ಹೆತ್ತವರ ಅಳಲು – 2

ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು ಬೀದಿ ಅಲೆಯಲು ಹೋಗ್ತಾಳೆ ನೀ ಸ್ವಲ್ಪ ಸುಮ್ನಿರ್ತೀಯಾ… ನಾನು ಕೇಶವಂಗೆ ಫೋನ್ ಮಾಡಿ ಇವತ್ತೇ ಅವಳ ಹಾಸ್ಟೆಲ್ ಗೆ ಹೋಗಿ ಅವಳನ್ನ ನೋಡು ಅಂತ ಹೇಳ್ತೀನಿ… ಎಂದು ಶರ್ಟು ಏರಿಸಿಕೊಂಡು ಹಳ್ಳಿಯ ಏಕೈಕ ಫೋನ್ ಬೂತ್ ಆದ ಮೂರ್ತಿ ಅಂಗಡಿ ಕಡೆಗೆ ನಡೆದರು.ಶಾರದಮ್ಮ ಹೊಡೆದು ಕೊಳ್ಳುತ್ತಿದ್ದ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಲು ದೇವರ ಮುಂದೆ ತುಪ್ಪದ ದೀಪ ಹಚ್ಚಿ ಮುಡಿಪು ಕಟ್ಟಿಟ್ಟು ಬಿಕ್ಕುತ್ತಾ ವಿಷ್ಣು ಸಹಸ್ರನಾಮ ಹೇಳಿಕೊಳ್ಳಲಾರಂಭಿಸಿದರು.

ಪ್ರವಲ್ಲಿಕ ಹಾಸ್ಟೆಲ್ ನಲ್ಲಿ ಪೋನ್ ಇಲ್ಲ ಪೋಲಿ ಹುಡುಗರು ಹುಡುಗಿಯರಿಗೆ ಪೋನ್ ಮಾಡಿ ಕಾಡುತ್ತಾರೆಂದು ವಾರ್ಡ ನ್ ಪೋನ್ ಕೀಳಿಸಿಬಿಟ್ಟಿದ್ದಾರೆ.ಆದರೆ ಇಂಥಾ ಎಮರ್ಜೆನ್ಸಿಯಲ್ಲಿ ತಂದೆ ತಾಯಿಯರಿಗೆ ಭಯವಾಗುವುದಿಲ್ಲವೇ…ಇಲ್ಲಿ ನೋಡಿದರೆ ಶಾರದ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅಳಕ್ಕೆ ಶುರು ಮಾಡಿ ಬಿಡುತ್ತಾಳೆ. ಅಮ್ಮ ನ ಈ ಸ್ವಭಾವ ಗೊತ್ತಿದ್ರೂ ಪ್ರವಲ್ಲಿಕ ಮೂರ್ತಿ ಅಂಗಡಿಗೆ ಒಂದು ಪೋನ್ ಮಾಡಬಾರದೇ…’ ಅಂತ ಮಗಳನ್ನು ಬೈದು ಕೊಳ್ಳುತ್ತಾ ಹೆಂಡತಿ ಬಗ್ಗೆ ಮರುಗುತ್ತಾ ಶಾಸ್ತ್ರಿಗಳು ಮೂರ್ತಿ ಅಂಗಡಿಗೆ ಬಂದು ಸ್ನೇಹಿತ ಕೇಶವನಿಗೆ ಪೋನ್ ಮಾಡಿ ಪ್ರವಲ್ಲಿಕ ಬಗ್ಗೆ ಒಂಚೂರು ನಿಗ ಇಡಬೇಕೆಂದು ಕೇಳಿಕೊಂಡರು.ಮೂರ್ತಿ ಗೆ ದುಡ್ದು ಕೊಡಲು ಹೋದಾಗ ಅವನು ನಿರಾಕರಿಸಿಬಿಟ್ಟ `ಶಾರದಮ್ಮ ಹೇಗಿದ್ದಾರೆ..?’ ಅಂತ ಅವನು ವಿಚಾರಿಸಿದ್ದಕ್ಕೆ`ಹಾಗೇ ಇದ್ದಾಳೆ… ಏನು ಮಾಡುವುದಪ್ಪ ಪುತ್ರಶೋಕಂ ನಿರಂತರಂ ಅಂತ ಕೇಳಿಲ್ವೇ…’ ಎಂದು ನಿಟ್ಟುಸಿರು ಬಿಡುತ್ತಾ ಹೊರಟರು.ಆಗಷ್ಟೇ ಅಂಗಡಿಯೊಳಗೆ ಬಂದ ಮೂರ್ತಿ ಹೆಂಡತಿ `ಧಾರಿಣಿ ‘ಹೇಗಿದ್ದಾಳೆ..?ಏನಾದ್ರೂ ಸಮಾಚಾರ ಉಂಟಾ…? ಅಂತ ಕೇಳಿದ್ದು ಮಗನ ನೆನಪಲ್ಲಿ ಮುಳುಗಿದ್ದ ಅವರಿಗೆ ಕೇಳಿಸಲಿಲ್ಲ…

***
ಶಾಸ್ತ್ರಿಗಳು ಆಶಿಸಿದಂತೆ ಪ್ರವಲ್ಲಿಕ ಅಂದು ಬೀದಿ ಅಲೆಯಲು ಹೋಗದೆ ತೆಪ್ಪಗೆ ಹಾಸ್ಟೆಲ್ ನಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅವಳ ಗೆಳತಿಗೊಂದು ಬರ್ತ್ ಡೇ ಕಾರ್ಡ್ ಕೊಳ್ಳಲು ಅವಳು `ಸಪ್ನಾ’ಗೆ ಹೋಗಿದ್ದು ಮೊದಲ ತಪ್ಪು. ಕೆಂಪೇಗೌಡ ರೋಡ್ನಲ್ಲಿ ಗೂಂಡಾ ನನ್ನು ನೋಡಿ ನಡುಗುತ್ತಾ ಬಾಯಿ ಮುಚ್ಚಿ ಕೊಂಡು ಬಂದು ಬಿಟ್ಟಿದ್ದರೆ ಸೇಫಾಗಿದ್ದಿರುತ್ತಿದ್ದಳೋ ಏನೋ…ಅವನು ಕಾರ್ ಬಾಂಬ್ ಇಡುವುದನ್ನು ನೋಡಿಬಿಟ್ಟಿದ್ದಳು ಅಲ್ಲದೇ ಕಿತ್ತೂರು ರಾಣಿಯ ಸ್ಟೈಲ್ ನಲ್ಲಿ (ಅಫ್ಕೋರ್ಸ್ ನಡುಗುತ್ತಾ ತೊದಲುತ್ತಾ)ಪೋಲೀಸ್ ಗೆ ಹೇಳಿ ಬಿಡುತ್ತೇನೆ ಅಂತ ಬೇರೆ ಹೇಳಿ ಬಿಟ್ಟಿದ್ದಳು.ಬಿಳಿ ಪಾರಿವಾಳದ ತರ ನಾಜೂಕಾಗಿ ಇರುವ ಈ ಹುಡುಗಿಗೆ ತಮ್ಮನ್ನು ತಡೆಯುವ ಶಕ್ತಿ ಇಲ್ಲವೆಂದು ಗೂಂಡಾ ಪಡೆಗೆ ಗೊತ್ತಿತ್ತಾದ್ದರಿಂದ ಇವಳನ್ನು ನಂತರ ನೋಡಿಕೊಂಡರಾಯಿತು ಬಿಡುಅಂತ ಆ ಗಳಿಗೆಯಲ್ಲಿ ನಿರ್ಲಕ್ಷಿಸಿಬಿಟ್ಟಿದ್ದರೂ ಅವರು ಅವಳನ್ನು ಬೇಟೆ ಆಡದೇ ಬಿಡುವುದಿಲ್ಲ…

ನ್ಯೂಯಾರ್ಕ್ನಲ್ಲಿ ಆರು ವರ್ಷದ ಹಿಂದೆ ಕಣ್ಮರೆಯಾದ ಪ್ರತಾಪನ ಆತ್ಮಕ್ಕೆ ಇದರಿಂದ ಶಾಂತಿ ಸಿಗುತ್ತದೆ ಎಂದು ನಂಬಿದ ಅವಳ ಸುಕೋಮಲ ಮನಸ್ಸಿಗೆ ಮಾಫಿಯಾದ ಆಳ ಅಗಲಗಳು ನಿಲುಕದ ವಿಷಯ ಆದರೆ ತನ್ನಣ್ಣನ ಸಾವಿಗಾಗಿ ಸೇಡು ತೀರಿಸಿಕೊಳ್ಳುತ್ತೇನೆ ಎಂಬ ಹುಂಬ ಧೈರ್ಯದ ಈ ಹುಡುಗಿಯನ್ನು ರಕ್ಷಿಸುವವರು ಯಾರು??
*************

ಬೆಳಗ್ಗೆಯಿಂದ ಹೇಗೊ ಸುಧಾರಿಸಿಕೊಂಡಿದ್ದರೂ, ರಾತ್ರಿಯಾಗುತ್ತಿದ್ದಂತೆ ಶಾಸ್ತ್ರಿಗಳು ಮಗನ ನೆನಪಿನಲ್ಲಿ ವಿಹ್ವಲಗೊಳ್ಳತೊಡಗಿದರು. ಏನೇನೊ ಕನಸುಗಳು… ರಣಹದ್ದೊಂದು ತನ್ನ ಮಗನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನೆದುರೇ ಇನ್ನೇನು ಕಣ್ಣನ್ನು ಕುಕ್ಕಲು ತಯಾರಾದಂತೆ…ರೌದ್ರಾವತಾರ ತಾಳಿದ ಕಡಲು ಉಕ್ಕಿಹರಿದು ತನ್ನ ಮಗನನ್ನು ಕೊಚ್ಚಿ ಒಯ್ದಂತೆ….”ಅಪ್ಪಾ” ಅನ್ನುವ ಆರ್ತನಾದದೊಂದಿಗೆ ಕಣ್ಣೆದುರೇ ಮಗನ ದೇಹ ಇಂಚಿಂಚೆ ನೀರೊಳಗೆ ಕಣ್ಮರೆಯಾದಂತೆ….ಭಗ್ಗನೆ ಭುಗಿಲೆದ್ದ ಬೆಂಕಿ ಕಣ್ಣೆದುರೇ ಮಗನ ದೇಹವನ್ನು ಇಂಚಿಂಚೆ ಸುಡುತ್ತಿರುವಂತೆ….ರುದ್ರ ಭಯಾನಕ, ಬೀಭತ್ಸ ಕನಸುಗಳು…

ಶಾಸ್ತ್ರಿಗಳು ನಿದ್ದೆಕಣ್ಣಲ್ಲೆ ಬೊಬ್ಬೆಹೊಡೆಯತೊಡಗಿದರು, ತನ್ನೆರಡೂ ಕೈಗಳನ್ನು ಜೋರಾಗಿ ಗಾಳಿಯಲ್ಲಿ ಆಡಿಸುತ್ತ… “ಮಗೂ, ಬಂದೆ ಇರು..ಯಾಕೆ ಓಡ್ತಿದೀಯಾ…ನಾನೂ ಬಂದೆ ಇರು…”.

ದಡಬಡಿಸಿ ಎದ್ದ ಶಾರದಮ್ಮ ಕಂಗಾಲಾದರು. “ಏನಾಯ್ತೂಂದ್ರೆ…ಇಲ್ನೋಡಿ” ಅಂತ ಶಾಸ್ತ್ರಿಗಳನ್ನು ತನ್ನೆರಡೂ ಕೈಗಳಲ್ಲಿ ಹಿಡಿದು, ನಿದ್ದೆಯಿಂದ ಎಬ್ಬಿಸಲು ನೋಡಿದರು…ಶಾಸ್ತ್ರಿಗಳು ಬಡಬಡಿಸುತ್ತಲೇ ಇದ್ದರು…”ನೋಡೆ ಶಾರದಾ, ಹೇಗೆ ಹೋಗ್ತಿದ್ದಾನೆ ಒಂದೂ ಮಾತು ಆಡ್ದೆ, ನೀನಾದ್ರೂ ಬುದ್ಧಿ ಹೇಳೆ…” ಶಾರದಮ್ಮನಿಗೆ ದುಃಖ ಉಮ್ಮಳಿಸಿ ಬಂತು..ಗಂಡನನ್ನು ಸಂತೈಸುವ ಪರಿ ಗೊತ್ತಾಗದೆ..

ಐದು ನಿಮಿಷವೇ ಬೇಕಾಯ್ತು, ಶಾಸ್ತ್ರಿಗಳಿಗೆ ಪೂರ್ತಿ ಎಚ್ಚರವಾಗಲು…ಎಚ್ಚರವಾಗಿದ್ದೇ ತಪ್ಪಿನ ಅರಿವಾಯ್ತು..ಶಾರದಮ್ಮನನ್ನು ಗಟ್ಟಿಯಾಗಿ ಬಳಸಿಕೊಂಡು ಮನಸೋ ಇಚ್ಛೆ ಗಳಗಳನೆ ಅತ್ತುಬಿಟ್ಟರು..”ಅತ್ತು ಬಿಡು ಶಾರದಾ, ಅತ್ತು ಬಿಡು..” ಶಾರದಮ್ಮನನ್ನು ಪ್ರೀತಿಯಿಂದ ಮೈದಡವಿ, ತನ್ನೆದೆಗಾನಿಸಿಕೊಂಡ ಶಾಸ್ತ್ರಿಗಳು ತೀರ ಗಂಭೀರರಾದರು..
“ಎಂಥ ತಮಾಷೆ ಅಲ್ವಾ, ಶಾರದಾ? ನಾವು ಯಾವತ್ತೂ ನಮ್ಮ ಕ್ಷಣಗಳು ನಿರಂತರವಾಗಿರತ್ತೆ ಅಂದ್ಕೊಳ್ತೇವೆ. ನಾವು ಪ್ರೀತಿಸುವ, ನಮ್ಮ ಇಷ್ಟದ, ಎಲ್ಲವೂ ನಮ್ಮೊಂದಿಗೆ ಯಾವಾಗಲೂ ಇರುತ್ತವೆ, ಇರಬೇಕು ಅನ್ನುವ ಹುಂಬ ಹಂಬಲದೊಂದಿಗೆ ಬದುಕುತ್ತೇವೆ…ಹ್ಮ್…ಬಹುಶಃ ಅದೇ ಹುಂಬತನದಿಂದಲೇ ಇರಬೇಕು, ನಮ್ಮ ಕ್ಷಣಗಳನ್ನು ಅನುಭವಿಸದೇ ಯಾವುದೋ ಹುಚ್ಚುಧಾವಂತಕ್ಕೆ ಬಿದ್ದವರ ಹಾಗೆ ಹಣ, ಅಂತಸ್ತು, ಯಶಸ್ಸು ಅಂತ ಬಿಸಿಲುಗುದುರೆಯ ಬೆನ್ನೇರಿ ಓಡುತ್ತಲೇ ಇರುತ್ತೇವೆ…ಓಟ…ಓಟ… ನಿರಂತರ ಓಟ….ಆರಾಮವಾಗಿ ಒಂದುಸಿರು ತೆಗೆದುಕೊಳ್ಳಲು ಪುರಸೊತ್ತಿಲ್ಲದಂತೆ….ಕ್ಷುಲ್ಲಕ ವಿಷಯಕ್ಕೂ ಜಿದ್ದಿಗೆ ಬಿದ್ದವರಂತೆ ಹೋರಾಡುತ್ತೇವೆ…..ನಮ್ಮತನ ಮೆರೆಯಲು, ಅದನ್ನು ಬೇರೊಬ್ಬರ ಮೇಲೆ ಹೇರಲು ಇನ್ನಿಲ್ಲದಂತೆ ಹೆಣಗುತ್ತೇವೆ……ಹ್ಮ್.”

“ಶಾರದಾ, ನಾವೆಷ್ಟು ಅತ್ತರೂ ಅಷ್ಟೇ. ಪ್ರತಾಪ ಮತ್ತೆ ಬರಲಾರ.. ಬಹುಶಃ ಅವನ ಕರ್ತವ್ಯ ಮುಗಿಯಿತು ಅನ್ನಿಸುತ್ತೆ. ಯಾವತ್ತೂ ಚುರುಕಾಗಿ ನಗು ನಗುತ್ತಲೇ ಇದ್ದ ಅವನಿಗೆ ಅವಮಾನ ಮಾಡುತ್ತಿದ್ದೇವಾ ನಾವು ಅತ್ತು? ನಮ್ಮ ಪ್ರೀತಿಯ ವಸ್ತು ನಮ್ಮೊಂದಿಗೇ ಇರಬೇಕು ಅಂದರೆ ಅದು ಸ್ವಾರ್ಥವಲ್ಲವಾ? ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳಿಗೆ ಯಾಕೆ ಅತ್ತು ಕರೆಯೋಣ ಹೇಳು? ನಾನು ನಿಜ ಹೇಳಲಾ…ನೋಡು ಈ ಕ್ಷಣ ಇದೆಯಲ್ಲ, ನೀನು ನನ್ನ ತೆಕ್ಕೆಯೊಳಗೆ ಹೀಗೆ ಭದ್ರವಾಗಿ ಅಪ್ಪಿಕೊಂಡು ಕೂತುಬಿಟ್ಟಿದ್ದೀಯಲ್ಲ, ಎಷ್ಟು ಚಂದದ ಕ್ಷಣ ಅಲ್ಲವಾ? ಶಾರದಾ, ಬಹುಶಃ ಈ ಕ್ಷಣ ಮತ್ತೆ ಬರಲಾರದೇನೋ…ಬಾ ಶಾರದಾ..ಇಬ್ಬರೂ ಮನಸಾರೆ ನಕ್ಕು ಬಿಡೋಣ, ನಾಳೆಯೇ ಇಲ್ಲದೆನ್ನುವಂತೆ….ಈ ಕ್ಷಣವನ್ನ ಗೌರವಿಸೋಣ, ಆತ್ಯಂತಿಕವಾಗಿ ಪ್ರೀತಿಸೋಣ…..ನಕ್ಕು ಬಿಡು, ಶಾರದಾ.. ನಕ್ಕು ಬಿಡು……

***