“ಹಳೆಯ ಹಾಡು ಹಾಡು ಮತ್ತೆ
ಅದನೇ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ”
ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ನನಗೀಗ ಮತ್ತಷ್ಟು ಅರ್ಥಪೂರ್ಣ ಅನ್ನಿಸುತ್ತಿದೆ. ಯಾಕೆ ಗೊತ್ತಾ? ನನಗೆ ಹಳೆಯ ಹಾಡುಗಳ ಭಂಡಾರ ಸಿಕ್ಕಿದೆ. ಕೆಲವು ದಿನಗಳ ಹಿಂದೆ ನಮ್ಮ ಮಿತ್ರರೊಬ್ಬರ ಮನೆಗೆ ಹೋಗಿದ್ದಾಗ ಆ ಮಾತು-ಈ ಮಾತು ಆಡುತ್ತಿದ್ದಾಗ ಪಿ.ಕಾಳಿಂಗರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಹಾಡಿನ ಬಗ್ಗೆ ಮಾತು ಬಂದಿತು.ನಾನು ಈಚೆಗೆ ಈ ಹಾಡನ್ನು ಕೇಳೇ ಇಲ್ಲ, ತುಂಬಾ ದಿನಗಳಾಯಿತು” ಎಂದೆ. ಅವರು – “ಆ ಹಾಡು ನನ್ನಲ್ಲಿದೆ, ಬೇಕಾದರೆ ತೆಗೆದುಕೊಂಡುಹೋಗಿ” – ಎಂದು ತಮ್ಮಲ್ಲಿದ್ದ ಹಾಡುಗಳ ಸಂಗ್ರಹವನ್ನು ತೋರಿಸಿದರು.
ಅಲ್ಲಿದ್ದದ್ದು ತುಂಬಾ ಹಳೆಯ ಚಿತ್ರಗಳ ಕ್ಯಾಸೆಟ್ಗಳು. ಅವುಗಳನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಈಗ ಆಸ್ಪತ್ರೆಯಲ್ಲಿ ಕೊನೆಯ ಗಳಿಗೆಗಳನ್ನು ಎಣಿಸುತ್ತಿರುವ ಎಸ್.ಕೆ. ಕರೀಂಖಾನರ ಸ್ವರ್ಣಗೌರಿ, ಘಂಟಸಾಲರ ಶಿವಶಂಕರಿ….ಹಾಡಿರುವ ಜಗದೇಕವೀರನ ಕಥೆ, ಸೋರಟ್ ಅಶ್ವತ್ಥ್ ಸಾಹಿತ್ಯ ನೀಡಿರುವ ಕೆಲವು ಚಿತ್ರಗಳು, ಪಿ.ಬಿ. ಶ್ರೀನಿವಾಸ್ ಹಾಡಿರುವ ತುಂಬಾ ಹಳೆಯ ಚಿತ್ರಗೀತೆಗಳು….ಎಲ್ಲಿ ಹುಡುಕಿದರೂ ಸಿಗದ ಅಪರೂಪದ ಗೀತೆಗಳು ಅಲ್ಲಿದ್ದವು.
ಆದರೆ ಎಲ್ಲವೂ ಕ್ಯಾಸೆಟ್ಗಳು. ಈಗಿನ ಹೊಸ ಕಾರುಗಳಲ್ಲಿ ಹಾಕಿಕೊಂಡು ಕೇಳಲು ಸಾದ್ಯವಿಲ್ಲದವು. ಆ ಮಿತ್ರರ ಹಳೆಯ ಹಾಡುಗಳ ಅಭಿಮಾನ ಅದೆಷ್ಟಿದೆಯೆಂದರೆ ಕಾರಿನಲ್ಲಿ ಈ ಹಾಡುಗಳನ್ನು ಕೇಳಲೆಂದೇ ಒಂದು ಟೇಪ್ ರೆಕಾರ್ಡರ್ ಇಟ್ಟುಕೊಂಡಿದ್ದಾರಂತೆ!
ಒಂದು ಇನ್ನೊಂದು ಎನ್ನುತ್ತಾ ಸುಮಾರು ಹತ್ತಿಪ್ಪತು ಕ್ಯಾಸೆಟ್ಟುಗಳನ್ನು ಆರಿಸಿಕೊಂಡೆ. ಮನೆಗೆ ಬಂದು ಮೂಲೆಗೆ ಬಿಸಾಕಿದ್ದ ಕ್ಯಾಸೆಟ್ ಪ್ಲೇಯರಿನಲ್ಲಿ ಆ ಹಾಡುಗಳನ್ನೆಲ್ಲ ಕೇಳಿದೆ. ಒಂದಕ್ಕಿಂತ ಒಂದು ಸುಂದರ. ಎಷ್ಟೊಂದು ಚೆಲುವಾಗಿ ಹೆಣೆಯಲ್ಪಟ್ಟ ಗೀತೆಗಳು! ಈಗಿನ ಹಾಡುಗಳಿಗೆ ಬಳಸುವ ವಿವಿಧ ಬಗೆಯ ಆಧುನಿಕ ವಾದ್ಯಗಳಿಲ್ಲದೆಯೂ ಕಿವಿಗಿಂಪೆನಿಸುವ ತಣ್ಣನೆಯ ಸಂಗೀತ ಅದು. ಸೀಮಿತ ವಾದ್ಯಗಳನ್ನು ಬಳಸಿದ ಕೆಲವು ಹಾಡುಗಳು, ಇಂದಿನ ಅಬ್ಬರದ, ಆಡಂಬರದ ಸಂಗೀತದ ಮುಂದೆ ಬಡಕಲು ಅನ್ನಿಸುತ್ತದೆ ಕೂಡ. ಹಳೆಯ ಹಾಡುಗಳನ್ನೇ ರೀಮಿಕ್ಸಿನ ಗಾಣದಲ್ಲಿ ಅರೆದು, ಹಣ ದೋಚುತ್ತಿರುವ ಈ ಹೊತ್ತಿನಲ್ಲಿ, ಹಳೆಯ ಹಾಡುಗಳದು ಹುಡುಕಿದರೂ ಸಿಗದ ದುರ್ಗತಿ!
ಈಗ, ಕ್ಯಾಸೆಟ್ನಲ್ಲಿ ತುಂಬಿರುವ ಗಾನಸುಧೆಯನ್ನು mp3ಗೆ ಪರಿವರ್ತಿಸಿ, ಸಿಡಿಗಳಿಗೆ ತುಂಬಿಸಬೇಕಾಗಿದೆ. ಕ್ಯಾಸೆಟ್ನ್ನು ಹಿಂತಿರುಗಿಸುವಾಗ ನಿಮಗೂ ಒಂದು ಸಿಡಿ ತಲುಪಿಸುತ್ತೇನೆ ಎಂದು ನಮ್ಮ ಸ್ನೇಹಿತರಿಗೆ ನೀಡಿದ ಆಶ್ವಾಸನೆಯನ್ನು ನಿಜ ಮಾಡಬೇಕಾಗಿದೆ. ನಂಬಿಕೆ ಉಳಿಸಿಕೊಳ್ಳಬೇಕಾಗಿದೆ. 🙂