ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಕವನ ಸಂಕಲನ : ನಲ್ವಾಡುಗಳು
-ಪಲ್ಲವಿ-
ನಮ್ಮ ಹಳ್ಳಿಯೂರಽ ನಮಗ ಪಾಡಽ-
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೧
ಊರಮುಂದ ತಿಳಿನೀರಿನ ಹಳ್ಳಽ-
ಬೇವು ಮಾವು ಹುಲಗಲ ಮರಚೆಳ್ಳಽ-
ದಂಡಿಗುಂಟ ನೋಡು ನೆಳ್ಳಽ ನೆಳ್ಳಽ-
ನೀರ ತರುವಾಗ ಗೆಣತ್ಯಾರ ಜೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ—
೨
ನಮ್ಮ ಹಳ್ಳ ಕಾಶಿಯ ಹಿರಿಹೊಳಿಯ
ಒಮ್ಮ್ಯಾದರು ಬತ್ತಿಲ್ಲದು ತಿಳಿಯ-
ಬದಿಯ ತ್ವಾಟಗಳ ಬೆಳಸಿಗೆ ಕಳಿಯ-
ಹ್ಯಾಂಗ ಕೊಡತೈತಿ ಬಂದೊಮ್ಮೆ ನೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೩
ಪಡಿವಿಯ ತುಂಬಾ ಕಾಳಿನ ಚೀಲಾ-
ನಡುಮನಿಯೊಳಗಽ ಗಳಿಗಿಯ ಸಾಲಾ-
ತುಂಬಿ ಸೂಸತಾವ ಗಡಿಗಿಯಡಕಲಾ-
ಖಾಲಿ ಇಲ್ಲವ್ವಾ ಒಂದೂ ಮನಿ-ಮಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೪
ಹೈನದೆಮ್ಮಿ ನೋಡ ಹಾಲ ಸಮುದರಾ-
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ-
ಮಜ್ಜಿಗಿ ಒಯ್ತಾರ ಊರಂತೂರಾ-
ಸೂಲಕ್ಕೊಂದು ಬಂಗಾರ್ಬಳಿ ಜೋಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೫
ಹೂಡುವೆತ್ತು ಹಕ್ಕಿಗೆ ಸಿಂಗಾರಾ-
ತಿಂದ ರಿಣಾ ತೀರಸತಾವ ಪೂರಾ-
ಎತ್ತು ಅಲ್ಲ ನಮ್ಮನಿ ದೇವ್ರಾ-
ಬಸವಣ್ಣಿರದಂಥಾ ಮನಿಯದು ಕಾಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೬
ಗರಡಿಯ ಹುಡುಗರ ಹುರುಪು ಅದೇನಽ
ಕರಡಿ-ಹಲಿಗಿಮಜಲಿನ ಮೋಜೇನಽ-
ಬಯಲಾಟದ ಸುಖಕಿಲ್ಲ ಸಮಾನ-
ಕೇಳಿಲ್ಲೇನಽ ಲಾವಣಿ ಗೀಗೀ ಹಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೭
ರಾಯ ಅರಸು ನಾನಾತಗ ರಾಣಿ-
ನಮ್ಮ ಪ್ರೀತಿಯೊಳು ಸ್ವಲ್ಪೂ ಕಾಣಿ-
ಬಂದೆ ಇಲ್ಲ ನೋಡ ನನ್ನ ತವರಾಣಿ-
ನಮ್ಮ ಸಂಸಾರ ಜೇನಿನ ಗೂಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೮
ಪ್ಯಾಟಿಯೂರಿನಾ ಬಣ್ಣದ ಹೆಣ್ಣಽ-
ಮಾಟ ಮಾಡದಲೆ ಬಿಟ್ಟಾವೇನಽ-
ನಮ್ಮ ರಾಯ ನಮಗ ದಕ್ಕ್ಯಾನೇನಽ-
ಪ್ಯಾಟೀ ಊರಂಬ ಸುದ್ದೀ ತಗಿಬ್ಯಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
೯
ಊರಕಾವಲಿಗೆ ಸೀಮಿಯ ಭರಮಾ-
ಪಾರೆ ಮಾಡತಾನ ಶ್ರೀ ಬಲಭೀಮಾ-
ಮೀರಿದ ದೇವತಿ ಗುಡಿಯೆಲ್ಲಮ್ಮಾ-
ಇವರಽ ಕರುಣಾ ತಪ್ಪಿದರೆಲ್ಲಾ ಕೇಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
* * *
ನಮ್ಮ ಹಳ್ಳಿ ನಮಗ ಬಲೆ ಪಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್ವಾಡಽ!
————————————————————