ಅಮೆರಿಕದಲ್ಲಿ ಎಲ್ಲವೂ ಹೆಚ್ಚು. ಉಟಾನೇ ಬೇಡ ಅಂತ ಒಂದು ಲೋಟ ಹಾಲು ಕುಡಿದರೂ ಹಾಲಿನಲ್ಲೂ ಸಮೃದ್ಧಿಯಾಗಿರುವ ಪೌಷ್ಟಿಕಾಂಶಗಳಿಂದ ಮೈಗೆ ಸೇರುವ ಕೊಬ್ಬು ಹೆಚ್ಚು. ಅದೇ ತರ ಇಲ್ಲಿ ಪೇಪರ್ ರಂಪವೂ ಹೆಚ್ಚು! ಪೇಪರ್ ರಂಪ ಅಂದರೆ ಗೊತ್ತಾಗಲಿಲ್ವಾ? ನಿಮ್ಮನೆಯಲ್ಲಿ ಬಂದು ಬಿದ್ದು ಚೆಲ್ಲಾಡಿಹೋಗುವ ಪೇಪರ್, ಬಿಲ್, broucureಗಳು ….ಮುಂತಾದ ಕಾಗದ ಸಂಬಂಧೀ ಕಸ.
ಇಲ್ಲಿ ಪತ್ರಿಕೆ ಹಂಚುವವರು ಬಹಳ ಉದಾರಿಗಳು. ನಾವೇನೂ ಕೇಳದಿದ್ದರೂ ಅವರಾಗಿಯೇ ಧರ್ಮಾರ್ಥ ಎಸೆದುಹೋಗಿರುತ್ತಾರೆ. ಆಮೇಲೆ ಬಿಲ್ ಕಳಿಸುತ್ತಾರೆ ಆ ಮಾತು ಬೇರೆ. ನಾನು ಹೇಳಲುಹೊರಟಿದ್ದು ಪೇಪರ್ ಬಗ್ಗೆ ಅಲ್ಲ, ಪೇಪರ್ ಓದಿ ಮುಗಿಸಿ ರಿಸೈಕಲ್ಗೆ ಹಾಕಿಬಿಡುವುದರಿಂದ ಅದೇನೂ ಮನೆಯ ರಂಪಕ್ಕೆ ಸೇರದು.
ಈ ಪೇಪರ್ ಕಸಗಳು ಉಪಯುಕ್ತವೆಂದು ಸಂಗ್ರಹಿಸಿಟ್ಟುಕೊಂಡರೆ ದೊಡ್ಡ ಕಸದ ಹೊರೆ, ಬಿಸಾಕಿದರೆ ಯಾವಾಗ ಬೇಕಾಗಬಹುದೋ ಏನೋ ಎಂದು ಹೆದರಿಸುವ ಮಾದರಿಯವು. ಉದಾಹರಣೆಗೆ – ಪ್ರತಿಬಾರಿ ವಿಮಾ ಕಂಪನಿ ಬದಲಾದಾಗ ಅದರ ಜೊತೆ ಬರುವ ಹೊರೆ ಗಾತ್ರದ ಕೈಪಿಡಿ – ನಾನಂತೂ ಈವರೆಗೆ ಎಂದೂ ಅದನ್ನು ತೆರೆದು ಓದಿಲ್ಲ. ಕ್ರೆಡಿಟ್ ಕಾರ್ಡುಗಳ ಆಗಾಗ ಬದಲಾಗುವ ನೀತಿ-ನಿಯಮಗಳು, ಅಂಗಡಿಯಲ್ಲಿ ಕೊಂಡ ಪದಾರ್ಥಗಳ ಬಿಲ್, ವಾರಂಟಿ….ಮುಂತಾದವು.
ನಾವು ಅಮೆರಿಕಕ್ಕೆ ಬಂದಾಗಿನಿಂದ ನಮ್ಮ ಮನೆಯ ಗ್ಯಾಸಿನ, ಕರೆಂಟಿನ ಬಿಲ್ಲುಗಳು, ಬ್ಯಾಂಕ್, ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ಸ್, ಮರಳಿ ಬಂದ (bounce ಅಲ್ಲ – canceled ) ಚೆಕ್ಕುಗಳು …ಇವತ್ತಿಗೂ ನಮ್ಮಲ್ಲಿ ಭದ್ರವಾಗಿವೆ. ಈಚೆಗೆ ಸಾಧ್ಯವಿರುವುದನ್ನೆಲ್ಲಾ ಪೇಪರ್ ಲೆಸ್ ಮಾಡಿದ್ದರೂ ಕೆಲವು ಅನಿವಾರ್ಯಗಳು ಬಂದು ವಕ್ಕರಿಸುತ್ತಲೇ ಇರುತ್ತವೆ.
ಈ ಪೇಪರ್ ದೈತ್ಯನನ್ನು ಚಾಮುಂಡಿಯಂತೆ ಸಂಹಾರ ಮಾಡಿ, ಒಂದೊಂದೇ ಪೇಪರನ್ನು shredder ಯಂತ್ರಕ್ಕೆ ತುಂಬಿಸಿ, ಕತ್ತರಿಸುವ ಮಹದಾಸೆ ನನಗೆ. ಶ್ರೀನಿ ಕೇಳಬೇಕಲ್ಲ, – “ನಾವು ಎಷ್ಟೆಂದರೂ ಹೊರಗಿನಿಂದ ಬಂದವರು. ಇಮಿಗ್ರೆಂಟ್ಸ್. ಯಾವಾಗ ಯಾವ ದಾಖಲೆ ಕೇಳಿದರೂ ತೋರಿಸಬೇಕಾಗತ್ತೆ.” ಎನ್ನುವ ದೂರಾಲೋಚನೆ ಅವರದು. ಮಧ್ಯಮವರ್ಗದ ಅತಿ ಭಯಸ್ಥ ಮನೋಭಾವ ಅಂತ ನನ್ನ ಕಾಮೆಂಟ್ 🙂
ಈ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ಸ್ ಇತ್ಯಾದಿ ಪೇಪರ್ ರಾಕ್ಷಸರನ್ನು ನೀವೇನು ಮಾಡ್ತೀರಿ? ಎಷ್ಟು ದಿನ ಅವುಗಳನ್ನು ಜೋಪಾನ ಮಾಡಬೇಕು? ಎಂಬ ಪ್ರಶ್ನೆಯನ್ನು ಅನೇಕರಲ್ಲಿ ಕೇಳಿದ್ದೇನೆ. ಒಬ್ಬೊಬ್ಬರದು ಒಂದೊಂದು ಉತ್ತರ. ಕೆಲವರು ಹತ್ತು ವರ್ಷ ಜೋಪಾನ ಮಾಡಬೇಕು ಎಂದು ಹೆದರಿಸಿದರೆ, ಇನ್ನೂ ಕೆಲವರು ಮೂರು ತಿಂಗಳ ನಂತರ ಬಿಸಾಕಬಹುದು ಎಂದಿದ್ದಾರೆ. ನನಗಂತೂ ಸಮಾಧಾನವಾಗಿಲ್ಲ. ಯಾರಾದರೂ ನನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಿದ್ದೇ ಆದಲ್ಲಿ, ಒಂದಾನೊಂದು ಕಾಲದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ.ಗುಂಡೂರಾವ್ ಮಾಡಿದಂತೆ ನಾನೂ ಶುರು ಮಾಡಿಬಿಡುತ್ತೇನೆ ಕಡತ ಯಜ್ಞ!! ಹಹಹ!!
***