ಭಾಗ – 8

ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ ತೂಗುತ್ತಿದ್ದ ಶಾರದಮ್ಮನವರಿಗೆ ಪಕ್ಕದ ಮನೆಯ ಹುಡುಗ ಓಡೋಡಿ ಬಂದು ತೇಕುತ್ತಾ ಹೇಳಿದ ಸುದ್ದಿ ದಿಗಿಲು ಹುಟ್ಟಿಸಿತ್ತು. “ದೊಡ್ಡಮ್ಮಾ, ಪೇಟೆಯಲ್ಲಿ ಎಲ್ಲ ಮಾತಾಡ್ತಿದ್ದಾರೆ, ವಲ್ಲೀ ಅಕ್ಕನಿಗೆ ತೊಂದರೆ ಆಗ್ತಿದೆಯಂತೆ. ಅವ್ಳ ಹಾಸ್ಟೆಲ್ ಹೊರಗೆ ರೌಡಿಗಳಿದಾರಂತೆ. ಅವ್ಳು ಯಾರೋ ಮಂತ್ರಿ ಜೊತೆ ಮಾತಾಡಕ್ಕೆ ಅವ್ಳ ಫ್ರೆಂಡ್ ಜೊತೆ ಹೋಗಿದ್ದು ಸರಿಯಲ್ವಂತೆ. `ಇನ್ನು ಅವ್ಳ ಕತೆ ಗೋ…ವಿಂದ’, ಅಂತ ಏನೇನೋ ಮಾತಾಡ್ತಿದಾರೆ ದೊಡ್ಡಮ್ಮ.” ಅಂದ. ಶಾರದಮ್ಮ “ಏನೂಂದ್ರೆ, ಇಲ್ಲಿ ಬನ್ನಿ… ಕೇಳ್ರೀ… ಏನೂಂದ್ರೇ…” ಕೂಗಿಕೊಳ್ಳುತ್ತಾ ಎಚ್ಚರತಪ್ಪಿ ಬಿದ್ದುಬಿಟ್ಟರು.

ಪ್ರಪಂಚದ ವ್ಯವಹಾರಗಳನ್ನೆಲ್ಲ ಬದಿಗಿಟ್ಟು ದೇವಧ್ಯಾನ ಮಾಡಬೇಕೆಂದು ಇಚ್ಛಿಸುತ್ತಾ ಮಾಡು ದಿಟ್ಟಿಸುತ್ತಾ ಮಲಗಿದ್ದ ಶಾಸ್ತ್ರಿಗಳಿಗೆ ಮಡದಿಯ ಕೂಗು ಪಕ್ಕನೆ ದಾಖಲಾಗಲಿಲ್ಲ. ಸುದ್ದಿ ತಂದ ಹುಡುಗನೇ ಒಳಗೆ ಬಂದು ಕೋಣೆಯ ಬಾಗಿಲು ದೂಡಿ ವಿಷಯ ತಿಳಿಸಿದಾಗ ದಡಬಡಿಸಿ ಎದ್ದರು. ಚೊಂಬು ನೀರಿನೊಡನೆಯೇ ಚಾವಡಿಗೆ ನಡೆದು ಶಾರದೆಯ ಕೆನ್ನೆ ತಟ್ಟಿ, ಗಲ್ಲ ಅಲುಗಿಸಿ, ಹಣೆಗೆ, ಕಣ್ಣಿಗೆ ನೀರು ತಟ್ಟಿದರು. “ಲೇ, ಶಾರದಾ, ಏಳೇ, ಏನಾಯ್ತೇ, ಏಳೇ ಮೇಲೆ. ನನ್ನನ್ನು ಬಿಟ್ಟು ನೀನು ಅದ್ಹ್ಯಾಗ್ ಹೋಗ್ತೀಯೇ… ಏಳೇ, ಕಣ್ಬಿಡೇ…!!” ಗದ್ಗದ ಸ್ವರದೊಂದಿಗೂ ಪ್ರೀತಿ ಒಸರುತ್ತಿದ್ದ ಶಾಸ್ತ್ರಿಗಳ ಮುಖವನ್ನೇ ದಿಟ್ಟಿಸುತ್ತಾ ನಿಂತಿದ್ದ ಹುಡುಗ ಜ್ಞಾನೋದಯ ಆದವನಂತೆ ಒಮ್ಮೆಲೇ ಓಡಿ ಹೋಗಿ ತನ್ನ ತಾಯಿಯನ್ನು ಕರೆತಂದ. ಇನ್ನೊಂದು ಮಹಿಳೆಯನ್ನು ನೋಡುತ್ತಲೇ ಶಾಸ್ತ್ರಿಗಳು ಪಕ್ಕಕ್ಕೆ ಸರಿದು ತನ್ನವಳನ್ನು ಅವರ ಆರೈಕೆಗೆ ಬಿಟ್ಟುಕೊಟ್ಟರು. ಗಂಡ ಹಣೆಗೆ, ಕಣ್ಣಿಗೆ ತಟ್ಟಿದ್ದ ನೀರಿಗೋ, ಅರಿವಿನ ಪರಿಗೋ, ಶಾರದಮ್ಮ ಮೆಲ್ಲನೆ ಕಣ್ಣುಬಿಟ್ಟರು. “ಏನೂಂದ್ರೇ, ಬೆಂಗಳೂರಿಗೆ ಹೋಗೋಣ, ನಡೀರಿ” ಅಂದರು.
***

ಢವಗುಟ್ಟುವ ಹೃದಯದೊಂದಿಗೆ ಶಾಸ್ತ್ರಿಗಳು ಶಾರದಮ್ಮನವರೊಡನೆ ಬೆಂಗಳೂರು ತಲುಪಿದರು. ಅಲ್ಲಿ ಮಕ್ಕಳ ಗತಿ ಏನೋ ಎಂತೋ ಎಂಬ ಚಿಂತೆ ಅವರನ್ನು ಹಣ್ಣು ಮಾಡಿತ್ತು. ಆದರೆ ಪರಿಸ್ಥಿತಿ ಅವರು ತಿಳಿದಂತೆ ಭಯಾನಕವಾಗಿಯೇನೂ ಇರಲಿಲ್ಲ. ಶಾಸ್ತ್ರಿಗಳು ನಿತ್ಯ ಪೂಜಿಸುತ್ತಿದ್ದ ಅವರ ಆರಾದ್ಯ ದೈವ ’ಲಕ್ಷ್ಮೀನರಸಿಂಹ’ ಅವರ ಕೈಬಿಟ್ಟಿರಲಿಲ್ಲ.

ಹಾಸ್ಟೆಲನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿರುವ ಸುದ್ದಿ ಎಲ್ಲೆಡೆಗೂ ಮಿಂಚಿನಂತೆ ಹರಡಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿದ್ದರು. ಪೋಲಿಸರು ಚುರುಕಿನ ಕಾರ್ಯಾಚರಣೆ ನಡೆಸಿ, ಅದರ ಹಿಂದಿದ್ದ ದುರಾಸೆಯ ಸಂಚನ್ನು ಹೊರಗೆಳೆದಿದ್ದರು. ಕೆ.ಡಿ.ಶಿವಣ್ಣನ ಹಿಂಬಾಲಕರು ಪೋಲಿಸರ ಮುಂದೆ ಎಲ್ಲವನ್ನೂ ಬಾಯಿಬಿಟ್ಟಿದ್ದರು. ಕೆ. ಡಿ. ಶಿವಣ್ಣ ಈ ವಿಷಯದ ಬಗ್ಗೆ ಇನ್ನೂ ಮುಂದುವರೆದರೆ ತನ್ನ ಹೆಸರು ಹೊರಗೆ ಬಂದೀತೆಂದು ಹೆದರಿ ಸುಮ್ಮನಾಗಿದ್ದ. ಚುನಾವಣೆ ಬಹಳ ಹತ್ತಿರದಲ್ಲಿಯೇ ಇರುವುದರಿಂದ ಈ ಸಂದರ್ಭದಲ್ಲಿ ಅವನ ಹೆಸರು ಹೊರಗೆ ಬರುವುದರಿಂದ ಅನೇಕ ರಾಜಕೀಯ ಪುಢಾರಿಗಳು ಪೇಚಿನಲ್ಲಿ ಸಿಕ್ಕುಬೀಳುವರೆಂಬ ಸತ್ಯ ಅವನಿಗೆ ಗೊತ್ತಿದ್ದದ್ದೇ ಆಗಿತ್ತು.

ಪೋಲಿಸರಿಗೆ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರ ಬಗ್ಗೆಯೂ ಸುಳಿವೂ ಸಿಕ್ಕಿತ್ತು. ಭರತಖಾನನಿಗಾಗಿ ಎಲ್ಲೆಡೆ ತೀವ್ರ ಶೋಧ ನಡೆದಿತ್ತು. ಪ್ರವಲ್ಲಿಕಾ ಅಕ್ಕ ಧಾರಿಣಿ ಮತ್ತು ಗೆಳತಿ ಕಾಂತಿಯ ನೆರವಿನೊಂದಿಗೆ ಪೋಲಿಸ್ ಅಧಿಕಾರಿಗಳ ಮುಂದೆ ಅವನ ಚಹರೆಯನ್ನು ಬಣ್ಣಿಸಿದ್ದಳು. ಗುಪ್ತಚರ ಇಲಾಖೆ ಭರತಖಾನ ಎಲ್ಲೂ ತಪ್ಪಿಸಿಕೊಳ್ಳದಂತೆ ಚಾಣಾಕ್ಷತನದಿಂದ ಬಲೆ ಹೆಣೆದಿತ್ತು. ಸದ್ಯದಲ್ಲೇ ಭರತಖಾನ್ ತಮ್ಮ ಅತಿಥಿಯಾಗುವುದರಲ್ಲಿ ಪೋಲಿಸರಿಗೆ ಯಾವುದೇ ಸಂದೇಹವಿರಲಿಲ್ಲ. ಕೇಡಿ ಭರತಖಾನನೊಬ್ಬ ಸಿಕ್ಕುಬಿದ್ದರೆ ಸಾಕು, ಅವನ ಇಡೀ ಜಾಲವನ್ನು ಸುಲಭವಾಗಿ ಭೇದಿಸಬಹುದೆಂಬ ಲೆಕ್ಕಾಚಾರ ಅವರದಾಗಿತ್ತು.

ಕಥೆ ಬಗ್ಗೆ ಮಾತಾಡಲು ಈ ಎಳೆ

ಹೊಸ ಕಥೆ ಬರೆಯೋಣವೇ? ಎಂದು ಅನೇಕರು ಉತ್ಸಾಹದಿಂದ ಕೇಳಿಕೊಂಡಿದ್ದಕ್ಕಾಗಿ ಇನ್ನೊಂದು ಹೊಸ ಕಥೆಯನ್ನು ಪ್ರಾರಂಭಿಸಿದ್ದೇನೆ. ಅರ್ಧಕ್ಕೆ ಕೈಕೊಟ್ಟು ಓಡಿ ಹೋಗುವುದಿಲ್ಲವೆಂದು ಕೆಲವರು ಭರವಸೆಯನ್ನೂ ನೀಡಿದ್ದಾರೆ. 🙂 ಈ ಬಾರಿ ಕಥೆ ತ್ರಿಕೋನ ಪ್ರೇಮದ ಜಾಡು ಹಿಡಿದು ಹೋಗದಂತೆ, ಹೊಸ ದಾರಿಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸೋಣ. ಎಂದಿನಂತೆ ಕತೆ ಬರೆಯಲು ಒಂದು ದಾರ. ಕಥೆಯ ಬಗ್ಗೆ ಚರ್ಚಿಸಲು ಇನ್ನೊಂದು ದಾರ. ಕಥೆ ಚಿಕ್ಕದಾಗಿರಲಿ, ಚೊಕ್ಕದಾಗಿರಲಿ. ಈ ಕಥೆಯನ್ನು ಸದ್ಯದಲ್ಲಿಯೇ ಬೇರೊಂದು ಬ್ಲಾಗಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿವರೆಗೆ ಇಲ್ಲೇ ಬರೆಯಿರಿ.

ಕಥೆ ಬರೆಯುವವರಿಗೆಲ್ಲಾ ಸ್ವಾಗತ!

1. sritri
2. ಮಾಲಾ ಎಂಬ ಅಮ್ಮುವಿನಮ್ಮ
3. shiv
4. ಜಗಲಿ ಬಾಗವತ
5. ಸುನಾಥ