ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕ – ಜಿ.ವಿ.ಅತ್ರಿ
ಸಂಗೀತ – ಸಿ.ಅಶ್ವಥ್

ಜಿ.ವಿ ಅತ್ರಿ/ಚಿತ್ರಕೃಪೆ:ವಿಶ್ವಕನ್ನಡ.ಕಾಂ

ಹಾಡು ಕೇಳಿ 

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ
ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲ |

ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂಥ ಬಾಳಿಗೆ ಒಲವೇ ನಿನ್ನ ಕನಸು |

ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು |

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ |

ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ?
ತೆರಳಿದನು ಜೋಯಿಸನು ತಣ್ಣಗಾಗಿ |

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು |

ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೇ ಇಂಥ ಕಪ್ಪು ಗಂಡು?
ಶಾನುಭೋಗರ ಮನೆಯ ತೋರಣವೇ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು |

ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ !

*     *    *     *       *       *

18 thoughts on “ಶಾನುಭೋಗರ ಮಗಳು – ಕೆ.ಎಸ್.ನರಸಿಂಹಸ್ವಾಮಿ”

  1. ಅದ್ಭುತವಾದ ಗೀತೆ. ಜಿ.ವಿ. ಅತ್ರಿ ಸೊಗಸಾಗಿ ಹಾಡಿದ್ದಾರೆ.
    ಸಂಗೀತ ಮತ್ತು ರಾಗ ಸಂಯೋಜನೆ ಬಗ್ಗೆ ಎರಡು ಮಾತಿಲ್ಲ.

    ಪದ್ಯವನ್ನು ಹೆಣೆದಿರುವ ಶೈಲಿ ಸೊಗಸು. ಸರಳವಾಗಿ ಪದ್ಯ ಹೆಣೆಯುವುದನ್ನು ಕರಗತಗೊಳಿಸಿಕೊಂಡಿದ್ದರು ಈ ವ್ಯಕ್ತಿ.

    ಇದರ ಗೀತ ಚಿತ್ರವು ಚೆನ್ನಾಗಿದೆ.

    ಇಲ್ಲಿ ಸಾದರ ಪಡಿಸಿದ್ದಕ್ಕೆ ಧ.ವಾ.

    ಇಂತಿ
    ಭೂತ

  2. ಒಳ್ಳೆ ಮಜ ಕೊಡ್ತಾ ಇದ್ದೀರ.

    ಅಕ್ಕನ ಮಗಳು – http://www.kannadaaudio.com/Songs/Folk/home/AkkanaMagalu.php

    ಹಿರೆ ಭಾಗವತರ ಮಗಳು ಅಂತ ಯಾರಾದ್ರು ಇದ್ದಾರ ಅಂತ ಹುಡ್ಕಿ ಹೇಳ್ತೆನೆ ?

    ಬೀ.ಎಂ.ಶ್ರೀ ಅನುವಾದಿತ “ಕಾರಿ ಹೆಗ್ಗಡೆಯ ಮಗಳು” ಇದ್ದಾಳೆ ಅಂತ ಗೊತಾಯ್ತು. ಅದು ಕರಿ ನೊ ಅಥವ ಕಾರಿ ನೊ ಅಂತ Doubt.

    ಶ್ರೀಮಂತನ ಮಗಳು, ಲಾಯರ್ ಮಗಳು, ಮನೆ ಮಗಳು www. musicindiaonline. com ನಲ್ಲಿ ಸಿಗ್ತಾರೆ.

  3. ಭೂತ ಹೆಸರಿಗೆ ತಕ್ಕಂತೆ ಆಗಾಗ ಮಾಯ,ಪ್ರತ್ಯಕ್ಷವಾಗುತ್ತಿರುತ್ತದೆ!! 🙂

    ಶಾನುಭೋಗರ ಮಗಳು ಗೀತಚಿತ್ರ ನನಗೂ ನೆನಪಿದೆ. ಇದರಲ್ಲಿ ಜೋಯಿಸನ ಪಾತ್ರಧಾರಿಯನ್ನು ಕಪ್ಪಾಗಿ ಕಾಣಿಸಲೆಂದು ಮುಖಕ್ಕೆ ಕರಿಬಣ್ಣ ಬಳಿದಂತಿತ್ತು 🙂

  4. ಜಾಗೃತಿಯವರೇ, ನಿಮ್ಮಲ್ಲಿ ಹೆಣ್ಣುಗಳ ದೊಡ್ಡ ಪಟ್ಟಿಯೇ ಇದ್ದಂತಿದೆ, ಆದರೆ, “ಸಾಕು ಮಗಳು” ಕಲ್ಪನಾಳನ್ನು ಮರೆತಿದ್ದೀರಿ. 🙂

    “ಕಾರಿ ಹೆಗ್ಗಡೆಯ ಮಗಳು” ಎಂಬುದು ಸರಿ.

  5. ಈ ಪದ್ಯಕ್ಕೋಸ್ಕರ ಕಾಯ್ತಾ ಇದ್ದೆ..

    “ವೈದಿಕರ ಮನೆಯಲ್ಲಿ ಊಟ ಹೊತ್ತಾಗುವುದು, ಒಲ್ಲೆನೆಂದಳು” .. what an excuse to make!!

  6. “ಜಿ.ವಿ. ಅತ್ರಿ ತುಂಬಾ ಸೊಗಸಾಗಿ ಹಾಡಿದ್ದಾರೆ ಈ ಸೊಬಗಿನ ಹಾಡನ್ನು.”

    ಸುಶೃತ, ಅತ್ರಿಯವರ ಇನ್ನೂ ಕೆಲವು ಗೀತೆಗಳು ಬಹಳ ಚೆನ್ನಾಗಿವೆ. ಅತ್ರಿಯವರ ಅಕಾಲ ನಿಧನದಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಬಹಳ ನಷ್ಟವಾಯಿತು. 🙁

  7. “ವೈದಿಕರ ಮನೆಯಲ್ಲಿ ಊಟ ಹೊತ್ತಾಗುವುದು, ಒಲ್ಲೆನೆಂದಳು” .. what an excuse to make!! ”

    ಈಗಿನ ವೈದಿಕರು ಕಾಲಕ್ಕೆ ತಕ್ಕಂತೆ update ಆಗಿದ್ದಾರೆ. ಊಟ ಮೊದಲಿನಷ್ಟು ಹೊತ್ತಾಗದೇನೊ 🙂

  8. ಭಾಗವತರು ಆನಂದತುಂದಿಲರಾಗಿದ್ದಾರೆ. “ಇಗೊಳ್ಳಿ, ನಿಮಗೆ ನನ್ನ ಕಂಠೀಹಾರ”ಃ-))

    ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
    ನೀರ ತರುವಾಗವಳ ನೋಡಬೇಕು
    ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
    ಅವಳ ಗಂಡನ ಹೆಸರ ಕೇಳಬೇಕು |

    ಎಂಥ ಲಾಲಿತ್ಯತೆ ಪದಗಳಲ್ಲಿ. ‘ತರುವಾಗವಳ’ ಶಬ್ದ ನೋಡಿ. ಅದು ಇಡೀ ಸಾಲಿಗೆ ಲಯ ಕೊಡತ್ತೆ.

  9. “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ” ಪದ್ಯ ಇತ್ತಾ? ಅನ್ವೇಷಿಗಳಿಗೆ ಅದನ್ನೇ ಬದಲು ಮಾಡಿ ಏನಾದ್ರೂ ಬರಿಯೋಣಃ-)

  10. ಭಾಗವತರೇ, ನಿಮ್ಮ ಕಂಠೀಹಾರ ನನಗೇಕೆ? ನೀವೇ ಇಟ್ಟುಕೊಳ್ಳಿ 🙂

    ಅದಿರಲಿ, ಕಂಠೀಹಾರ ಅಂದರೇನು? ಕಂಠದ ಹಾರವೇ?

  11. “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ” ಕವಿತೆ ನನ್ನಲ್ಲಿಲ್ಲ. ಎಂ.ಎಸ್.ಶೀಲಾ ದನಿಯಲ್ಲಿ ಕೇಳಿರುವ ಈ ಹಾಡಿನ ಕೆಲವು ಸಾಲುಗಳು ನೆನಪಿವೆ. ಅನ್ವೇಷಿಗಳಿಗೆಂದು ಕವಿತೆ ಬರೆಯುತ್ತೀರಾದರೆ ಅದನ್ನೇ ಇಲ್ಲಿ ಬರೆಯುತ್ತೇನೆ.  ಪದಗಳಲ್ಲಿ ವ್ಯತ್ಯಾಸಗಳಿರಬಹುದು.

    (ಕವಿ:ಜಿ.ಎಸ್.ಶಿವರುದ್ರಪ್ಪ)

    ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ
    ದಿನ ದಿನವೂ ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ|

    ಜಡವಾದ ನಮ್ಮ ಬಡತನದ ನೋವು ನಿಮಗರಿವು ಆಗಲಹುದೇ?
    ನೀಲಿ ಗಗನದಲಿ ತೇಲಿ ಹೋಗುತಿಹ ನಿಮ್ಮ ಹಿಡಿಯಬಹುದೇ?

    ಓ ಬನ್ನಿ ಬನ್ನಿ ಓ ತನ್ನಿ ತನ್ನಿ ನನ್ನೆದೆಗೆ ತಂಪ ತನ್ನಿ
    ನೊಂದ ಜೀವರಿಗೆ ತಂಪನೀಯುವುದೇ ಪರಮ ಪೂಜೆಯೆನ್ನಿ

  12. ಬಹುಶಃ ಅದೇ ಅರ್ಥ ಇರಬೇಕು. ಚಲಚ್ಚಿತ್ರಗಳಲ್ಲಿ, ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ನೋಡಿಲ್ಲವ ನೀವು? ತುಂಬ ಸಂತೋಷವಾದಾಗ ಕಂಠೀಹಾರವನ್ನ ತಮ್ಮ ಮುಂದಿರುವ ವ್ಯಕ್ತಿಗೆ ಕೊಡ್ತಾರೆಃ-)

    ನಾನು ಸಂತೋಷದಿಂದ ಕೊಟ್ಟಿದ್ದನ್ನ ನಿರಾಕರಿಸಿದಿರೇ? ನನ್ನ ಪಾರಿತೊಷವನ್ನು ನಿರಾಕರಿಸುವ ಅಧಟು ಅಖಂಡಭೂಮಂಡಲದಲ್ಲೇ ಯಾರಿಗೂ ಇಲ್ಲ. ಅಂಥದ್ದರಲ್ಲಿ ನೀವು?? ನಿಮಗೂ ದೇವೇಂದ್ರನಿಗಾದ ಗತಿಯೇ ಒದಗುವುದು. (ನಾಯಕ ಆರ್ಭಟಿಸುವನು. ರಂಗದ ಮೇಲೆ ಪೂರ್ಣ ಬೆಳಕು ಬೀರುವುದು).

  13. ಸುಬ್ಬಭಟ್ಟರ ಮಗಳು -ಶ್ಯಾನಭೋಗರ ಮಗಳು…
    ನಮ್ಮ ಜ.ಭಾಗವತರು ಮತ್ತೆ ಯಾರನ್ನು ನೋಡಬೇಕೆಂತೆ 🙂

    >>ಹನ್ನೆರಡು ತುಂಬಿಹುದು ಮದುವೆಯಿಲ್ಲ |
    ಹನ್ನೆರಡೆಕ್ಕೆ ಮದುವೆಯಿಲ್ಲ ಅಂತಾ ಚಿಂತೆಯೇ ??
    ಬಹುಷಃ ಆಗ ಪರಿಸ್ಥಿತಿ ಹಾಗೀತ್ತೇನೋ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.