ಈ ವಾರಾಂತ್ಯದ ವಿನೋದಕ್ಕೆ ಆಗಮಿಸಿರುವ ಮುಖ್ಯ ಅತಿಥಿ ಬೀchi.
ಇದನ್ನೋದಿ , ಅರ್ಥಕೋಶಕ್ಕಿಂತ ಅನರ್ಥಕೋಶವೇ ಹೆಚ್ಚು ಇಷ್ಟವಾಗುವ ಅಪಾಯವೂ ಇದೆ,ಎಚ್ಚರಿಕೆ! 🙂
ಅನರ್ಥ – ಅಪಾರ್ಥಗಳು : (ಬೀchi – ತಿಂಮ ರಸಾಯನದಿಂದ)
ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ ನಾಲ್ಕು ಮೃಗವಲ್ಲ, ನಾಲಿಗೆಯು ನಾಲ್ಕುಂಟು ವಿಪರೀತವಲ್ಲ, ಸರ್ಪವನ್ನು ಧರಿಸಿ ಮೂಷಿಕದ ಮೇಲಿರುವ ಗಣಪತಿ. (ಇದೇನು? ಸರಿಯಾಗಿ ಅರ್ಥವಾಗಲಿಲ್ಲ ನನಗೆ)
ಇತ್ಯಾದಿ – ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ.
ಬೈತಲೆ – ಬರೀ ಬೈಗುಳನ್ನೇ ತುಂಬಿಕೊಂಡಿರುವ ತಲೆ – ಉದಾ: ಮಾಸ್ತರ ತಲೆ, ಮಡದಿಯ ತಲೆ.
ವಿಮಾ ಏಜಂಟ್ – ಪರ ಪತ್ನೀ ಹಿತೈಷಿ ; ನಿನ್ನ ನಂತರವೇ ನಿನ್ನ ಮಡದಿಗೆ ಸುಖ ಎಂದು ಸೂಚ್ಯವಾಗಿ ಸತ್ಯವನ್ನೇ ಹೇಳುವವ.
ಆದರ್ಶ ದಂಪತಿಗಳು – ಎರಡು ದೇಹಗಳು, ಒಂದೇ ಜೀವ – ಗಂಡ ನಿರ್ಜೀವಿ! ಗಂಡ ಸಂಗೀತಗಾರ – ಕಿವುಡಿ ಹೆಂಡತಿ.
ಮಾನ – ಹೆಂಣಿನ ಮಾನವನ್ನು ಕಾಯಲು ಗಂಡೇ ಬೇಕು – ಗಂಡಿನ ಮಾನವನ್ನು ಕಳೆಯಲು ಹೆಂಣೇ ಸಾಕು.
ಏಕಾಂತ – ಏಕಮಾತ್ರ ಗಂಡ ಉಳ್ಳವಳು; ಅತೃಪ್ತಿಯಲ್ಲಿರುವವರಿಗೆ ಏಕಾಂತವೂ ಸಂತೆಯೇ.
ಯಾರೋ – “ಯಾರೋ ಅಂದರು” ಎಂದು ಆರಂಭಿಸಿದರೆ ಆಯಿತು – ಮುಂದು ಬರುವುದೆಲ್ಲವೂ ಸುಳ್ಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಊದುಬತ್ತಿ – ದೇವರ ಬೀಡಿ
ಕವಿ – ಹುಚ್ಚರ ಮೆಚ್ಚುಗೆ ಪಡೆಯುವ ಹಿರಿ ಹುಚ್ಚ!
ಕಲೋಪಾಸಕ – ಕಲೆಯನ್ನೇ ನಂಬಿ ಉಪವಾಸ ಬೀಳುವವನು.
ಕ್ಷಯ – ಶ್ರೀಮಂತರ ಕ್ಷಯವೇ ಡಾಕ್ಟರನ ಅಕ್ಷಯಪಾತ್ರೆ.
ಏ – ಅನೇಕರಿಗೆ ಹೆಂಡತಿಯ ಹೆಸರು!
ಅಂತೆ – ಸುಳ್ಳೆಂಬ ಮಹಾವೃಕ್ಷದ ಮೂಲಬೀಜ.
ತಲೆ – ಉಳ್ಳವರು ಬಹಳಿಲ್ಲ – ಉಳ್ಳವರಿಗೆ ಇದರ ಅರುವಿಲ್ಲ – ಇಲ್ಲದವರಿಗೆ ಇದೆಯೆಂಬ ಭ್ರಮೆ ಇದೆ.
ಬಾಡಿಗಾರ್ಡ್ – ಕುಬುಸ
ಕುಪಿತ – ಕೆಟ್ಟ ತಂದೆ
ಮಧುರಮ್ಮ – ಕುಡುಕನ ಹೆಂಡತಿ
ಅರ್ಥಗರ್ಭಿತ – ಹಣಕ್ಕೆ ಗರ್ಭಿಣಿಯಾದವಳು.
ಕುಕ್ಕರ್ – ನಾಲ್ವರು ಪುರುಷರು ಮಾಡುವಷ್ಟು ಕೆಲಸವನ್ನು ಅದೊಂದೆ ಮಾಡುತ್ತದೆ – ಅರ್ಥಾತ್ ಓರ್ವ ಸ್ತ್ರೀ ಮಾಡುವಷ್ಟು ಅನ್ನಿ; ಕುಕ್ಕರ್ ಕೊಂಡ ಮೇಲೂ ಲಗ್ನವಾಗುವವನು ಶತ ಮೂರ್ಖ!
ಶ್ರೀಮತಿ – ಶ್ರೀಯನ್ನು (ಹಣವನ್ನು) ಗಳಿಸುವುದರಲ್ಲಿಯೇ ಮತಿಯನ್ನೆಲ್ಲಾ ವ್ಯಯ ಮಾಡುವವಳೇ ಶ್ರೀಮತಿ.
ಕ್ರಿಶ್ಚಿಯನ್ – ಆರು ದಿನಗಳು ಮಾಡಿದ ಹಳೆಯ ಪಾಪಗಳಿಗಾಗಿ ಆದಿತ್ಯವಾರ ಪಶ್ಚಾತ್ತಾಪ ಪಟ್ಟು, ಹೊಸ ಪಾಪಗಳಿಗೆ ಪರ್ಮಿಟ್ಟು ಪಡೆಯುವ ಪುಣ್ಯಾತ್ಮ.
ಏಕಾದಶಿ – ಹೊಟ್ಟೆ ತುಂಬಿದವನು ಏಕಾದಶಿ ಮಹಿಮೆಯನ್ನು ಬಹು ಚೆನ್ನಾಗಿ ಭೋದಿಸಬಲ್ಲ.
ನಾಚಿಕೆ – ಬತ್ತಲೆ ಇರುವವರ ರಾಜ್ಯದಲ್ಲಿ ಬಟ್ಟೆಯುಟ್ಟವನೇ ನಾಚಬೇಕು: ನಾಚಿಕೆಯನ್ನು ಒಂದೇ ಒಂದು ಬಾರಿ ಬಿಟ್ಟರಾಯಿತು – ಮತ್ತೆ ಅದರ ಕಾಟವೇ ಇಲ್ಲ.
ಮುತ್ಸದ್ದಿ – ಸದ್ದಿಲ್ಲದೆ ಮುತ್ತು ಕೊಡುವವನೆ ಮುತ್ಸದ್ದಿ.
ಉಭಯ ಸಂಕಟ – ಒಳಗೆ ಭಾಷಣ – ಹೊರಗೆ ಗುಡುಗು, ಸಿಡಿಲು; ಒಳಗೆ ರೇಡಿಯೋ ಸಂಗೀತ – ಹೊರಗೆ ಉರಿಬಿಸಿಲು ; ಒಳಗೆ ಮನೆಯವಳು – ಹೊರಗೆ ದೇಶಭಕ್ತರು.
ಜೀವನ – ಜೀವನದ ಮೊದಲರ್ಧ ಹೆತ್ತ ತಂದೆ ತಾಯಿಗಳಿಂದ ಕೆಡುತ್ತದೆ- ಉಳಿದರ್ಧ ಹುಟ್ಟಿದ ಮಕ್ಕಳಿಂದ ಕೆಡುತ್ತದೆ.
ಜಾತಿ – ದೇವರು ಕೊಟ್ಟ ಬುದ್ಧಿಗೆ ದೆವ್ವವು ಕೊಟ್ಟ ಅಫೀಮು ; ದಿವಾಳಿ ತೆಗೆದವನ ವ್ಯಾಪಾರ ಹೆಚ್ಚು – ಜಾತಿಗೆಟ್ಟವನ ಆಚಾರ ಹೆಚ್ಚು.
ಆಸ್ಪತ್ರೆ – ಸಾವೆಂಬ ಭವ್ಯಗೃಹದ ಒಳಂಗಳ; ಈ ಜಗತ್ತೇ ಒಂದು ಆಸ್ಪತ್ರೆ – ಇಲ್ಲಿಗೆ ಬರುವುದು ಬದುಕಲಿಕ್ಕಲ್ಲ , ಸಾಯಲಿಕ್ಕೆ; ಆಸ್ಪತ್ರೆ ಸ್ಮಶಾನಕ್ಕೆ ಸಮೀಪವಿದ್ದಷ್ಟೂ ಸುಖ – ಹೊರುವವರಿಗೆ.
ಹೆಂಡತಿ – ಹೆಂಡತಿಯೊಂದು ಹೊದಿಕೆ. ಹೊದ್ದುಕೊಂಡರೆ ಸೆಕೆ, ಬಿಟ್ಟರೆ ಚಳಿ. ಕನ್ನೆಗಳೆಲ್ಲವೂ ಒಳ್ಳೆಯರೇ – ಕೆಟ್ಟ ಹೆಂಡಂದಿರು ಎಲ್ಲಿಂದ ಬಂದಿರಬಹುದು? ಹೆಂಡತಿಗಿಂತಲೂ ಹೆಂಡತಿಯ ಭಾವಚಿತ್ರವನ್ನು ಕೆಲವರು ಹೆಚ್ಚು ಪ್ರೀತಿಸುತ್ತಾರೆ – ಅದಕ್ಕೆ ನಾಲಿಗೆ ಇಲ್ಲ!
ಸಂಗೀತಗಾರ – ತಾನು ಹಾಡುತ್ತಿರುವ ಹಾಡಿನ ಅರ್ಥವನ್ನೇ ಅರಿಯದ ಮಹಾರಸಿಕ; ಹೊಟ್ಟೆಯ ಪಾಡಿಗಾಗಿ ತೊಡೆ ಬಡಿದುಕೊಳ್ಳುವವ; ಹೊಲಿಯುವವನ ಬಲಕ್ಕೆ, ಅಳುವವನ ಎಡಕ್ಕೆ,ಹಾಡುವವನ ಮುಂದೆ ಎಂದೂ ಕೂಡಬೇಡ ; ಇವನ ಕಂಠವು ಸುಖವನ್ನು ಕೊಡುತ್ತದೆ – ಕೂಡಲೆ ಅವನ ಮುಖವು ಅದನ್ನು ಕಸಿದುಕೊಳ್ಳುತ್ತದೆ.
ತಿಂಮ ಉವಾಚ : ಗಂಡಿನಕ್ಕಿಂತಲೂ ಹೆಣ್ಣಿಗೆ ಹೆಚ್ಚು ಊಟ,ನಿದ್ರೆ, ಬಟ್ಟೆ ಬೇಕು. ಹೀಗೆಂದು ಯಾರು ಹೇಳುತ್ತಾರೆ?… ಡಾಕ್ಟರು. ಯಾವ ಡಾಕ್ಟರು?…ಲೇಡಿ ಡಾಕ್ಟರು…ಅದಕ್ಕಾಗಿಯೇ ಎಲ್ಲ ಊರುಗಳಲ್ಲಿಯೂ ಲೇಡಿ ಡಾಕ್ಟರರು ಹೆಂಗಸರೇ ಇರುತ್ತಾರೆ!
* * * * * * * * * * * * *
ಭಾಳಾ ಭಾಳ ಚೆನ್ನಾಗಿದೆ. ನಗುವೋ ನಗು ಬಂತು. ನಾ.ಕಸ್ತೂರಿಯವರಿಗೂ ಬೀchiಗೂ competitionಗೆ ಬಿಟ್ಟಂಗಿದೆ 🙂
ಸುಶ್ರುತ, ನಾ.ಕಸ್ತೂರಿ- ಬೀchi ನಡುವೆ competition ಇಲ್ಲವೇ ಇಲ್ಲ. 🙂
ಇಬ್ಬರ ಹಾಸ್ಯವೂ ಬೇರೆ ಬೇರೆ ಥರ. ನಾ.ಕಸ್ತೂರಿಯವರದು ತಿಳಿಹಾಸ್ಯ. ಯಾರನ್ನೂ ನೋಯಿಸದ ನವಿರಾದ ಹಾಸ್ಯ. ಬೀಚಿಯವರದು ಸಮಾಜದ ಹುಳುಕು ಮುಖಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವಾದ್ದರಿಂದ ಕೆಲವೆಡೆ ಸ್ವಲ್ಪ ಕಟುವೆನ್ನಿಸುತ್ತದೆ. ತಮಾಷೆಯಾಗಿ ಹೇಳುವುದಾದರೆ, ಕಸ್ತೂರಿಯವರದು ‘U’ ಆದರೆ ಬೀchi ಕೆಲವು ಕಡೆ rated R 🙂
>ಕುಕ್ಕರ್ – ನಾಲ್ವರು ಪುರುಷರು ಮಾಡುವಷ್ಟು ಕೆಲಸವನ್ನು ಅದೊಂದೆ ಮಾಡುತ್ತದೆ – ಅರ್ಥಾತ್ ಓರ್ವ ಸ್ತ್ರೀ ಮಾಡುವಷ್ಟು ಅನ್ನಿ; ಕುಕ್ಕರ್ ಕೊಂಡ ಮೇಲೂ ಲಗ್ನವಾಗುವವನು ಶತ ಮೂರ್ಖ
ಯಾವ ಕಾಲದಲ್ಲಿ ಬರೆದಿದ್ದೋ ಇದು ಪಾಪ..
ಅವರು ಬಹುಷಃ ಪ್ರೆಸ್ಟಿಕ್ ಕುಕ್ಕರ್ ‘ಯಾರು ಹೆಂಡತಿಯನ್ನು ಪ್ರೀತಿಸ್ಸುತಾರೋ ಅವರು ಪ್ರೆಸ್ಟಿಜ್ ಕುಕ್ಕರ್ ಕೊಳ್ಳುತ್ತಾರೆ’..ಜಾಹೀರಾತು ಕೇಳಿರಲಿಲ್ಲಾ ಅನಿಸುತ್ತೆ..
ನನಗೂ ಹಾಗೆಯೇ ಅನಿಸಿತು. ಕುಕ್ಕರ್ ಬಂದ ಹೊಸದರಲ್ಲಿ ಬರೆದಿರಬಹುದು. ಆಮೇಲೆ ಏನೇನೆಲ್ಲಾ ಬಂತು ಎಂದು ಬೀಚಿಯವರಿಗೆ ಗೊತ್ತಿದ್ದಂತಿಲ್ಲ. 🙂
ಇರಬಹುದೇನೋ ರಿ
“ಇತ್ಯಾದಿ – ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ.
ಊದುಬತ್ತಿ – ದೇವರ ಬೀಡಿ
ಬಾಡಿಗಾರ್ಡ್ – ಕುಬುಸ
ಏ – ಅನೇಕರಿಗೆ ಹೆಂಡತಿಯ ಹೆಸರು!”
ತ್ರಿವೇಣಿಯವರೇ,
ನೀವು ಹೇಳಿದ್ದು ಬಿಲ್ಕುಲ್ ಸರಿಯಾಗಿದೆ.
ನಾ.ಕಸ್ತೂರಿಯವರದು ತಿಳಿಹಾಸ್ಯ. ಯಾರನ್ನೂ ನೋಯಿಸದ ನವಿರಾದ ಹಾಸ್ಯ. ಬೀಚಿಯವರದು ಸಮಾಜದ ಹುಳುಕು ಮುಖಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವಾದ್ದರಿಂದ ಕೆಲವೆಡೆ ಸ್ವಲ್ಪ ಕಟುವೆನ್ನಿಸುತ್ತದೆ.
ಬೀಚಿ ಯವರ ಪುಸ್ತಕಗಳನ್ನು ಓದಿದ್ದೇನೆ, ಅದರೆ ಈ ಪುಸ್ತಕ ಅದು ಹೇಗೋ ಮಿಸ್ಸಾಗಿತ್ತು.
ಇಲ್ಲಿ ಟೈಪಿಸಿ ಓದಲು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
ಇದೊಂದು ಪುಸ್ತಕವೊಂದನ್ನು ಕೊಳ್ಳಲೇಬೇಕೆಲ್ಲ, ನನ್ನ ಈ ತಿಂಗಳಿನ ಬಜೆಟ್ ತಪ್ಪುತ್ತಿದೆ.
ಬೀchiಯವರದು ಕೆಲವೆಡೆ ಕಟುಹಾಸ್ಯವಾದರೂ ಸಹ, ಸುಧಾ ವಾರಪತ್ರಿಕೆಯಲ್ಲಿ ಅವರು ‘ಉತ್ತರಭೂಪ’ ಹೆಸರಿನಲ್ಲಿ ಕೊಡುತ್ತಿದ್ದ ಉತ್ತರಗಳು ಮಾನವೀಯತೆಯನ್ನು ಪ್ರತಿಫಲಿಸುವ ಹಾಸ್ಯದಿಂದ ತುಂಬಿರುತ್ತಿದ್ದವು.
ಕೈಲಾಸಮ್ ಹಾಸ್ಯದ ಬಗೆಗೆ ಅವರೇ ಹೇಳಿದ ಇಂಗ್ಲಿಶ್ ಪದ್ಯಃ
“The raft of humour often veers
From shoals of smiles to seas of tears.”
ಇದನ್ನು ರಾಜರತ್ನಮ್ ಈ ರೀತಿಯಾಗಿ ಕನ್ನಡಿಸಿದ್ದಾರೆಃ
“ಕಿರಿಯಾಳದ ನಗೆ ನೀರಿನ ಮೇಲೆ
ತಿರುಗಾಡುತ ಬಹು ವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು.”
ಸುನಾಥರೇ, “ಕಿರಿಯಾಳದ ನಗೆನೀರಿನ ಮೇಲೆ” – ಇದು ಜಿ.ಪಿ.ರಾಜರತ್ನಂ ಅವರು ಅನುವಾದಿಸಿದ್ದೆಂದು ತಿಳಿದಿರಲಿಲ್ಲ. ಧನ್ಯವಾದಗಳು.
MD,ಇದು ನಿಮ್ಮ ಹೆಸರೋ, ಹುದ್ದೆಯೋ ತಿಳಿಯಲಿಲ್ಲ 🙂 ತುಳಸೀವನಕ್ಕೆ ಆತ್ಮೀಯ ಸ್ವಾಗತ.
ನಾನು ತುಂಬಾ ಚಿಕ್ಕವನು ಅಕ್ಕಾವ್ರೆ, ಇಂತಹ ಹುದ್ದೆ ಹೆಸರು ಅರ್ಹತೆ ಏನು ಇಲ್ಲಾ ನನಗೆ.
ದಾರಿ ತಪ್ಪಿದ್ದೆ ಕಗ್ಗಾಡಿನಲ್ಲಿ, ಮತ್ತೆ ಬಹುದಿನಗಳ ನಂತರ ದಾರಿ ಕಂಡುಕೊಂಡು ಈ ವನಕ್ಕೆ ಬಂದಿದ್ದೇನೆ.
ಇಂಥಾ ಗ್ರಾಂಡ ಸ್ವಾಗತಾ ಕೊಟ್ಟಿದ್ದೀರಿ ಇನ್ನು ದಿನ ದಿನವೂ ಬರ್ತಾ ಇರ್ತೀನಿ
ಸೊಗಸಾಗಿದೆ ತ್ರಿವೇಣಿಯವರೇ… ಹಿಂದೆ ರಜಾ ದಿನಗಳಲ್ಲಿ ನಾವು ನಾ.ಕಸ್ತೂರಿಯವರ ಆನರ್ಥಕೋಶ ಓದಿ ಬಹಳ ತರಲೆ ಮಾಡ್ತಿದ್ವಿ.
ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ ನಾಲ್ಕು ಮೃಗವಲ್ಲ, ನಾಲಿಗೆಯು ನಾಲ್ಕುಂಟು ವಿಪರೀತವಲ್ಲ,
ಹೀಗಿರಬಹುದೇ..
ಕಾಲಾರುಃ ಗಣಪತಿಯದು ೨, ಇಲೀದು ೪
ತಲೆ ಮೂರುಃ ಗಣಪತಿ, ಇಲಿ, ಹಾವು -ತಲಾ ೧ ತಲೆ ಃ-)
ಬಾಲಂಗಳೆರಡುಃ ಇಲೀದು ೧, ಹಾವಿಂದು ೧
ಕಿವಿ ನಾಲ್ಕುಃ ಗಣಪತಿಯದು ೨, ಇಲೀದು ೨
ನಾಲಿಗೆಯು ನಾಲ್ಕುಂಟುಃ ಗಣಪತಿಯದು ೧, ಇಲೀದು ೧, ಹಾವಿಗೆ ೨ ನಾಲಿಗೆ ಅಂತಾರಲ್ವಾ?
ಹಾವಿನ ಬೆಲ್ಟನು ಬಿಗಿದು ಇಲಿಯ ಮೇಲೆ ಕುಳಿತ ಮುದ್ದು ಗಣಪ ಃ-)
Nice answer madam
ಪೂರ್ಣಿಮಾ, ಧನ್ಯವಾದಗಳು. ನಾನು ಎಂದೋ ಕೇಳಿದ್ದ ಪ್ರಶ್ನೆಗೆ ಇಂದು ಉತ್ತರ ದೊರಕಿದೆ!
ನಾನು ಯೋಚಿಸಿ, ಗೊತ್ತಾಗದೆ ಅದನ್ನು ಮರೆತೇಬಿಟ್ಟಿದ್ದೆ. ಹಾವಿನ ಎರಡು ನಾಲಿಗೆ ಸೇರಿಸಿ, ನಾಲ್ಕು ನಾಲಿಗೆ ಲೆಕ್ಕ ಕೊಟ್ಟು ಸಮಸ್ಯೆ ಬಿಡಿಸಿ ಕೊಟ್ಟಿದ್ದೀರಿ. 🙂
ಸಂಗೀತಗಾರನ ಬಗ್ಗೆ ಮಸ್ತ್ ಹೇಳ್ಯಾರ್