ಕನ್ನಡ ಪದಗಳು – ಜಿ.ಪಿ.ರಾಜರತ್ನಂ

ಕವನ -ಕನ್ನಡ ಪದಗಳು
ಕವಿ – ಜಿ. ಪಿ. ರಾಜರತ್ನಂ

ಹಾಡು ಕೇಳಿ –

ಯೆಂಡ ಯೆಡ್ತಿ ಕನ್ನಡ ಪದಗೊಳ್
  ಅಂದ್ರೆ ರತ್ನಂಗ್ ಪ್ರಾಣ !
ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-
  ತಕ್ಕೋ ! ಪದಗಳ್ ಬಾಣ !     |೧|

ಭಗವಂತ್ ಏನ್ರ ಬೂಮಿಗ್ ಇಳಿದು
  ನನ್ ತಾಕ್ ಬಂದಾಂತ್ ಅನ್ನು ;
ಪರ್‍ ಗಿರೀಕ್ಷೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು !        |೨|

‘ಯೆಂಡ ಕುಡಿಯಾದ್ ಬುಟ್‍ಬುಡ್ ರತ್ನ !’,
  ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ
  ದೇವರ್ ಮಾತ್ಗ್ ಅಡ್ಬಂದ್ರೆ !       |೩|

‘ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
  ಅಂತ್ ಔನ್ ಏನಾರ್ ಅಂದ್ರೆ-
ಕಳೆದೋಯ್ತ್ ಅಂತ ಕುಣದಾಡ್ತೀನಿ
  ದೊಡ್ ಒಂದ್ ಕಾಟ ! ತೊಂದ್ರೆ !   |೪|

‘ಕನ್ನಡ ಪದಗೋಳ್ ಆಡೋದ್ನೆಲ್ಲ
  ನಿಲ್ಲೀಸ್ ಬುಡಬೇಕ್ ರತ್ನ !’
ಅಂತ್ ಔನ್ ಅಂದ್ರೆ – ದೇವ್ರ್ ಆದ್ರ್ ಏನು !
  ಮಾಡ್ತೀನ್ ಔನ್ಗೆ ಖತ್ನ !             |೫|

ಆಗ್ನೆ ಮಾಡೋ ಐಗೋಳ್ ಎಲ್ಲಾ
  ದೇವ್ರೆ ಆಗ್ಲಿ-ಎಲ್ಲ !
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
  ಮಾನಾ ಉಳಸಾಕಿಲ್ಲ !              |೬|

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
  ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ !
  ನನ್ ಮನಸನ್ ನೀ ಕಾಣೆ !         |೭|

ಯೆಂಡ ಓಗ್ಲಿ ! ಯೆಡ್ತಿ ವೋಗ್ಲಿ !
  ಎಲ್ಲಾ ಕೊಚ್ಕೊಂಡ್ ವೋಗ್ಲಿ !
ಪರ್ಪಂಚ್ ಇರೋತನಕ ಮುಂದೆ
  ಕನ್ನಡ್ ಪದಗೋಳ್ ನುಗ್ಲಿ!          |೮|

*******************

9 thoughts on “ಕನ್ನಡ ಪದಗಳು – ಜಿ.ಪಿ.ರಾಜರತ್ನಂ”

 1. ‘ಕನ್ನಡ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗೋಳ್ ಆಡೋದ್ನೆಲ್ಲ
  ನಿಲ್ಲೀಸ್ ಬುಡಬೇಕ್ ರತ್ನ !’
  ಅಂತ್ ಔನ್ ಅಂದ್ರೆ – ದೇವ್ರ್ ಆದ್ರ್ ಏನು !
  ಮಾಡ್ತೀನ್ ಔನ್ಗೆ ಖತ್ನ ! ಅಂತ ಸ್ವಲ್ಪ ಬದಲಾವಣೆ ಮಾಡಬೇಕಾಗುತ್ತೆ ಈಗ. 🙂

 2. ಭೂತ says:

  ಯಾವ್ಗ್ಲೋ ಓದಿದ್ದು, ಮರ್ತ್ ಬುಟ್ಟಿದ್ದೆ.
  ಗ್ಯಪ್ತಿಗ್ ಬತ್ತು ಈಗ.

  ‘ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
  ಅಂತ್ ಔನ್ ಏನಾರ್ ಅಂದ್ರೆ-
  ಕಳೆದೋಯ್ತ್ ಅಂತ ಕುಣದಾಡ್ತೀನಿ
  ದೊಡ್ ಒಂದ್ ಕಾಟ ! ತೊಂದ್ರೆ ! |೪|

  🙂

  ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
  ಬಾಯ್ ಒಲಿಸಾಕಿದ್ರೂನೆ-
  ಮೂಗ್ನಲ್ ಕನ್ನಡ್ ಪದವಾಡ್ತೀನಿ !
  ನನ್ ಮನಸನ್ ನೀ ಕಾಣೆ ! |೭|

  ಬದ್ಲಾವಣೆ ಮಾಡ್ಬೇಕ್ ಅಂತ ಅನ್ವೇಷಿಗಳು ಅಪ್ಪಣೆ ಕೊಡಿಸಿರುವುದರಿಂದ.

  ಬೆಂಗ್ಳೂರ್ಗ್ ಕಳ್ಸಿ ನಾಲ್ಗೆ ಸೀಳ್ಸಿ,
  ಬಾಯ್ ಒಲಿಸಾಕಿದ್ರೂನೆ-
  ಮೂಗ್ನಲ್ ಕನ್ನಡ್ ಪದವಾಡ್ತೀನಿ !
  ನನ್ ಮನಸನ್ ನೀ ಕಾಣೆ !

  ಇಂತಿ
  ಕುಡ್ಕ್ಭೂತ

 3. sritri says:

  ಅನ್ವೇಷಿಗಳೇ,

  ಭಗವಂತ ಭೂಮಿಗೆ ಬಂದರೆ – ‘ಕನ್ನಡ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗೋಳ್ ಆಡೋದ್ನೆಲ್ಲ ನಿಲ್ಲೀಸ್ ಬುಡಬೇಕ್ ರತ್ನ !’ – ಎಂದು ಖಂಡಿತ ಕೇಳುವುದಿಲ್ಲ. ಇಂಗ್ಲಿಷ್ ಪದಗೋಳ ಮಧ್ಯೆ ಮಧ್ಯೆ ಒಂದೆರಡು ಕನ್ನಡವಾದರೂ ಇದೆಯಲ್ಲ ಎಂದು ಸಂತೋಷದಿಂದ ಹಿಂತಿರುಗುತ್ತಾನೆ, ಇಲ್ಲೇ ಇದ್ದರೆ ನನಗೂ ಇಂಗ್ಲೀಷ್ ಅಂಟೀತು ಎಂದು!

  ಇದು ನನಗೆ ಹೇಗೆ ಗೊತ್ತಾಯಿತು ಅಂದರೆ ,ಇದು ನಮ್ಮ ದೇವರ ಸತ್ಯ !! 🙂

 4. sritri says:

  ಕುಡುಕ ಭೂತವೇ, ನಿನ್ನನ್ನು ಬೆಂಗಳೂರಿಗೆ ಕಳಿಸುತ್ತೇವೆ.ನಾಲಿಗೆಯನ್ನೇನೂ ಸೀಳಿಸುವುದಿಲ್ಲ. ಲಕ್ಷಣವಾಗಿ ಬಾಯಿಂದಲೇ ಕನ್ನಡ ಮಾತಾಡು. ಅಲ್ಲಿಯ ಜನ “ಅರೆ, ಈ ಭೂತವೇ, ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಿದೆ, ನಾವ್ಯಾಕಿಲ್ಲ?” ಎಂದು ಅವರೂ ಕನ್ನಡ ಮಾತಾಡಲು ಶುರುಮಾಡಬಹುದು.

  ಸಂಸ್ಕೃತವನ್ನು ಮೃತಭಾಷೆ ಎಂದು ದೂರಮಾಡಿದಂತೆ, ಕನ್ನಡವನ್ನೂ ಭೂತ ಭಾಷೆ ಎಂದು ದೂರವಿಡುವ ಅಪಾಯವೂ ಇಲ್ಲದಿಲ್ಲ ! 🙂

 5. sritri says:

  ಇವತ್ತಿನ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಒಂದು ಉತ್ತಮ ಲೇಖನ – ನಿಮ್ಮೆಲ್ಲರ ಗಮನಕ್ಕೆ  –

 6. Shiv says:

  >ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
  ಅಂತ್ ಔನ್ ಏನಾರ್ ಅಂದ್ರೆ-
  ಕಳೆದೋಯ್ತ್ ಅಂತ ಕುಣದಾಡ್ತೀನಿ
  ದೊಡ್ ಒಂದ್ ಕಾಟ ! ತೊಂದ್ರೆ !

  ಇಲ್ಲಿ ಉಲ್ಲೇಖಿಸಿದ ದೊಡ್ ಕಾಟ ಯಾವುದು- ಯೆಂಡ ಅಥವಾ ಯೆಂಡ್ತೀ !?

 7. sritri says:

  “ಇಲ್ಲಿ ಉಲ್ಲೇಖಿಸಿದ ದೊಡ್ ಕಾಟ ಯಾವುದು- ಯೆಂಡ ಅಥವಾ ಯೆಂಡ್ತೀ !?

  – ನಿಸ್ಸಂಶಯವಾಗಿ ಯೆಡ್ತಿ 🙂

  ಶಿವು, ಕವನವನ್ನು ಇನ್ನೊಮ್ಮೆ ನಿಧಾನವಾಗಿ ಓದಿಕೊಳ್ಳಿ. ರತ್ನನಿಗೆ ಹೆಂಡ,ಹೆಂಡತಿ,ಕನ್ನಡ ಪದಗಳು – ಈ ಮೂರನ್ನು ಕಂಡರೆ ಪ್ರಾಣವೇ. ಆದರೆ ತೀರಾ ದೇವರೇ ಬಂದು ಕೇಳಿದರೆ ಮೊದಲೆರಡನ್ನು ಬಿಟ್ಟು ಬಿಡಲು ಒಪ್ಪಬಲ್ಲ. ಕನ್ನಡಪದಗಳನ್ನು ಹಾಡುವುದು ಬಿಟ್ಟು ಬಿಡು ಅಂದರೆ ಮಾತ್ರ – “ದೇವ್ರ್ ಆದ್ರ್ ಏನು ! ಮಾಡ್ತೀನ್ ಔನ್ಗೆ ಖತ್ನ !” 🙂

 8. ಹೆಚ್.ಮಲ್ಲಿಕಾರ್ಜುನ, ಹರಪನಹಳ್ಳಿ says:

  ಕನ್ನಡದ ಬಗ್ಗೆ ಇರಬೇಕಾದ ಅಭಿಮಾನನ ಪ್ರೀತಿಯ ನಿಲುವು

 9. ನಿಜವಾಗಲೂ ಅದ್ಭುತ ಕವಿಗಾರ ಕವನಗಳು ಇಂಥ ವ್ಯಕ್ತಿ ಮತ್ತೆ ಸಿಗುವುದಿಲ್ಲ ಡಾಕ್ಟರ್ ಬಿ ರಾಜರತ್ನಂ ಅವರಿಗೆ ತುಂಬು ಹೃದಯದ ಧನ್ಯವಾದಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕರುಣಾಳು ಬಾ ಬೆಳಕೆ – ಬಿ.ಎಂ.ಶ್ರೀಕರುಣಾಳು ಬಾ ಬೆಳಕೆ – ಬಿ.ಎಂ.ಶ್ರೀ

ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈ ಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ. ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,

ಎಲ್ಲಿ ಅರಿವಿಗಿರದೊ ಬೇಲಿಎಲ್ಲಿ ಅರಿವಿಗಿರದೊ ಬೇಲಿ

ಕವಿ- ಎಚ್. ಎಸ್. ವೆಂಕಟೇಶಮೂರ್ತಿ ಎಲ್ಲಿ ಅರಿವಿಗಿರದೊ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂಥ ನೆಲೆಯಿದೆಯೇನು ಹೇಳಿ ಸ್ವರ್ಗವನ್ನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ

ಶಾನುಭೋಗರ ಮಗಳು – ಕೆ.ಎಸ್.ನರಸಿಂಹಸ್ವಾಮಿಶಾನುಭೋಗರ ಮಗಳು – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಜಿ.ವಿ.ಅತ್ರಿ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ  ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ | ತಾಯಿಯಿಲ್ಲದ ಹೆಣ್ಣು ಮಿಂಚ