ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ. ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 ) ಪುಸ್ತಕವನ್ನು ವೇಗವಾಗಿ, ಗಬಗಬನೆ ಓದುವ ಸ್ವಭಾವ ನನ್ನದಲ್ಲ. ರುಚಿಕರವಾದ ಪುಸ್ತಕವೊಂದು ಬೇಗ ಓದಿದರೆ ಮುಗಿದೇ ಹೋಗುತ್ತದೆಂಬ ಜಿಪುಣತನದಿಂದ ಒಂದೊಂದೇ ಸಾಲುಗಳನ್ನು ನಿಧಾನವಾಗಿ ಓದುತ್ತಾ ಹೋಗುತ್ತೇನೆ.
ಸಣ್ಣ,ಪುಟ್ಟ ಪುಸ್ತಕಗಳನ್ನೆಲ್ಲ ಮೊದಲು ಮುಗಿಸಿದ್ದಾಯಿತು. ಕಾರಂತರ ಆತ್ಮ ಕಥೆ – ಹುಚ್ಚು ಮನಸ್ಸಿನ ಹತ್ತು ಮುಖಗಳು , ಭೈರಪ್ಪ- ದೂರಸರಿದರು ( ಎರಡನೆಯ ಸಲ), ಜುಗಾರಿ ಕ್ರಾಸ್-ತೇಜಸ್ವಿ, ಬ್ಲಾಕ್ ಫ್ರೈಡೇ – ರವಿ ಬೆಳಗೆರೆ(ಅನುವಾದ), ಏರಿಳಿತದ ಹಾದಿಯಲ್ಲಿ – ಸುಧಾಮೂರ್ತಿ, ಹೇಮಂತ ಗಾನ – ವ್ಯಾಸರಾಯ ಬಲ್ಲಾಳ, ಗತಿ-ಬಿ.ಟಿ. ಲಲಿತಾ ನಾಯಕ್, ದೇವರು – ಎ.ಎನ್.ಮೂರ್ತಿರಾವ್, ನಮ್ಮೊಳಗೊಬ್ಬ ನಾಜೂಕಯ್ಯ – ಟಿ.ಎನ್.ಸೀತಾರಾಂ…..
ಕೊನೆಗೆ ಈಗ ಕುವೆಂಪು ಆತ್ಮಕಥೆಯಾದ “ನೆನಪಿನ ದೋಣಿ” ಕೈಗೆತ್ತಿಕೊಂಡಿದ್ದೇನೆ. ಕೈಯಲ್ಲಿ ಹಿಡಿದು ಓದಲು ಕಷ್ಟವೆನಿಸುವಷ್ಟು ದಪ್ಪದ ಪುಸ್ತಕ. ೧೨೬೮ ಪುಟಗಳ ಈ ಬೃಹತ್ ಹೊತ್ತಿಗೆ ,ನೀರಸ ನಿರೂಪಣೆಯಿಂದ ಕೂಡಿದ್ದರೆ ಅದನ್ನು ಓದುವುದಿರಲಿ, ಮುಟ್ಟಲೂ ನನಗೆ ಭಯವಾಗುತ್ತಿತೇನೋ. ಆದರೆ ಕುವೆಂಪು ಅವರ ತಿಳಿಹಾಸ್ಯದ, ನವಿರಾದ ಬರವಣಿಗೆ ಇರುವ ಈ ಪುಸ್ತಕದ ಓದು ದೋಣಿ ವಿಹಾರದಂತೆಯೇ ಹಿತವಾಗಿ ಸಾಗುತ್ತಿದೆ. ಮಲೆನಾಡಿನ ಕುಗ್ರಾಮದ ಬಾಲಕನೊಬ್ಬ ಮಹಾಕವಿಯಾಗಿ ರೂಪುಗೊಂಡ ಮಹಾ ಜೀವನ ಯಾನವನ್ನು, ಯಾವ ಭಾವಾವೇಶವಿಲ್ಲದೆ, ಸುಲಲಿತ ಶೈಲಿಯಲ್ಲಿ ದಾಖಲಿಸುತ್ತಾ ಹೋಗುತ್ತಾರೆ ಕುವೆಂಪು.
ಓದುತ್ತಿದ್ದಂತೆಯೇ, ಈ ಪುಸ್ತಕದಲ್ಲಿ ನನಗೆ ಪ್ರಿಯವೆನಿಸಿದ ಕೆಲವು ಸಂಗತಿಗಳನ್ನು ಇಲ್ಲಿ ದಾಖಲಿಸಲೇ ಎಂದು ಒಮ್ಮೆ ಯೋಚಿಸಿದೆ. ಆಮೇಲೆ ಈ ಪುಸ್ತಕವನ್ನು ಇಡಿಯಾಗಿ ಸವಿಯುವ ಓದುಗರ ಕುತೂಹಲವನ್ನು ಹಾಳುಗೆಡವುದು ಬೇಡವೆಂದು ಆ ಯೋಜನೆಯನ್ನು ಕೈಬಿಟ್ಟೆ. ಅಲ್ಲದೆ ಕಾಪಿ ರೈಟ್ ಹೊಂದಿರುವ ಇಂತಹ ಕೃತಿಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುವುದು ಸರಿಯಲ್ಲವೆನಿಸಿತು. ನಾಲ್ಕನೆಯ ಒಂದು ಭಾಗ ಕೂಡ ಮುಗಿದಿರದ ಈ ನೆನಪಿನ ದೋಣಿಯ ಪಯಣ ಇನ್ನೂ ದೀರ್ಘವಾಗಿದೆ. ಬರುವವರಿದ್ದರೆ ಜೊತೆ ಬನ್ನಿ…
* * *