ಕವನ – ನೆರಳು
ಕವಿ – ಪು.ತಿ.ನರಸಿಂಹಾಚಾರ್ (ಪುತಿನ)
ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೆ ಅದರಿಚ್ಚೆ ಹಾದಿ
ಇದಕು ಹರಿದತ್ತ ಬೀದಿ
ನೆಲನೆಲದಿ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿನಕೊಂದೆ ನಿಟ್ಟು
ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡಬಹುದಾವ ಹೂಟ ?
ಸಿಕ್ಕು ದಣುವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.
ಇದ ನೋಡಿ ನಾನು ನೆನೆವೆನಿಂದು :
ಇಂಥ ನೆಳಲೇನು ಗಾಂಧಿಯೆಂದು !
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.
* * * * * * * *