ವಸಂತ ಸಾಹಿತ್ಯೋತ್ಸವದ ಸುಖದ ಕ್ಷಣಗಳು


(ಲೇಖಕಿಯರಾದ ವೀಣಾ, ವೈದೇಹಿಯವರೊಂದಿಗೆ ಅಮೆರಿಕನ್ನಡಿಗ ಬರಹಗಾರರು)

“ನಾನು ಭಾವಜೀವಿ. ಎಂತಹ ಬರಡು ನೆಲದಲ್ಲೂ ಪ್ರೀತಿಯ ಪಸೆಗಾಗಿ ಕೆದರುವ ಆಶಾಜೀವಿ. ಸಹಜವಾಗಿಯೇ ನನ್ನಲ್ಲಿ ತವರಿನ ನೆನಪುಗಳು ತುಳುಕಾಡುವುದು ಹೆಚ್ಚು! ಈಗಲೂ ಹಾಗೆಯೇ ಹೇಳಬೇಕೆಂದರೆ- ಬಹುದಿನಗಳ ನಂತರ ತವರಿಗೆ ಹೋದ ಹೆಣ್ಣುಮಗಳೊಬ್ಬಳು, ಅಣ್ಣ-ತಮ್ಮಂದಿರು ನೀಡಿದ ಉಡುಗೊರೆಗಳ ಭಾರಕ್ಕೆ ಹಿಗ್ಗಿಹೋಗುವಂತೆ ನಾನು ಕೂಡ ವಸಂತೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ, ಅಲ್ಲಿಯ ನಗು, ಹರಟೆ, ಕೀಟಲೆ, ತುಂಟಾಟದ ಮಧುರ ನೆನಪುಗಳಿಂದ ಭಾರವಾದ ಮನಸ್ಸು , ಗರಿಯಷ್ಟೇ ಹಗುರವಾದ ಹೃದಯ ಹೊತ್ತು ಮತ್ತೆ ನನ್ನೂರಿಗೆ, ನನ್ನವರಲ್ಲಿಗೆ ಹಿಂತಿರುಗಿದೆ …”


( ವೀಣಾ ಅವರಿಂದ ಪುಸ್ತಕ ಪಡೆಯುತ್ತಿರುವ ತ್ರಿವೇಣಿ)

-ಇದು ಕನ್ನಡ ಸಾಹಿತ್ಯ ರಂಗ ಫಿಲಡೆಲ್ಫಿಯಾದಲ್ಲಿ ಏರ್ಪಡಿಸಿದ ಮೊದಲನೆಯ ಸಮ್ಮೇಳನ ಮುಗಿಸಿಕೊಂಡುಬಂದ ನಂತರ ನಾನು ಬರೆದಿದ್ದ ಸಾಲುಗಳು. ಈ ಬಾರಿ ಸಾಹಿತ್ಯರಂಗದ ನಾಲ್ಕನೆಯ ಸಮ್ಮೇಳನ ಮುಗಿಸಿಕೊಂಡು ಬಂದಾಗಲೂ ಅದೇ ಅನುಭವವೇ ಮರುಕಳಿಸಿತು. ಆದರೆ ಆಗಿಗೂ ಈಗಿಗೂ ಒಂದೇ ವ್ಯತ್ಯಾಸವೆಂದರೆ ಆ ಸಮ್ಮೇಳನಕ್ಕೆ ನಾನೊಬ್ಬಳೇ ಹೋಗಿದ್ದೆ, ಈ ಬಾರಿ ಸಂಸಾರಸಮೇತ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೆ. ಮೇ ೩೦, ೩೧ರ ವಾರಾಂತ್ಯದಲ್ಲಿ, ಮೇರಿಲ್ಯಾಂಡಿನ ರಾಕ್‍ವಿಲ್‌ನಲ್ಲಿ ನಡೆದ ವಸಂತೋತ್ಸವ ನನ್ನ ನೆನಪಿನ ಸಂಚಿಗೆ ಮತ್ತಷ್ಟು ಮರೆಯದ ಮಧುರ ಕ್ಷಣಗಳನ್ನು ದಯಪಾಲಿಸಿತು.


(ವೈದೇಹಿ, ವೀಣಾ ಶಾಂತೇಶ್ವರ ಅವರೊಂದಿಗೆ ಎಚ್. ವೈ. ರಾಜಗೋಪಾಲ್)

ನಾನು ಸ್ತ್ರೀವಾದ ಎಂದರೆ ಏನೆಂದು ಅರಿಯದಿದ್ದ ವಯಸ್ಸಿನಲ್ಲಿದ್ದಾಗಲೇ ಸ್ತ್ರೀಶೋಷಣೆಯ ವಿರುದ್ಧ ತಮ್ಮ ಕಥೆಗಳ ಮೂಲಕ ಬಂಡಾಯದ ಬಾವುಟ ಹಾರಿಸಿದ್ದ ದಿಟ್ಟ ಲೇಖಕಿ ವೀಣಾ ಶಾಂತೇಶ್ವರ ಅವರಿಂದ ನಮ್ಮೆಲ್ಲರ ವಿಮರ್ಶಾ ಲೇಖನಗಳನ್ನು ಹೊತ್ತ “ಕನ್ನಡ ಕಾದಂಬರಿ ಲೋಕದಲ್ಲಿ….ಹೀಗೆ ಹಲವು” ಪುಸ್ತಕ ಬಿಡುಗಡೆ, ಅಮ್ಮನ, ಅಕ್ಕನ ಮಮತೆಯನ್ನು ನೆನಪಿಸುವ ಮೆಚ್ಚಿನ ಲೇಖಕಿ ವೈದೇಹಿಯವರು ತಮ್ಮ ಆಪ್ತದನಿಯಲ್ಲಿ ಓದಿದ ಕಥೆ, ಕವಿತೆಗಳ ಮೆಲುಕು, ನಡುನಡುವೆ ಊಟ-ಉಪಾಹಾರ-ಚಿಕ್ಕಮಗಳೂರಿನ ಚಿಕ್ಕ ಕಾಫಿ ವಿರಾಮದಲ್ಲಿ ಜ್ಯೋತಿ, ಮೀರಾ, ಶಶಿ, ಸಹನಾ, ಶೋಭಾ, ನಳಿನಿ, ಮಾಯಾ, ಸವಿತ, ಕಮಲಾ, ವಿಮಲಾ …ಮತ್ತಿತರ ಗೆಳತಿಯೊಡನೆ ಆಡಿದಷ್ಟೂ ಮುಗಿಯದ ಮಾತು, ನಕ್ಕಷ್ಟೂ ನಿಲ್ಲದೆ ವಿಸ್ತಾರವಾಗುತ್ತಲೇ ಹೋಗುವ ನಗುವಿನಲೆಗಳು, ಚಿಕ್ಕಂದಿನಲ್ಲಿ, ಯಾವುದೋ ಜಾತ್ರೆಯಲ್ಲಿ ಕಳೆದುಹೋಗಿದ್ದ ಪುಟ್ಟತಂಗಿಯೊಬ್ಬಳು ಮತ್ತೆಲ್ಲೋ “ಅಕ್ಕಾ….” ಎಂದು ಓಡಿಬಂದು ಕುತ್ತಿಗೆ ಕಟ್ಟಿಕೊಂಡಷ್ಟೇ ಅಕ್ಕರೆ ಮೂಡಿಸಿಬಿಟ್ಟ ಶಾಂತಲಾ, ಅಭಿನಯದ ಉತ್ತುಂಗಕ್ಕೇರಿ, ಮೈಜುಮ್ಮೆನ್ನಿಸಿದ ‘ರಾಧೇಯ’ ನಾಟಕದ ಅದ್ಭುತ ಪಾತ್ರಧಾರಿಗಳು! ಬುದ್ಧಿ ಮೂಡುವ ಮೊದಲೇ ನಮ್ಮ ಭಾವಕೋಶದಾಳದಲ್ಲಿ ಅಚ್ಚಾಗಿಹೋಗಿರುವ ಭಕ್ತಪ್ರಹ್ಲಾದ, ಅಸುರನ ಕರುಳು ಬಗೆದು ಮಾಲೆ ಮಾಡಿಕೊಂಡ ಉಗ್ರ ನರಸಿಂಹನ ಕಲ್ಪನೆಯನ್ನೇ ಅಲುಗಾಡಿಸುವಂತಿದ್ದ “ಅನಕೃ” ವಿರಚಿತ “ಹಿರಣ್ಯಕಶಿಪು” ನಾಟಕ, ಶ್ರೀವತ್ಸ ಜೋಶಿ-ಶಿವು ಭಟ್ ಭಲೇಜೋಡಿ ನಡೆಸಿಕೊಟ್ಟ ಕಂಪ್ಯೂಟರಿನಲ್ಲಿ ಕನ್ನಡ ಮೂಡಿಸುವ ಕಾರ್ಯಾಗಾರ, ಹಾಡು, ಹರಟೆ, ಸಂವಾದ…. ಇನ್ನೂ ಏನೇನೋ!


(`ರಾಧೇಯ’ನಾಗಿ ರವಿ ಹರಪನಹಳ್ಳಿ)

ಬೆನ್ನಿಗೆ ಬಿದ್ದ ಅಣ್ಣ-ತಮ್ಮಂದಿರಷ್ಟೇ ಸಲುಗೆಯ ಅಮೆರಿಕನ್ನಡಿಗ ಲೇಖಕರಾದ ದತ್ತಾತ್ರಿ, ಜೋಶಿ, ಗುರು, ಮಧು, ಶ್ರೀನಾಥ್, ವಲ್ಲೀಶ್ ಇವರೆಲ್ಲರೊಡನೆ ಇನ್ನೂ… ಇನ್ನೂ… ಮಾತಾಡುವುದಿದೆ ಎನ್ನಿಸುವ ಚಡಪಡಿಕೆ, ನಮ್ಮೆಲ್ಲಾ ಅಸೆ-ನಿರಾಸೆ, ಅತುರ, ಅಸಮಾಧಾನಗಳನ್ನು ನಿರ್ಲಕ್ಷಿಸಿ ಓಡೋಡಿ ಬಂದೇಬಿಡುವ ವಿದಾಯದ ಕ್ಷಣಗಳು, ಜೊತೆಗೆ ರಾಜಧಾನಿಯ ಪ್ರೇಕ್ಷಣೀಯ ತಾಣಗಳಲ್ಲಿ ಬಿಡುವಿರದೆ ತಿರುಗಾಡಿದ ಆಯಾಸ … ಇದೆಲ್ಲವೂ…

ನಾನಂತೂ ಎರಡು ದಿನ ನಡೆದ ಸಾಹಿತ್ಯ ಸಮಾರಂಭದ ಪ್ರತಿಕ್ಷಣವನ್ನೂ ಮನಸಾರೆ ಆನಂದಿಸಿದೆ, ಅನುಭವಿಸಿದೆ!

ಸಮ್ಮೇಳನದ ರಸನಿಮಿಷಗಳ ಮತ್ತಷ್ಟು ಚಿತ್ರಗಳು ಇಲ್ಲಿದೆ ಮತ್ತು ಇಲ್ಲಿದೆ.