ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ

ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ – ಸಿ. ಅಶ್ವಥ್
ಗಾಯಕಿ – ರತ್ನಮಾಲಾ ಪ್ರಕಾಶ್
ಆಲ್ಬಂ – “ತೂಗು ಮಂಚ”

 ಹಾಡು ಕೇಳಿ 

ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು

ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು

ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು

ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ
ಬೆಳ್ಳಿ ಹಾಲ ಬಟ್ಟಲು

ಚಾಚುತಿರಲು ಅರಳಿದರಳು
ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು
ಹಾಯಿ ದೋಣಿ ತೇಲಿತು

ತನಗೆ ತಾನೇ ತೂಗುಮಂಚ
ತಾಗುತ್ತಿತ್ತು ದೂರದಂಚ
ತೆಗೆಯೊ ಗರುಡ ನಿನ್ನ ಚೊಂಚ
ಹಾಲು ಗಡಿಗೆ ಹೇಳಿತು

    ***

9 thoughts on “ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ”

 1. ಸುನಾಥ says:

  ಇದೆಲ್ಲೋ ದ್ವಾಪರಯುಗದ ರಾಧೆಯ ಬಗೆಗೆ ಬರೆದ ಕವಿತೆ. ಕಲಿಯುಗದ ರಾಧೆ ನಾಚಬಹುದೆ?

 2. ಕವಿ ಎಚ್.ಎಸ್.ವಿ.ಯವರಿಗೆ ದ್ವಾಪರದ ರಾಧೆಯೇ ಗೊತ್ತು; ಕಲಿಯುಗದ ಕಾಲ-ಕನ್ನಿಕೆಯರ ಪರಿಚಯ ಇದ್ದಂತಿಲ್ಲ. ಸಜ್ಜನರಲ್ಲಿ ಸಜ್ಜನ ಆತ.

 3. Shiv says:

  ಆಹಾ ! ಎಂತಹ ಸ-ರಸಮಯ ಲೋಕವದು ರಾಧಾ-ಮಾಧವರದು..
  ಬಹಳ ಚೆನ್ನಾಗಿದೆ..
  ವಂದನೆಗಳು ಇಂತಹ ಸುಂದರ ಕವನ ಹಾಕಿದ್ದಕ್ಕೆ

 4. Ranjith says:

  ಎಚ್. ಎಸ್. ವಿ. ಯವರ “ಹವಳ ಕೆಂಪಿನ ಸಂಜೆ” ಹಾಡಿನ ಕುರಿತೂ ಬರೆಯಿರಿ ಮೇಡಮ್..

 5. sritri says:

  ರಂಜಿತ್, ‘ಹವಳ ಕೆಂಪಿನ ಸಂಜೆ’ ನನಗೂ ಇಷ್ಟ. “ಹೊತ್ತು ಮುಳುಗುವ ಸಮಯ… ಸೂರ್ಯ ದಹಿಸುವ ಹೃದಯ” … ಹೃದಯವನ್ನು ಮಧುರ ಯಾತನೆಗೊಳಪಡಿಸುವ ಸುಂದರ ಕವಿತೆ.

  ತುಳಸಿವನದ ಮುಂದಿನ ಕವಿತೆ ಅದೇ. 🙂

 6. Ranjith says:

  ನನ್ನ ಮಾತನ್ನು ಮನ್ನಿಸಿದ್ದಕ್ಕೆ ಥ್ಯಾಂಕ್ಸ್.. ಸಿ. ಎಸ್. ಈ ಹಾಡನ್ನು ಹಾಡಿದ ಬಗೆಯೂ ಒಂದು ಅದ್ಭುತ.. ಪಲ್ಲವಿ, ಚರಣಗಳನ್ನು ಮಿಕ್ಸ್ ಮಾಡಿದ ಕಂಪೋಸಿಶನ್ ಕೂಡ.
  ಹಾಗೇ ಸಾಲುಗಳಲ್ಲಿ “ನಿನ್ನ ಕೊರಳಿನ ಪದಕ, ನನ್ನ ಹೃದಯ!” ಸಾಲನ್ನು ನೋಡಿ, ಎಚ್ಚೆಸ್ವಿಯವರ ಪೂರ್ಣ ಟ್ಯಾಲೆಂಟ್ ಇಲ್ಲೇ ಬಸಿದಿರುವಂತಿದೆ.
  ನಿಮ್ಮ ಬರಹಕ್ಕೆ ಕಾಯ್ತಿದೀನಿ.

 7. sritri says:

  ರಂಜಿತ್, ನಾನು ಈವರೆಗೂ ಯಾವುದೇ ಕವಿತೆಯ ಬಗೆಗೂ ಬರಹ ಎಂದೇನೂ ಬರೆದಿಲ್ಲ. ನನ್ನ ಮೆಚ್ಚಿನ ಕವಿತೆಗಳನ್ನ ಇಲ್ಲಿ ಪ್ರಕಟಿಸುತ್ತೇನೆ. ಸುನಾಥ್ ಕಾಕಾ, ಜ್ಯೋತಿ ಮತ್ತಿತರ ಸಾಹಿತ್ಯಾಸಕ್ತರು ಕವಿತೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಈಗ ನೀವೂ ನಮ್ಮೊಡನೆ ಸೇರಿಕೊಳ್ಳಿ.

 8. ರೇವತಿ ರಾಮಚಂದ್ರಾಚಾರ್ says:

  ಅತ್ಯದ್ಭುತ ರಚನೆ, ಓದುಗನ ಮನಸಿನಲ್ಲಿ ರಾಧೆ ಶ್ಯಾಮರ ರಾಸಲೀಲೆ ಕಣ್ಣಿಗೆ ಕಟ್ಟುವಂತಿದೆ, ಏನು ಪರಿ ಕಲ್ಪನೆ, ಏನು ಪದ ಬಳಕೆ, ಅನಂತ ಧನ್ಯವಾದಗಳು

  1. sritri says:

   ಹೌದು, ಕವಿತೆ ಓದಿದಾಗ ಆಗುವ ಸಂತೋಷ ಅಪಾರ. ಅದಕ್ಕೆ ನಿಮ್ಮಂತೆ ಓದಿ ಸವಿಯುವ ಸುಂದರ ಮನಸ್ಸಿರಬೇಕು! 🙂 ತುಳಸಿವನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅಳುವ ಕಡಲೊಳು – ಗೋಪಾಲಕೃಷ್ಣ ಅಡಿಗಅಳುವ ಕಡಲೊಳು – ಗೋಪಾಲಕೃಷ್ಣ ಅಡಿಗ

ಕವಿ –  ಎಂ.ಗೋಪಾಲಕೃಷ್ಣ ಅಡಿಗ ಹಾಡು ಕೇಳಿ :           ಪಿ.ಕಾಳಿಂಗರಾವ್                 ರಾಜೇಶ್ (ಚಿತ್ರ:ಮತದಾನ)                      ಬಿ.ಆರ್.ಛಾಯಾ (ಚಿತ್ರ:ಮತದಾನ) ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ ನೆರೆತಿದೆ ಬೆರೆತಿದೆ ಕುಣಿವ ಮೊರೆವ

ನಾನು ಕೋಳಿಕೆ ರಂಗ – ಟಿ.ಪಿ.ಕೈಲಾಸಮ್ನಾನು ಕೋಳಿಕೆ ರಂಗ – ಟಿ.ಪಿ.ಕೈಲಾಸಮ್

ConstantinopleC-O-N-S-T-A-N-T-I-N-O-P-L-EC-O-N-S-T-A-N-T-I-N-O-P-L-EUse your pluck now try your luck to sing along with me, ConstantinopleC-O-N-S-T-A-N-T-I-N-O-P-L-EC-O-N-S-T-A-N-T-I-N-O-P-L-EIt’s as easy to sing as you sing your A-B-C. ನಾನು ಕೋಳಿಕೆ ರಂಗ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗಕಕೊತ್ವ

ತಿಳಿಮುಗಿಲ ತೊಟ್ಟಿಲಲಿ – ಎಸ್.ವಿ.ಪರಮೇಶ್ವರ ಭಟ್ಟತಿಳಿಮುಗಿಲ ತೊಟ್ಟಿಲಲಿ – ಎಸ್.ವಿ.ಪರಮೇಶ್ವರ ಭಟ್ಟ

ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ ಸಂಗೀತ: ಸಿ. ಅಶ್ವಥ್ ಗಾಯಕ: ಡಾ. ರಾಜ್‍ಕುಮಾರ್ ಹಾಡು ಕೇಳಿ ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು | ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು| ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ