ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು. “ಏನೂ ಸಿಗಲಿಲ್ಲ”, ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”, ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” – ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ, ತೆಂಗಿನ ಕರಟಕ್ಕೊಂದು ಪರ್ಯಾಯ ಪದ. ಯಾವುದೇ ಹಣ್ಣಿನ ಹೊರಪದರವಾದ ಸಿಪ್ಪೆಯನ್ನು ಚಿಪ್ಪು ಎನ್ನಬಹುದಾದರೂ, ತೆಂಗಿನಕಾಯಿಗೆ ಈ ಪದ ಬಳಕೆ ಹೆಚ್ಚು. ಏನೂ ಸಿಗದ ನಿರಾಶೆ ಆಕ್ರೋಶ ರೂಪದಲ್ಲಿ ವ್ಯಕ್ತವಾದಾಗ “ಚಿಪ್ಪಿಗೆ” ಇನ್ನೂ ಹೆಚ್ಚಿನ ಒತ್ತು ಕೊಡಲು – “ಅಷ್ಟೆಲ್ಲಾ ಮಾಡಿದ್ದಕ್ಕೆ ಕೊನೆಗೆ ನನಗೇನು ಸಿಕ್ಕಿತು? ಚಿಕ್ಕನಾಯಕನ ಹಳ್ಳಿ ಚಿಪ್ಪು” ಎಂದು ಹೇಳಲಾಗುತ್ತದೆ. ಹಣ್ಣಿನ ಹೊರಪದರವಾದ ಚಿಪ್ಪಿನಂತೆ, ಹಣ್ಣಿನ ಒಳಗಿರುವ “ಗೊರಟೆ” ಯನ್ನು ಇದೇ ಅರ್ಥದಲ್ಲಿ ಬಳಸುತ್ತಾರೆ. ಒಟ್ಟಿನಲ್ಲಿ ಇದೊಂದು “ತಿರುಳಿಲ್ಲದ್ದು, ತಿರುಳಲ್ಲದ್ದು’ ಎಂಬುದನ್ನು ಸೂಚಿಸಲು ಉಪಯೋಗಿಸುವ ಪದ.
ಚಿಕ್ಕನಾಯಕನ ಹಳ್ಳಿ ತೆಂಗು ಬೆಳೆಗೆ ಹೆಸರಾದ ತುಮಕೂರು ಜಿಲ್ಲೆಯ ಒಂದು ಹಳ್ಳಿ. ಎಲ್ಲಾ ಹಳ್ಳಿಗಳನ್ನೂ ಬಿಟ್ಟು ಈ ಹಳ್ಳಿಯ ಹೆಸರನ್ನೇ ಚಿಪ್ಪಿನೊಡನೆ ಸೇರಿಸಲು ಏನು ಕಾರಣವಿರಬಹುದೋ ಗೊತ್ತಿಲ್ಲ. ಅಲ್ಲಿ ಬೇರೆಲ್ಲ ಕಡೆಗಿಂತ ಹೆಚ್ಚು ತೆಂಗಿನಕಾಯಿ ಬೆಳೆದು, ಅಷ್ಟೇ ಸಂಖ್ಯೆಯ ಚಿಪ್ಪೂ ಸಿಗುತ್ತದೆ ಎಂದಿರಬಹುದೇನೋ 🙂
“ದರ್ಜಿ” – ಎಂಬ ಪದವನ್ನು ಸೂಚಿಸುವ ಚಿಪ್ಪಿಗ, ಸಿಂಪಿಗ (ಸಿಂಪು -ಚಿಪ್ಪು) ಪದಕ್ಕೂ ಈ ಚಿಪ್ಪಿಗೂ ಏನಾದರೂ ಸಂಬಂಧ ಇದ್ದೀತೆ?
ಇರಲಿ, ವಿಶ್ವಕಪ್ ಪಡೆಯಲು ಬಯಸಿ ವೆಸ್ಟ್ ಇಂಡೀಸ್ಗೆ ಹೋಗಿದ್ದ ಭಾರತಕ್ಕೆ ಸಿಕ್ಕಿದ್ದೂ ಕಪ್ಪಲ್ಲ, ಚಿಪ್ಪು! ಭಾರತ ಗೆಲ್ಲಲಿ ಎಂದು ಬಯಸಿ ಹೋಮ,ಹವನ ನಡೆಸಿದ, ಭಾರತ ಗೆಲ್ಲಲೆಂದು ಮನಸಾರೆ ಶುಭ ಹಾರೈಸಿ ಕಳಿಸಿದ ಅಸಂಖ್ಯ ಅಭಿಮಾನಿಗಳಿಗೂ , ಸಿಕ್ಕಿದ್ದು ಚಿಪ್ಪೇ! 🙂
ಈ ದಿಸೆಯಲ್ಲಿ ಯೋಚಿಸುತ್ತಿರುವಾಗ ಹೊಳೆದ ಒಂದು ಪುಟ್ಟ ಹನಿಗವನ. ಇದರ ಹೆಸರು – ” ಕಪ್ಪೆಚಿಪ್ಪು ” – ಇದನ್ನು ಓದುವಾಗ, ನಿಮ್ಮ ನಾಲಿಗೆ ತೊಡರಿ “ಚಿಪ್ಪೇ ಕಪ್ಪು” ಎಂದು ಓದಿಕೊಂಡರೂ ನನ್ನದೇನೂ ಅಭ್ಯಂತರವಿಲ್ಲ!
ಕಪ್ಪೇ ಚಿಪ್ಪು
“ವಿಶ್ವ ಕಪ್ -೨೦೦೭”
ಎಂಬ ಕಪ್ಪೆಚಿಪ್ಪಿನಲ್ಲಿ
ಸಿಗಲಿಲ್ಲ
ಭಾರತಕ್ಕೆ ಮುತ್ತು!