ಕಾಣಿಕೆ – ಬಿಎಂಶ್ರೀ
ಕವಿ – ಬಿ.ಎಂ.ಶ್ರೀಕಂಠಯ್ಯ
ಮೊದಲು ತಾಯ ಹಾಲ ಕುಡಿದು,
ಲಲ್ಲೆಯಿಂದ ತೊದಲಿ ನುಡಿದು,
ಕೆಳೆಯರೊಡನೆ ಬೆಳೆದು ಬಂದ
ಮಾತದಾವುದು–
ನಲ್ಲೆಯೊಲವ ತೆರೆದು ತಂದ
ಮಾತದಾವುದು–
ಸವಿಯ ಹಾಡ, ಕಥೆಯ ಕಟ್ಟಿ,
ಕಿವಿಯಲೆರೆದು, ಕರುಳ ತಟ್ಟಿ
ನಮ್ಮ ಜನರು,ನಮ್ಮ ನಾಡು,
ಎನಿಸಿತಾವುದು-
ನಮ್ಮ ಕವಿಗಳೆಂಬ ಕೋಡು
ತಲೆಗದಾವುದು–
ಕನ್ನಡ ನುಡಿ, ನಮ್ಮ ಹೆಣ್ಣು,
ನಮ್ಮ ತೋಟದಿನಿಯ ಹಣ್ಣು ;
ಬಳಿಕ, ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು ;
ಹೊಸೆದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು.
ಪಡುವ ಕಡಲ ಹೊನ್ನ ಹೆಣ್ಣು,
ನನ್ನ ಜೀವದುಸಿರು ಕಣ್ಣು,
ನಲಿಸಿ, ಕಲಿಸಿ, ಮನವನೊಲಿಸಿ
ಕುಣಿಸುತಿರುವಳು ;
ಒಮ್ಮೆ ಇವಳು, ಒಮ್ಮೆ ಅವಳು,
ಕುಣಿಸುತಿರುವಳು
ಹೀಗೆ ನನಗೆ ಹಬ್ಬವಾಗಿ,
ಇನಿಯರಿಬ್ಬರನ್ನು ತೂಗಿ,
ಇವಳ ಸೊಬಗನವಳು ತೊಟ್ಟು,
ನೋಡ ಬಯಸಿದೆ ;
ಅವಳ ತೊಡಿಗೆ ಇವಳಿಗಿಟ್ಟು,
ಹಾಡ ಬಯಸಿದೆ.
ಬಲ್ಲವರಿಗೆ ಬೆರಗೆ ಇಲ್ಲಿ?
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು
ದಣಿದು ಹೋದೆನು.
ಬಡವನಳಿಲು ಸೇವೆಯೆಂದು
ಧನ್ಯನಾದೆನು.
* * * * *