ದಾರಿ

 photo:sritri

ಈ ತುದಿಯಲ್ಲಿ
ಕಾಯುತ್ತಿದ್ದೇವೆ ನಾವಿನ್ನೂ
ನಮ್ಮ ಸರದಿಗಾಗಿ
ಕಣ್ಣುಗಳಲ್ಲಿ ಅಳಿದುಳಿದ
ಆಸೆಯ ಕುರುಹು
ನೋಟ ಹರಿಯುವ ಉದ್ದಕ್ಕೂ
ಮೈಚಾಚಿ ಮಲಗಿದೆ ದಾರಿ
ಯಾರೂ ಅರಿಯದ
ಗುಟ್ಟು ತನ್ನಲ್ಲೇ ಬಚ್ಚಿಟ್ಟು
ನಿರ್ಲಿಪ್ತ ಮೌನದಲಿ.

ಯಾರೋ ಇಳಿಯುತ್ತಾರೆ
ಮತ್ತಾರೋ ಏರುತ್ತಾರೆ
ಅತ್ತಿತ್ತ ಹರಿಯುವ ಬಂಡಿಗೆ
ಪಯಣಿಗರ ಸುಖ-ದುಃಖಗಳರಿವಿಲ್ಲ
ಅದರದು ನಿಲ್ಲದ ನಿತ್ಯ ಪಯಣ.
ಅಹಂ ಅಳಿದ ಮರುಕ್ಷಣ
ದೂರವೇನಿಲ್ಲ ಮಿಲನ.

ದಾರಿ ನಡೆಸುವುದಿಲ್ಲ
ನಾವೇ ನಡೆಯಬೇಕು
ದೊರಕಬಹುದಷ್ಟೇ ಅಲ್ಲಲ್ಲಿ
ನೆಟ್ಟ ಕೈಮರದ ಸುಳಿವು
ಸ್ಪಷ್ಟವಾಗದ ಹೊರತು
ನಮಗೆ ನಾವೇ
ಕಂಡುಕೊಳ್ಳುವುದೆಂತು
ಇರವೇ ಅರಿವಿಲ್ಲದ
ಅಲೆವಾತ್ಮದ ಗುರುತು

ಎದ್ದೆದ್ದು ಬರುವ ಪ್ರಶ್ನೆಗಳಿಗೆಲ್ಲ
ಇನ್ನೆಲ್ಲಿದ್ದೀತು ಉತ್ತರ?
ಆ ಹೊತ್ತು ಹತ್ತಿರಾಗುವ ತನಕ
ಪಯಣಿಗರ ಯಾದಿಯಲಿ
ನಾನಿಲ್ಲ, ನೀನೂ ಇಲ್ಲ.

ಗಣೇಶ ಬಂದ!

ಗಣೇಶ ಬಂದ! ಕಾಯಿ ಕಡುಬು ತಿಂದ!

ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ

“ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!”

ಅನುಪಮಾ-ನಿತಿನ್ ಮಂಗಳವೇಧೆ

ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ

ಆಶಾ-ಗುರುದತ್

ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ

ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?

ಅಂದೇ ಹೊಲದಿಂದ ಬಿಡಿಸಿತಂದ ಮುಸುಕಿನ ಜೋಳದ ತೆನೆಗಳು ಗ್ರಿಲ್ಲಿನಲ್ಲಿ ಸಿಜ಼ಿಗುಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆವು. ಗೆಳತಿಯೊಬ್ಬಳು “ಅಯ್ಯೋ.. ಆಗಸ್ಟ್ ಕೂಡ ಮುಗಿಯುತ್ತಾ ಬಂತಲ್ಲಾ….” ಎಂದಳು ಆರ್ತ ದನಿಯಲ್ಲಿ. ‘ಅದಕ್ಕೇನೀಗ?’ ಎನ್ನುವಂತೆ ಅವಳತ್ತ ಎಲ್ಲರ ನೋಟ ಹರಿಯಿತು. ಅವಳು ಹೇಳದೆಯೇ ಆ ಕಣ್ಣುಗಳ ಭಾವ ನಮ್ಮೆಲ್ಲರನ್ನೂ ತಲುಪಿತು. ಆಗಸ್ಟ್ ಮುಗಿದರೆ…. ಸೆಪ್ಟೆಂಬರ್ ಕೂಡ ಪರವಾಗಿಲ್ಲ. ನಂತರ ಬರುವ ಚಳಿದಿನಗಳನ್ನು ನೆನೆದು ಈ ಆತ್ಮ ಮರುಕವೆಂದು ಎಲ್ಲರಿಗೂ ಅರ್ಥವಾಗಿತ್ತು. ‘ಯಾಕಳ್ತೀಯೋ ಬ್ರಾಹ್ಮಣ? ಅಂದರೆ, ಮುಂದೆ ಬರುವ ಏಕಾದಶಿಗೆ ಅಂದನಂತೆ’ ಎನ್ನುವ ಅಮ್ಮನ ಗಾದೆ ನೆನಪಾಗಿ, ನನಗರಿವಿಲ್ಲದೇ ನಗು ಬಂದಿತು. ಈಗ ಏಕಾದಶಿಯಾಗಲೀ, ನಿರಾಹಾರವಾಗಲೀ ಕಡ್ದಾಯವಲ್ಲದ ಕಾರಣ ಆ ಗಾದೆಯೂ ಅರ್ಥ ಕಳಕೊಂಡಿದೆ, ಇರಲಿ.

ವರ್ಷದ ಅರ್ಧಕ್ಕಿಂತ ಹೆಚ್ಚು ದಿನಗಳನ್ನು ತಿಂದುಹಾಕುವ ನಮ್ಮೂರಿನ ಚಳಿಗಾಲ ಅಂದರೆ ಸುಮ್ಮನೆ ಅಲ್ಲ. ಇಲ್ಲಿಗೆ ಬಂದ ಹೊಸದರಲ್ಲಿ ಮಂಜು ಸುರಿದಾಗೆಲ್ಲಾ ‘ಓಹೋ ಹಿಮಾಲಯ! ಓಹೋ ಹಿಮಾಲಯ!’ ಎಂದು ಹಾಡಿ ನಲಿಯುತ್ತಿದ್ದ ಮನಸ್ಸು ಇದೀಗ ತಹಬಂದಿಗೆ ಬಂದಿದೆ. ಈಗಲೂ ಮೊದಲ ಹಿಮ ಸುರಿವ ದಿನದ ಖುಷಿಗೆ ಕುಂದಿಲ್ಲವಾದರೂ, ಹೂವಿನಂತಹ ಹಿಮ ಗಟ್ಟಿಯಾಗಿ, ಗುಡ್ಡೆಹಾಕಿದೆಡೆಯೇ ಕಪ್ಪಾಗಿ, ತಿಂಗಳುಗಟ್ಟಲೆ ಕರಗದೇ ಉಳಿದಾಗ, ಆ ಮಂಜು ನಮ್ಮೆದೆಯ ಮೇಲೆಯೇ ದುಗುಡದ ಬೆಟ್ಟವಾಗಿ ಬೆಳೆಯುತ್ತಿದೆಯೇನೋ ಎಂಬ ಹತಾಶೆ ಆವರಿಸುವುದೂ ಇದೆ.

ತಂಬುಳಿಗೊಪ್ಪುವ ದೊಡ್ಡಪತ್ರೆ

ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ? ಸೂರ್ಯಕಿರಣಕ್ಕೆ ಮೈಯೊಡ್ಡಿ, ಮುಗುಳ್ನಗುತ್ತಿರುವಂತೆ ತೋರುತ್ತಿರುವ ನನ್ನ ಕೈತೋಟದ ಗಿಡಗಳಿಗೆ ಇನ್ನೆಷ್ಟು ದಿನದ ಆಯಸ್ಸು ಬಾಕಿ ಉಳಿದಿದೆ? ತಮ್ಮಷ್ಟಕ್ಕೆ ಆರೋಗ್ಯದಿಂದ ನಳನಳಿಸುವ ಈ ಗಿಡಗಳು ಯಾವುದೋ ಹೇಳಹೆಸರಿಲ್ಲದ ಕಾಯಿಲೆ ಬಂದವರಂತೆ ನಿಸ್ತೇಜವಾಗುತ್ತಾ ಹೋಗಿ, ಕೊನೆಗೊಮ್ಮೆ ಸೂರ್ಯನಿಲ್ಲದೆ ನಾವೂ ಬದುಕಲಾರೆವು ಎನ್ನುತ್ತಾ ಸರಣಿ ಆತ್ಮಹತ್ಯೆ ಮಾಡಿಕೊಳ್ಳಲು ಇನ್ನೆಷ್ಟು ವಾರಗಳು ಉಳಿದಿವೆ? ಚಳಿ ಬರುವ ಮೊದಲು ಹುಲುಸಾಗಿ ಬೆಳೆದಿರುವ ದಂಟಿನ ಸೊಪ್ಪು ಬಿಡಿಸಿಕೊಂಡುಬಿಡಬೇಕು. ರಾಗಿ ಮುದ್ದೆ, ಸೊಪ್ಪಿನ ಹುಳಿಗೆ ಸಾಕು. ಹೀಗಂದುಕೊಂಡರೆ, ‘ಉರಿವ ಮನೆಯಲ್ಲಿ ಗಳು ಹಿರಿವ ಸಮಯಸಾಧಕತನ’ವೆನಿಸುತ್ತಿಲ್ಲ ತಾನೇ?