ಮೆದುವಾದ ಚಪಾತಿ ಮಾಡುವುದು ಹೇಗೆ?

ಇಲ್ಲಿ ಮೆದುವಾದ ಚಪಾತಿ ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೀನಿ ಅಂತ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ನಾನು ಮೆದುವಾದ ಚಪಾತಿ ಮಾಡುವುದು ಹೇಗೆ ಎಂದು ನಿಮ್ಮನ್ನೇ ಕೇಳ್ತಾ ಇದೀನಿ!

ದಕ್ಷಿಣ ಭಾರತೀಯರು ಅಕ್ಕಿಯನ್ನು ಉಪಯೋಗಿಸುವುದರಲ್ಲಿ ಎಲ್ಲರಿಗಿಂತಲೂ ಮುಂದು. ನಾವೂ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಎಂದು ನಂಬಿದವರು.  ಅನ್ನ ಕಡಿಮೆ ಮಾಡಿ ಎಂದು ಎಲ್ಲರೂ ಹೇಳೋದು ಕೇಳಿ, ಕೇಳಿ ಬೇಜಾರಾಗಿ , ನಾನೂ ಅನ್ನ ಕಡಿಮೆ ಮಾಡಿ ದಿನವೂ ಚಪಾತಿ ಮಾಡಲು ನಿರ್ಧರಿಸಿದೆ.  ಅನ್ನದಷ್ಟು ಸುಲಭವಲ್ಲ ಇದು. time ತೊಗೊಳ್ಳುವ ಕೆಲಸ.

ನಾನು ಮಾಡುವ ಚಪಾತಿ ಕಲ್ಲಿನಂತೆ ಗಟ್ಟಿಯಾಗೇನೂ ಇರದೆ ಚೆನ್ನಾಗಿಯೇ ಇರತ್ತೆ. ಆದರೂ ನನಗೇಕೋ ತೃಪ್ತಿಯಿಲ್ಲ.   ನಾನು ಬೆಂಗಳೂರಿನಲ್ಲಿ ನಮ್ಮ ಪರಿಚಯದವರೊಬ್ಬರ ಮನೆಯಲ್ಲಿ ನೋಡಿದ ( ಮತ್ತು ಸವಿದ) ಚಪಾತಿಯ ಗುಣಮಟ್ಟವನ್ನು ಸಾಧಿಸುವುದು ಇನ್ನೂ ನನ್ನಿಂದಾಗಿಲ್ಲ. ಆ ಚಪಾತಿಗಳು ರೇಶಿಮೆಯಷ್ಟೇ (ಹೊಸದಲ್ಲ) ಮೃದುವಾಗಿದ್ದವು. ಅವರು ಚಪಾತಿ ಹೇಗೆ ಮಾಡುತ್ತಾರೆಂದು ಅಗಲೇ ವಿಚಾರಿಸಿದೆ. ಅವರು ವಿವರಿಸಿದ್ದೇ ಅಲ್ಲದೆ, ಚಪಾತಿಗಳು ಸಾಕಷ್ಟಿದ್ದರೂ, ನನ್ನ ಸಮಾಧಾನಕ್ಕಾಗಿ ಮತ್ತೂ ಒಂದೆರಡು ಚಪಾತಿಗಳನ್ನು ಮಾಡಿ ತೋರಿಸಿದರು.  ಚಪಾತಿ ಮಾಡುವ ವಿಧಾನದಲ್ಲೇನೂ ಬದಲಾವಣೆ ಇರಲಿಲ್ಲ, ಹಿಟ್ಟು ಕೂಡ ಬೇರೆಯಲ್ಲ, ಆದರೂ ನಾನು ಮಾಡಿದ ಚಪಾತಿ ಮಾತ್ರ ಹಾಗಿರಲಿಲ್ಲ 🙁

ಇಲ್ಲಿ ಸುಮಾರಾಗಿ ಯಾರ ಮನೆಯಲ್ಲಿ ಹೋಗಿ ನೋಡಿದರೂ ಎಲ್ಲರ ಮನೆ ಚಪಾತಿಯೂ (ಎಲ್ಲರ ಮನೆ ದೋಸೆ ತರ 🙂 ) ಒಂದೇ ರೀತಿ ಇರುತ್ತದೆ. ಯಾಕೆಂದರೆ,ಎಲ್ಲರೂ ಗುಜರಾತಿಗಳು ಮಾಡಿ ಕೊಡುವ ತೆಳ್ಳಗಿನ ಚಪಾತಿಗಳನ್ನೇ ತಂದು ಇಟ್ಟಿರುತ್ತಾರೆ.  ಯಾರಾದರೂ ಮನೆಯಲ್ಲಿಯೇ ಚಪಾತಿಗಳನ್ನು ಮಾಡಿದ್ದರೆ, ನಾನು ಕೇಳುವ ಪ್ರಶ್ನೆ ಇದು – “ನೀವು ಚಪಾತಿ ಹೇಗೆ ಮಾಡುತ್ತೀರಿ?” ಅದೇ ಪ್ರಶ್ನೆ ಈಗ ನಿಮಗೆ – “ನಿಮ್ಮನೆ ಚಪಾತಿ ಮೆದುವಾಗಿದ್ದರೆ, ಅದನ್ನು ಹೇಗೆ ಮಾಡುತ್ತೀರಿ?”

ನಿಮಗೇನಾದರೂ ಹೊಸ ವಿಧಾನ ಗೊತ್ತಿದ್ದರೆ ತಿಳಿಸಿ. ಗೂಗಲ್ ಲಿಂಕ್ ಬೇಡ. ನಾನಾಗಲೇ ಪ್ರಯತ್ನಿಸಿದ್ದೇನೆ. 🙂 ಕೆಲವು ತಾಣಗಳಲ್ಲಿ ಬಿಸಿನೀರಿನಲ್ಲಿ ಹಿಟ್ಟು ಕಲಿಸಿದರೆ ಮೃದುತ್ವ ಬರುತ್ತದೆ ಎಂದಿತ್ತು, ಅದನ್ನು ಪ್ರಯತ್ನಿಸಿದೆ.  ಉದಯ ಟಿವಿಯಲ್ಲಿ ,ಗೋಧಿ ಹಿಟ್ಟಿನೊಡನೆ ಮೈದಾ ಬೆರೆಸಿದರೆ ಮೃದುವಾಗಿರತ್ತೆ ಎಂದು ಮಾಡಿ ತೋರಿಸಿದರು. ದಿನವೂ ಮೈದಾ ತಿಂದರೆ ಮೈಗೊಳ್ಳೆಯದಲ್ಲವಾದ್ದರಿಂದ ಆ ಸಲಹೆಯನ್ನು ಸಾರಾಸಗಟಾಗಿ ನಿರಾಕರಿಸಿದೆ.

ಪ್ರವೀಣ ಇಲ್ಲಿದ್ದಾಗ, ( ಈಗ ಬೆಂಗಳೂರು) ಹಾಲಿನಲ್ಲಿ ಹಿಟ್ಟು ಕಲೆಸಿದರೆ ಚಪಾತಿ ತುಂಬಾ ಮೆತ್ತಗಿರುತ್ತದೆ ಎಂದು ಹೇಳಿದ್ದ. ಅದನ್ನೂ ಮಾಡಿದೆ. ಹಾಲಿನ ಕ್ಯಾನುಗಳು ಬೇಗ ಬೇಗ ಖಾಲಿಯಾದವೇ ಹೊರತು ನನ್ನ “ಕನಸಿನ” ಚಪಾತಿಯ ಸಾಕ್ಷಾತ್ಕಾರವಾಗಲಿಲ್ಲ. ನಿಮ್ಮಲ್ಲೇನಾದರೂ ಒಳ್ಳೆಯ ಸಲಹೆಗಳಿದ್ದರೆ ಬರಲಿ.

ಜೋಶಿ, ಅನ್ವೇಷಿಗಳು ಕೊಡುವ ಬಣ್ಣಬಣ್ಣದ ಐಡಿಯಾಗಳಿಗೂ ಸ್ವಾಗತ 🙂

***  ***    ***    ***   ***   ***   ***   ***