ಕವನ -ಕನಸಿನೊಳಗೊಂದು ಕಣಸು
ಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)
ತಾಯಿ ಮಕ್ಕಳ ಸಂವಾದ
(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ)
“ಯಾರು ನಿಂದವರಲ್ಲಿ ತಾಯೆ” ಎಂದೆ
“ಯಾರು ಕೇಳುವರೆನಗೆ, ಯಾಕೆ ತಂದೆ ?”
“ಬೇಸರದ ದನಿಯೇಕೆ ಹೆಸರ ಹೇಳಲ್ಲ”
“ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”
“ನೀನಾರ ಮನೆಯವಳು ಮುತ್ತೈದೆ ಹೇಳು”
“ನಾನಾರ ಮನೆಯವಳೊ ಬಯಲನ್ನೆ ಕೇಳು”
“ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ?”
“ಗುಪ್ತರಾದರೊ ಏನೊ ಇಷ್ಟರಲ್ಲೆ !”
“ಇರುವರೇ ಇದ್ದರೆ ಮಕ್ಕಳೆಂಬುವರು?”
“ಇರುವರೆಂದರು ಕೂಡ ಯಾರು ನಂಬುವರು ?”
“ಮನೆಯಿಲ್ಲವೇ ಇರಲು ಪರದೇಶಿಯೇನು?”
“ಮನೆಯೆ ಮುನಿದೆದ್ದಿರಲು ಯಾ ದೇಶವೇನು ?”
“ನಿನ್ನ ಮಾತಿನಲಿಹುದು ಒಡಪಿನಂದ!”
“ನನ್ನ ಹತ್ತಿರದೊಂದೆ ಉಳಿದಿಹುದು ಕಂದ”
“ರಾಜಮುಖಿ, ನಿನ್ನಲ್ಲಿ ರಾಜಕಳೆಯಿಹುದು !”
“ಸಾಜಮಾದರು ಪಕ್ಷವಿದು ವಧ್ಯವಹುದು !”
“ಯಾವುದಾದರು ನಾಡದೇವಿಯೇ ನೀನು ?”
ಭಾವುಕರ ಕಂಗಳಿಗೆ ದೇವಿಯೇ ನಾನು”
“ಈಗ ಬಂದಿಹುದೇಕೆ ಏನು ಬೆಸನ ?”
“ಯೋಗವಿಲ್ಲದೆ ತಿಳಿಯದೆನ್ನ ವೆಸನ !”
“ಹಾದಿ ಯಾವುದು ಹೇಳು, ಯಾವ ಯೋಗ ?”
“ಆದಿ ಅಂತವು ಇಲ್ಲದಂಥ ತ್ಯಾಗ !”
“ಬೇಡಬಂದಿಹೆ ಏನು ಏನಾದರೊಂದು ?”
“ಬೇಡಿದರೆ ಬೇಡಿದುದ ಕೊಡುವೆಯಾ ಇಂದು ?”
“ಅಹುದು ಕೊಡುವೆನು ಎಂದು ನಾನೆನ್ನಬಹುದೆ ?”
“ಬಹುದು-ಗಿಹುದಿನ ಶಂಕಿ ವೀರನಹುದೇ ?”
“ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ”
ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ”
“ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ”
“ಬಲ್ಲವರು ದೈವವನು ಪರಿಕಿಸುವರೊಮ್ಮೆ !”
“ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ?”
“ಗಂಡುಸಾದರೆ ನಿನ್ನ ಬಲಿಕೊಡುವೆಯೇನು ?”
* * *
ಮನವು ನಡುಗಿತು ತನುವು ನವಿರಿಗೊಳಗಾಯ್ತು ;
ನೆನವು ನುಗ್ಗಿತು-ಹೊರಗೆ ಕಂಡೆ-ಬೆಳಗಾಯ್ತು
****** **** ***** ******* *********
ಟಿಪ್ಪಣಿ : ಈ ಕವನ ಬೇಂದ್ರೆಯವರು ಯಾವಾಗ ಬರೆದಿದ್ದೋ, ಸಂದರ್ಭ ಯಾವುದೋ ಗೊತ್ತಿಲ್ಲ. ಈ ಕವನದ ಶೀರ್ಷಿಕೆಯ ಕೆಳಗೆ “ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ” ಎಂದಿದೆ.