ಕವಿ – ಅಂಬಿಕಾತನಯದತ್ತ
ಕವನ ಸಂಕಲನ – ಗಂಗಾವತರಣ
ಗಾಯಕರು – ವಿಶ್ವೇಶ್, ಅಶ್ವಿನಿ
ಆಲ್ಬಮ್ – ಘಮಘಮ
ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ ?
ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ
ಮನಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗಿ ?
ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ ||
ನೀ ಹೊರಟಿದ್ದೀಗ ಎಲ್ಲಿಗಿ ?
ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡsಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡsಕ ||
ನೀ ಹೊರಟಿದ್ದೀಗ ಎಲ್ಲಿಗಿ ?
ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗಿ ?
ನಾವು ಬಂದೆವಲ್ಲಿದಿಲ್ಲಿಗಿ
ಬಾಯಿ ಬಿಟ್ಟಾವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ ||
ನೀ ಹೊರಟಿದ್ದೀಗ ಎಲ್ಲಿಗಿ ?
ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗಿ ?