ಭಾಗ – 15

ತೇಜಸ್ಸು ಉಕ್ಕುವ ಮುಖ, ಹಣೆಯಲ್ಲಿ ನಾಮ, ತಲೆಗೆ ಪಾವುಡ. ಕೈಯಲ್ಲಿ ತಾಳ ಹಾಗು ತಂಬೂರಿ ಹಿಡಿದುಕೊಂಡು, “ಹರಿಯ ನೆನೆಯಲೆ ಮನವೆ. . . ” ಎಂದು ಹಾಡುತ್ತ, ತಮ್ಮ ಮನೆಯಂಗಳದಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ಪ್ರತ್ಯಕ್ಷರಾದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ ಸಾಕ್ಷಾತ್ ಶ್ರೀಹರಿಯನ್ನೇ ಕಂಡಷ್ಟು ಸಂತೋಷವಾಯಿತು.

“ಬನ್ನಿ, ಬನ್ನಿ, ಒಳಗೆ ದಯಮಾಡಿಸಿ”, ಎಂದು ಆದರದಿಂದ ಕರೆದು, ಕೈಕಾಲಿಗೆ ನೀರು ತರಲು, ಹೆಂಡತಿಗೆ ಕೂಗಿ ಹೇಳಿದರು. ಶಾರದಮ್ಮನವರೂ ಸಹ ಸಂಭ್ರಮದಿಂದ ನೀರು ತಂದು ಕೊಟ್ಟು ನಡುಮನೆಯಲ್ಲಿ ಮಣೆ ಹಾಕಿದರು. ಬಾಯಾರಿಸಿಕೊಳ್ಳಲಿ ಬ್ರಾಹ್ಮಣ ಎಂದು ಒಂದು ಲೋಟ ಬಿಸಿ ಬಿಸಿ ಬಾದಾಮಿ ಹಾಲನ್ನು ಮುಂದಿಟ್ಟರು. ಹಾಲನ್ನು ಕಂಡು ಬೆಚ್ಚಿಬಿದ್ದ ಹರಿದಾಸರು ಬಾಳೆಹಣ್ಣಷ್ಟೆ ತಮಗೆ ಸಾಕು ಎಂದು ಹೇಳಿದರು.
“ಯಾವ ಊರಾಯಿತು, ಸ್ವಾಮಿ ತಮ್ಮದು?”, ಶಾಸ್ತ್ರಿಗಳು ಗೌರವದಿಂದ ಕೇಳಿದರು.
“ಅಲ್ಲಿರುವದುssss ನಮ್ಮ ಮನೇssss
ಇಲ್ಲಿರುವದೂssss ಸುಮ್ಮನೇssssss”
ಎಂದು ಉಸರಿದ ದಾಸರು,
“ಹರಿ ನಾರಾಯಣ, ಹರಿನಾರಾಯಣ, ಹರಿ ನಾರಾಯಣ, ಎನು ಮನವೆ”, ಎಂದು ತಾಳ ಕುಟ್ಟುತ್ತ ಹಾಡಲಾರಂಭಿಸಿದರು.
ಇದೆಲ್ಲ ಸಂಭ್ರಮ, ಸಂತೋಷವನ್ನು ಕೇಳಿಸಿಕೊಂಡ ಜೇನಿ ಹಾಗು ಹ್ಯಾರಿ ಅಟ್ಟದಿಂದ ಕೆಳಗಿಳಿದು ಬಂದರು.
‘ಹರಿ, ಹರಿ’ ಎಂದು ಹಾಡುತ್ತಿದ್ದದ್ದನ್ನು ಕೇಳಿದ ಹ್ಯಾರಿ,
“Mummy why is he calling my name?”, ಎಂದು ಕೇಳಿದ.(ಹ್ಯಾರಿಯನ್ನು ಅವನ ಅಪ್ಪ ಪ್ರತಾಪ ‘ಹರಿ’ ಎಂದೇ ಕರೆಯುತ್ತಿದ್ದ.)
ತಕ್ಷಣವೇ ಹರಿದಾಸರು,
“ಹರಿ ಓಮ್ ಹರಿ,
ಹರಿ ಓಮ್ ಹರಿ,
Bury your worry,
Come here, ಮರಿ”
ಎಂದು ರಾಗವಾಗಿ ಹೇಳಿದರು.

ಶಾಸ್ತ್ರಿಗಳಿಗೆ ಹಾಗು ಶಾರದಮ್ಮನವರಿಗೆ ಪರಮಾಶ್ಚರ್ಯ. ಜೇನಿಗೆ ಸಂತೋಷಾಘಾತ. ‘ಇಂಡಿಯಾದಲ್ಲಿ spiritual power ಇದೆ.’ ಎಂದು ಪ್ರತಾಪ ಹೇಳುತ್ತಿದ್ದದ್ದು ನಿಜವೆನಿಸಿತು ಜೇನಿಗೆ. ತಕ್ಷಣವೇ ತಾನೂ ಸಹ ಇಂಡಿಯನ್ನರಂತೆ ಹರಿದಾಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ, “ಸ್ವಾಮಿಜಿ, ಹ್ಯಾರಿಗೆ ಯಾವ ರೋಗವಾಗಿದೆಯೊ, ಯಾವ ಡಾಕ್ಟರಿಗೂ ಗೊತ್ತಾಗುತ್ತಿಲ್ಲ. ದಯವಿಟ್ಟು ನಿಮ್ಮ spritual power ಉಪಯೋಗಿಸಿ ಅವನನ್ನು ಗುಣಪಡಿಸಿ”, ಎಂದು ಕೋರಿದಳು.

“ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೊ!
ಘನ್ನಮಹಿಮ ಜಗನ್ನಾಥವಿಠಲಪ್ರಿಯ
ನಿನ್ನಾರಾಧನೆ ಮಾಡಿಸೊ!”
ಎಂದು ಹರಿದಾಸರು ರಾಘವೇಂದ್ರಸ್ವಾಮಿಗಳ ಮೇಲೆ ಆ ಹೊಣೆ ಹೊರಿಸಿದರು.
. . . . . . . . . . . . . . . . . . . . . . . . .
ಒಂದೇ ಗಂಟೆಯಲ್ಲಿ ಆ ಕುಟುಂಬದವರೆಲ್ಲರ ವಿಶ್ವಾಸ ಗಳಿಸಿಕೊಂಡ ಭರತಖಾನನಿಗೆ ಪ್ರವಲ್ಲಿಕಾ ಹಾಗು ಧಾರಿಣಿ ಇವರೀರ್ವರೂ ಇಲ್ಲಿಯವರೆಗೂ ನಾಪತ್ತೆಯಾಗಿಯೇ ಇರುವದು ಗೊತ್ತಾಯಿತು.
ಜೇನಿ ಇವಳು WTO ಸ್ಫೋಟದಲ್ಲಿ ಮೃತನಾದ ಪ್ರತಾಪನ ಅಮೇರಿಕನ್ ಹೆಂಡತಿ ಎಂದೂ ಗೊತ್ತಾಯಿತು. ತಿಳಿಯದ ರೋಗದಿಂದ ಬಳಲುತ್ತಿರುವ ತನ್ನ ಮಗ ಹ್ಯಾರಿಯನ್ನು ಇಂಡಿಯಾಕ್ಕೆ ಕರೆದುಕೊಂಡ ಬಂದ ಜೇನಿಯ ಉದ್ದೇಶವೂ ಗೊತ್ತಾಯಿತು.

ಆ ರಾತ್ರಿ ತಮ್ಮ ಕೊನೆಯ ಕೀರ್ತನೆಯನ್ನು ಹಾಡುವ ಮುನ್ನ ಹರಿದಾಸರು, ತಂಬೂರಿಯ ಮೇಲಿನ ಬಿರಡೆಯನ್ನು ಸರಿಗೊಳಿಸುವಂತೆ ನಟಿಸುತ್ತ, ಅದರಲ್ಲಿ ಅಡಗಿಸಿದ್ದ ಶಕ್ತಿಶಾಲಿ ಟ್ರಾನ್ಸಮಿಟರದ ಬಟನ್ ಒತ್ತಿದರು. ಆಮೇಲೆ ಕೊನೆಯ ಕೀರ್ತನೆಯನ್ನು ಹಾಡಿದರುಃ
“ಗಿಳಿಯು ಪಂಜರದೊಳಿಲ್ಲಾ, ಓ ಸಾಮಾ, ಓಸಾಮಾ!
ಬರಿದೇ ಪಂಜರವಾಯಿತಲ್ಲಾ!”
,,,,,,,,,,,,,,,,,,,,,,,,,,,,,,,,,,,
ಇತ್ತ ಟ್ರಾನ್ಸಮಿಟರ್ ರಿಸೀವರನಲ್ಲಿ ಓಸಾಮಾ ಭರತಖಾನನ ಈ ಒರಲನ್ನು ಕೇಳಿದ. ತನ್ನ ಮಾನಸಪುತ್ರನಿಗೆ ಒದಗಿದ ಈ ದುರ್ಗತಿಯಿಂದ ಅವನಿಗೆ ಖೇದವಾಯಿತು. ಭರತಖಾನನ ಗಿಳಿಯನ್ನು ಭಾರತೀಯ ದೂತಾವಾಸದಿಂದ ಅಪಹರಿಸಿದ ಸುದ್ದಿಯೂ ಅವನಿಗೆ ಇಷ್ಟರಲ್ಲೆ ತಿಳಿದಿತ್ತು. ಇಂತಹ ಧೈರ್ಯ, ಚಾಕಚಕ್ಯತೆ ಹಾಗು ಸಂಘಟನಾ ಶಕ್ತಿ ಇರುವ ಸಂಸ್ಥೆಗಳು ಎರಡೇ ಎರಡಿವೆ. ಒಂದು ಅಮೆರಿಕದ CIA, ಎರಡನೆಯದು ಇಸ್ರೇಲಿನ MOSSAD. ಇರಾಕ ರಣಭೂಮಿಯಲ್ಲಿ ಸಿಲುಕಿದ CIA ಈ ಚಿಲ್ಲರೆ ಕೆಲಸಕ್ಕೆ ಕೈಹಾಕುವದಿಲ್ಲ. ಹಾಗಾದರೆ ಇದು MOSSADದ ಕೆಲಸ! (ಏತಕ್ಕಾಗಿ ಈ ಸಾಹಸ ಮಾಡಿದರೊ?) ಅರಬರ ಆಜನ್ಮ ವೈರಿಗಳಾದ ಇಸ್ರೇಲಿಗಳ ಈ ವ್ಯೂಹದಿಂದ ಭರತಖಾನನ ಪ್ಯಾರಿ ಲಕಡಿಯನ್ನು ಹೊರತರುವದು ಅಸಾಧ್ಯ. ಆದರೆ ಅಸಾಧ್ಯವೆನ್ನುವದು ಲಾಡೆನ್ನನ ಶಬ್ದಕೋಶದಲ್ಲಿಲ್ಲ!

***

ಸಕಲ ಪೀಡಾ ಪರಿಹಾರಕ್ಕೆಂದು ಶಾಸ್ತ್ರಿಗಳ ಮನೆಯಲ್ಲಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರವನ್ನು ಸಾಂಗೋಪಾಂಗವಾಗಿ ನೆರವೇರಿಸಲಾಯಿತು. ಹರಿದಾಸರು ದಿನವೆಲ್ಲ ಕೀರ್ತನೆಳನ್ನು ಹಾಡುತ್ತ ಎಲ್ಲರ
ಮನಸ್ಸನ್ನು ಗೆದ್ದುಕೊಂಡರು. ಹ್ಯಾರಿಯಂತೂ “ಸ್ವಾಮೀಜಿ ಅಂಕಲ್ ” ಎನ್ನುತ್ತ ಅವರ ಜೊತೆಗೇ ಇರುತ್ತಿದ್ದ. ಹರಿದಾಸರು ಹಯಗ್ರೀವ, ಬಾಳೆಹಣ್ಣು ಮೆದ್ದು ಮೆದ್ದು ತಮ್ಮ ಕಳೆಯನ್ನು ಹೆಚ್ಚಿಸಿಕೊಂಡರು. ಯಾಕೊ ಹಾಲು ಮಾತ್ರ ಅವರಿಗೆ ವರ್ಜ್ಯ. ಕೆಲವೊಮ್ಮೆ ಹರಿದಾಸರಿಗೆ ಒಳಗೊಳಗೇ ಅಂಜಿಕೆಯಾಗಿಬಿಡುತ್ತಿತ್ತುಃ ತಾನು ನಿಜವಾಗಿಯೂ ಕಾಫರನೇ ಆಗಿಬಿಡುವೇನೇನೋ ಎಂದು. ಆದರೆ ಮತ್ತೆ ಗಟ್ಟಿ ಮನಸ್ಸು ಮಾಡಿಕೊಂಡು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರುಃ “ಲವ್ ಕೆ ಲಿಯೆ ಕುಛ್ ಭೀ ಕರೇಗಾ!”

……………………..
ಅಫಘಾನಿಸ್ತಾನದ ಗುಡ್ಡಗಾಡಿನ ತನ್ನ ಗವಿಯಲ್ಲಿ ಒಂದು ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದ ಓಸಾಮಾನ ಟ್ರಾನ್ಸಮೀಟರ್ ಬೀಪ್ ಎಂದಿತು. ರಿಸೀವರ ಮೇಲೆತ್ತಿದಾಗ ಖನ್ನಡದ ಖಿರ್ತನೆಯೊಂದು ಕೇಳಿಸಿತುಃ
“ತಾಳುವಿಕೆಗಿಂತ ಅನ್ಯ ತಪವು ಇಲ್ಲ!”

ಓಸಾಮಾ ನಿಟ್ಟುಸಿರುಬಿಟ್ಟ.