ರಚನೆ : ಪುರಂದರದಾಸರು
ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ
ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ
ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ |
ಮಥುರಾ ಪಟ್ಟಣವಂತೆ, ಮಾವ ಕಂಸನಂತೆ
ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ
ಉದಯದಿ ಪಯಣವಂತೆ, ಹೇ ಕಾಂತೆ |
ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ,
ಎಲ್ಲಾ ಕಪಟವಂತೆ, ಎಲ್ಲೂ ಹೀಗಿಲ್ಲವಂತೆ
ನಿಲ್ಲದೆ ಯಶೋದೆಯ ಕಣ್ಣಲ್ಲುದಕವಂತೆ |
ಮಲ್ಲರ ಕೂಟವಂತೆ, ಮತ್ತೆ ಕಾಳಗವಂತೆ,
ಬಲ್ಲಿದ ಗಜಗಳಂತೆ, ಬಿಲ್ಲ ಹಬ್ಬಗಳಂತೆ, ಬೀದಿ ಶೃಂಗಾರವಂತೆ
ಅಲ್ಲಿ ತಾಯ್ತಂದೆಯರ ಕಾಲಿಗೆ ನಿಗಡವಂತೆ |
ಮತ್ತೆ ಪಾಂಡವರಂತೆ, ಮೋಹದ ಸೋದರ ಅತ್ತೆಯ ಮಕ್ಕಳಂತೆ
ಸುತ್ತ ಶತೃಗಳಂತೆ, ಸಕಲ ಕಾರ್ಯಗಳಂತೆ
ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ!
ತಾಳಲಾರೆವು ನಾವು, ಪುರಂದರವಿಠಲನು ಬಾಲತ್ವದಲಿ ಪೋದರೆ
ಕಾಲ ಒದಗಿತಮ್ಮ ಕಾಮಿನೀಜನರೆಲ್ಲ
ಆಲೋಚನೆಯ ಮಾಡಿ ಆಣೆಯಿಡುವ ಬನ್ನಿ||