ಸು.ರಂ.ಎಕ್ಕುಂಡಿ – ಯಾವ ಕಾಣಿಕೆ?

ಚಿತ್ರ: ಮಸಣದ ಹೂವು (೧೯೮೫)
ಗಾಯಕ: ಎಸ್.ಪಿ ಬಾಲಸುಬ್ರಹ್ಮಣ್ಯಮ್
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಸು.ರಂ.ಎಕ್ಕುಂಡಿ

ಹಾಡು ಕೇಳಿ

ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ|

ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಳಿಯೊಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಹಂಸ ನಾವೆಯ ನಾ ತರಲಾರೆ|

ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ
ನಂದನ ವನದ ಮಂದಾರ ಪುಷ್ಪವ
ನಾ ನಿನಗೆ ತರಲಾರೆ|

ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ
ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ
ಸೂರ್ಯ ಚಂದ್ರರ ನಾ ತರಲಾರೆ|

*  *  *  *  *   *    *  *   *  *   *   * *

ಮಾಂಗಲ್ಯ ಭಾಗ್ಯ – ಆಸೆಯ ಭಾವ

ಚಿತ್ರ – ಮಾಂಗಲ್ಯ ಭಾಗ್ಯ (೧೯೭೬)
ಸಾಹಿತ್ಯ- ವಿಜಯ ನಾರಸಿಂಹ
ಸಂಗೀತ –  ರಾಜನ್-ನಾಗೇಂದ್ರ
ಗಾಯಕ –  ಎಸ್.ಪಿ. ಬಾಲಸುಬ್ರಮಣ್ಯಂ

ಹಾಡು ಕೇಳಿ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ

ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|

ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೇ ಚೇತನ

ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ |

ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ
ಮೇರೆಯೇ ಇಲ್ಲದ ತುಡಿತವು ತುಂಬಿದೆ

ಯಾವುದೊ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|

*    *     *     *     *     *      *

ನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ
ಕವಿ – ದಿನಕರ ದೇಸಾಯಿ

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
 ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
 ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
 ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
 ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
 ನಿಜ ಸೇವೆಗೈಯಲಿಕೆ ಬರಲಿ ಮುಂದು

*  *  *   *   *  *  *  * * * * * * * * * * * *