“ಧಾರಾವಾಹಿ ನಿರ್ದೇಶಕರು, ಒಬ್ಬ ವ್ಯಕ್ತಿಗೆ ಕನಿಷ್ಠ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ” – (ಬೊ.ರ. ಬ್ಯುರೋ)
ಎಂದೂ ಅಸತ್ಯವನ್ನೇ ಬೊಗಳುವ ಅಸತ್ಯಾನ್ವೇಷಿಗಳು ಈ ಬಾರಿ ಮಾತ್ರ ಅಪ್ಪಿತಪ್ಪಿ ಪರಮ ಸತ್ಯದ ಸುದ್ದಿಯನ್ನೇ ತಮ್ಮ ಬೊಗಳೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಮೊದಲಿಗೆ ಅವರನ್ನು ಅಭಿನಂದಿಸುತ್ತಿದ್ದೇನೆ.
ಅನ್ವೇಷಿಗಳ ವರದಿಗೆ ಮತ್ತಷ್ಟು ಪುರಾವೆ ಒದಗಿಸುವುದಾದರೆ – “ಕಾದಂಬರಿ” – ಇಬ್ಬರು ಹೆಂಡತಿಯರು, “ಮಾಂಗಲ್ಯ” – ಒಬ್ಬಳು ಹೆಂಡತಿ , ಇನ್ನೊಬ್ಬಳು ಹೆಂಡತಿಯಲ್ಲದವಳು. “ತಕಧಿಮಿತ” -ಪೋಲಿಸ್ ಅಧಿಕಾರಿ ಸಮರ್ಥನಿಗೆ ಇನ್ನೊಬ್ಬ ಮಹಿಳಾ ಪೋಲಿಸ್ ಅಧಿಕಾರಿಯ ಜೊತೆ ಸಂಬಂಧ, ಸಮರ್ಥನ ತಂದೆಗೂ (ಶ್ರೀನಿವಾಸ್ ಪ್ರಭು) ಚಂದ್ರಮತಿ , ಪ್ರತಿಮಾ ಎಂಬ ಇಬ್ಬರು ಹೆಂಡತಿಯರು. “ರಂಗೋಲಿ” – ಇಬ್ಬರು, “ನಾಕು ತಂತಿ”ಯಲ್ಲಿ ಶ್ರೀನಿವಾಸಪ್ರಭು ಅವರದೂ ಇದೇ ಕಥೆ. ಇಬ್ಬರು ಹೆಂಡತಿಯರಲ್ಲದೆ, ಲೆಕ್ಕವಿಲ್ಲದಷ್ಟು ಅನೈತಿಕ ಸಂಬಂಧಗಳು! ಅವರದು characterless ಮಂತ್ರಿಯ ಪಾತ್ರವಾದ್ದರಿಂದ , ಅದಕ್ಕೊಂದು ಸಮರ್ಥನೆಯಾದರೂ ಇದೆ. ಇದು ನಾನು ಆಗೀಗ ನೋಡಿರುವ ಕೆಲವು ಮಾತ್ರ. ನೋಡಿರದ ಉಳಿದ ಕಣ್ಣೀರು ಧಾರಾವಾಹಿಗಳ ಬಗ್ಗೆ ಗೊತ್ತಿಲ್ಲ.
ನಾನು ಅಡಿಗೆ ಮನೆಯಲ್ಲಿ ಮೆದು ಚಪಾತಿ ತಯಾರಿಸುವ ಹೊತ್ತಿಗೆ ಸರಿಯಾಗಿ, ಹಾಲ್ನಲ್ಲಿರುವ ಟಿವಿಯಲ್ಲಿ “ಕಾದಂಬರಿ” ಬರುವುದರಿಂದ ಈ ಧಾರಾವಾಹಿಯ ಕೆಲವು ಕಂತುಗಳನ್ನು ನೋಡಿರುವ ಪುಣ್ಯ ನನ್ನದು. ಈ ಧಾರಾವಾಹಿಯ ಬಗ್ಗೆ ಏನೇನೂ ತಿಳಿಯದ ಪಾಮರರಿಗೆ ಸ್ವಲ್ಪವಾದರೂ ಕಥೆ ಹೇಳಿ ಜ್ಞಾನಾರ್ಜನೆ ಮಾಡಿಸಬೇಕೆಂದುಕೊಂಡೆ. ಆದರೆ ಹಲವಾರು ಕವಲುಗಳುಳ್ಳ, ಈ ಮಹಾ (ಮೆಗಾ )ಕಥೆಯನ್ನು ಎಲ್ಲಿಂದ ಪ್ರಾರಂಭಿಸಿ,ಎಲ್ಲಿ ಮುಗಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಸುಮ್ಮನಾಗಿಬಿಟ್ಟೆ.
ಉದಯ ಧಾರಾವಾಹಿಗಳಂತೂ ಅಸಂಬಂದ್ಧ, ಅತಾರ್ಕಿಕ ಘಟನೆಗಳ ಸರಮಾಲೆ. ಅಮೆರಿಕಾಗೆ ಉದಯ ಚಾನಲ್ ಬಂದ ಹೊಸದರಲ್ಲೇ, ಅದನ್ನು ಮನೆಗೆ ಬರಮಾಡಿಕೊಂಡ ಮೊದಲಿಗರಲ್ಲಿ ನಾವೂ ಒಬ್ಬರು. ಆಗಲೇ ಶುರುವಾಗಿ, ಸುಮಾರು ಕಂತುಗಳನ್ನು ಮುಗಿಸಿದ್ದ ಕುಂಕುಮಭಾಗ್ಯ, ಮಾಂಗಲ್ಯ,ನಾಕು ತಂತಿ ಧಾರಾವಾಹಿಗಳು (೩ ವರ್ಷ ಸಮೀಪಿಸುತ್ತಿದೆ) ಇವತ್ತಿಗೂ ಪ್ರಸಾರವಾಗುತ್ತಿವೆಯೆಂದರೆ, ಕಥೆ ಇನ್ನೆಷ್ಟು ಹಿಗ್ಗಾಮುಗ್ಗಾ ಜಗ್ಗಿ ಹೋಗಿರಬಹುದೆಂಬುದನ್ನು ನಿಮ್ಮ ಊಹೆಗೇ ಬಿಡುತ್ತಿದ್ದೇನೆ. ದೂರದರ್ಶನದಲ್ಲಿ ಆಗ -ಧಾರಾವಾಹಿಗಳ ಪ್ರಾರಂಭದ ಕಾಲ – ಬರುತ್ತಿದ್ದ ಧಾರಾವಾಹಿಗಳು ಕೇವಲ ೧೩ ಕಂತುಗಳಲ್ಲಿ ಮುಗಿಯುತ್ತಿದ್ದವೆಂದು ಈಗ ನಂಬುವುದೇ ಕಷ್ಟವಾಗುತ್ತಿದೆ. ಉದಯದಲ್ಲಿ ಇದ್ದುದ್ದರಲ್ಲಿ ಸ್ವಲ್ಪ ಚೆನ್ನಾಗಿವೆ ಎನ್ನುವಂತಿದ್ದ – ಕುಟುಂಬ, ಕನ್ನಡಿಯಿಲ್ಲದ ಮನೆ ಮುಂತಾದ ಧಾರಾವಾಹಿಗಳು ಯಾಕೋ ಪ್ರಾರಂಭದಲ್ಲಿಯೇ ನಿಂತು ಹೋದವು, ಯಾಕೆಂದು ಕಾರಣ ಕೂಡ ತಿಳಿಯಲಿಲ್ಲ.
ಈಟಿವಿಯ ಕೆಲವು ಕಾರ್ಯಕ್ರಮಗಳು ಉತ್ತಮವಾಗಿರುತ್ತವೆಂದು ಕೇಳಿ ಬಲ್ಲೆ. ಈಟಿವಿ ಅಮೆರಿಕಾದಲ್ಲಿ ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಹೇಳುತ್ತಲ್ಲೇ ಬಂದಿದ್ದಾರಾದರೂ, ಇನ್ನೂ ಬಂದಿಲ್ಲ. ಕಾರಣವೇನೋ ಯಾರಿಗೂ ಗೊತ್ತಿಲ್ಲ. ಈಟಿವಿ ಇಲ್ಲಿಗೆ ಬಂದಿದ್ದೇ ಆದಲ್ಲಿ ಬಹಳಷ್ಟು ಮನೆಗಳಿಂದ ಉದಯ ಎತ್ತಂಗಡಿಯಾಗುವುದು ನಿಸ್ಸಂದೇಹ! ಈ ಕಾರಣದಿಂದಲೇ ಉದಯದವರು ಈಟಿವಿಗೆ ಅಡ್ಡಗಾಲು ಹಾಕುತ್ತಿರಬಹುದೇ ಎಂದು ನನಗೊಂದು ನಿರಾಧಾರ, ನಿಷ್ಕಾರಣ ಸಂದೇಹವೂ ಉಂಟು.
ನೀವೂ ಯಾವುದೇ ಭಾಷೆಯ ಟಿವಿ ಧಾರಾವಾಹಿ ನೋಡುತ್ತೀರಾದರೆ,ನಿಮಗೆ ಇಷ್ಟವಾದ ದೃಶ್ಯಗಳನ್ನು ಕಣ್ಮುಂದೆ ಕಟ್ಟುವಂತೆ (ಬಣ್ಣ ಬಣ್ಣವಾಗಿ) ಚಿತ್ರಿಸಿ. 🙂