ಈ ತುದಿಯಲ್ಲಿ
ಕಾಯುತ್ತಿದ್ದೇವೆ ನಾವಿನ್ನೂ
ನಮ್ಮ ಸರದಿಗಾಗಿ
ಕಣ್ಣುಗಳಲ್ಲಿ ಅಳಿದುಳಿದ
ಆಸೆಯ ಕುರುಹು
ನೋಟ ಹರಿಯುವ ಉದ್ದಕ್ಕೂ
ಮೈಚಾಚಿ ಮಲಗಿದೆ ದಾರಿ
ಯಾರೂ ಅರಿಯದ
ಗುಟ್ಟು ತನ್ನಲ್ಲೇ ಬಚ್ಚಿಟ್ಟು
ನಿರ್ಲಿಪ್ತ ಮೌನದಲಿ.
ಯಾರೋ ಇಳಿಯುತ್ತಾರೆ
ಮತ್ತಾರೋ ಏರುತ್ತಾರೆ
ಅತ್ತಿತ್ತ ಹರಿಯುವ ಬಂಡಿಗೆ
ಪಯಣಿಗರ ಸುಖ-ದುಃಖಗಳರಿವಿಲ್ಲ
ಅದರದು ನಿಲ್ಲದ ನಿತ್ಯ ಪಯಣ.
ಅಹಂ ಅಳಿದ ಮರುಕ್ಷಣ
ದೂರವೇನಿಲ್ಲ ಮಿಲನ.
ದಾರಿ ನಡೆಸುವುದಿಲ್ಲ
ನಾವೇ ನಡೆಯಬೇಕು
ದೊರಕಬಹುದಷ್ಟೇ ಅಲ್ಲಲ್ಲಿ
ನೆಟ್ಟ ಕೈಮರದ ಸುಳಿವು
ಸ್ಪಷ್ಟವಾಗದ ಹೊರತು
ನಮಗೆ ನಾವೇ
ಕಂಡುಕೊಳ್ಳುವುದೆಂತು
ಇರವೇ ಅರಿವಿಲ್ಲದ
ಅಲೆವಾತ್ಮದ ಗುರುತು
ಎದ್ದೆದ್ದು ಬರುವ ಪ್ರಶ್ನೆಗಳಿಗೆಲ್ಲ
ಇನ್ನೆಲ್ಲಿದ್ದೀತು ಉತ್ತರ?
ಆ ಹೊತ್ತು ಹತ್ತಿರಾಗುವ ತನಕ
ಪಯಣಿಗರ ಯಾದಿಯಲಿ
ನಾನಿಲ್ಲ, ನೀನೂ ಇಲ್ಲ.