ಎಲ್ಲರಿಗೂ ಸರ್ವಧಾರಿ ಸಂವತ್ಸರದ ಶುಭಾಶಯಗಳು!

ಕವನ : ಯುಗಾದಿ
ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ)

ಹಾಡು ಕೇಳಿ 

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಮ್ಮೆ ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

(ಅಂಬಿಕಾತನಯದತ್ತರ  “ಗರಿ” ಕವನ ಸಂಕಲನದಿಂದ )

13 thoughts on “ಯುಗಾದಿ ಮರಳಿ ಬರುತಿದೆ – ಬೇಂದ್ರೆ”

 1. ತ್ರಿವೇಣಿಯವರೇ,

  ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ ಯುಗಾದಿಯ ಶುಭಾಶಯಗಳು.

  ಬೇಂದ್ರೆಯವರ ಈ ಹಾಡು ನೆನಪು ಮಾಡಿಕೊಳ್ಳದೇ ಯುಗಾದಿ ಪೂರ್ತಿ ಆಗೋಲ್ಲಾ ಅನಿಸುತ್ತೆ.

  ಸಿನಿಮಾದಲ್ಲಿ ಅಳವಡಿಸಿಕೊಂಡಾಗ ಇದರ ಕೊನೆಯ ಎರಡು ಪ್ಯಾರ ಬಿಟ್ಟಿದಾರೆ ಅಲ್ವಾ. ಎಲೇ ಸಾಹಸಿ ಚಿರಂಜೀವಿ..ಅಂದರೆ ಯಾರು?

   

 2. ನಿಮಗು ಸಹ ಯುಗಾದಿಯ ಶುಭಾಶಯಗಳು. ನಮ್ಮ ಭೂತ ಲೋಕದಲ್ಲಿ, ಯುಗಾದಿ ಆಚರಿಸೊಲ್ಲ. ಹೋಳಿಗೆ ಮಾಡೊಲ್ಲ 🙁

  ಇಂತಿ
  ಭೂತ

 3. ಶಿವು @ “ಎಲೇ ಸಾಹಸಿ ಚಿರಂಜೀವಿ..ಅಂದರೆ ಯಾರು?” = ಇದು ಸನತ್ಕುಮಾರನನ್ನು ಉದ್ದೇಶಿಸಿ ನುಡಿದದ್ದು, ಆತ ಚಿರಂಜೀವಿ, ಸಾಹಸಿ; ಅದಕ್ಕೆ.

  ವೇಣಿ, ವನದಲ್ಲಿ ಹಬ್ಬ ಜೋರಾ (ಗೌಜಿಯಾ)? ಒಬ್ಬಟ್ಟು ಇಲ್ಲಿಗೂ ಎರಡು ಕಳಿಸು.

 4. ಶಿವು, ‘ಎಲೇ ಸಾಹಸಿ ಚಿರಂಜೀವ’ ಅಂದಿದ್ದು ಬೇವಿನ ಎಲೆ ಕುರಿತು. ಏಷ್ಟೇ ಯುಗಾದಿಗಳು ಬಂದರೂ ಬೇವಿನ ಎಲೆಗೆ ಸಾವಿಲ್ಲ. ಹಾಗಾಗಿ ಅದು ಚಿರಂಜೀವಿ. ಸಾಹಸಿ ಅಂತಿರೋದು ಯಾಕಂತ ಸರಿ ಗೊತ್ತಿಲ್ಲ. ಪ್ರಾಯಶಃ ತೆಲುಗು ನಟ ಚಿರಂಜೀವಿ ಚಿತ್ರ ನೋಡಿದ ನಂತರ ಈ ಕವನ ಬರ್ದಿರ್ಬಹುದು, ಬೇಂದ್ರೆಯವರು.

  ಇಂತಹ ಸಂದೇಹಗಳು ಬಂದಾಗ ನನ್ನನ್ನ ಕೇಳಿ. ಜ್ಯೊತಿಯವರು ನಿಮ್ಮನ್ನ ಹಾದಿ ತಪ್ಪಿಸೊ ಉತ್ತರ ಕೊಡ್ತಾರೆ, ಹುಷಾರಾಗಿರಿಃ-))

 5. ಎಸ್ ಜಾನಕಿ ಯುಗಾದಿ ಹಾಡನ್ನು ಅತಿ ಮಧುರವಾಗಿ ಹಾಡಿದ್ದಾರೆ. ಆದರೆ ಸಿನಿಮಾದಲ್ಲಿ ಪೂರ್ಣ ಹಾಡನ್ನು ತೆಗೆದುಕೊಂಡಿಲ್ಲ.’ ಹೊಂಗೆ ಹೂವ ತೊಂಗಲಲ್ಲಿ
  ಭೃಂಗದ ಸಂಗೀತಕೇಲಿ’ ಎನ್ನುವದು ಸರಿಯಾದ ಪಾಠ. ಅದರಂತೆ ‘ಸಲೆ ಸಾಹಸಿ’ ಎನ್ನುವದು ಸರಿಯಾದ ಪಾಠ.

 6. ಸುನಾಥರೇ, ನೀವು ತಿಳಿಸಿದಂತೆಯೇ ತಪ್ಪುಗಳನ್ನು ಸರಿಪಡಿಸಿದ್ದೇನೆ.. ಬೇಂದ್ರೆಯವರ ಕವಿತೆಯನ್ನು ಧಾರವಾಡದವರಾದ ನೀವು ಸರಿಪಡಿಸಿದ್ದು ಕಾಕತಾಳೀಯವಾಗಿದೆ 🙂

  ‘ಸಲೆ ಸಾಹಸಿ’ ಎಂದರೇನು? ಇದರ ಅರ್ಥವನ್ನೂ ತಿಳಿಸಿಕೊಟ್ಟಿದ್ದರೆ ಉಪಕಾರವಾಗಿರುತ್ತಿತ್ತು.

 7. ಸಲೆ ಎಂದರೆ ಚೆನ್ನಾಗಿ ಎಂದು ಅರ್ಥ. ಸಲೆ ಸಾಹಸಿ ಅಂದರೆ ಬಹಳ ಸಾಹಸಿಯಾದವನು! ಕನ್ನಡ ಭಾಷೆಯಲ್ಲಿ ಇರುವ ಎಲ್ಲ ಪದಗಳನ್ನೂ ಬೇಂದ್ರೆ ಉಪಯೋಗಿಸಿರಬಹುದು ಅಂತ ಅನ್ನಿಸುತ್ತದೆ. ಉದಾಹರಣೆಗೆ ಅವರ ಒಂದು ಕವಿತೆಯ ಸಾಲು ಹೀಗಿದೆಃ “ಅಲಕ್ನ ಜಿಗದಾ,
  ಜಿಗಿಧಾಂಗ ಹನಮಂತಾ”.
  ‘ಅಲಕ್ನ'(=ತಟ್ಟನೆ) ಎನ್ನುವ ಪದವನ್ನು ನೀವು ಕೇಳಿದ್ದಿರಾ?

 8. ಸುನಾಥರೇ, “ಅಲಕ್ಕು” ಎನ್ನುವ ಪದದ ಬಗ್ಗೆ ತಿಳಿದಿತ್ತು. ಹೇಳದೆ, ಕೇಳದೆ ನಾಪತ್ತೆಯಾಗುವ ವ್ಯಕ್ತಿಗೆ “ಅಲಕ್ಕಾದ” ಎನ್ನುವುದನ್ನು ಬಹಳ ಕಡೆ ಕೇಳಿದ್ದೇನೆ.  

   “ನೀನೇನೋ ಅಲಕ್ ನಿರಂಜನ್ ಅಂತ ಹೊರಟು ಬಿಡ್ತೀಯಾ, ನನ್ನ ಪಾಡೇನು?” –  ಈ ಅಲಕ್ ಬೇರೆ. ಆದರೆ ಅರ್ಥ ಒಂದೇ ರೀತಿ ಬರುತ್ತದೆ. 🙂

  “ಯುಗಾದಿ” ಪೂರ್ಣ ಕವನಕ್ಕಾಗಿ ನಿಮಗೆ ಧನ್ಯವಾದಗಳು.

 9. ತ್ರಿವೇಣಿಯವರೆ,
  ಮತ್ತೊಂದು ಯುಗಾದಿಯ ಶುಭಾಶಯಗಳುಃ ನಿಮಗೆ ಹಾಗು ತುಳಸಿವನವಿಹಾರಿಗಳಿಗೆ.

 10. ತ್ರಿವೇಣಿಯವರೆ,
  ಹೋದ ಯುಗಾದಿಯ comments ನೋಡುವಾಗ ಕಂಡ ‘ಅಲಕ್ ನಿರಂಜನ’ದಲ್ಲಿಯ ‘ಅಲಕ್’ ಪದದ ಬಗೆಗೆ ಒಂದು ವಿಶ್ಲೇಷಣೆ ಈ ವರ್ಷ ದೊರೆತಿದೆಃ
  ೧) ರಹಮತ ತರೀಕೆರೆಯವರ ಪ್ರಕಾರ ‘ಅಲಕ್’ ಇದು ಸೂಫೀಗಳ ಘೋಷಣೆಯಾದ ‘ಅಲ ಹಖ್’ನಿಂದ ಬಂದಿದೆ.
  ೨) ರಂ. ಶಾ. ಲೋಕಾಪುರ ಅವರ ಅಭಿಪ್ರಾಯದಲ್ಲಿ, ‘ಗೋರಖಬಾನಿ’ಯಲ್ಲಿ ಬರುವ ‘ಅಲಷ’ (=ಇಂದ್ರಿಯಾತೀತ) ಪದದಿಂದ ‘ಅಲಕ್’ ಪದ ಬಂದಿದೆ.

 11. ಸುನಾಥರೇ, ಅಲಕ್ ಪದ ವಿವರಣೆಗೆ ಧನ್ಯವಾದಗಳು. ನಿಮ್ಮ ಪ್ರತಿ ಉತ್ತರದಲ್ಲಿಯೂ ಏನಾದರೊಂದು ಹೊಸ ಮಾಹಿತಿ ನಮಗಾಗಿ ಕಾದಿರುತ್ತದೆ. “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂದು ಸರ್ವಜ್ಞ ಸುಮ್ಮನೆ ಹೇಳಿದ್ದಾನೆಯೇ?

 12. ನಾವು ಚಿಕ್ಕವರಿದ್ದಾಗ ನಮ್ಮಮ್ಮ ನಮಗೆ ಬಯ್ಯುವಾಗ ತುಳುವಿನಲ್ಲಿ “ಹಲಕ್ಕ ಎಲ್ಲ ಬಿಟ್ಟು ಹೋಗ್ತೇನೆ, ಆಗ ನಿಮಗೆಲ್ಲ ಗೊತ್ತಾಗ್ತದೆ ನನ್ನ ಬೆಲೆ” ಅಂತಿದ್ರು. ಕನ್ನಡದಲ್ಲೂ ಅಲಕ್ ಪದ ಇದ್ದದ್ದು ತಿಳಿದಿರಲಿಲ್ಲ (‘ಅಲಕ್ ನಿರಂಜನ್’ ಅನ್ನುವದು ಏನೋ ಘೋಷಣೆ ಅಂದುಕೊಂಡಿದ್ದೆ).

Leave a Reply to ಜಗಲಿ ಭಾಗವತ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.