ಕವಿ : ಎಸ್ ವಿ ಪರಮೇಶ್ವರ ಭಟ್ಟ
ಸಂಗೀತ : ಮೈಸೂರು ಅನಂತಸ್ವಾಮಿ
ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ
ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು
ಕಪ್ಪೇರಿ ಬಂದಿತು
ದೀಪ ಹಚ್ಚಾ
ಕರಿಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತಾ
ಇರುಳಾಕೆ ಬಂದಳು
ದೀಪ ಹಚ್ಚಾ
ಕಾಲರಾಯನ ಗಾಲಿ ಕತ್ತಲಲೆ ತಿರುಗಲಿ
ನನ್ನೆದೆಗೆ ನಿನ್ನೊಲವ
ದೀಪ ಹಚ್ಚಾ
ದೇಹದ ಗೂಡಲಿ ನಿನ್ನೊಲವು ಮೂಡಲಿ
ಜಗವೆಲ್ಲ ನೋಡಲಿ
ದೀಪ ಹಚ್ಚಾ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚಾ
ಬೆಲ್ಲದಂತೆಲ್ಲ ಬಗೆ ಕರಗುತಲಿಹುದೊಳಗೆ
ನಿನ್ನನೆ ಬೇಡುವೆ
ದೀಪ ಹಚ್ಚಾ
ದೀಪಿಲ್ಲ ಧೂಪಿಲ್ಲ ಝಳಝಳವಿನಿಸಿಲ್ಲ
ಕಳಕಳವಾಯ್ತೆಲ್ಲ
ದೀಪ ಹಚ್ಚಾ
ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು
ದೀಪ ಹಚ್ಚಾ
ಸಾವಿನ ಒಳಸಂಚು ಮಾಯದ ಕಣ್ಮಿಂಚು
ನಿನ್ನೆದುರು ನಂದಿತು
ದೀಪ ಹಚ್ಚಾ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ
ದೀಪ ಹಚ್ಚಾ
ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ
ಸುಜ್ಞಾನಪ್ರದೀಪ
ದೀಪ ಹಚ್ಚಾ
ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ
ತೇಜೋರೂಪನೆ
ದೀಪ ಹಚ್ಚಾ
ವಿಶ್ವಮೋಹಿತಚರಣ ವಿವಿಧವಿಶ್ವಾಭರಣ
ಆನಂದದ ಕಿರಣ
ದೀಪ ಹಚ್ಚಾ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ
ದೀಪ ಹಚ್ಚಾ
ಭವದಂಧಕಾರದಿ ಎನ್ನ ಸಂಸಾರದಿ
ನಿಂದೀಪ ಬೆಳಗಲಿ
ದೀಪ ಹಚ್ಚಾ
ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ
ದೀಪ ಹಚ್ಚಾ
*******************
ಸಾಹಿತ್ಯ ಕೃಪೆ: ಅವಧಿ
“ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು”