ನೆರಳು – ಪುತಿನ

ಕವನ – ನೆರಳು
ಕವಿ – ಪು.ತಿ.ನರಸಿಂಹಾಚಾರ್ (ಪುತಿನ)

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೆ ಅದರಿಚ್ಚೆ ಹಾದಿ
ಇದಕು ಹರಿದತ್ತ ಬೀದಿ

ನೆಲನೆಲದಿ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿನಕೊಂದೆ ನಿಟ್ಟು

ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡಬಹುದಾವ ಹೂಟ ?
ಸಿಕ್ಕು ದಣುವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.

ಇದ ನೋಡಿ ನಾನು ನೆನೆವೆನಿಂದು :
ಇಂಥ ನೆಳಲೇನು ಗಾಂಧಿಯೆಂದು !
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.

*  *   *  *  *  *  *   *

6 thoughts on “ನೆರಳು – ಪುತಿನ”

  1. mala says:

    ತುಂಬಾ ಸೊಗಸಾದ ಪದ್ಯ.  ಮೇರು ವ್ಯಕ್ತಿತ್ವದ ಮಹಾತ್ಮಗಾಂಧಿಯವರನ್ನು ಪೂಜ್ಯ ಗರುಡನಿಗೆ ಹೋಲಿಸಿರುವ ಪ್ರತಿಮೆ ಅನುಪಮವಾಗಿದೆ.
    ಈ ಪದ್ಯವನ್ನು ಹಿಂದೆಯೂ ಓದಿದ್ದೆ . ಆದರೆ ಇವತ್ಯಾಕೋ ಓದಿದಾಗ, W.B. Yeats ನ The Second Coming ಪದ್ಯದ ಸಾಲುಗಳು ನೆನಪಾದವು ಇಲ್ಲೂ ಯೇಟ್ಸ್ ಗರುಡಪ್ರತಿಮೆಯನ್ನು ಉಪಯೋಗಿಸುತ್ತಾನೆ ಆದರೆ ಪುತಿ.ನ ಅವರಷ್ಟು ಅದ್ಬುತವಾಗಿ ಅಲ್ಲ!

    ತನ್ನ ಪದ್ಯದಲ್ಲಿ ಯೇಟ್ಸ್,
    Things fall apart; the centre cannot hold;
    Mere anarchy is loosed upon the world,

    ಎಂದು ಹಲುಬುತ್ತಾ ಕ್ರಿಸ್ತ ಮತ್ತೆ ಹುಟ್ಟಿ ಬರುತ್ತಾನೆಂದು ಆಶಿಸುತ್ತಾನೆ.
    ಜಗತ್ತಿಗೆ ಇಂದು ಗಾಂಧಿಯಂಥ ಮಹಾತ್ಮರ ಅವಶ್ಯಕತೆ ಹೆಚ್ಚಾಗಿದೆ, ಮಹಾತ್ಮ ಮತ್ತೊಮ್ಮೆ ಹುಟ್ಟಿಬಾ…

  2. Shreeni says:

    ಅಯ್ಯಯ್ಯೊ, ಹಾಗೇನಾದ್ರೂ ಆದರೇ ಜಮ್ಮು, ಕಾಶ್ಮೀರ, ಹೈದರಾಬಾದು ಎಲ್ಲದಕ್ಕೂ ತಿಲತರ್ಪಣ 🙁

  3. sritri says:

    ಅನಿಸಿಕೆಗಳಿಗೆ ಧನ್ಯವಾದಗಳು ಮಾಲಾ.  ಲಕ್ಷ್ಮೀನಾರಾಯಣ ಭಟ್ಟರು ನಡೆಸಿದ ಸಾಹಿತ್ಯ ಶಿಬಿರದಲ್ಲಿ, ಈ ಕವನದ ಒಂದೆರಡು ಸಾಲುಗಳನ್ನು ಹೇಳಿದ್ದರು. ನೀವು “ನೆರಳು” ಕವನದ ಮೇಲೆ ಮತ್ತಷ್ಟು ಹೊಸ ಬೆಳಕು ಹರಿಸಿದ್ದೀರಿ. 🙂

  4. kaaloo says:

    ಸೊಗಸಾದ ಪ್ರತಿಮೆ.
    ಜನವರಿ ೩೦ ರಂದು ಗಾಂಧಿಯನ್ನು ನೆನೆಪಿಸಿಕೊಂಡ ನಿಮಗೆ ನಮನ.

  5. Shiv says:

    ಕೊನೆಯ ಪ್ಯಾರ ಓದೋವರ್ಗೆ ಇದು ಗಾಂಧೀಜಿಯ ಬಗ್ಗೆ ಅಂತಾ ಗೊತ್ತಾಗಿರಲಿಲ್ಲ..

    >ವೇಗಕಡ್ಡಬಹುದಾವ ಹೂಟ ?
    ಹೂಟ ಅಂದರೆ ಎನು?

  6. sritri says:

    ಹೂಟ = ಒಳಸಂಚು, ಕುತಂತ್ರ, ಪಿತೂರಿ..

Leave a Reply to Shiv Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅನಂತ ಪ್ರಣಯ – ಅಂಬಿಕಾತನಯದತ್ತಅನಂತ ಪ್ರಣಯ – ಅಂಬಿಕಾತನಯದತ್ತ

ಕವಿತೆ :ಅನಂತ ಪ್ರಣಯ ಕವಿ : ಅಂಬಿಕಾತನಯದತ್ತ, ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ. ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ. ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೇ

ವಸಂತ – ಬಿ.ಎಂ.ಶ್ರೀವಸಂತ – ಬಿ.ಎಂ.ಶ್ರೀ

ಕವಿ – ಬಿ.ಎಂ.ಶ್ರೀ (ಇಂಗ್ಲೀಷ್ ಗೀತಗಳು) ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ

ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ; ವಿನೋದವಿರದು ನನ್ನಲಿ. ಕಿವಿಯನೇಕೆ ತೆರೆಯುತಿರುವೆ? ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ! ನಲ್ಲೆ ಬಂದು ತುಟಿಗೆ ಕೊಳಲ ನೊತ್ತಿ ಉಸುರ ಬಿಟ್ಟಳು; ತನ್ನ ಒಲವಿನಿಂದ್ರಧನುವ ಹರಿದು ಇಳಿದು ಬಿಟ್ಟಳು; ಬಣ್ಣ ಬಣ್ಣದೆನಿತೋ ಹಾಡ