ಬೀchi ಬಂದರು ದಾರಿ ಬಿಡಿ!

 ಬೀchi:ಬುಲೆಟ್ಟು,ಬಾಂಬ್ಸು,ಭಗವದ್ಗೀತೆ -ಅಂಕಿತ ಪುಸ್ತಕ

ಈ ವಾರಾಂತ್ಯದ ವಿನೋದಕ್ಕೆ ಆಗಮಿಸಿರುವ ಮುಖ್ಯ ಅತಿಥಿ ಬೀchi. 

ಇದನ್ನೋದಿ ,  ಅರ್ಥಕೋಶಕ್ಕಿಂತ ಅನರ್ಥಕೋಶವೇ ಹೆಚ್ಚು ಇಷ್ಟವಾಗುವ ಅಪಾಯವೂ ಇದೆ,ಎಚ್ಚರಿಕೆ! 🙂

ಅನರ್ಥ – ಅಪಾರ್ಥಗಳು : (ಬೀchi – ತಿಂಮ ರಸಾಯನದಿಂದ)

ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ ನಾಲ್ಕು ಮೃಗವಲ್ಲ, ನಾಲಿಗೆಯು ನಾಲ್ಕುಂಟು ವಿಪರೀತವಲ್ಲ, ಸರ್ಪವನ್ನು ಧರಿಸಿ ಮೂಷಿಕದ ಮೇಲಿರುವ ಗಣಪತಿ. (ಇದೇನು? ಸರಿಯಾಗಿ ಅರ್ಥವಾಗಲಿಲ್ಲ ನನಗೆ)

ಇತ್ಯಾದಿ – ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ.

ಬೈತಲೆ – ಬರೀ ಬೈಗುಳನ್ನೇ ತುಂಬಿಕೊಂಡಿರುವ ತಲೆ – ಉದಾ: ಮಾಸ್ತರ ತಲೆ, ಮಡದಿಯ ತಲೆ.

ವಿಮಾ ಏಜಂಟ್ – ಪರ ಪತ್ನೀ ಹಿತೈಷಿ ; ನಿನ್ನ ನಂತರವೇ ನಿನ್ನ ಮಡದಿಗೆ ಸುಖ ಎಂದು ಸೂಚ್ಯವಾಗಿ ಸತ್ಯವನ್ನೇ ಹೇಳುವವ.

ಆದರ್ಶ ದಂಪತಿಗಳು – ಎರಡು ದೇಹಗಳು, ಒಂದೇ ಜೀವ – ಗಂಡ ನಿರ್ಜೀವಿ! ಗಂಡ ಸಂಗೀತಗಾರ – ಕಿವುಡಿ ಹೆಂಡತಿ.

ಮಾನ – ಹೆಂಣಿನ ಮಾನವನ್ನು ಕಾಯಲು ಗಂಡೇ ಬೇಕು – ಗಂಡಿನ ಮಾನವನ್ನು ಕಳೆಯಲು ಹೆಂಣೇ ಸಾಕು.

ಏಕಾಂತ – ಏಕಮಾತ್ರ ಗಂಡ ಉಳ್ಳವಳು; ಅತೃಪ್ತಿಯಲ್ಲಿರುವವರಿಗೆ ಏಕಾಂತವೂ ಸಂತೆಯೇ.

ಯಾರೋ – “ಯಾರೋ ಅಂದರು” ಎಂದು ಆರಂಭಿಸಿದರೆ ಆಯಿತು – ಮುಂದು ಬರುವುದೆಲ್ಲವೂ ಸುಳ್ಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಊದುಬತ್ತಿ – ದೇವರ ಬೀಡಿ

ಕವಿ – ಹುಚ್ಚರ ಮೆಚ್ಚುಗೆ ಪಡೆಯುವ ಹಿರಿ ಹುಚ್ಚ!

ಕಲೋಪಾಸಕ – ಕಲೆಯನ್ನೇ ನಂಬಿ ಉಪವಾಸ ಬೀಳುವವನು.

ಕ್ಷಯ – ಶ್ರೀಮಂತರ ಕ್ಷಯವೇ ಡಾಕ್ಟರನ ಅಕ್ಷಯಪಾತ್ರೆ.

ಏ – ಅನೇಕರಿಗೆ ಹೆಂಡತಿಯ ಹೆಸರು!

ಅಂತೆ – ಸುಳ್ಳೆಂಬ ಮಹಾವೃಕ್ಷದ ಮೂಲಬೀಜ.

ತಲೆ – ಉಳ್ಳವರು ಬಹಳಿಲ್ಲ – ಉಳ್ಳವರಿಗೆ ಇದರ ಅರುವಿಲ್ಲ – ಇಲ್ಲದವರಿಗೆ ಇದೆಯೆಂಬ ಭ್ರಮೆ ಇದೆ.

ಬಾಡಿಗಾರ್ಡ್ – ಕುಬುಸ

ಕುಪಿತ – ಕೆಟ್ಟ ತಂದೆ

ಮಧುರಮ್ಮ – ಕುಡುಕನ ಹೆಂಡತಿ

ಅರ್ಥಗರ್ಭಿತ – ಹಣಕ್ಕೆ ಗರ್ಭಿಣಿಯಾದವಳು.

ಕುಕ್ಕರ್ – ನಾಲ್ವರು ಪುರುಷರು ಮಾಡುವಷ್ಟು ಕೆಲಸವನ್ನು ಅದೊಂದೆ ಮಾಡುತ್ತದೆ – ಅರ್ಥಾತ್ ಓರ್ವ ಸ್ತ್ರೀ ಮಾಡುವಷ್ಟು ಅನ್ನಿ; ಕುಕ್ಕರ್ ಕೊಂಡ ಮೇಲೂ ಲಗ್ನವಾಗುವವನು ಶತ ಮೂರ್ಖ!

ಶ್ರೀಮತಿ – ಶ್ರೀಯನ್ನು (ಹಣವನ್ನು) ಗಳಿಸುವುದರಲ್ಲಿಯೇ ಮತಿಯನ್ನೆಲ್ಲಾ ವ್ಯಯ ಮಾಡುವವಳೇ ಶ್ರೀಮತಿ.

ಕ್ರಿಶ್ಚಿಯನ್ – ಆರು ದಿನಗಳು ಮಾಡಿದ ಹಳೆಯ ಪಾಪಗಳಿಗಾಗಿ ಆದಿತ್ಯವಾರ ಪಶ್ಚಾತ್ತಾಪ ಪಟ್ಟು, ಹೊಸ ಪಾಪಗಳಿಗೆ ಪರ್ಮಿಟ್ಟು ಪಡೆಯುವ ಪುಣ್ಯಾತ್ಮ.

ಏಕಾದಶಿ – ಹೊಟ್ಟೆ ತುಂಬಿದವನು ಏಕಾದಶಿ ಮಹಿಮೆಯನ್ನು ಬಹು ಚೆನ್ನಾಗಿ ಭೋದಿಸಬಲ್ಲ.

ನಾಚಿಕೆ – ಬತ್ತಲೆ ಇರುವವರ ರಾಜ್ಯದಲ್ಲಿ ಬಟ್ಟೆಯುಟ್ಟವನೇ ನಾಚಬೇಕು: ನಾಚಿಕೆಯನ್ನು ಒಂದೇ ಒಂದು ಬಾರಿ ಬಿಟ್ಟರಾಯಿತು – ಮತ್ತೆ ಅದರ ಕಾಟವೇ ಇಲ್ಲ.

ಮುತ್ಸದ್ದಿ – ಸದ್ದಿಲ್ಲದೆ ಮುತ್ತು ಕೊಡುವವನೆ ಮುತ್ಸದ್ದಿ.

ಉಭಯ ಸಂಕಟ – ಒಳಗೆ ಭಾಷಣ – ಹೊರಗೆ ಗುಡುಗು, ಸಿಡಿಲು; ಒಳಗೆ ರೇಡಿಯೋ ಸಂಗೀತ – ಹೊರಗೆ ಉರಿಬಿಸಿಲು ; ಒಳಗೆ ಮನೆಯವಳು – ಹೊರಗೆ ದೇಶಭಕ್ತರು.

ಜೀವನ – ಜೀವನದ ಮೊದಲರ್ಧ ಹೆತ್ತ ತಂದೆ ತಾಯಿಗಳಿಂದ ಕೆಡುತ್ತದೆ- ಉಳಿದರ್ಧ ಹುಟ್ಟಿದ ಮಕ್ಕಳಿಂದ ಕೆಡುತ್ತದೆ.

ಜಾತಿ – ದೇವರು ಕೊಟ್ಟ ಬುದ್ಧಿಗೆ ದೆವ್ವವು ಕೊಟ್ಟ ಅಫೀಮು ; ದಿವಾಳಿ ತೆಗೆದವನ ವ್ಯಾಪಾರ ಹೆಚ್ಚು – ಜಾತಿಗೆಟ್ಟವನ ಆಚಾರ ಹೆಚ್ಚು.

ಆಸ್ಪತ್ರೆ – ಸಾವೆಂಬ ಭವ್ಯಗೃಹದ ಒಳಂಗಳ; ಈ ಜಗತ್ತೇ ಒಂದು ಆಸ್ಪತ್ರೆ – ಇಲ್ಲಿಗೆ ಬರುವುದು ಬದುಕಲಿಕ್ಕಲ್ಲ , ಸಾಯಲಿಕ್ಕೆ; ಆಸ್ಪತ್ರೆ ಸ್ಮಶಾನಕ್ಕೆ ಸಮೀಪವಿದ್ದಷ್ಟೂ ಸುಖ – ಹೊರುವವರಿಗೆ.

ಹೆಂಡತಿ – ಹೆಂಡತಿಯೊಂದು ಹೊದಿಕೆ. ಹೊದ್ದುಕೊಂಡರೆ ಸೆಕೆ, ಬಿಟ್ಟರೆ ಚಳಿ. ಕನ್ನೆಗಳೆಲ್ಲವೂ ಒಳ್ಳೆಯರೇ – ಕೆಟ್ಟ ಹೆಂಡಂದಿರು ಎಲ್ಲಿಂದ ಬಂದಿರಬಹುದು? ಹೆಂಡತಿಗಿಂತಲೂ ಹೆಂಡತಿಯ ಭಾವಚಿತ್ರವನ್ನು ಕೆಲವರು ಹೆಚ್ಚು ಪ್ರೀತಿಸುತ್ತಾರೆ – ಅದಕ್ಕೆ ನಾಲಿಗೆ ಇಲ್ಲ!

ಸಂಗೀತಗಾರ – ತಾನು ಹಾಡುತ್ತಿರುವ ಹಾಡಿನ ಅರ್ಥವನ್ನೇ ಅರಿಯದ ಮಹಾರಸಿಕ; ಹೊಟ್ಟೆಯ ಪಾಡಿಗಾಗಿ ತೊಡೆ ಬಡಿದುಕೊಳ್ಳುವವ; ಹೊಲಿಯುವವನ ಬಲಕ್ಕೆ, ಅಳುವವನ ಎಡಕ್ಕೆ,ಹಾಡುವವನ ಮುಂದೆ ಎಂದೂ ಕೂಡಬೇಡ ; ಇವನ ಕಂಠವು ಸುಖವನ್ನು ಕೊಡುತ್ತದೆ – ಕೂಡಲೆ ಅವನ ಮುಖವು ಅದನ್ನು ಕಸಿದುಕೊಳ್ಳುತ್ತದೆ.

ತಿಂಮ ಉವಾಚ : ಗಂಡಿನಕ್ಕಿಂತಲೂ ಹೆಣ್ಣಿಗೆ ಹೆಚ್ಚು ಊಟ,ನಿದ್ರೆ, ಬಟ್ಟೆ ಬೇಕು. ಹೀಗೆಂದು ಯಾರು ಹೇಳುತ್ತಾರೆ?… ಡಾಕ್ಟರು. ಯಾವ ಡಾಕ್ಟರು?…ಲೇಡಿ ಡಾಕ್ಟರು…ಅದಕ್ಕಾಗಿಯೇ ಎಲ್ಲ ಊರುಗಳಲ್ಲಿಯೂ ಲೇಡಿ ಡಾಕ್ಟರರು ಹೆಂಗಸರೇ ಇರುತ್ತಾರೆ!

*     *        *         *      *      *         *        *    *     *     *    *     *