ಬೆಂಕಿಬಿದ್ದ ಕಾವೇರಿಯ ನೆನಪಲ್ಲಿ

ಪ್ರತಿಬಾರಿ ಭಾರತ ಪ್ರವಾಸಕ್ಕೆ ಮುನ್ನ ನಾನೊಂದು To do ಪಟ್ಟಿ ತಯಾರಿಸುತ್ತೇನೆ – ಬಹುಶಃ ಬಹುಪಾಲು ಅನಿವಾಸಿಗಳು ಮಾಡುವ ಹಾಗೇ. ಅಲ್ಲಿಂದ ಈ ಬಾರಿ ತರಬೇಕಾದ್ದೇನು? ಈ ಬಾರಿ ಯಾರನ್ನು ತಪ್ಪದೆ ಭೇಟಿ ಮಾಡಬೇಕು? ಯಾವೆಲ್ಲಾ ಊರುಗಳನ್ನು ಸುತ್ತಬೇಕು? ಆಪತ್ತು ಎದುರಾದಾಗ ಮುಳುಗದಂತೆ ಕೈಹಿಡಿದು ಮೇಲೆತ್ತಿದ ಯಾವೆಲ್ಲಾ ದೈವ ಸನ್ನಿಧಿಗಳಿಗೆ ಮುಡಿಪು ಒಪ್ಪಿಸಬೇಕು? ವಿದ್ಯಾರ್ಥಿ ಭವನದ ದೋಸೆ, ಎಂ.ಟಿ.ಆರ್‌ನಲ್ಲಿ ಊಟದಿಂದ ಹಿಡಿದು, ನಮ್ಮ ಅತ್ಯಂತ ಆತ್ಮೀಯ ಗೆಳೆಯರೊಬ್ಬರು ತಾವೇ ಕೈಯಾರೆ ತಯಾರಿಸಿ ಬಡಿಸುವ ನಾಟಿ ಹುರುಳಿಕಾಯಿ ಹುಳಿಯನ್ನದವರೆಗೆ … ಒಟ್ಟಾರೆ, ಆ ಹೊತ್ತಿನ ರುಚಿ-ಅಭಿರುಚಿ, ನಮ್ಮ ಇಷ್ಟಾನಿಷ್ಟ, ಮನಸ್ಥಿತಿಗೆ ತಕ್ಕಂತೆ ಈ ಪಟ್ಟಿಯ ಉದ್ದ ನಿರ್ಧಾರವಾಗುತ್ತದೆ.

ನಾವು ಕಳೆದ ಬಾರಿ ಭಾರತಕ್ಕೆ ಹೋದಾಗ ಅಲ್ಲಿಂದ ತರಬೇಕಾದ ವಸ್ತುಗಳ ಪ್ರಮಾಣದ ಪಟ್ಟಿ, ಅದರ ಹಿಂದಿನ ಬಾರಿಗಿಂತ, ಸ್ವಲ್ಪ ಕಡಿಮೆಯೇ ಇತ್ತೆನ್ನಬಹುದು. ‘ಎಲ್ಲಾ ಇಲ್ಲೇ ಸಿಗತ್ತೆ ಬಿಡು, ಅಲ್ಲಿಂದ ಹೊತ್ತುಕೊಂಡು ಬರೋದ್ಯಾಕೆ?’ ಎನ್ನುವ ವೈರಾಗ್ಯದ ಘಟ್ಟಕ್ಕೆ ಮನಸ್ಸು ಬಂದು ತಲುಪಿರಬೇಕು. ಅಲ್ಲಿಂದ ಹುಳಿಪುಡಿ, ಸಾಂಬಾರುಪುಡಿ, ಚಟ್ನಿಪುಡಿಗಳನ್ನು ತರುತ್ತೇವಾದರೂ ಮೊದಲಿನ ಅಬ್ಬರ, ಹಾರಾಟವಿಲ್ಲ. ಇಲ್ಲೂ ಇಂಡಿಯಾ ಮಿಕ್ಸಿನೇ ಇದೆ. ಬೇಕೆಂದಾಗ ಪುಡಿ ಮಾಡಿಕೊಳ್ಳುವುದೇನು ಕಷ್ಟ, ಈಗಂತೂ ಬ್ಯಾಡಗಿ ಮೆಣಸಿನ ಕಾಯಿ ಕೂಡ ಇಲ್ಲೇ ಸಿಗುತ್ತದೆಯಲ್ಲಾ, ಇನ್ನೇನು’ ಎನ್ನುವ ಸಮಾಧಾನ ಬೇರೆ. ಅಲ್ಲಿ ಹೋದಮೇಲೆ, ಬೆಲೆಯನ್ನು ಅಲ್ಲಿಗೂ-ಇಲ್ಲಿಗೂ ಹೋಲಿಸಿ ನೋಡಿದಾಗ ಇಲ್ಲೇ ಅಲ್ಲಿಗಿಂತ ಚೆನ್ನಾಗಿಯೂ ಇರುವ ಪದಾರ್ಥ, ಅದೇ ಬೆಲೆಗೆ ಅಥವಾ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದಲ್ಲಾ ಅನಿಸತೊಡಗಿದಾಗ ಅಲ್ಲಿಂದ ಹೊತ್ತು ತರಬೇಕಿದ್ದ ವಸ್ತುಗಳು ಹೊರೆಯೆನಿಸಿದ್ದು ಸಹಜವೇ.

ಆದರೂ ಕೆಲವು ಪದಾರ್ಥಗಳ ವಿಷಯದಲ್ಲಿ ಮಾತ್ರ ರಾಜಿಯಿಲ್ಲ. ಕಾಫಿ ಡೇಯಿಂದ ಕಂಪು ಸೂಸುವ ಕಾಫಿಪುಡಿ, ಕುರುಕಲು, ಸಿಹಿ ತಿಂಡಿಗಳು, ಹುಣುಸೆ ತೊಕ್ಕು, ಮಿಡಿ ಉಪ್ಪಿನಕಾಯಿ ಇವುಗಳೆಲ್ಲರ ಜೊತೆಗೆ, ತಪ್ಪದೆ ಇಲ್ಲಿಗೆ ತರುತ್ತಿದ್ದ ಮತ್ತೊಂದೆರೆ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ‍ನ ಪುಟ್ಟ ಪುಟ್ಟ ಶ್ರೀಗಂಧದ, ಲೋಹ ಮತ್ತಿತರ ಕಲಾಕೃತಿಗಳು. ‘ಅಯ್ಯೋ ಇಷ್ಟು ಸಣ್ಣದಕ್ಕೆ ಇಷ್ಟೊಂದು ಬೆಲೆನಾ?’ ಎಂದು ಮೂಗೆಳೆದರೂ, ಇಲ್ಲಿನವರಿಗೆ ಉಡುಗೊರೆಯಾಗಿ ತಂದು ಕೊಡಲು ಅದಕ್ಕಿಂತ ಸೂಕ್ತವಾದದ್ದು ನಮಗೆ ಮತ್ತೇನೂ ಸಿಕ್ಕಿದ್ದಿಲ್ಲ.

ಪುಟ್ಟದೊಂದು ಫಲಕದಲ್ಲಿ ಒಂದೆಡೆ ಚಂದನದಲ್ಲಿ ಕೊರೆದಿರಿಸಿದ ಮುದ್ದು ಗಣೇಶನಿದ್ದರೆ ಇನ್ನೊಂದೆಡೆ ಗಡಿಯಾರ, ಕೊಳಲು ಕೃಷ್ಣನ ಮೂರ್ತಿಯ ಜೊತೆಗೆ ಕ್ಯಾಲೆಂಡರ್ ಅಥವಾ ಮತ್ತೇನೋ ಇಟ್ಟುಕೊಳ್ಳಲೊಂದು ಅಡಕ, ವೀಣೆಯ ಆಕಾರದಲ್ಲಿರುವ ಕೀಚೈನ್, ಹಣತೆಯನ್ನು ಕೈಯಲ್ಲಿ ಹಿಡಿದು ನಿಂತಿರುವ ದೀಪದ ಮಲ್ಲಿಯರು, ಸೊಂಡಿಲು ಮೇಲೆತ್ತಿ ನಿಂತ ಆನೆ, ಗರಿಗೆದರಿದ ನವಿಲುಗಳು ….ಮುಂತಾದವು ನಾವು ಯಾರ ಕೈಗೆ ಉಡುಗೊರೆಯಾಗಿ ಸೇರಲಿದ್ದೇವೋ ಎಂದು ಕುತೂಹಲದಿಂದ ಕಾಯುತ್ತಾ ನಮ್ಮೊಡನೆ ವಿಮಾನವೇರುತ್ತಿದ್ದವು. ಮಕ್ಕಳೂ ಕೂಡ ಅವರವರ ಸಹಪಾಠಿಗಳಿಗೆ ಕೊಡಲೆಂದೇ ಕೆಲವು ಸಣ್ಣಪುಟ್ಟ ಕಲಾಕೃತಿಗಳನ್ನು ಕೊಳ್ಳುತ್ತಿದ್ದರು. ಕಾವೇರಿಯಿಂದ ತಂದ ಈ ವಸ್ತುಗಳನ್ನು ಕೈಯಲ್ಲಿ ಹಿಡಿದೊಡನೆಯೇ, ಮೈಮನಸ್ಸಿಗೆಲ್ಲಾ ಮುತ್ತಿಕೊಳ್ಳುವ ಸವಿನೆನಪಿನ ಶ್ರೀಗಂಧಕ್ಕೆ ‘ಬೆಲೆ ಎಷ್ಟು?’ ಎಂದು ಕೇಳುವ ಹುಚ್ಚರಾರು?

ಹೀಗೆ ತಂದ ವಸ್ತುಗಳನ್ನು ಇಲ್ಲಿಯ ಅಮೆರಿಕನ್ ಮಿತ್ರರಿಗಲ್ಲದೆ, ಕನ್ನಡಿಗರಲ್ಲದ ಇತರ ರಾಜ್ಯದ ಭಾರತೀಯ ಮಿತ್ರರಿಗೆ ಉಡುಗೊರೆಯಾಗಿ ಕೊಡುತ್ತೇವೆ. ಪ್ರೀತಿಯ ಕಾಣಿಕೆ ಕೊಡುವ ನೆಪದಲ್ಲಿ, ನಮ್ಮೂರೆಂದರೆ ಇದು, ನಮ್ಮ ರುಚಿಗಳು ಹೀಗಿರುತ್ತವೆ, ನಮ್ಮವರೆಂದರೆ ಹೀಗೇ, ನಮ್ಮನ್ನು ಪೊರೆಯುತ್ತಿರುವ ದೇವರುಗಳು ಇವರೇ, ನೋಡಿ, ಎಂದು ಅವರಿಗೂ ಪರಿಚಯಿಸುವ ಒಂದು ನಿರಪಾಯಕರವಾದ ಸಣ್ಣ ಸ್ವಾರ್ಥವೂ ಜೊತೆಯಲ್ಲಿರುತ್ತದೆಯೇನೊ. ಹೀಗೆ ಕೊಡುವಾಗ ನಮ್ಮ ಹೆಮ್ಮೆ ನೋಡಬೇಕು. ‘ಇದು ನೋಡಿ ಶ್ರೀಗಂಧದಿಂದ ಮಾಡಿದ್ದು, ಎಷ್ಟು ಸುವಾಸನೆ ಇದೆ ಅಲ್ಲವಾ? ಈ ಶ್ರೀಗಂಧ ಇದೆಯಲ್ಲಾ, ನಮ್ಮ ಕರ್ನಾಟಕದಲ್ಲೇ ಹೆಚ್ಚಾಗಿ ಬೆಳೆಯುವುದು. ಅದಕ್ಕೆ ನಮ್ಮ ರಾಜ್ಯಕ್ಕೆ ‘ಗಂಧದ ಬೀಡು’ ಎಂಬ ನಿಕ್‍ನೇಮೇ ಇದೆ…’ ಹೀಗೆ ನಾವು ಎದೆಯುಬ್ಬಿಸಿ ನಮ್ಮ ನಾಡಿನಲ್ಲಿ ಬೆಳೆಯುವ ಗಂಧವನ್ನು ಕೊಂಡಾಡುವಾಗ, ಕೇಳಿದವರು – ನಾವೇ ಗಂಧದ ಸಸಿಗಳನ್ನು ಕೈಯಾರೆ ನೆಟ್ಟು, ಹೆಮ್ಮರವಾಗಿ ಬೆಳೆಸಿಟ್ಟು ಇಲ್ಲಿಗೆ ಬಂದಿದ್ದೇವೇನೋ ಅಂದುಕೊಳ್ಳಬೇಕು ಹಾಗೆ!

ಮೊನ್ನೆಯ (ಏಪ್ರಿಲ್.೧.೦೯) ಪ್ರಜಾವಾಣಿಯಲ್ಲಿ ’ಕಾವೇರಿ ಎಂಪೋರಿಯಂನಲ್ಲಿ ಅಗ್ನಿದುರಂತ’ ಎಂಬ ಸುದ್ದಿ ಓದಿದಾಗ ಯಾಕೋ ಇದೆಲ್ಲವೂ ನೆನಪಾಯಿತು. ಅಗ್ನಿ ದುರಂತ ಆಕಸ್ಮಿಕವಾಗಿದ್ದರೆ ಯಾರೇನೂ ಮಾಡುವಂತಿಲ್ಲ. ಆದರೆ, ಲೆಕ್ಕ ಪರಿಶೋಧನಾ ಕಾರ್ಯ ನಡೆಯುತ್ತಿರುವುದರಿಂದ, ಇದರಲ್ಲಿ ಸಿಬ್ಬಂದಿ ಕೈವಾಡವೂ ಇರಬಹುದೆಂದು ಶಂಕಿಸಲಾಗಿದೆ ಎಂದು ಸುದ್ದಿ ಹೇಳುತ್ತಿದೆ . ‘ಕದ್ದವನು ಕಳ್ಳನಲ್ಲ, ಸಿಕ್ಕಿಬಿದ್ದವನು ಮಾತ್ರ ಕಳ್ಳ’ ಎಂದು ನಂಬಿರುವ ವ್ಯವಸ್ಥೆಯಲ್ಲಿ ಈ ಶಂಕೆ ನಿಜವೋ? ಸುಳ್ಳೋ? ಎಂದು ನಿರ್ಧರಿಸುವರಾರು? ಕಾಡಲ್ಲಿದ್ದ ದಂತಚೋರ ವೀರಪ್ಪನ್ ಸತ್ತು ಸ್ವರ್ಗವನ್ನೋ, ನರಕವನ್ನೋ ಸೇರಿದ, ಊರೊಳಗೇ ಇರುವ ಗಂಧಚೋರರನ್ನು ಪತ್ತೆ ಮಾಡುವರಾರು? ‘ಬೇಲಿ ಹೊಲವ ಮೇದೊಡೆ, ಏರಿ ನೀರುಂಬೊಡೆ, ತಾಯಿ ಮೊಲೆಹಾಲು ನಂಜಾಗಿ ಕೊಲುವೆಡೆ’ ….ಇನ್ನಾರಿಗೆ ದೂರೋಣ?