ನಾನು ಬರೆದಿರುವುದು ಸರಿಯಾಗಿಯೇ ಇದೆ. “ಮುರಳಿ” ಎಂದಿಲ್ಲ.
    ಜ್ಯೋತಿ, ಕರಣಗಣದೀ – ಎಂಬುದು ಸರಿ.

    ಇಂದು ಇಲ್ಲಿಗೂ ಹಾಯಿತೇ? – ಈ ಸಾಲಿನಲ್ಲಿ “ಇಲ್ಲಿಗು” ಎಂದಿರಬೇಕಿತ್ತು.

    ಕವಿತೆಯಲ್ಲಿರುವ ಕೆಲವು ವಿರಾಮ ಚಿಹ್ನೆಗಳನ್ನು ಅಲ್ಲಿದ್ದಂತೆಯೇ ಬರೆಯಲಾಗಿದೆ.

    “ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?” – ಈ ಸಾಲುಗಳನ್ನು ನಾನು ಬರೆದಿರಲೇ ಇಲ್ಲ! ಈಗ ಸೇರಿಸಲಾಗಿದೆ.

    ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ “ಹೊಸಗನ್ನಡ ಕವಿತೆ” ಸಂಕಲನದಲ್ಲಿ ಈ ಕವಿತೆ ಇದೆ. ಪ್ರಧಾನ ಸಂಪಾದಕರು:ಹಂಪನಾ. ಸಂಪಾದಕರು:ಜಿ.ಎಚ್.ನಾಯಕ

    ಕರ್ನಾಟಕ ಏಕೀಕರಣದ ಬೆಳ್ಳಿಹಬ್ಬದ ಪ್ರಯುಕ್ತ “ಬೆಳ್ಳಿ ಬಿಟ್ಟ ಬಳ್ಳಿ” ಮಾಲಿಕೆಯಲ್ಲಿ ಸಾಹಿತ್ಯ ಪರಿಷತ್ತು ಹೊರ ತಂದಿರುವ ಈ ಸಂಕಲನ, ಕರ್ನಾಟಕ ಸುವರ್ಣ ರಾಜ್ಯೋತ್ಸವ ವರ್ಷದಲ್ಲಿ ನನ್ನ ಓದಿಗೊದಗಿರುವುದು ಸುಯೋಗವೇ ಸರಿ!! 🙂

  29. ಬಹುಶ: ಅಡಿಗರನ್ನು ಬಿಟ್ಟರೆ ಬೇರೆ ಯಾರೂ ‘ಮುರಲಿ’ ಅಂತ ‘ಮುರಳಿ’ ಯನ್ನು ಸಂಭೋದಿಸಿಲ್ಲಾ ಅನ್ನಿಸತ್ತೆ. ಈಗ ಪು.ತಿ.ನ ಅವರ ‘ಗೋಕುಲ ನಿರ್ಗಮನ’ ಕವನ ಸಂಗ್ರಹದಲ್ಲಿ ಕೂಡಾ ಅವರು ‘ಮುರಳಿ’ ಎಂದೇ ಬರೆದಿದ್ದಾರೆ. ‘ಮುರಳೀಕೃಷ್ಣನಾ ಕೊಳಲಿನಾ ಕರೆ’ ಅಂತ, ಇದು ನನಗೆ ಅತ್ಯಂತ ಇಷ್ಟವಾದ ಗೀತೆ ಕೂಡ. ಬೇರೆ ಇನ್ಯಾವುದಾದರೂ ಕವನಗಳಲ್ಲಿ ‘ಮುರಲಿ’ ಅಂತ ಬಂದಿದ್ಯಾ ತಿಳಿಸಿ. ದೇವರನಾಮಗಳಲ್ಲಿ, ಸಿನಿಮಾ ಸಾಹಿತ್ಯಗಳಲ್ಲಿ ಎಲ್ಲೂ ಈ ಥರದ ಪ್ರಯೋಗವನ್ನ ನಾನು ಕೇಳಿಯೇ ಇಲ್ಲ.

    ವೇಣಿಗೆ: ‘ಶ್ರೀಶಾ ಕೊಳಲನೂದಿದನೆಂದೂ ಶ್ರೀಧರನು ಇಂದೂ’ ಇದು ಯಾರು ರಚಿಸಿದ್ದಾರೆ ಅಂತ ಗೊತ್ತಾ? ಇದ್ರಲ್ಲೂ ‘ಬೆರಳಾ ಸಂದೀಲಿ ಮುರಳೀ ಹಿಡಿದೂ…’ ಅಂತ ಬರತ್ತೆ.
    ಇನ್ನು ‘ವಿದ್ಯಾಭೂಷಣರು ಹಾಡಿರುವ ‘ಏನು ಸಾಧನ ಮಾಡೀ ಕೃಷ್ಣನ ಕರವ ಸೇರಿತೋ’ ಇದರಲ್ಲೂ ‘ತ್ರಾಣವೇನು ಮುರಳಿಗೇ’ ಅಂತಾನೇ ಇದೆ, ಇದ್ರಲ್ಲೂ ಅಂಕಿತ ಯಾರದ್ದು ಅಂತ ಗೊತ್ತಾಗಿಲ್ಲ.

  30. ಎಲ್ಲರೂ ಕ್ಷಮಿಸಿ. ನನ್ನ ಹಿಂದಿನ ಒಂದು ಪ್ರತಿಕ್ರಿಯೆಯಲ್ಲಿ – “ಶ್ರೀನಿ ಹೇಳಿಕೆ- “ಲಳಯೋರಬೇಧಃ” ಸರಿಯಾದ ಸಮಾಧಾನ.” ಎನ್ನುವ ವಾಕ್ಯವಿದೆ. ಅದರಲ್ಲಿ “ಲಳಯೋರಬೇಧಃ” ಎಂದಿರುವಲ್ಲಿ “ಲಳಯೋರಭೇದಃ” ಆಗಬೇಕು (ಭ-ಕಾರ ಸರಿ, ಭೇದ, ಸರಿಯಾದ ಪದ).

    ವೇಣಿ, ಹೊಸ ಪುಸ್ತಕ ಎಲ್ಲಿಂದ ಸಂಪಾದಿಸಿದೆ? ಅಭಿನಂದನೆಗಳು. ಒಳ್ಳೆಯ ಕವನಗಳನ್ನೋದುತ್ತಾ ಹೊಸವರ್ಷವನ್ನು ಸ್ವಾಗತಿಸುವ ನಿನ್ನ ಸುಯೋಗಕ್ಕೆ ನನ್ನ ಚಪ್ಪಾಳೆ.

  31. ಓಹ್…

    ಮುರಲಿಯ ಹಿಡಿದು
    ಮರಳಿ ಮರಳಿ ಎಳೆದಾಡಿದಾಗ
    ಕಾಮೆಂಟ್‌ಗಳ ರಿಂಗಣವೂ
    ಮೊಬೈಲ್ ರಿಂಗಿಂಗ್ ಟೋನ್‌ಗಳಂತೆ
    ಬದಲಾಗುತ್ತಾ ಹೋದವು….
    ಎಂಬಲ್ಲಿಗೆ
    ಮುರಳಿ ಅಥವಾ ಲಿ ಗೆ ಗತಿ ಕಾಣಿಸಲು ಕೋರಲಾಗಿದೆ. 🙂

  32. ಅನ್ವೇಷಿಗಳೇ, ಮುರಳಿಯ ಪಾರ್ಟಿಯಲ್ಲಿ ಬಹಳ ಜನರಿದ್ದಾರೆ.ಮುರಳಿಗೊಂದು ಗತಿ ಕಾಣಿಸುವ ಮುನ್ನ ನಿಮ್ಮ ಗತಿ ಏನಾದೀತು ಯೋಚಿಸಿ 🙂

  33. ಮೀರಾ, ನೀನು ಹೇಳಿರುವ ಹಾಡನ್ನು ಕೇಳಿದ ನೆನಪಿಲ್ಲ. ವಿದ್ಯಾಭೂಷಣರು ಹಾಡಿರುವ “ಏನು ಸಾಧನ ಮಾಡಿ”…. ಈ ಹಾಡು ಕಮಲೇಶ ವಿಠಲರಂತೆ (ರಾಜಾ ಎಸ್ ಗುರುರಾಜಾಚಾರ್)ಯಾರೋ ಇತ್ತೀಚಿನವರು ಬರೆದಿರಬಹುದು ಅನ್ನಿಸುತ್ತದೆ. (ನನ್ನ ಅನುಮಾನ ಮಾತ್ರ)

    ಯಾಕೆಂದರೆ ಈ ಹಾಡುಗಳು ವಿದ್ಯಾಭೂಷಣರು ಹಾಡಿದ ನಂತರವಷ್ಟೇ ಪ್ರಸಿದ್ದಿಗೆ ಬಂದವು. ಅದಕ್ಕಿಂತ ಮೊದಲು ಕೇಳಿರಲೇ ಇಲ್ಲ.

    ಜ್ಯೋತಿ, ಆ ಪುಸ್ತಕ ನನ್ನದೇ. ಮೋಹನ ಮುರಲಿಯ ಕರೆಗೆ ಸೋತು ಈಗ ಮೇಲೆ ಬಂತು 🙂

  34. ಓಹ್, ಇಷ್ಟೊಂದ್ ಸಂವಾದ ನಡೆದಿದೆ. ರಿಂಗಣಕ್ಕೆ ಸ್ವಲ್ಪ ಅರ್ಥ ತಿಳೀತು ಈಗ 🙂

    ಮತ್ತೆ, ಎಮ್.ಡಿ. ಪಲ್ಲವಿ ಯವರು ಹಾಡಿದ್ದು, ರತ್ನಮಾಲ ಹಾಡಿರುವ ಶೈಲಿಯಲ್ಲಿ ಇರಲಿಲ್ಲ (ಆಯ್ಯೊ, ನನಗೆ ರಾಗದ ತಿಳುವಳಿಕೆ ಕಮ್ಮಿ 🙁 )

    ಅವರು, ಬಸವನಗುಡಿಯ ಕಾರ್ಯಕ್ರಮದಲ್ಲಿ ಹಾಡಿದ ನೆನಪು.

    ಇಂತಿ
    ಭೂತ

  35. ಗೆಳೆಯರೇ,

    ವರ್ಷಗಳ ಹಿಂದಿನ ಈ ಚರ್ಚೆಗೆ ಇವತ್ತು ಪ್ರತಿಕ್ರಿಯೆ ಹಾಕುವುದು ಎಷ್ಟು ಪ್ರಸ್ತುತವೋ ಗೊತ್ತಿಲ್ಲ, ಆದರೆ ಈ ಚರ್ಚೆ ನನ್ನ ಕಣ್ಣಿಗೆ ಬಿದ್ದದ್ದಂತೂ ಇವತ್ತು. ಕೆಲವು ಅಂಶಗಳನ್ನು ಹಂಚಿಕೊಳ್ಳುವುದು ಪ್ರಸ್ತುತವೆನ್ನಿಸಿದ್ದರಿಂದ ಈ ಪ್ರತಿಕ್ರಿಯೆ.

    ಮುರಲಿ ಸಂಸ್ಕೃತ ಪದವೆಂದೂ ಮತ್ತು ಮುರಳಿ ಕನ್ನಡ/ದ್ರಾವಿಡ ಪದವೆಂದೂ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇಂದಿರುವಂತೆ ಎರಡೂ ಪದಗಳೂ ಸಂಸ್ಕೃತಸಾಧುವಾದ ಪ್ರಯೋಗಗಳೇ! (ಲ ಳ ಯೋರಭೇದಃ ಸೂತ್ರದಂತೆ). ಆದರೆ ಮುರಲಿ ಎನ್ನುವುದು ಶುದ್ಧಪ್ರಯೋಗವೆಂದೂ, ಮುಂದೆ ದ್ರಾವಿಡಭಾಷಾ ಪ್ರಭಾವ ಸಂಸ್ಕೃತದಮೇಲೆ ಆಗಿದ್ದರಿಂದ ಲ ಬದಲಿಗೆ ಳ ವನ್ನೂ ಉಪಯೋಗಿಸುವ ರೂಢಿ ಬಂದಮೇಲೆ “ಲಳಯೋರಭೇದಃ” ಎಂಬ ಅನುಕೂಲ ಸೂತ್ರ ಜಾರಿಗೆ ಬಂದಿರಬೇಕೆಂದೂ ತಿಳಿದವರ ಮತ. ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಇಂಥ ಪದಗಳಲ್ಲಿ ಲ ಅಕ್ಷರವೇ ಪ್ರಯೋಗವಾಗಿರುವುದೂ, ಇತ್ತೀಚಿನ ಸಂಸ್ಕೃತಸಾಹಿತ್ಯದಲ್ಲಷ್ಟೇ ಮುರಳೀ, ಮಂಗಳ ಇತ್ಯಾದಿ ಳಕಾರಪ್ರಯೋಗ ಕಂಡುಬರುವುದೂ, ಹಾಗೆಯೇ ಹಿಂದಿ ಇತ್ಯಾದಿ ಔತ್ತರೇಯ ಭಾಷೆಗಳಲ್ಲಿ ಮುರಲೀ ಎಂಬ ಮೂಲ ರೂಪ ಅಮದಾಗಿದ್ದರೆ, ಕನ್ನಡ ಇತ್ಯಾದಿ ದಾಕ್ಷಿಣಾತ್ಯ ಭಾಷೆಗಳಲ್ಲಿ ಮುರಳೀ ಇತ್ಯಾದಿ ಆಧುನಿಕ ರೂಪ ಅಮದಾಗಿರುವುದೂ ಈ ವಾದಕ್ಕೆ ಮತ್ತಷ್ಟು ಪುಷ್ಟಿನೀಡುತ್ತವೆ. ಅದೇ ಕಾರಣಕ್ಕೆ ನಮ್ಮ ದ್ರಾವಿಡ ಕಿವಿಗಳಿಗೆ ಮುರಲೀನಾದಕ್ಕಿಂತ ಮುರಳಿಯ ದನಿಯೇ ಇಂಪಾಗಿ ಕೇಳಿದರೆ ಆಶ್ಚರ್ಯವಿಲ್ಲ. ಅಡಿಗರು ಇದನ್ನು ಮುರಲೀ ಎಂದೇ ಕರೆದದ್ದು ಹೌದು.

    ಮುರುಳಿ ಎಂಬುದು ಸರಿಯಾದ ಪ್ರಯೋಗವಲ್ಲ

    Ringing ಮತ್ತು ರಿಂಗಣಗಳಲ್ಲಿ ಸೊಗಸಾದ ಅರ್ಥ ಮತ್ತು ಉಚ್ಚಾರ ಸಾಮ್ಯವಿದ್ದರೂ ಎರಡನೆಯದು ಮೊದಲನೆಯದರ ತದ್ಭವ ಎಂದು ಹೇಳಲಾಗುವುದಿಲ್ಲ. ಅನೇಕ ವಸ್ತು/ಭಾಗಗಳು ಒಂದಕ್ಕೊಂದು ಸಂವಾದಿಸುತ್ತಾ ಅನುಕಂಪ ಧ್ವನಿ (sympathetic resonation) ಹೊರಡಿಸುತ್ತಾ ನಿಧಾನಕ್ಕೆ ಕೊನೆಗೊಳ್ಳುವುದು ರಿಂಗಣವೆನ್ನಿಸುತ್ತದೆ.

    “ರಿಂಗಣಗುಣಿತ”, ರಿಂಗಣ + ಕುಣಿತ ಎಂಬ ಕನ್ನಡದ ಆದೇಶಸಂಧಿಯಲ್ಲ. ಬದಲಿಗೆ ಅದು ರಿಂಗಣ ಗುಣಿತ ಎಂಬ ಪೂರ್ಣ ಸಂಸ್ಕೃತ ಪ್ರಯೋಗವೇ. ರಿಂಗಣದಿಂದ ಗುಣಿತವಾದ (multiplied and lingering) ಧ್ವನಿ ವಿಶೇಷವೆಂದು ಇದರ ಅರ್ಥ.

    ಕೊನೆಯದಾಗಿ “ಮುರಳಿಯ ನಾದವ ಕೇಳಿ, ಬನ್ನೀ” ಇತ್ಯಾದಿ ಹಾಡುಗಳನ್ನು ರಚಿಸಿರುವವರು “ಪ್ರಸನ್ನದಾಸ”ರಲ್ಲ, “ಪ್ರಸನ್ನತೀರ್ಥರು” ಇವರು ತೀರ ಇತ್ತೀಚಿಗೆ, ಕಳೆದ ಶತಮಾನದ ಮಧ್ಯಭಾಗದಲ್ಲಷ್ಟೇ ನಮ್ಮ ನಡುವೆ ಇದ್ದು ಹೋದ ಯತಿ, ಅನುಭಾವಿ ರಚನೆಕಾರರು. ದಾಸಸಾಹಿತ್ಯಕ್ಕೆ ಆಧುನಿಕ ರೊಮಾಂಟಿಕ್ ಸಾಹಿತ್ಯಪ್ರಕಾರದ ಭಾವಗೀತಾತ್ಮಕತೆಯ ಹೊಳಪು ತಂದ ಹೆಗ್ಗಳಿಕೆ ಇವರದಾಗಿದೆ. ಪ್ರಸನ್ನತೀರ್ಥರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ http://nannabaraha.blogspot.com/2008/12/blog-post.html

  36. ಮಂಜುನಾಥ ಅವರೇ, ನಿಮ್ಮ ಮಾಹಿತಿಭರಿತ ಪ್ರತಿಕ್ರಿಯೆಯನ್ನು ತಡವಾಗಿ ನೋಡಿದೆ. ಉಪಯುಕ್ತ ವಿವರಗಳಿಗೆ ಧನ್ಯವಾದಗಳು.

Leave a Reply to ಜ್ಯೋತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.