ಸಾಹಿತ್ಯ – ಚೆನ್ನವೀರ ಕಣವಿ
ಸಂಗೀತ – ಸಿ.ಅಶ್ವಥ್
ಗಾಯಕರು – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್
ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ
ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ
ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು
ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು
ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ
ಹಿತವಾಗಿದೆ ಮೆಲ್ಲಲರುಲಿ ಮಿತವಾಗಿದೆ ಮೌನ
ಜೊತೆಗೂಡುತ ಮಾತಾಡಿವೆ ಅರೆನಿದ್ದೆಯೊಳೇನ?
ಲೋಕದ ಮೈನೋವಿಗೆ ಶ್ರೀಗಂಧದ ತನಿಲೇಪ
ಆಕಾಶದ ಗುಡಿಯಿಂದಲಿ ಹೊರ ಸೂಸಿದ ಧೂಪ!
ಒಳಿತೆಲ್ಲವೂ ಬೆಳಕಾಯಿತು ಬಾನ್ ಕರೆಯಿತು ಜೇನು
ಆನಂದದ ಕಡಲಾಳದಿ ನಾವಾದೆವೇ ಮೀನು
ಎವೆಯಿಕ್ಕದೆ ಮಿನುಗುತ್ತಿದೆ ಚಿಕ್ಕೆಯ ಹನಿ ದೀಪ
ತಮ್ಮಷ್ಟಕೆ ಧ್ಯಾನಿಸುತಿವೆ ಯಾವುದೋ ಸವಿನೆನಪ!
***
ತುಳಸಿಯಮ್ಮ,
ನೀವು ಕಳೆದ ಮೂರು ವಾರಗಳಿಂದ ‘ಹನುಮಾನ ಚಾಲೀಸಾ’ ಓದ್ತಾ ಇದ್ರಿ ಅಂತ ಮಹಾಜನತೆ ಆಡಿಕೊಳ್ತಾ ಇದ್ರ. ಹೌದಾ?ಃ-))
ಕಾರಿ ಹೆಗ್ಗಡೆಯವ್ರ ಮಗಳು ಬಪ್ಪುದ ಏಗ್ಳಿಕೆ?ಃ-)
>>ಬೆಳುದಿಂಗಳು
ಇದು ಬೆಳದಿಂಗಳಿಗೆ ಹೇಗೆ ಭಿನ್ನ?
ಹಾಗೇ ಮೆಲ್ವಾಸೆ ಅಂದರೆ ಮೆಲ್ಲುವ ಆಸೆಯೇ 🙂
ಚನಾಗಿದೆ
ಕಣವಿಯವರು ನಿನ್ನೆ ಉಷೆಯ ಗೆಳತಿಯನ್ನು ಕರೆದಿದ್ದರು. ಇಂದು ಮಲ್ಲಿಗೆಯನ್ನು ಕರೆಯುತ್ತಿದ್ದಾರೆ! ನಾಳೆ ಯಾರ ಪಾಳಿ?
ಜಗಲಿ ಭಾಗವತರೇ, ಈಗ ನೀವು ಬಂದಿರಲ್ಲವೇ? “ಹನುಮ”ನ ಚಾಳಿ ಇನ್ನು ಶುರುವಾಗುತ್ತದೆ. 🙂
ಶಿವು, ಬೆಳುದಿಂಗಳು, ಬೆಳದಿಂಗಳು, ಬೆಳ್ದಿಂಗಳು – ಇವುಗಳು ಅರ್ಥದಲ್ಲಿ ಭಿನ್ನವಲ್ಲವೆಂದು ನನ್ನ ಅನಿಸಿಕೆ. ಉತ್ತರ ಕರ್ನಾಟಕದ ಕವಿಗಳ ಕವಿತೆಗಳಲ್ಲಿ “ಬೆಳುದಿಂಗಳು ಹೆಚ್ಚಾಗಿ ಇರುತ್ತದೆ. (ಬೆಳುದಿಂಗಳ ನೋಡಾ – ಬೇಂದ್ರೆ)
ಮೆಲ್ವಾಸೆ ಅಂದರೆ ಮೆಲ್ಲುವಾಸೆಯೇ ಆಗಲಿ. 🙂 ಆದರೆ ಇಲ್ಲಿಯದು ಮೆಲ್ವಾಸು = ಮೆದುವಾದ ಹಾಸು.
ಸುನಾಥರೇ, ಕಣವಿಯವರು ನಿಮ್ಮೂರಲ್ಲೇ ಇದ್ದಾರೆ. ನೀವೇ ವಿಚಾರಿಸಿ ತಿಳಿಸಿ. 🙂
ಎವೆಯಿಕ್ಕದೆ ಮಿನುಗುತ್ತಿದೆ ಚಿಕ್ಕೆಯ ಹನಿ ದೀಪ
ತಮ್ಮಷ್ಟಕೆ ಧ್ಯಾನಿಸುತಿವೆ ಯಾವುದೋ ಸವಿನೆನಪ!
ಕಣವಿಯವರ ಈ ಕವಿತೆ ನನಗೂ ತುಂಬ ಇಷ್ಟ.
ಎಷ್ಟೋ ಸಲ ಬೆಳಿಗ್ಗೆ ರೇಡಿಯೋದಲ್ಲಿ ಕೇಳುತ್ತೇನೆ ಇದನ್ನ. ಒಂದೊಂದು ಸಾಲೂ ಒಂದೊಂದು ಭಾವದ ಚಿಲುಮೆ.
ಈ ಚಂದದ ಕವಿತೆಯನ್ನ ನೆನಪಿಸಿದ್ದಕ್ಕೆ ಧನ್ಯವಾದಗಳು.
ಸಿಂಧು, ನಿಮ್ಮ ಬ್ಲಾಗಿನಲ್ಲಿ ನರಸಿಂಹಸ್ವಾಮಿಯವರ ಕುರಿತಾದ ಲೇಖನ ನೋಡಿದಾಗಲೇ ನೀವು ನನಗೆ ಆಪ್ತರಾಗಿದ್ದಿರಿ. ಈಗ ನಿಮ್ಮನ್ನು ತುಳಸಿವನದಲ್ಲಿ ನೋಡಿ ಸಂತೋಷವಾಯಿತು. ಸದಾ ಸ್ವಾಗತ 🙂
“ಕಣವಿಯವರ ಕವಿತೆ ; ಒಂದೊಂದು ಸಾಲೂ ಒಂದೊಂದು ಭಾವದ ಚಿಲುಮೆ” – ಈ ಬಗ್ಗೆ ಎರಡನೆಯ ಮಾತಿಲ್ಲ!
ತ್ರಿವೇಣಿಯವರೆ, ಉತ್ತರ ಕರ್ನಾಟಕದ ಕವಿಗಳೇ ಹೆಚ್ಚಾಗಿ ‘ಬೆಳುದಿಂಗಳು’ ಎಂದು ಬರೆಯುತ್ತಾರೆನ್ನುವದು ಸರಿಯಲ್ಲ. ಮೈಸೂರಿನ ತ. ಸು. ಶಾಮರಾಯರು ಬರೆದ “ಮೂರು ತಲೆಮಾರು” ಪುಸ್ತಕದ ೧೭೯ನೆಯ ಪುಟದ ೨೫ನೆಯ ಸಾಲಿನಲ್ಲಿ ” ಹಾಲಿನ ಮಳೆಯೆಂತೆ ಬೆಳುದಿಂಗಳು ಸುರಿದಿತ್ತು” ಎನ್ನುವ ವಾಕ್ಯವಿದೆ. (ಮೊದಲ ಮುದ್ರಣಃ ೧೯೮೭).
ಎರಡನೆಯದಾಗಿ, ಯಾರೇ ಬರೆಯಲಿ, ವ್ಯಾಕರಣದಲ್ಲಿ ಇದು ಸರಿಯಲ್ಲ. ಏಕೆಂದರೆ ‘ಬೆಳದಿಂಗಳು’ ಈ ಸಮಾಸದ ವಿಗ್ರಹವನ್ನು ‘ತಿಂಗಳಿನ ಬೆಳಕು’ ಎಂದು ಮಾಡಲಾಗುತ್ತಿದೆ. ‘ಬೆಳುದಿಂಗಳು’ ಈ ಪದವನ್ನು ‘ಬೆಳು+ತಿಂಗಳು’ ಎಂದು ಬಿಡಿಸಬೇಕಾಗುತ್ತದೆ. ಶಿವರಾಮ ಕಾರಂತರ ಶಬ್ದಕೋಶದ ಮೇರೆಗೆ, ಬೆಳು ಅಂದರೆ ಬೆಳ್ಳಗಿನ ಎಂದು ಅರ್ಥ.
ಸರಿ ಸುನಾಥರೇ, ಉತ್ತರ ಕರ್ನಾಟಕದ ಕವಿಗಳ ಕವಿತೆಯಲ್ಲಿ ಈ ಪದವನ್ನು ಹೆಚ್ಚಾಗಿ ನಾನು ನೋಡಿದ್ದೇನೆ ಎನ್ನಬೇಕಿತ್ತು. ಹೇಳಿಕೆಯನ್ನು ಸಾರ್ವತ್ರಿಕವಾಗಿಸಿದ್ದು ನನ್ನ ತಪ್ಪು 🙂
ಅದಿರಲಿ, ಈ ಬೆಳದಿಂಗಳ ಬೆಳಕಿನಲ್ಲಿ ನಿಮ್ಮಲ್ಲಿರುವ “ಮೂರು ತಲೆಮಾರು” ಪುಸ್ತಕ ಬೆಳಕಿಗೆ ಬಂದಿತು ನೋಡಿ. ಜೋಗಿಯವರು ಆ ಪುಸ್ತಕದ ಬಗ್ಗೆ ಬರೆದು ಎಲ್ಲರಲ್ಲೂ ಆಸೆ ಮೂಡಿಸಿದ್ದಾರೆ.