ಗುರುಪದ ಹಾರ
ಧರೆಯೋದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |೧|
ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರೆಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |೨|
ಹರಿಮತ ಸಾರುವ ಹರಿಪದ ಹಾರವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |೩|
ಧರೆಯನು ಮುಸುಕಿದ ತಮವನು ತೆರೆಯಲು ಹರುಷದಿ ಕಲಿಯುಗದಲ್ಲಿ|
ಗುರು ರಾಘವೇಂದ್ರರು ಕರು(ಣೆ) ಮೆರೆದಿಹರು ವರಮಂತ್ರಾಲಯದಲ್ಲಿ |೪|
ತನು ಮನ ಧನಗಳ ಕೊನೆಗಾಣದೆ ಭವ ವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಎನಿಸಿ ಮೆರೆದರು ವರಮಂತ್ರಾಲಯದಲ್ಲಿ |೫|
ವಿಷಯದ ವಿಷದಿಂದು-ಸಿರಿಡುತಲಿ ಬಲು ದೆಸೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ತರ ಮೆರೆಯಲು ಮೆರೆವರು ವರಮಂತ್ರಾಲಯದಲ್ಲಿ |೬|
ದಿನ ಸಂಸಾರವ ನೆನದರೆ ಘೋರದ ಘನರಥ-ವೆಡೆ-ತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |೭|
ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |೮|
ಕರೆದರೆ ಬರುವರು ಅರಘಳಿಗಿ-ರದಲೆ ಕರಕಶ ಹೃದಯಿಗಳಲ್ಲ|
ಧರೆಯೊಳು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಳೆಲ್ಲಾ |೯|
ಸುರತರು ಫಲಿಸಿದೆ ವರತರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವು-ತನು ಪರಸುಖ ಸಾಧನದಲ್ಲಿ |೧೦|
ಗುರುತರ ತಪಸು ಸಮಾಧಿಗಳಿಲ್ಲದೆ ದೊರೆವುದು ಸದ್ಗತಿ ಇಲ್ಲಿ
ಅರಿಯದೆ ವೇದ ಪುರಾಣ-ಶಾಸ್ತ್ರವ ದೊರೆವುದು ಸದ್ಗತಿ ಇಲ್ಲಿ |೧೧|
ಮಾಧವ ಮತದಾಂಭೋಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದಿಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |೧೨|
ವೇದಾಂತದ ಪೂ-ದೋಟದ ಪರಿಮಳ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |೧೩|
ಪಾವನತರ ಮಹಯಾತ್ರಾರ್ಥಿಗಳು-ಓವಿಸಿ ನೆಲೆಸಿಹರಿಲ್ಲಿ
ಭೂ ವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |೧೪|
ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೊಳು ಕಳೆದೊಗೆಯುವರಿಲ್ಲಿ |೧೫|
ಕುಷ್ಟಾದಿಗಳೆಂಬಷ್ಟಾ-ದಶೆಗಳು ಶ್ರೇಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠೀಶನ ಕೃಪೆಯಲ್ಲಿ |೧೬|
ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲ ಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೋತಿರ್ ಪದಯುಗದಲ್ಲಿ |೧೭|
ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |೧೮|
ಜನುಮದ ಮೂಕರು ಚಿನುಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |೧೯|
ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳಹು ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |೨೦|
ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಳವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದ ಪುಂಗವರಾಲಯದಲ್ಲಿ |೨೧|
ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |೨೨|
ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರು ನಿಂತಲ್ಲಿ |೨೩|
ರಾಜರ ರಾಜರ ಗುರುಮಹರಾಜರ ತೇಜವ ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |೨೪|
ಅನಘರು ಇವರಾ ಘನತೆಯ ನೆಲೆಯನು ಮನುಜರಿ-ಗರಿಯುವದೆಂತು
ಘನ ವ್ಯಾಪಕ ಜಗ ಜನಕ ಜನಾರ್ಧನ ಅಣಿಯಾಗಿರೆ ಬಲುನಿಂತು |೨೫|
ತುಂಗಾ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೊಂಗೊಳಲುದೂತ ಕಂಗೋಚರಿಸುವನಿಲ್ಲಿ |೨೬|
ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನು-ನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಭ್ರಮದಿಂದಾ |೨೭|
ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ|
ಕೇಶವನೊಲಿದನ ತೋಷದಿ ತುತಿಪರು ಸೂಸುವ ಭಾಷ್ಪಗಳಿಂದಾ |೨೮|
ಬೃಂದಾವನ ಗೋವಿಂದನು ಗುರುಗಳ ವೃಂದಾವನ-ದೊಳಗಿಂದು|
ಮುಂದೋರದ ಭವ ಬಂಧದಿ ಸಿಲುಕಿದ ಬೃಂದವ ಪೊರೆಯುವರಿಂದು |೨೯|
ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕ-ರೆಸೆವರು ಕುಂದದ ಕಾಂತಿಯೊಳಿಲ್ಲಿ |೩೦|
ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದ ಪದಕಗಳಿಂದ
ಚಿತ್ತದ ಭ್ರಾಂತಿಯನುತ್ತರಿಪರು ಪುರುಷೋತ್ತಮ ಗಾಯನದಿಂದ |೩೧|
ದ್ವಾದಶನಾಮವು ಮೋದದಿ ಗುರುಗಳ ಸಾದೃಶ ಸದ್ಗುರುವೆಂದು
ಭೂದಿವಿಜರಿ-ಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |೩೨|
ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರಿಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |೩೩|
ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |೩೪|
ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯು-ಧಿಮಿಧಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |೩೫|
ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜವದೊಳು ಪೂಮಳೆಗೆರೆವರು ಘೋಷಿಸಿ ದಿನ ದುಂಧುಭಿ-ಧ್ವನಿಯಿಂದಾ |೩೬|
ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವದಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರೆದುದು ಬಹುಸಿರಿಯಿಂದಾ |೩೭|
ಹರಿಯನು ತೋರಿದ ಗುರುಸಂದರ್ಶನ ಗುರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿ-ಸಂಪದದೊಳು ನಿರುತದಿ ಪಾಲಿಪುದೆಂದು |೩೮|
ಗುರು ಪಾದೋದಕ ಪೊರೆವುದು ಭಕ್ತರ ಧುರಿತೌ-ಘವ-ಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |೩೯|
ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆ-ಸಂಸಾರದೊಳು-ರುತರಗಾದೆನು ಪೊರೆವುದು ಕರುಣದೊಲಿಂದು |೪೦|
ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕನಿಕರ ತೋರುವುದಿಂದು |೪೧|
ಹಸಿ-ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷನ ಪದ ತುಸು-ಸಹ ನೆನಯದೆ ಪಶು ಜೀವನ ಕೈಗೊಂಡು |೪೨|
ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೊರೆಯುವದಿಂದು |೪೩|
ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲು-ಸುವಿಕಾಸಿತ ಹಾರವಿದೆಂದು |೪೪|
ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |೪೫|
ಅನಂತ ಕುಲಕರ್ಣಿಯವರ ಗಾಯನದಲ್ಲಿ ಗುರುಪದ ಹಾರದ ಲಿಂಕ್ ಇಲ್ಲಿದೆ:-
http://mio.to/album/Anantha+Kulkarni/Intha+Gurugala+Kane+Naa