ನಿನ್ನೆ, ನಾ.ಕಸ್ತೂರಿಯವರ ಅನರ್ಥಕೋಶ ಓದುತ್ತಿದ್ದೆ. ಓದುತ್ತಿರುವಾಗ ನನಗಂತೂ ತುಂಬಾ ನಗು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ, ಬಿದ್ದು ಬಿದ್ದು ನಗುವಂತೆ ಮಾಡುವ ಹಾಸ್ಯ ಎನ್ನುವುದು ಇದ್ದರೆ ಅದು ಇದೇ ರೀತಿ ಇರುತ್ತದೇನೋ.  ಒಬ್ಬಳೇ ಓದಿಕೊಂಡು ನಗುವ ಬದಲು ನಿಮ್ಮೊಡನೆ ಹಂಚಿಕೊಂಡರೆ ಹೇಗೆ ಅನ್ನಿಸಿತು. ನನ್ನನ್ನು ತುಂಬಾ ನಗಿಸಿದ ಕೆಲವನ್ನು ಇಲ್ಲಿ ಬರೆಯುತ್ತಿದ್ದೇನೆ. ಇದನ್ನು ಓದಿ ನಿಮಗೆ ನಗುವೇ ಬರದಿದ್ದರೆ ನೀವು ಬಲು ಗಟ್ಟಿಗರು ಎಂದು ಅರ್ಥ. ಭಲೇ!

ಅಂದಹಾಗೆ, ನಗುವುದು ಅನ್ನುವುದಕ್ಕೆ ಕೆಲವರು ನಗಾಡುವುದು ಅನ್ನೋದನ್ನು ಕೇಳಿದ್ದೇನೆ. ಯಾವುದು ಸರಿ?

ನಿಮಗೆ ಬೇರೆ ಯಾವುದಾದರೂ ಪದಗಳು ಗೊತ್ತಿದ್ದರೆ ಹೇಳಿ, ನಗೋಣ.  🙂

*                      *                     *                        *     

ಚಿತ್ರ ಕೃಪೆ : ಕನ್ನಡ ವಿಕಿಪೀಡಿಯ                                

* ಅಮೋಘ ಪ್ರಾರಂಭ  – ಪ್ರಾರಂಭ
* ಅಕ್ರಮಾದಿತ್ಯ    – ಪ್ರಜಾಹಿತಕ್ಕೆ ವಿರೋಧವಾಗಿ ರಾಜ್ಯಭಾರ ನಡೆಸುವ ರಾಜರುಗಳಿಗೆ ಈ ಬಿರುದು ಸಲ್ಲುತ್ತಿತ್ತಂತೆ.
* ಅದ್ಭುತ ದಿಗ್ದರ್ಶನ  – ಹಾಲಿವುಡ್ ಚಿತ್ರದ ಅನುಕರಣ
* ಅವಿವಾಹಿತ    – ಹೆಂಗಸೊಬ್ಬಳ ಕಾಡಿಸುವ ಸದವಕಾಶವನ್ನು ಕಳೆದುಕೊಳ್ಳುವವ.
* ಅಂಧರ್ವರು  – ಕುರುಡು ಸಂಗೀತಗಾರರು
* ಅಕ್ರೂರ      – ರಿಟೈರಾದ ಉನ್ನಾತಾಧಿಕಾರಿ.
* ಅಗ್ನಿತೀರ್ಥ  – ವ್ಹಿಸ್ಕಿ
* ಅಗ್ನಿಮಿತ್ರ   – ಪೆಟ್ರೋಲ್
* ಅಗ್ನಿಹೋತ್ರ   – ಬಿಡುವಿಲ್ಲದೆ ಸಿಗರೇಟು ಸೇದುವವ.
* ಅಣುಕಂಪ    – ಒಂದು ಊರಲ್ಲಿ ಅಣುಬಾಂಬು ಸಿಡಿದಾಗ ನೆರೆಯೂರುಗಳಲ್ಲಾಗುವ ಸಹತಾಪ.
* ಆ          – ದಂತವೈದ್ಯರ ಮೂಲಮಂತ್ರ: ಇದನ್ನು ಜಪಿಸಿದ ಕೂಡಲೆ ನಾವು ಬಾಯಿಬಿಡುತ್ತೇವೆ. ಅವರು ನಮ್ಮ ಹಲ್ಲು ಕಿತ್ತುತ್ತಾರೆ.
* ಆರತಿ – ರತಿಯ ಪಕ್ಕದಲ್ಲಿ ಈತ ಆಕಳಿಸುವುದು

* ಇಂಜಕ್ಷನ್     – ನುಂಗಲಾರದ ತುತ್ತು
* ಇಗ್ನೇಶ್ವರ    – ತನ್ನ ಹೆಸರಿನ ಉಚ್ಚಾರಣೆಗೆ ಒದಗುವ ವಿಘ್ನಗಳನ್ನು ನಿವಾರಿಸಲಾಗದ ಒಂದು ದೇವತೆ.
* ಈಚಮನ     – ಈಚಲುಮರದಡಿಯಲ್ಲಿ ಕುಳಿತು ಕುಡಿಯುವುದು
* ಉಗುಳುನಗೆ    – ಮಾತನಾಡಿದಾಗ ಮಂತ್ರಪುಷ್ಪದಂತೆ ನಗೆಯಾಡಿದಾಗಲೂ ಉಗುಳು ಪುಷ್ಪ.
* ಉತ್ತರಕ್ರಿಯೆ – ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಕೆಲಸ.
* ಉತ್ತರಾಯಣ – ಪರೀಕ್ಷೆಯ ಋತು, ಮಾರ್ಚ್ ತಿಂಗಳಿಂದ ಜೂನ್
* ಉಳಿತಾಯ – ನಮಗೆ ಸಾಲ ಕೊಡಬೇಕಾದವರು ಮಾಡಬೇಕಾದ ಕರ್ತವ್ಯ
* ಋಣ ಹದ್ದು   – ಸಾಲ ವಸೂಲು ಮಾಡುವುದಕ್ಕಾಗಿ ನಮ್ಮ ಬಾಗಿಲಿಗೆ ಬರುವವ.
* ಐಕ್ಯಮದ್ಯ   – ಹೆಂಡಕುಡುಕರ ಗೆಳೆತನ

* ಕಣ್ವಂತರಿ – ನೇತ್ರವೈದ್ಯ
* ಕಂಠಾಘೋಷ – ಬರಿಯ ಕೂಗು
* ಕುಂಠಾಘೋಷ – ಗೆಲ್ಲುತ್ತೇವೆ ಎಂಬ ಧೈರ್ಯವಿಲ್ಲದ ಪಕ್ಷದವರು ಮಾಡುವ ಪ್ರಚಾರ
* ಕಂತುವರಾಳಿ  – ಕಂತುಕಂತಾಗಿ ಸಾಲ ತೀರಿಸಬೇಕಾಗಿ ಬಂದಾಗ ನಾವು ಎಳೆಯುವ ರಾಗ
* ಕವಿವೇಕಿ      – ಅವಿವೇಕಿಯಾದ ಕವಿ
* ಕಹಿಷ್ಕರಿಸು  – ಕಹಿಯಾಗಿ ತೋರಿದ್ದರಿಂದ ದೂರವಿರಿಸು.
* ಕಾಕತಾಳಿನ್ಯಾಯ – ಕಾಗೆ ಕೂತಿದ್ದು, ತಾಳಿ ಕಟ್ಟಿದ್ದು.
* ಕಾಕತಾಳೀಯ – ಕಾಗೆಗೆ ತಾಳಿ ಕಟ್ಟಲು ಹೊರಡುವ ಸಾಹಸಿಯಂತೆ.
* ಕಾರಾಗೃಹಸ್ಥ  – ಹೊಸದಾಗಿ ಮದುವೆಯಾದವ.
* ಕಾಪ್ಯಾಯಮಾನ   – ಕಾಫಿ ಕುಡಿದ ಮೇಲೆ ಉಂಟಾಗುವ ಆಪ್ಯಾಯಮಾನ ಪರಿಸ್ಥಿತಿ.
* ಕಾಶಿ      – ಸತ್ತು ಸುಣ್ಣವಾಗುವುದಕ್ಕೆ ಪ್ರಶಸ್ತವಾದ ಊರು.
* ಕಿವುಡ      – ವಾಕ್ಚಿತ್ರಗಳನ್ನು ಮೂಕಚಿತ್ರಗಳಂತೆ ನೋಡುವ ಪುಣ್ಯವಂತ
* ಕೆಮ್ಮು      – ಒಂದು ರೀತಿಯ ಗುಪ್ತಭಾಷೆ
* ಕುಗ್ರಾಮ   – ಎರಡು ಮೈಲಿ ಸುತ್ತ ಯಾವ ಸಿನಿಮ ಮಂದಿರವೂ ಇಲ್ಲದ ಹಳ್ಳಿ.

* ಖಾರಾಗೃಹ   – ಖಾರವನ್ನು ಹೆಚ್ಚು ಬಳಸುವ ಹೋಟಲು
* ಖರ್ಚು    – ವರಮಾನಕ್ಕೆ ಸರಿಸಮಾನವಿಲ್ಲದ್ದು.
* ಖಂಡಿತವಾದಿ –  ಲೋಕವಿರೋಧಿ. ನಮ್ಮ ಮಿತ್ರನಲ್ಲದಿದ್ದರೆ, ಈತನಿಗೆ ಮೂರ್ಖ ಎಂದು ಹೆಸರು.
* ಖುದಾಸೀನ  – ದೇವರಿದ್ದಾನೆ ಎಂದು ಉದಾಸೀನನಾಗಿ ಕುಳಿತಿರುವುದು
* ಖಾಲಿ – ಸಾಮಾನ್ಯವಾಗಿ ಎಲ್ಲ ಬುರುಡೆಗಳಿಗೂ ಇದೇ ಸ್ಥಿತಿ
* ಖರಪತ್ರ – ಕತ್ತೆ ತಿಂಬ ಕಾಗದ
* ಖುಷಿಕೇಶ – ಮೊದಲನೆಯ ಮಗು ಗಂಡಾಗುವ ಭ್ರಮೆಯಿಂದ ಬಿಡುವ ಗಡ್ದ

* ಗಲ್ಲೆದೆ    – ಆಪಾದಿತನ ಗಲ್ಲು ಮಹೋತ್ಸವವನ್ನು ನೆರವೇರಿಸಿ ಕೃತಕೃತ್ಯರಾಗುವ ಮಂದಿ
* ಗುಠ್ಠಾಳ  – ಗುಟ್ಟನ್ನು ರಟ್ಟುಮಾಡಿ ಕೆಲಸವನ್ನು ಹಾಳು ಮಾಡುವವನು.
* ಗುರುಬತ್ತಿ   – ಹಲವು ಶಿಷ್ಯರ ಪೀಡಾಕ್ರಮ
* ಚೀರ್ತನೆ    – ಕೆಟ್ಟ ಶಾರೀರದವರು ಮಾಡುವ ಕೀರ್ತನೆ
* ಜಗಲಿ      – ಜಗಳಗಳ ಉಗಮಸ್ಥಾನ
* ಜಾಬವಂತ  – ನೌಕರಿಯನ್ನು ದೊರಕಿಸಿಕೊಡುವ ಜಾಣ
* ತ್ರಿಶಂಕೆ ಸ್ವರ್ಗ – ಮೂರು ವಿಕೆಟ್ಟುಗಳನ್ನು ಪಡೆದವ ಅನುಭವಿಸುವ ಆನಂದ

* ಧನಸ್ತಾಪ      – ಹಣಕ್ಕಾಗಿ ಇಬ್ಬರಿಗಿಂತ ಮೂವರು ಪ್ರೀತಿಯಿಂದ ಮಾಡುವ ಜಗಳ
* ಧನದನ್ನೆ – ವರದಕ್ಷಿಗೆಗಾಗಿ ಕೈಹಿಡಿದ ಸತಿ
* ನರಿಷಡ್ವರ್ಗ    – ಕುಹಕ,ಕುತಂತ್ರ
* ನುಡಿಮದ್ದು        – ಜನರನ್ನು ಉದ್ರೇಕಗೊಳಿಸುವ ಭಾಷಣ
* ನೇಯ್ಗೆಯವರು      – ಸಾಹಿತಿಗಳು
* ಪಕ್ಕಸಾಲಿಗ     – ಪಕ್ಕದಲ್ಲೇ ಮನೆ ಮಾಡಿಕೊಂಡು ಸಾಲ ಕೇಳುವವ
* ಪತಿ             – ಮನೆ ಮೂಲೆಯಲ್ಲಿ ಕೂತಿರುವ ದೇವರು
* ಪದ್ಯೋಗಿ          – ಸಿಕ್ಕಿದವರ ಕಿವಿಯಲ್ಲಿ ಪದ್ಯದ ಘಂಟಾನಾದ ಮೊಳಗಿಸುವವ.

* ಭಾವಜೀವಿ       – ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.
* ಭಾವಾಡಿಗ      – ಕವಿ
* ಭೀಮಾರಿ         – ನಮ್ಮ ದೇಶದ ಸಾಮಾನ್ಯ ಜನರು ಹೆಚ್ಚು ಪೂಜಿಸಬೇಕಾದ ದೇವತೆ.
* ಮದ್ಯವಯಸ್ಸು     – ಹೆಂಡದಾಸೆ ಪಡುವ ವಯಸ್ಸು
* ಮನಸ್ಸಾಕ್ಷಿ     – ನಮ್ಮನ್ನು ಇನ್ನೂ ಸಣ್ಣ ಮಾಡುವ ಒಳದನಿ
* ಮನಮೋಸಕ       – ಮನ ಮುದಗೊಂಡಾಗ ಹೋಗುವ ಮೋಸ.

* ಲೋಲನೆ ಪಾಲನೆ   – ಪರಸ್ತ್ರೀಯನ್ನು ಬಯಸಿದ ಗಂಡನನ್ನೂ ಮಗುವಿನಂತೆ ಲಾಲನೆಪಾಲನೆ ಮಾಡುವವಳು
* ವಧು       – ನಾವು ಮಾವನಿಂದ ಪಡೆದ ಮೊದಲನೆಯ ವಸ್ತು
* ವಯಸ್ಸು     – ಲೆಕ್ಕ ಹಾಕ್ತಾ ಹಾಕ್ತಾ ದು:ಖ ಜಾಸ್ತಿ. ಇದರ ಬೆಳವಣಿಗೆಯ ನಾಲ್ಕು ಹಂತಗಳು: ಹುಡುಗು, ಪಿಡುಗು, ಗುಡುಗು, ನಡುಗು.
* ವಸಂತ     – ಕವಿಗಳಿಗೆ ಹುಚ್ಚು ಬರುವ ಕಾಲ.

* ಶಸ್ತ್ರಕ್ರಿಯೆ – ಹಣದ ಗಂಟನ್ನು ವೈದ್ಯರು ಹೊರತೆಗೆಯುವ ರೀತಿ.
* ಷೆಡ್ದಕ     – ಮೋಟಾರ್ ಷೆಡ್ಡನ್ನೇ ಬಾಡಿಗೆಗೆ ತೆಗೆದು ಸಂಸಾರ ನಡೆಸುವವ.
* ಸಮಾರಂಪ    – ಸಾಮಾನ್ಯವಾಗಿ ಸಮಾರಂಭಗಳಲ್ಲಿ ಹೀಗಾಗುವುದೇ ಹೆಚ್ಚು.
* ಸರಸ ಸಂಭಾಷಣೆ  – ಚಿತ್ರಮಂದಿರಗಳಲ್ಲಿ ಪ್ರೇಕ್ಷಕಿಯರು ಮಾಡುವ ಟೀಕೆ
* ಸಾಲಗ್ರಾಮ        – ಸಾಲದಿಂದ ಕಟ್ಟಿರುವ ಮನೆಗಳ ಸಾಲು
* ಸೊಟ್ಟಹಾಸ        – ಮುಖ ಸೊಟ್ಟಗೆ ತಿರುಗಿಸು ಮಂದಹಾಸ ಬೀರುವುದು

* ಹಲ್ಲೋಲ           – ಸುಂದರವಾದ ದಂತಪಂಕ್ತಿ ಇರುವ ಹೆಮ್ಮೆ.
* ಹವ್ಯಾಸಂಗ       – ಹಲವು ಹವ್ಯಾಸಗಳ ನಡುವೆ ಮಾಡುವ ವ್ಯಾಸಂಗ.
* ಹಿಂಸತೂಲಿಕಾತಲ್ಪ  – ಚುಚ್ಚುವ ಹಾಸಿಗೆ
* ಹೊಟ್ಟೆನೋವು          – ತುಂಬಿದ ಹೊಟ್ಟೆಯ ಪಶ್ಚಾತ್ತಾಪ
* ಹುಚ್ಚುಮೆಚ್ಚಿನ     – ಹುಚ್ಚನ್ನೇ ಮೆಚ್ಚಿಕೊಳ್ಳುವ ಪರಮಾವಧಿ ಸ್ಥಿತಿ.

 

*              *                *                  *          *

20 thoughts on “ನಾ.ಕಸ್ತೂರಿಯವರ ಅನರ್ಥ ಕೋಶ”

  1. ನುಡಿಃ
    ನಿಮಗೆ ಬೇರೆ ಯಾವುದಾದರೂ ಪದಗಳು ಗೊತ್ತಿದ್ದರೆ ಹೇಳಿ, ನಗೋಣ.

    ಕಿಡಿಃ
    ಕಸ್ತೂರಿ – ಕಸವನ್ನು (ಯಾರಿಗೂ ಗೊತ್ತಾಗದಂತೆ ಬೇರೆಯವರ ಕಂಪೌಂಡ್‍ಗೆ) ತೂರಿ.

    ಇದು ಅಜ್ಞಾರ್ಥಕ ಪದ (ಕಸವನ್ನು ತೂರಿ, ಏನೂ ಆಗೋದಿಲ್ಲ, ಇಟ್ಸ್ ಓಕೆ ಎಂಬ ಆದೇಶ)ವೂ ಆಗಬಹುದು. ಉದಾ: ತುಳಸಿಯಮ್ಮನವರೇ, ನೀವು ಅಂಬುಜಮ್ಮನವರಿಗೆ ಕಸ್ತೂರಿ.

    ಅಥವಾ ಸಂಸ್ಕೃತದಲ್ಲಿ ‘ಲ್ಯಬಂತ’ಅವ್ಯಯವಿದ್ದಂತೆ ಸಹ ಬಳಸಬಹುದು. ಉದಾ: ತುಳಸಿಯಮ್ಮನವರು ಕಸ್ತೂರಿ ಕಣ್ಮುಚ್ಚಿಕೊಂಡು ಒಳಬಂದರು. ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೂ ಅದು ಲೋಕಕ್ಕೆ ಗೊತ್ತಾಗುವುದಿಲ್ಲವೆಂದೇ?

  2. ಕಸ್ತೂರಿಯವರ (“ಕಸ ತೂರಿದವರ” ಅಲ್ಲ) ಹೊಸ-ಪದ-ಹೊಸೆಯುವ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಮಲೆಯಾಳ ಮನೆಮಾತಾದರೂ ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ನಾ.ಕಸ್ತೂರಿ ಅವರನ್ನು ಕನ್ನಡದ-ಕಂಪು ಅನ್ನಬಹುದೇನೋ!

    ಇಷ್ಟನ್ನೆಲ್ಲ ಟೈಪಿಸಿ ಓದುಗರಿಗಾಗಿ ಬಡಿಸಿದ್ದಕ್ಕೆ, ವೇಣಿ, ನಿನಗೆ ಧನ್ಯವಾದಗಳು.

  3. ಜೋಶಿಯವರೇ, ನಿಮ್ಮ ಪ್ರತಿಕ್ರಿಯೆ ಓದಿ ನನಗೆ ನೆನಪಾಗಿದ್ದು ,ಗಾಂಧೀಜಿಯವರ ಹೆಂಡತಿ ಕಸ್ತೂರಬಾ 🙂

  4. ಅದೇನೋ ನಗುವಿನ ಅನಿಲ (ನೈಟ್ರಸ್ ಆಕ್ಸೈಡ್ ಇರಬಹುದು) ಬೀಸಿದಂತಾದ ಕಾರಣ ಇದನ್ನೋದಿ ನಗು ಬರಲಿಲ್ಲ ಎಂದು ಹೇಳುವುದೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಬಾಯಲ್ಲಿ ಪೂರ್ತಿ ನಗು ತುಂಬಿದೆ, ಹಾಗಾಗಿ ನಾವು ಗಟ್ಟಿಗರು ಎಂದು ಕೈಯಿಂದ ಕುಟ್ಟುತ್ತಿದ್ದೇವೆ.

    ಇದನ್ನು ಓದಿ ನಮ್ಮ ಬುರುಡೆಯನ್ನು ಸವರಿಕೊಂಡಿದ್ದೇವೆ….

    ಮತ್ತೆ
    ನೇಯ್ಗೆಯವರು ಎನ್ನುವುದಕ್ಕೆ ಇಂದಿನ ಟಿವಿ ಧಾರಾವಾಹಿಗಳ ನಿರ್ದೇಶಕರು ಎಂದೂ ಸೇರಿಸಬಹುದು! ಯಾಕಂದರೆ ನಾ.ಕಸ್ತೂರಿಯವರಿಗೆ ಈ ವಿಷಯ ತಿಳಿದಿರಲಾರದು.

    ಮತ್ತೊಂದು ವಿಷಯ:
    ನಗುವುದು ಅಂದರೆ ನಮ್ಮೊಳಗೆ ನಾವೇ ನಗುವುದು, ನಗಾಡುವುದು ಎಂದರೆ ಬೇರೆಯವರನ್ನು ಅಥವಾ ಬೇರೆಯವರು ನಮ್ಮ ಸ್ಥಿತಿ ನೋಡಿ ನಗೆಯಾಡುವುದು !!!!

  5. Objection your honor [:)]

    >ಅವಿವಾಹಿತ – ಹೆಂಗಸೊಬ್ಬಳ ಕಾಡಿಸುವ ಸದವಕಾಶವನ್ನು ಕಳೆದುಕೊಳ್ಳುವವ

    ಇದನ್ನು ‘ಹೆಂಗಸೊಬ್ಬಳಿಂದ ಜೀವನ ಪೂರ್ತಿ ಕಾಡಿಸಿ-ಪೀಡಿಸಿಕೊಂಡು-ಬೇರೆ ಹೆಂಗಸರನ್ನು ಪ್ರೀತಿಸುವ ಸದವಕಾಶವನ್ನು ಕಳೆದುಕೊಳ್ಳುವವ ‘ ಅಂತಾ update’ ಮಾಡಬೇಕೇನೋ !

    ತ್ರಿವೇಣಿಯವರೇ,
    ಅನರ್ಥಕೋಶ ಒದಗಿಸಿ ಅನರ್ಥಾನ್ವರಣ ಮಾಡಿದ್ದಕ್ಕೆ ವಂದನೆಗಳು !

    ಜೋಶಿಯವರೇ,
    ‘ಕಸ್ತೂರಿ ‘ ಕಸ ತೂರಿ ಆದರೇ..’ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಅನ್ನೋ ಗಾದೆ ‘ಪಕ್ಕದ್ಮನೆಯವರಿಗೆ ಗೊತ್ತು ಕಸ್ತೂರಿ ಪರಿಮಳ’ ಅಂತಾ ಬದಲಾಗಬಹುದೇ? (Assuming ಎಲ್ಲರೂ ತ್ರಿವೇಣಿಯವರ ತರ ಪಕ್ಕದ್ಮನೆಗೆ ಕಸ್ತೂರಿ 🙂 )

  6. ನುಡಿಃ
    “ಜೋಶಿಯವರೇ, ನಿಮ್ಮ ಪ್ರತಿಕ್ರಿಯೆ ಓದಿ ನನಗೆ ನೆನಪಾಗಿದ್ದು ,ಗಾಂಧೀಜಿಯವರ ಹೆಂಡತಿ ಕಸ್ತೂರಬಾ”

    ಕಿಡಿಃ
    ಹೌದು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ಬರೆದಂತೆ
    “ತೂರಿ ಬಾ ಜಾರಿ ಬಾ… ಕಸ್ತೂರಿ ಬಾ…”

  7. ಜೋಶಿಯವರೆ, ನಂದನದ ನಂತರ ನಿಮ್ಮ punಡಿತ್ಯಕ್ಕೆ ಸಿಕ್ಕ ಮತ್ತೊಂದು ಬಲಿಪಶು ಕಸ್ತೂರಿ. ಚಂದನ ಮುಂತಾದ ಚಂದದ ವಸ್ತುಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲು ಭಯಪಡುತ್ತಿವೆಯಂತೆ!

    ನಾನು ಇನ್ನೊಂದು ನುಡಿ ಒಗೆದರೆ ನೀವು ಇನ್ನೊಮ್ಮೆ ಕಿಡಿ ಉಗಿಯುವ ಭಯದಿಂದ ನಾನೀಗ ಮೌನಂ ಶರಣಂ ಗಚ್ಚಾಮಿ! 🙂

  8. ಶಿವು, ” ಅವಿವಾಹಿತ” ಪದಕ್ಕೆ ನೀವು ಕಂಡು ಹಿಡಿದಿರುವ ಹೊಸ ಅರ್ಥವನ್ನು ಅನರ್ಥಕೋಶದಲ್ಲಿ ಸೇರಿಸಲು ಹವಣಿಸಿದಲ್ಲಿ, ನಾವು ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕ ಅನರ್ಥಕೋಶಗಳನ್ನು ಸಿಧ್ದಪಡಿಸಲು ಪಟ್ಟು ಹಿಡಿಯಬೇಕಾಗುತ್ತದೆ!

    ಬೇಕಾದರೆ ,ನಿಮ್ಮ ಅನರ್ಥಕೋಶದಲ್ಲಿ ನೀವೇ ಕಂಡು ಹಿಡಿದಿರುವ ತಾತ್ವಿಕ, ಆಕಸ್ಮಿಕ , ಜೋಶಿಯವರ ಕಸ್ತೂರಿ,ನಂದನ ಪದಗಳನ್ನು ಸೇರಿಸಿಕೊಂಡರೂ ನಮ್ಮಿಂದ ಯಾವ ತಕರಾರಿಲ್ಲ.

  9. ಅನ್ವೇಷಿಗಳೇ, ನೇಯ್ಗೆಯವರು ಎನ್ನುವುದಕ್ಕೆ ಇಂದಿನ ಟಿವಿ ಧಾರಾವಾಹಿಗಳ ನಿರ್ದೇಶಕರು ಎಂದೂ ಸೇರಿಸಬಹುದು ಎಂದಿರುವುದು ಸರಿಯಾಗಿದೆ. ಅದರಲ್ಲೂ, ಉದಯ ಟಿವಿಯ ಏಕತಾ ಕಪೂರ್ ಅತ್ಯುತ್ತಮ ನೇಯ್ಗೆಯವಳು!

    ಸಮಾರಂಪಕ್ಕೂ – ಶಿವಮೊಗ್ಗ ಸಮ್ಮೇಳನದ ಚಂಪಾ-ರಂಪಕ್ಕೂ ಒಳ್ಳೆಯ ಹೋಲಿಕೆ ಇದೆಯಲ್ಲವೇ?

    ನಗುವುದು,ನಗಾಡುವುದು ವ್ಯತ್ಯಾಸ ತಿಳಿಯದ ನನ್ನನ್ನು ನೋಡಿ ಬೇರೆಯವರು ನಗಾಡುವುದು ತಪ್ಪಿಸಿದ್ದಕ್ಕೆ ಧನ್ಯವಾದಗಳು.

  10. ಜ್ಯೋತಿ, ನೀನಂದಂತೆ ಕಸ್ತೂರಿಯವರ ಹೆಸರಿನಲ್ಲೇ ಕನ್ನಡದ ಕಂಪು ತುಂಬಿದೆ. ಒಂದು ತಿದ್ದುಪಡಿ. ಅವರ ಮಾತೃಭಾಷೆ ತಮಿಳು,ಹುಟ್ಟಿ ಬೆಳೆದಿದ್ದು ಕೇರಳ. ಬದುಕಿನ ಕೊನೆಯ ದಿನಗಳನ್ನು ಕಳೆದಿದ್ದು ಆಂಧ್ರದ ಪುಟಪರ್ತಿಯಲ್ಲಿ.  ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಕರ್ನಾಟಕದಲ್ಲಿ.  ಅವರು ಎಲ್ಲಾ ಭಾಷೆಗಳನ್ನೂ ಬಿಟ್ಟು ಕನ್ನಡದಲ್ಲಿ ಬರೆದಿದ್ದು ಕನ್ನಡಿಗರ ಅದೃಷ್ಟವೇ!

  11. ಎಂತಹ ಚೇತನ! ಎಂಭತ್ತು ಶೇಕಡಾ “ದ್ರಾವಿಡ” ಜೀವ. ಪಂಚ-ದ್ರಾವಿಡ ಭಾಷೆಗಳಲ್ಲಿ ನಾಲ್ಕರಲ್ಲಿ ವ್ಯವಹರಿಸಿದವರು ಕಸ್ತೂರಿ.

  12. ಜ್ಯೋತಿ ನುಡಿಃ
    ಎಂತಹ ಚೇತನ! ಎಂಭತ್ತು ಶೇಕಡಾ “ದ್ರಾವಿಡ” ಜೀವ….

    ಜೋಶಿ ಕಿಡಿಃ
    ಇಂದೋರ್(ಮ.ಪ್ರ)ದಲ್ಲಿ ಹುಟ್ಟಿ ಬೆಳೆದು ಈಗ ಕರ್ನಾಟಕದವರಾಗಿ ಕ್ರಿಕೆಟ್ ಆಡುತ್ತಿರುವ, ಕನ್ನಡ ಅಷ್ಟು ಹೆಚ್ಚಾಗಿ ಮಾತಾಡದ, ರಾಹುಲ್ ದ್ರಾವಿಡ್ ಅವರದು ಎಷ್ಟು ಶೇಕಡಾ “ದ್ರಾವಿಡ”ಜೀವ ಎಂದು ನಿಮ್ಮ ಅಭಿಪ್ರಾಯ?

  13. ಮೇಡಮ್, ಅನರ್ಥಕೋಶ ಬಹಳ ಹಿಂದೆ ‘ಮಯೂರ’ ಮಾಸಿಕದಲ್ಲಿ ಕಂತುಗಳಲ್ಲಿ ಪ್ರಕಟವಾಗುತ್ತಿತ್ತು. ಓದಿ ಮನಸಾರೆ ನಕ್ಕಿದ್ದೆ. ಈಗ ಇಲ್ಲಿ ಓದಿದ ಮೇಲೆ ಅದೊಂದು ಪುಸ್ತಕವೊಂದನ್ನು ಕೊಳ್ಳಲೇಬೇಕೆಂಬ ಮನಸ್ಸಾಗುತ್ತಿದೆ.

    @ ಶ್ರೀವತ್ಸ ಜೋಶಿ
    ಸರ್, ದ್ರಾವಿಡ್ ನ ಸಧ್ಯದ ಶೇಕಡಾ (average) 51.18 ಇದೆ [:)]

  14. ಸುಶ್ರುತ, ಅನರ್ಥಕೋಶ ಅಂಕಿತದಲ್ಲಿ ದೊರಕಬಹುದು. ಕೊಂಡು ಓದಿ,ನಕ್ಕು ನಗಿಸಿ 🙂

  15. ಜೋಶಿಯವರೇ,

    ಕನ್ನಡ ಮಾತಾಡದ ರಾಹುಲ್ ದ್ರಾವಿಡ್ ಅವರ ಶೇಕಡಾವಾರು ಎಷ್ಟಿದ್ದರೇನಂತೆ? ಕನ್ನಡದ ಜೊತೆಗೆ ಇನ್ನು ಹಲವಾರು ಭಾಷೆಗಳನ್ನು ಬಲ್ಲ ನಿಮ್ಮ ಶೇಕಡಾವಾರಂತೂ ತುಂಬಾ ಹೆಚ್ಚಾಗಿಯೇ ಇರುತ್ತದೆ. ನನ್ನದು ೨೦% ಮಾತ್ರ 🙂

  16. ತ್ರಿವೇಣಿಯವರೇ,
    ಅನರ್ಥಕೋಶ ಒದಗಿಸಿ ಅನರ್ಥಾನ್ವರಣ ಮಾಡಿದ್ದಕ್ಕೆ ವಂದನೆಗಳು.
    ಇಲ್ಲಿ ಓದಿದ ಮೇಲೆ ಅದೊಂದು ಪುಸ್ತಕವೊಂದನ್ನು ಕೊಳ್ಳಲೇಬೇಕೆಂಬ ಮನಸ್ಸಾಗುತ್ತಿದೆ.

    ಕವಿವೇಕಿ – ಅವಿವೇಕಿಯಾದ ಕವಿ
    ಆ – ದಂತವೈದ್ಯರ ಮೂಲಮಂತ್ರ: ಇದನ್ನು ಜಪಿಸಿದ ಕೂಡಲೆ ನಾವು ಬಾಯಿಬಿಡುತ್ತೇವೆ. ಅವರು ನಮ್ಮ ಹಲ್ಲು ಕಿತ್ತುತ್ತಾರೆ
    ಮನಸ್ಸಾಕ್ಷಿ – ನಮ್ಮನ್ನು ಇನ್ನೂ ಸಣ್ಣ ಮಾಡುವ ಒಳದನಿ
    ಇಂಜಕ್ಷನ್ – ನುಂಗಲಾರದ ತುತ್ತು
    ಸೂಪರ್…

  17. ಶ್ರೀಕಾಂತ್ ಮಿಶ್ರಿಕೋಟಿಯವರೇ, ಅನರ್ಥ ಕೋಶದ ಲಿಂಕಿಗೆ ಧನ್ಯವಾದಗಳು.

Leave a Reply to md Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.