ನೆರಳು – ಪುತಿನ

ಕವನ – ನೆರಳು
ಕವಿ – ಪು.ತಿ.ನರಸಿಂಹಾಚಾರ್ (ಪುತಿನ)

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೆ ಅದರಿಚ್ಚೆ ಹಾದಿ
ಇದಕು ಹರಿದತ್ತ ಬೀದಿ

ನೆಲನೆಲದಿ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿನಕೊಂದೆ ನಿಟ್ಟು

ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡಬಹುದಾವ ಹೂಟ ?
ಸಿಕ್ಕು ದಣುವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.

ಇದ ನೋಡಿ ನಾನು ನೆನೆವೆನಿಂದು :
ಇಂಥ ನೆಳಲೇನು ಗಾಂಧಿಯೆಂದು !
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.

*  *   *  *  *  *  *   *

6 thoughts on “ನೆರಳು – ಪುತಿನ”

  1. mala says:

    ತುಂಬಾ ಸೊಗಸಾದ ಪದ್ಯ.  ಮೇರು ವ್ಯಕ್ತಿತ್ವದ ಮಹಾತ್ಮಗಾಂಧಿಯವರನ್ನು ಪೂಜ್ಯ ಗರುಡನಿಗೆ ಹೋಲಿಸಿರುವ ಪ್ರತಿಮೆ ಅನುಪಮವಾಗಿದೆ.
    ಈ ಪದ್ಯವನ್ನು ಹಿಂದೆಯೂ ಓದಿದ್ದೆ . ಆದರೆ ಇವತ್ಯಾಕೋ ಓದಿದಾಗ, W.B. Yeats ನ The Second Coming ಪದ್ಯದ ಸಾಲುಗಳು ನೆನಪಾದವು ಇಲ್ಲೂ ಯೇಟ್ಸ್ ಗರುಡಪ್ರತಿಮೆಯನ್ನು ಉಪಯೋಗಿಸುತ್ತಾನೆ ಆದರೆ ಪುತಿ.ನ ಅವರಷ್ಟು ಅದ್ಬುತವಾಗಿ ಅಲ್ಲ!

    ತನ್ನ ಪದ್ಯದಲ್ಲಿ ಯೇಟ್ಸ್,
    Things fall apart; the centre cannot hold;
    Mere anarchy is loosed upon the world,

    ಎಂದು ಹಲುಬುತ್ತಾ ಕ್ರಿಸ್ತ ಮತ್ತೆ ಹುಟ್ಟಿ ಬರುತ್ತಾನೆಂದು ಆಶಿಸುತ್ತಾನೆ.
    ಜಗತ್ತಿಗೆ ಇಂದು ಗಾಂಧಿಯಂಥ ಮಹಾತ್ಮರ ಅವಶ್ಯಕತೆ ಹೆಚ್ಚಾಗಿದೆ, ಮಹಾತ್ಮ ಮತ್ತೊಮ್ಮೆ ಹುಟ್ಟಿಬಾ…

  2. Shreeni says:

    ಅಯ್ಯಯ್ಯೊ, ಹಾಗೇನಾದ್ರೂ ಆದರೇ ಜಮ್ಮು, ಕಾಶ್ಮೀರ, ಹೈದರಾಬಾದು ಎಲ್ಲದಕ್ಕೂ ತಿಲತರ್ಪಣ 🙁

  3. sritri says:

    ಅನಿಸಿಕೆಗಳಿಗೆ ಧನ್ಯವಾದಗಳು ಮಾಲಾ.  ಲಕ್ಷ್ಮೀನಾರಾಯಣ ಭಟ್ಟರು ನಡೆಸಿದ ಸಾಹಿತ್ಯ ಶಿಬಿರದಲ್ಲಿ, ಈ ಕವನದ ಒಂದೆರಡು ಸಾಲುಗಳನ್ನು ಹೇಳಿದ್ದರು. ನೀವು “ನೆರಳು” ಕವನದ ಮೇಲೆ ಮತ್ತಷ್ಟು ಹೊಸ ಬೆಳಕು ಹರಿಸಿದ್ದೀರಿ. 🙂

  4. kaaloo says:

    ಸೊಗಸಾದ ಪ್ರತಿಮೆ.
    ಜನವರಿ ೩೦ ರಂದು ಗಾಂಧಿಯನ್ನು ನೆನೆಪಿಸಿಕೊಂಡ ನಿಮಗೆ ನಮನ.

  5. Shiv says:

    ಕೊನೆಯ ಪ್ಯಾರ ಓದೋವರ್ಗೆ ಇದು ಗಾಂಧೀಜಿಯ ಬಗ್ಗೆ ಅಂತಾ ಗೊತ್ತಾಗಿರಲಿಲ್ಲ..

    >ವೇಗಕಡ್ಡಬಹುದಾವ ಹೂಟ ?
    ಹೂಟ ಅಂದರೆ ಎನು?

  6. sritri says:

    ಹೂಟ = ಒಳಸಂಚು, ಕುತಂತ್ರ, ಪಿತೂರಿ..

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ಕವಿ – ಮಂಜೇಶ್ವರ ಗೋವಿಂದ ಪೈ ಹಾಡು ಕೇಳಿ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು ತನು