ಗಾದೆಗಳಲ್ಲಿ ರಾಮಾಯಣ, ಮಹಾಭಾರತ

ರಾಮಾಯಣ, ಮಹಾಭಾರತ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎನ್ನಲು ನಮ್ಮಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳೇ ಸಾಕ್ಷಿ. ಅವುಗಳಲ್ಲಿ ನನಗೆ ತಿಳಿದ ಕೆಲವನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ.

* ’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’- ಯಾರೇ ಅಧಿಕಾರಕ್ಕೆ ಬಂದರೂ, ಜನಸಾಮಾನ್ಯರ ಬದುಕಿನ ಮೇಲೆ ಏನೂ ಪರಿಣಾಮವಾಗದು ಎಂಬುದು ಅಂದಿಗೂ-ಇಂದಿಗೂ ನಿಜವೇ.

*’ರಾವಣನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ’ – ಈ ಗಾದೆಯ ಹಿನ್ನಲೆ ಮಾತ್ರ ನನಗೆ ಅರ್ಥವಾಗಿಲ್ಲ. ರಾವಣ ಯಾವಾಗ ಮಜ್ಜಿಗೆ ಕುಡಿದ? 😉
ರಾವಣನ ಹೊಟ್ಟೆ ಅವನ ದೇಹದ ಗಾತ್ರಕ್ಕೆ ತಕ್ಕಂತೆ ದೊಡ್ಡದೇ ಇರಬಹುದು. ಅದರೆ ಬಕಾಸುರ ಹಸಿವಿನಿಂದ ಆರ್ಭಟಿಸಿದ್ದಿದೆಯೇ ಹೊರತು ರಾವಣ ಎಂದೂ ಹಸಿದು ಅಬ್ಬರಿಸಿದ ಪ್ರಸಂಗ ಕೇಳಿಲ್ಲ.

*’ಲಂಕೆಯಲ್ಲಿ ಹುಟ್ಟಿದ್ದೆಲ್ಲಾ ರಾವಣನ ಪಡೆ’ – ದುಷ್ಟ ಸಹವಾಸದಲ್ಲಿರುವವನು ದುಷ್ಟನೇ ಆಗುತ್ತಾನೆ ಎನ್ನುವುದನ್ನು ಸೂಚಿಸುವ ಗಾದೆ.

* ’ರಾತ್ರಿ ಎಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕು ಅಂದಹಾಗೆ’- ರಾಮಾಯಣ ಕೇಳಿದವನಿಗೆ ಅದರಲ್ಲಡಗಿದ ಜೀವನ ತತ್ವಗಳು, ಪಾರಮಾರ್ಥಿಕ ರಹಸ್ಯಗಳು ಅರ್ಥವಾಗದಿದ್ದರೂ, ಕೊನೆಪಕ್ಷ ರಾಮ ಮತ್ತು ಸೀತೆ ಗಂಡ-ಹೆಂಡತಿ ಎಂಬ ಸರಳ ವಿಷಯವಾದರೂ ಅವನಿಗೆ ತಿಳಿದಿರಲೇಬೇಕು ಎಂದು ಅಪೇಕ್ಷಿಸುತ್ತಿದೆ ಈ ಗಾದೆ.

* ’ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು’, ’ಕೋತಿ ತಾನು ಕೆಡೋದಲ್ಲದೆ ವನವನ್ನೂ ಕೆಡಿಸಿತು’ – ಲಂಕಾದಹನ ಪ್ರಸಂಗವನ್ನು ನೆನಪಿಸುವ ಗಾದೆ ಇದು. ಹನುಮ ತನ್ನ ಬಾಲಕ್ಕೆ ಬೆಂಕಿ ಹಚ್ಚಿಕೊಂಡಿದ್ದಲ್ಲದೆ ಲಂಕೆಯನ್ನೇ ಸುಟ್ಟು ಹಾಕಿದ್ದನ್ನು ತಿಳಿಸುತ್ತಿದೆ.

* ’ಅಳಿಲು ಭಕ್ತಿ, ಮಳಲು ಸೇವೆ’ – ರಾಮಸೇತು ನಿರ್ಮಾಣದಲ್ಲಿ ಅಳಿಲು ತನ್ನಿಂದಾದಷ್ಟು ಮರಳು ಹೊತ್ತು ತಂದು ಸೇತುವೆ ನಿರ್ಮಾಣದಲ್ಲಿ ಸಹಕರಿಸಿದ ಕಥೆಯ ಆಧಾರ ಹೊಂದಿದೆ. ಸಂಘ-ಸಂಸ್ಥೆ, ಸಾರ್ವಜನಿಕ ಬದುಕಿನಲ್ಲಿ ’ಅಳಿಲು ಸೇವೆ’, ಅಳಿಲು ಕಾಣಿಕೆ’ ನುಡಿಗಟ್ಟುಗಳು ಆಗಾಗ ಬಳಕೆಯಾಗುವುದುಂಟು. ಕೆಲವೊಮ್ಮೆ ತಲೆಚಿಟ್ಟು ಹಿಡಿಯುವಷ್ಟು ಪುನರಾವರ್ತನೆಯಾಗುವುದೂ ಇದೆ.

* ಸೀತೆಯನ್ನು ಹುಡುಕಲು ಕಪಿಗಳಿಗೆ ಗಡುವು ವಿಧಿಸಿ ಸುಗ್ರೀವ ಹೊರಡಿಸಿದ “ಸುಗ್ರೀವಾಜ್ಞೆ” ಎಂಬ ಪದ ಇವತ್ತಿಗೂ ಆಡಳಿತದಲ್ಲಿ ರೂಢಿಯಲ್ಲಿದೆ. ರಾಷ್ಟ್ರಪತಿಗಳಿಗೆ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವಿದೆ.

* ರಾಮನ ವನವಾಸದ ಅವಧಿಯಾದ ‘ಹದಿನಾಲ್ಕು ವರ್ಷ’ವೇ ಇಂದು ಅಪರಾಧಿಗಳಿಗೆ ನ್ಯಾಯಾಲಯ ವಿಧಿಸುವ ಜೀವಾವಧಿ ಶಿಕ್ಷೆಗೆ ಆಧಾರವೆಂದು ಕೇಳಿದ ನೆನಪಿದೆ. ಆಧಾರವಿದೆಯೋ ಇಲ್ಲವೊ ತಿಳಿದಿಲ್ಲ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಗಾದೆಗಳು ಇರಬಹುದಾದರೂ ನನಗೆ ನೆನಪಾಗುತ್ತಿರುವುದು ಇದೊಂದೇ. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ” – ಈಚೆಗೆ ನಡೆದ ರಾಜಕೀಯ ಹಸ್ತಾಂತರ ಪ್ರಹಸನದಲ್ಲಿ ಈ ಗಾದೆ ಅಲ್ಲಲ್ಲಿ ಕೇಳಿಬಂದಿತ್ತು.

’ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು’ – ಈ ಗಾದೆ ಮಹಾಭಾರತಕ್ಕೆ ನೇರ ಸಂಬಂಧವಿಲ್ಲದಿದ್ದರೂ ದುರ್ಯೋದನ ಮುಗ್ಗರಿಸಿ ಬಿದ್ದಾಗ ದ್ರೌಪದಿ ಅವನನ್ನು ನೋಡಿ ನಕ್ಕು, ಅವಮಾನಿಸಿದ ಪ್ರಸಂಗವನ್ನು ಇದು ನೆನಪಿಗೆ ತರುವುದಲ್ಲವೇ?

ಈ ರೀತಿಯ ಗಾದೆಗಳು ನಿಮಗೆ ತಿಳಿದಿದ್ದರೆ ಇಲ್ಲಿ ಹಂಚಿಕೊಳ್ಳುವಿರಾ?

ಪ್ರೇಮದ ಹೂಗಾರ

ಚಿತ್ರ – ಚಿಕ್ಕೆಜಮಾನ್ರು -೧೯೯೨
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಂಸಲೇಖ
ಚಿತ್ರಕೃಪೆ : ಮೀರಾ ಕೃಷ್ಣ

 ಹಾಡು ಕೇಳಿ –

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತಾನೆ ಕಹಿ ಕೇಳುತಾನೆ

ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ ಈ ಭಾವಜೀವ ||ಪ||

ಗಂಧದ ಕೊರಡಾಗಿ ಸ್ವಂತಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು

ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತಾನೆ ಕೊಡ ನೀಡುತಾನೆ
ಮಮತೆಯ ಕಲೆಗಾರ ಈ ಹಾಡುಗಾರ
ಮನೆ ಮಾಡುತಾನೆ ಹೊರ ಹೋಗುತಾನೆ

ಗೋವಿನ ಹಾಲಂತ ಮನಸಿರುವ
ಕೂಸಿನ ಜೇನಂತ ಮಾತಿರುವ ಈ ಭಾವಜೀವ||೧||

ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದ್ದೆಯಿಲ್ಲ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ

ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತಾನೆ ಕಡೆಯಾಗುತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೋರಾಡುತಾನೆ ಒಂಟಿಯಾಗುತಾನೆ ||೨||

ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ ಈ ಭಾವಜೀವ ||ಪ||

***