ಕವನ – ಶಬರಿ
ಕವಿ – ವಿ.ಸೀತಾರಾಮಯ್ಯ
ಕಾದಿರುವಳು ಶಬರಿ
ರಾಮ ಬರುವನೆಂದು
ತನ್ನ ಪೂಜೆಗೊಳುವನೆಂದು|
ವನವನವ ಸುತ್ತಿ ಸುಳಿದು
ತರುತರುವ ನಲೆದು ತಿರಿದು
ಬಿರಿ ಹೂಗಳಾಯ್ದು ತಂದು
ತನಿವಣ್ಗಣಾಯ್ದು ತಂದು |
ಕೊಳದಲ್ಲಿ ಮುಳುಗಿ ಮಿಂದು
ಬಿಳಿನಾರು ಮಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸಿತಿಲಲಿ ಕಾದು ನಿಂದು |
ಬಾ ರಾಮ ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸುತಿಹಳು
ಕಳೆದಿಹವು ವರುಷ ಹಲವು |
ಬಂದಾನೋ ಬಾರನೋ
ಕಂಡಾನೋ ಕಾಣನೋ
ಎಂದೆಂದು ತಪಿಸಿ ಜಪಿಸಿ
ಶಂಕಾತುರಂಗಳೂರಿ |
ಬಾ ರಾಮ ಬಾರ ಬಾರ
ಬಡವರನು ಕಾಯಿ ಬಾರ
ಕಂಗಾಣದಿವರ ಪ್ರೇಮ
ನುಡಿ ಸೋತ ಮೂಕ ಪ್ರೇಮ |