ಅವನು ಒಳ್ಳೆಯವನು!

ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ. ಮದುವೆ ನಿಶ್ಚಯವಾಗಲಿ’ – ಎಂದು ಎದ್ದು ಹೊರನಡೆದ. ಹೆತ್ತವರು ಹಿಗ್ಗಿ ಹೀರೆಕಾಯಾದರು. ನಮ್ಮ ಮಗ ಎಷ್ಟು ಒಳ್ಳೆಯವನು! ಪುಣ್ಯ ಮಾಡಿದ್ವಿ.

ತಮ್ಮ ಕಣ್ಮುಂದೆಯೇ ಮನೆ ಒಡೆಯುತ್ತಿದ್ದುದನ್ನು ಕಂಡು ಕಣ್ಣೀರು ಸುರಿಸುತ್ತಾ ಕುಳಿತಿದ್ದರು ಹೆತ್ತವರು. ಮೆತ್ತನೆಯ ಅಣ್ಣನಿಗೆ ಟೋಪಿ ಹಾಕಲು ಒಡಹುಟ್ಟಿದ ತಮ್ಮಂದಿರೇ ತಯಾರಾಗಿ ನಿಂತಿದ್ದರು. ಎಲ್ಲವೂ ಅವರೆಂದುಕೊಂಡತೆ ನಡೆಯಿತೆನ್ನುವಾಗಲೇ ವಿರೋಧ ಬಂದಿತ್ತು ಅತ್ತಿಗೆಯಿಂದ. ಅವರಿಗೆ ಇದು ನುಂಗಲಾರದ ತುತ್ತು! – ’ನಮ್ಮಣ್ಣ ಎಷ್ಟು ಒಳ್ಳೆಯವನು! ಈ ಗಯ್ಯಾಳಿ ಎಲ್ಲಿಂದ ಗಂಟು ಬಿದ್ದಳೋ ಅವನಿಗೆ’

ಕೇಳಿಕೇಳಿದಾಗೆಲ್ಲಾ ಲೆಕ್ಕ ಕೇಳದೆ ಎಣಿಸಿಕೊಡುತ್ತಿದ್ದ ಅಣ್ಣನ ಕೈಗೆ ಈಗ ಅತ್ತಿಗೆಯ ಕಡಿವಾಣ ಬಿದ್ದಿದ್ದು ಸಹಿಸುವುದು ಕಷ್ಟವಾದ ತಂಗಿಯ ಅಂತರಂಗ ಅಣ್ಣನಿಗಾಗಿ ಮರುಗುತ್ತಿದೆ – “ಅಣ್ಣಾ, ನೀನೆಷ್ಟು ಒಳ್ಳೆಯವನು. ಅತ್ತಿಗೆ ನಿನಗೆ ತಕ್ಕವಳಲ್ಲ!”

ಪಾಪ! ಎಂದು ಇರಲು ಬಿಟ್ಟುಕೊಟ್ಟಿದ್ದ ತಮ್ಮದೇ ಮನೆಯನ್ನು ತಮಗೆ ಬಿಟ್ಟು ಮಾಡಿಕೊಡಲು ಸತಾಯಿಸುತ್ತಿದ್ದ ಜನರಿಗೆ ಜೋರು ಮಾಡಿ ಬಿಡಿಸಿದ್ದಳು ಅವಳು. ಇಷ್ಟು ದಿನ ಬಾಡಿಗೆಯೇ ಇಲ್ಲದೆ ಹಾಯಾಗಿದ್ದ ಮನೆಯನ್ನು ಬಿಟ್ಟುಹೋಗಲು ಸಂಕಟವಾಗಿ ಗೊಣಗಿಕೊಂಡಿತು ಆ ಕುಟುಂಬ – “ಆ ಮನುಷ್ಯ ಧರ್ಮರಾಯನಂತೋನು. ಈ ಮಾರಾಯ್ತಿನ ಯಾಕೆ ಕಟ್ಟಿಕೊಂಡನೋ. ಎಂಥಾ ಗಂಡನಿಗೆ ಎಂಥಾ ಹೆಂಡತಿ!

ಮೂರು ವರ್ಷದ ಪುಟ್ಟ ಮಗು ಅಮ್ಮನನ್ನು ಅಣಕಿಸುತ್ತಾ ಹೇಳಿತು – ’ಹೋಗಮ್ಮಾ, ನೀನು ಹೋಂವರ್ಕ್ ಮಾಡದಿದ್ದರೆ ಹೊಡೀತೀಯಾ. ಅಪ್ಪನೇ ನಿನಗಿಂತ ಒಳ್ಳೆಯವನು”

ಮನೆಯಲ್ಲಿ, ವಠಾರದಲ್ಲಿ, ಆಫೀಸಿನಲ್ಲಿ, ರೇಷನ್ ಅಂಗಡಿಯಲ್ಲಿ ಎಲ್ಲಾ ಕಡೆ ಅವನು ಒಳ್ಳೆಯವನೇ.

ಒಳ್ಳೆಯವರೆಂಬ ಈ ಇಮೇಜ್ ದೊರಕಿಸಿಕೊಳ್ಳುವುದು ಮಾತ್ರ ತುಂಬಾ ಕಷ್ಟ! ಅದಕ್ಕೆ ಬಹಳ ತ್ಯಾಗ ಮಾಡಬೇಕು!

(ಅಲ್ಲಿ-ಇಲ್ಲಿ ಸಿಕ್ಕುಬಿದ್ದ ಚಿತ್ರಗಳಿವು ; ನನ್ನ ಸ್ವಂತದ್ದಲ್ಲ)