ರಾಜೀವ ಕೈಲಿದ್ದ ಬ್ರೀಫ್ಕೇಸನ್ನು ಮಂಚದ ಮೇಲೆ ಎಸೆದ ಸದ್ದಿಗೆ ಕಂಪ್ಯೂಟರಿನ ಚಾಟ್ ವಿಂಡೋದಲ್ಲಿ ಯಾರೊಡನೆಯೋ ಹರಟೆಯಲ್ಲಿ ಮುಳುಗಿಹೋಗಿದ್ದ ಧಾರಿಣಿ ತುಸು ಬೇಸರದಿಂದಲೇ ಅತ್ತ ತಿರುಗಿದಳು. ರಾಜೀವನ ಮುಖ ಎಂದಿನಂತಿರಲಿಲ್ಲ. ತಲೆ ಕೆದರಿಹೋಗಿತ್ತು. ಬೆಳಗ್ಗೆ ಧರಿಸಿಕೊಂಡು ಹೋಗಿದ್ದ ಬಿಳಿಯ ಶರ್ಟ್ ಮುದುರಿತ್ತು. “ಯಾರೊಂದಿಗಾದರೂ ಹೊಡೆದಾಡಿಕೊಂಡು ಬಂದೆಯಾ?” ಎಂದು ತಮಾಷೆಯಾಗಿ ಕೇಳಲು ಹೊರಟವಳನ್ನು ರಾಜೀವನ ಬಿಗಿದ ಮುಖಭಾವ ತಡೆದು ನಿಲ್ಲಿಸಿತು. ರಾಜೀವನ ಕಣ್ಣುಗಳು ಅತ್ತಂತೆ ಕೆಂಪಾಗಿದ್ದವು. ಯಾರದೋ ಮೇಲಿನ ಕೋಪಕ್ಕೆ ಪ್ರತೀಕಾರ ತೀರಿಸುವಂತೆ ಅವನ ಹಲ್ಲುಗಳು ಕಟಕಟಿಸುತ್ತಿದ್ದವು.
ಧಾರಿಣಿಗೆ ರಾಜೀವನ ಸ್ಥಿತಿಯನ್ನು ಕಂಡು ಭಯವಾಯಿತು. ಎಂದೂ ಸಹನೆಯ ಮೂರ್ತಿಯಾಗಿರುವ ರಾಜೀವನಿಗೇನಾಗಿದೆ? ಡೈನಿಂಗ್ ಟೇಬಲ್ಲಿನ ಮೇಲಿದ್ದ ಗಾಜಿನ ದೊಡ್ಡ ಲೋಟದ ತುಂಬಾ ತಣ್ಣೀರು ತುಂಬಿಸಿ ತಂದು ರಾಜೀವನ ಮುಂದಿಟ್ಟಳು. ರಾಜೀವ ಇಡೀ ಲೋಟದ ನೀರನ್ನು ಗಟಗಟನೆ ಕುಡಿದ. ಅವನು ಯಾವುದೋ ಆವೇಗವನ್ನು ಅಡಗಿಸಿಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿದ್ದಂತಿತ್ತು.
ಧಾರಿಣಿ ಕೇಳಲೋ ಬೇಡವೋ ಎಂಬ ಅನುಮಾನದಲ್ಲಿಯೇ ಮೆಲ್ಲನೆ – “ರಾಜೀವ, ಏನಾಯಿತು?” ಎಂದಳು. ರಾಜೀವ ಧಾರಿಣಿಯ ಪ್ರಶ್ನೆಗೆ ಉತ್ತರಿಸದೆ ಸುಮ್ಮನೆ ಅವಳ ಕಡೆಗೊಮ್ಮೆ ಅಸಹಾಯಕ ನೋಟ ಹರಿಸಿದ.
***
ಪ್ರವಲ್ಲಿಕ ಎದುಸಿರು ಬಿಡುತ್ತಾ ಬೆದರಿದ ಹರಿಣಿಯಂತೆ ರೂಮೊಳಗೆ ಬಂದು ದಬ್ ಎಂದು ಬಾಗಿಲು ಮುಚ್ಚಿದ್ದನ್ನು ಕಂಡು ಫಿಲಂಫೇರ್ ಓದುತ್ತಾ ಮಂಚದ ಮೇಲೆ ಕೂತಿದ್ದ ಕಾಂತಿ ಗಾಭರಿಯಿಂದ ಎದ್ದು `ಏನಾಯ್ತೇ ವಲ್ಲೀ…?’ ಅನ್ನುತ್ತಾ ಪ್ರವಲ್ಲಿಕ ಕಡೆಗೆ ಓಡಿ ಬಂದಳು…
ಪ್ರವಲ್ಲಿಕ ಮೊದಲೇ ಭಯಸ್ತೆ… ಏನೋ ಆಗಬಾರದ್ದು ಆಗಿದೆ … ಅದಕ್ಕೇ ಹೀಗೆ ಕಂಪಿಸುತ್ತಿದ್ದಾಳೆ…ಅಂತ ಕಾಂತಿಗೆ ಖಾತ್ರಿಯಾಯಿತು…
ಅವಳ ಬೆನ್ನು ಸವರಿ ನೀರಿನ ಬಾಟಲು ಕೊಡುತ್ತಾ `ಮೊದಲು ಸುಧಾರಿಸ್ಕೋ ವಲ್ಲೀ…ಏನಾಯ್ತು ನಿಧಾನವಾಗಿ ಹೇಳು…’ ಅಂದಳು ಕಾಂತಿ
ಪ್ರವಲ್ಲಿಕ ಎಷ್ಟು ಗಾಭರಿಯಾದ್ದಳೆಂದರೆ ಸುಧಾರಿಸಿ ಕೊಳ್ಳಲು ಅವಳಿಗೆ ಆ ರಾತ್ರಿ ಪೂರ್ತಿ ಸಾಲದೇನೋ ಅನ್ನಿಸಿತು ಕಾಂತಿಗೆ…
ಏಳು ಹೊಡೆಯಿತು ಢಣ್…ಢಣ್… ಢಣ್…
ನಾನು ಹೋಗಿ ನಿಂಗೂ ಊಟ ತಂದ್ಬಿಡ್ತೀನಿ… ಇಲ್ದಿದ್ರೆ ಏನೂ ಸಿಗಲ್ಲ ಅಷ್ಟೇ… ನಮ್ ಹಾಸ್ಟೆಲ್ ಕಥೆ ನಿಂಗೆ ಗೊತ್ತಲ್ಲಾ… ಎನ್ನುತ್ತಾ ಕಾಂತಿ ಇಬ್ಬರ ತಟ್ಟೇನೂ ತೊಗೊಂಡು ಡೈನಿಂಗ್ ಹಾಲ್ ಕಡೆ ಹೊರಟಳು.
***
ರಾಜೀವ ನ್ಯೂರ್ಯಾಕ್ ನಗರಿಯ ಸುಪ್ರಸಿದ್ದ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ. ಇತ್ತೀಚಿಗೆ ತಾನೇ ತನ್ನ ಪ್ರೀತಿಯ ಹುಡುಗಿ ಧಾರಣಿಯನ್ನು ಮದುವೆಯಾಗಿ ಭಾರತದಿಂದ ಬಂದಿದ್ದ. ಕಂಪಿಸುತ್ತಿದ್ದ ರಾಜೀವ ಧಾರಣಿಗೆ ಟಿ.ವಿ ಆನ್ ಮಾಡಲು ಹೇಳಿದ. ಧಾರಣಿ ರಿಮೋಟ್ ಒತ್ತುತ್ತಿದ್ದಂತೆ ಸಿ.ಎನ್.ಎನ್ ಚಾನಲ್ನಲ್ಲಿ ಆ ಸುದ್ದಿ ಮೂಡಿಬರುತಿತ್ತು.
‘ನ್ಯೂರ್ಯಾಕ್ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆತ್ಮಾಹುತಿ ದಾಳಿ…’
ಅವತ್ತು ಕ್ಯಾಲೆಂಡರ್ ಸೆಪ್ಟೆಂಬರ್ ೧೧ ತೋರಿಸುತಿತ್ತು…
***
ಧಾರಿಣಿ ಬೊಗಸೆಯಲ್ಲಿ ತನ್ನ ತುಂಬು ಕೆನ್ನೆಗಳ ತುಂಬಿ ಕೂತಿದ್ದಳು ಒಂದಿಷ್ಟೂ ಅಲುಗದೆ…ಕಲಾವಿದನೊಬ್ಬ ಬರೆದ ಚಿತ್ರದಂತೆ…ತನ್ನ ಹತ್ತಿರವಿದ್ದ ಕೀನಿಂದ ಬಾಗಿಲು ತೆರೆದು ಒಳಬಂದ ರಾಜೀವ ಅವಳೆಡೆಯೇ ನೆಟ್ಟನೋಟದಿಂದ ನೋಡಿದ. ಅವನು ಬಂದ ಪರಿವೆಯೇ ಇಲ್ಲದೆ ಧಾರಿಣಿ ಕೂತೇ ಇದ್ದಳು…ಕೆನ್ನೆ ಮೇಲೆ ಕಣ್ಣೀರು ಕರೆಗಟ್ಟಿತ್ತು…ಅವಳು ಬಹಳ ಹೊತ್ತಿನಿಂದ ಹಾಗೇ ಕೂತಿರಬೇಕು…ಎದುರಿಗಿದ್ದ ಟಿ.ವಿ ಏನೋ ಕಿರಿಚಿಕೊಳ್ಳುತ್ತಿತ್ತು. ರಾಜೀವ ಅವಳ ಬಳಿ ಬಂದು ಅವಳ ಭುಜ ಹಿಡಿದು ಅಲುಗಿಸಿದ `ಏನಾಯ್ತು ಧಾರಿಣೀ…’ಧಾರಿಣಿ ನಿಧಾನವಾಗಿ ಎದ್ದು ಬೆರಳಿನಿಂದ ಮುಂಗುರುಳು ನೇವರಿಸಿ ಕೊಳ್ಳುವ ನೆಪದಲ್ಲಿ ಕಣ್ಣು ಕೆನ್ನೆ ಗಳನ್ನು ಒರೆಸಿಕೊಳ್ಳುತ್ತಾ ರಾಜೀವನಿಗೋಸ್ಕರ ಟೀ ಮಾಡಲು ಒಳ ನಡೆದಳು.ರಾಜೀವ ಟಿ.ವಿ. ಕಡೆಗೊಮ್ಮೆ ನೋಡಿದ ಅವನಿಗೆ ಅರ್ಥವಾಯಿತು… ಕಿಚನ್ ಗೆ ಬಂದು ಟೀ ಸೋಸುತ್ತಿದ್ದ ಧಾರಿಣಿಯ ಭುಜ ಬಳಸಿ ಕಕ್ಕುಲತೆಯಿಂದ ಹೇಳಿದ “ನಾಡಿದ್ದಿಗೆ ಆರು ವರ್ಷವಾಗುತ್ತೆ ಧಾರಿಣಿ…ಎಷ್ಟು ನೋಯುತ್ತೀಯಮ್ಮಾ…ಸಮಾಧಾನ ಮಾಡಿಕೋ…ಧಾರಿಣಿ ಮಾತಾಡದೆ ಅವನೆದೆಯಲ್ಲಿ ಮುಖ ಹುದುಗಿಸಿ ಬಿಕ್ಕಳಿಸಿದಳು…
***