ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.  ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು.  ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು.  ಸುದೀಪ ಹುಸಿ ಆದರ್ಶವಾದಿಯಲ್ಲ.  ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು.    ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ ಸತ್ಯವನ್ನು ಅರಗಿಸಿಕೊಳ್ಳುವ ವಿಶಾಲ ಹೃದಯ ತನಗಿದೆಯೇ? ಆ ಪ್ರಶ್ನೆಯನ್ನು  ತನ್ನನ್ನೇ ತಾನು ಮತ್ತೊಮ್ಮೆ ಕೇಳಿಕೊಂಡ. ಇಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿತು ಅವನ ಮನಸ್ಸು. 

ಒಂದು ವೇಳೆ ತಾನು ಒಪ್ಪಿದರೂ ಸಂಪ್ರದಾಯಸ್ಥ ತಾಯಿ ಒಪ್ಪಿಯಾಳೇ?  ತನ್ನಲ್ಲಿ ಜೀವವನ್ನೇ ಇಟ್ಟುಕೊಂಡಿರುವ ತಾಯಿಯನ್ನು ನಿರಂತರ ನೋವಿನ ಕುಂಡದಲ್ಲಿ ಬೇಯಲು ಹಾಕಿ ತಾನಾದರೂ ಸುಖವಾಗಿರುವುದು ಸಾಧ್ಯವಿದೆಯೇ?   ತನ್ನ ಮನೆಗೆ ಬೆಂಕಿ ಹಚ್ಚಿಕೊಂಡು ಊರಿನ ಕತ್ತಲನ್ನು ತೊಡೆಯುತ್ತೇನೆಂದುಕೊಳ್ಳುವುದರಲ್ಲಿ ಏನರ್ಥವಿದೆ?

ಹಾಗಾದರೆ ಯಾಮಿನಿ? ಅವಳ ಸೂಜಿಗಲ್ಲಿನಂತಹ ವ್ಯಕ್ತಿತ್ವದಿಂದ ಪಾರಾಗುವುದು ಹೇಗೆ? ಹಾಗೆ.. ಈಗ ಸುನಯನಳನ್ನು ಮರೆತು ಬದುಕಿಲ್ಲವೇ ಹಾಗೆ.  ಸುನಯನ ಸುಂದರವಾದ ಕನಸು, ಯಾಮಿನಿ ಮುಗಿಲ ಮಲ್ಲಿಗೆ. ಕನ್ನಿಕಾ…?  ನನಗಾಗಿ ವಿಧಿ ವಿಧಿಸಿರುವ ವಧು ನೀನಾ ? ನೀನೇನಾ? ಆದರೆ ಅದು ಹೇಗೆ ಸಾಧ್ಯ?

                                                              ***

ಸುನೀ…ಅವನ ಧ್ವನಿ ಅವನಿಗೇ ಅಚ್ಚರಿ ಹುಟ್ಟಿಸುತ್ತಿದೆ…ಹಗಲುಗನಸೇ…? ಚಿವುಟಿಕೊಂಡ… ನೋವಾಯಿತು!
ಆಗಸ ನೀಲಿಯ ಕಂಗಳ ಒಡತಿ ತಿರುಗಿ ನೋಡಿದಳು… ಸುದೀಪಾ… ಇತ್ತ ಓಡಿ ಬಂದವಳು ಏಕೋ ಗಕ್ಕನೆ ನಿಂತಳು…ನೀನಿಲ್ಲಿ…? ತೊದಲಿದ ಸುದೀಪ.

ದೇವಸ್ಥಾನದ ಜನಜಂಗುಳಿಯ ಶಬ್ದ ಮರೆಯಾಗಿ ಇಬ್ಬರ ಎದೆಯಲ್ಲೂ ಸ್ಪಟಿಕ ಗಂಭೀರವಾಗಿ ಘಂಟಾನಾದವೇ ಮೊರೆಯತೊಡಗಿತು.
`ಸರಿ ಹೋಗಲಿಲ್ಲ ಸುದೀಪ…ಹೊರನಾಡು…ಬಂದು ಬಿಟ್ಟೆ…’ಎಂದುಸುರಿದವಳ ಕಣ್ಣಲ್ಲಿ ನೋವಿನ ತೂಫಾನೇ ಇತ್ತೇ…?
ಎಲ್ಲವನ್ನೂ ಎದುರಿಸಿ ಬಾಳಬಲ್ಲೆನೆಂಬ ದೃಡತೆ ಇತ್ತೇ…?`ಮತ್ತೆ ಸಿಗ್ತೀಯಲ್ಲಾ…’ಎಂದವಳ ಮಾತಿನ ಅರ್ಥವೇನು?
ನನ್ನಿಂದ ಯಾವ ಭರವಸೆ ಬಯಸಿದಳು ಸುನಯನಾ?

                                  ***

ಗೋಧೂಳಿ ಹೊತ್ತು… ಆಕಾಶದ ತುಂಬಾ ಓಕುಳಿಯ ರಂಗು…

“ಚೆಮ್ಮುಗಿಲ ತೋರಣವು ಬಾನಿನೊಳಗೇರೆ…
ಸ್ವರ್ಣರಥದೊಲು ಬಾನು ಮಲೆ ಮೇಲೆ ತೋರೆ…”

ಸುದೀಪನ ಮನ ಹಲ ರಂಗುಗಳು ಬಳಿದ ಅಸ್ಪಷ್ಟ ಕ್ಯಾನ್ವಾಸ್ ನಂತಿದೆ…
ಬಳಿದ ಯಾವ ಬಣ್ಣವೂ ಮನಕ್ಕೊಪ್ಪದೆ ಚಿತ್ರಕಾರ ಬೇಸತ್ತು ಕುಂಚ ಎಸೆದು ಹೊರಟು ಹೋದನೇ?

ಯಾರದೋ ಕೊರಲು…ಯಾವುದೋ ಗೀತೆ…ಹೊಂದದ ರಾಗ…ಮಸುಕು ಮಸುಕಾದ ಚಿತ್ರಗಳು…

“ಯಾರೋ ಹಾಡುವ…ಯಾರೋ ಬೇಡುವ… ಬೆರೆಯದ ವಾಣಿಗಳು…
ಯಾರೋ ಮುಗಿಲಲೀ… ಯಾರೋ ಕಣಿವೆಯಲೀ… ಹೊಂದದ ಚಿತ್ರಗಳೂ…”

ಯಾಮಿನೀ…ಸುನಯನಾ…ಕನ್ನಿಕಾ…
ಸೃಷ್ಟಿ…ಅಮ್ಮ…ನಾರ್ಣಪ್ಪನವರು…

ಮನದತುಂಬ ತುಂಬಿದ ಯಾಮಿನೀ ನಸು ನಕ್ಕಳು… ನಕ್ಷತ್ರ ಬೆಳಗಿದಂತೆ…
ಹೃದಯದಲ್ಲಿ ಮನೆಮಾಡಿದ ಸುನಯನಳದ್ದು ಮುತ್ತಿನಂಥಾ ಕಣ್ಣೀರ ಹನಿಗಳು ಆಗಸದಿಂದ ಸೋನೆ ಮಳೆ…

ಬಾಲ್ಯ ಸಖಿ ಕನ್ನಿಕಾಳ ಮುಗ್ಧ ಮುಖ…
ಮಮತೆಯ ಮಹಾಪೂರವೇ ಆದ ಅಮ್ಮನ ಶಾಂತ ಪ್ರಶಾಂತ ಮುಖ…

ಸುದೀಪ ಕಣ್ಮುಚ್ಚಿ ನಿಡಿದಾದ ಉಸಿರೆಳೆದು ಕೊಂಡ…

ಮಂಝಿಲೆ ಅಪ್ನೀ ಜಗಹ್ ಹೇ…
ರಾಸ್ತೇ ಅಪ್ನೀ ಜಗಹ್…
ಜಬ್ ಕದಂ ಹೀ ಸಾಥ್ ನಾ ದೇ…
ತೋ ಮುಸಾಫಿರ್ ಕ್ಯಾ ಕರೇ…

                                                        ***

     ಯಾರು ಹಿತವರು ನಿನಗೆ ಈ ಮೂವರೊಳಗೆ? ಕನ್ನಿಕಾ? ಯಾಮಿನಿ? ಸುನಯನಾ? ಕನ್ನಿಕಾಳನ್ನು ಅವನು ಎಂದೂ ಮುದ್ದು ತಂಗಿಯ ಸ್ಥಾನದಲ್ಲಿಟ್ಟು ನೋಡಿದ್ದಾನೆಯೇ ಹೊರತು ಅದಕ್ಕೆ ಬೇರಾವ ಪರ್ಯಾಯವಿಲ್ಲ. ತಾಯಿಗೆ ಈ ವಿಷಯ ಮನವರಿಕೆ ಮಾಡಿಸದೆ ಅವರ ಆಶಾಗೋಪುರವನ್ನು ಇಷ್ಟೆಲ್ಲಾ ಎತ್ತರಕ್ಕೆ ಬೆಳೆಸಬಾರದಿತ್ತು ಅನಿಸಿತು.
 
        ಯಾಮಿನಿಯನ್ನು ಮುಗಿಲ ಮಲ್ಲಿಗೆಯೆಂದು ಎಂದೋ ನಿರ್ಧರಿಸಿದ್ದಾಗಿದೆ.  ಯಾಮಿನಿ ತನ್ನನ್ನು ಪ್ರೀತಿಸಿರಬಹುದೆಂಬುದು ತನ್ನ ಭ್ರಮೆ ಮಾತ್ರ. ಜಗವನ್ನೇ ಪ್ರೀತಿಸಿ, ಎದೆಗಪ್ಪಿಕೊಳ್ಳುವ ಅವಳ ಮಮತೆಯ ಕಡಲಿನಲ್ಲಿ ತನಗೂ ಒಂದು ಬಿಂದುವಾಗುವ ಭಾಗ್ಯವಿರಬಹುದು ಅಷ್ಟೆ.  ಆದರೆ ಸುನಯನಾ? ಅವನಲ್ಲಿ ಇನ್ನು ಯಾವ ಅನುಮಾನವೂ ಉಳಿಯಲಿಲ್ಲ.  ಸುನಯನ ನೊಂದಿದ್ದಾಳೆ. ಯಾಕೆ? ಆ ನೀಲಿ ಕಣ್ಣಿನಲ್ಲೆದ್ದಿರುವ ನೋವಿನಲೆಗಳಿಗೆ ಮೊದಲು ಕಾರಣ ಹುಡುಕಬೇಕು. ಸಮಸ್ಯೆಯ ಮೂಲ ತಿಳಿದರೆ ತಾನೇ ಪರಿಹಾರ?
 
        ಮೊಬೈಲ್ ತೆಗೆದುಕೊಂಡು ಸುನಯನಾಳ ನಂಬರಿಗಾಗಿ ಅರಸಿದ.  ಅವಳೇ ಕೊಟ್ಟಿದ್ದಳು ಆದಿನ.  ಕರೆ ಮಾಡಿದ. ಆ ಕಡೆಯಿಂದ ಮಾರುತ್ತರ ಬಂದಿತು. ಧ್ವನಿಯೊಂದು ಇಷ್ಟು ಸಿಹಿಯಾಗಿರುವುದು ಸಾಧ್ಯವೇ!

14 thoughts on “ಒಲವೇ..ಹೂವಾಗಿ ಬಳಿ ಬಂದೆ! – 5”

  1. ಸುನೀ…ಅವನ ಧ್ವನಿ ಅವನಿಗೇ ಅಚ್ಚರಿ ಹುಟ್ಟಿಸುತ್ತಿದೆ…ಹಗಲುಗನಸೇ…?ಚಿವುಟಿಕೊಂಡ… ನೋವಾಯಿತು!
    ಆಗಸ ನೀಲಿಯ ಕಂಗಳ ಒಡತಿ ತಿರುಗಿ ನೋಡಿದಳು… ಸುದೀಪಾ… ಇತ್ತ ಓಡಿ ಬಂದವಳು ಏಕೋ ಗಕ್ಕನೆ ನಿಂತಳು…
    ನೀನಿಲ್ಲಿ…? ತೊದಲಿದ ಸುದೀಪ
    ದೇವಸ್ಥಾನದ ಜನಜಂಗುಳಿಯ ಶಬ್ದ ಮರೆಯಾಗಿ ಇಬ್ಬರ ಎದೆಯಲ್ಲೂ ಸ್ಪಟಿಕ ಗಂಭೀರವಾಗಿ ಘಂಟಾನಾದವೇ ಮೊರೆಯ ತೊಡಗಿತು
    `ಸರಿ ಹೋಗಲಿಲ್ಲ ಸುದೀಪ…ಹೊರನಾಡು…ಬಂದು ಬಿಟ್ಟೆ…’ಎಂದುಸುರಿದವಳ ಕಣ್ಣಲ್ಲಿ ನೋವಿನ ತೂಫಾನೇ ಇತ್ತೇ…?
    ಎಲ್ಲವನ್ನೂ ಎದುರಿಸಿ ಬಾಳಬಲ್ಲೆನೆಂಬ ದೃಡತೆ ಇತ್ತೇ…?

    `ಮತ್ತೆ ಸಿಗ್ತೀಯಲ್ಲಾ…’ಎಂದವಳ ಮಾತಿನ ಅರ್ಥವೇನು?
    ನನ್ನಿಂದ ಯಾವ ಭರವಸೆ ಬಯಸಿದಳು ಸುನಯನಾ?

  2. ಗೋಧೂಳಿ ಹೊತ್ತು… ಆಕಾಶದ ತುಂಬಾ ಓಕುಳಿಯ ರಂಗು…

    “ಚೆಮ್ಮುಗಿಲ ತೋರಣವು ಬಾನಿನೊಳಗೇರೆ…
    ಸ್ವರ್ಣರಥದೊಲು ಬಾನು ಮಲೆ ಮೇಲೆ ತೋರೆ…”

    ಸುದೀಪನ ಮನ ಹಲ ರಂಗುಗಳು ಬಳಿದ ಅಸ್ಪಷ್ಟ ಕ್ಯಾನ್ವಾಸ್ ನಂತಿದೆ…
    ಬಳಿದ ಯಾವ ಬಣ್ಣವೂ ಮನಕ್ಕೊಪ್ಪದೆ ಚಿತ್ರಕಾರ ಬೇಸತ್ತು ಕುಂಚ ಎಸೆದು ಹೊರಟು ಹೋದನೇ?

    ಯಾರದೋ ಕೊರಲು…ಯಾವುದೋ ಗೀತೆ…ಹೊಂದದ ರಾಗ…ಮಸುಕು ಮಸುಕಾದ ಚಿತ್ರಗಳು…

    “ಯಾರೋ ಹಾಡುವ…ಯಾರೋ ಬೇಡುವ… ಬೆರೆಯದ ವಾಣಿಗಳು…
    ಯಾರೋ ಮರೆಯಲೀ… ಯಾರೋ ಕಣಿವೆಯಲೀ… ಹೊಂದದ ಚಿತ್ರಗಳೂ…”

    ಯಾಮಿನೀ…ಸುನಯನಾ…ಕನ್ನಿಕಾ…
    ಸೃಷ್ಟಿ…ಅಮ್ಮ…ನಾರ್ಣಪ್ಪನವರು…

    ಮನದತುಂಬ ತುಂಬಿದ ಯಾಮಿನೀ ನಸು ನಕ್ಕಳು… ನಕ್ಷತ್ರ ಬೆಳಗಿದಂತೆ…
    ಹೃದಯದಲ್ಲಿ ಮನೆಮಾಡಿದ ಸುನಯನಳದ್ದು ಮುತ್ತಿನಂಥಾ ಕಣ್ಣೀರ ಹನಿಗಳು ಆಗಸದಿಂದ ಸೋನೆ ಮಳೆ…

    ಬಾಲ್ಯ ಸಖಿ ಕನ್ನಿಕಾಳ ಮುಗ್ಧ ಮುಖ…
    ಮಮತೆಯ ಮಹಾಪೂರವೇ ಆದ ಅಮ್ಮನ ಶಾಂತ ಪ್ರಶಾಂತ ಮುಖ…

    ಸುದೀಪ ಕಣ್ಮುಚ್ಚಿ ನಿಡಿದಾದ ಉಸಿರೆಳೆದು ಕೊಂಡ…

    ಮಂಝಿಲೆ ಅಪ್ನೀ ಜಗಹ್ ಹೇ…
    ರಾಸ್ತೇ ಅಪ್ನೀ ಜಗಹ್…
    ಜಬ್ ಕದಂ ಹೀ ಸಾಥ್ ನಾ ದೇ…
    ತೋ ಮುಸಾಫಿರ್ ಕ್ಯಾ ಕರೇ…

  3. ಜಗಲಿ ಭಾಗವತರೆ,
    ಸುನಯನಾ, ಯಾಮಿನಿ ಇಂತಹ ಚೆಲುವೆಯರನ್ನು ಮೂರು ದಿನ ಅಲ್ಲ, ಮೂರು ನಿಮಿಷ ಸಹ ಬಿಟ್ಟು ಸರಿಯಬಾರದು; ಜಮಾನಾ ಖರಾಬ ಹೈ!

  4. ಯಾರು ಹಿತವರು ನಿನಗೆ ಈ ಮೂವರೊಳಗೆ? ಕನ್ನಿಕಾ? ಯಾಮಿನಿ? ಸುನಯನಾ? ಕನ್ನಿಕಾಳನ್ನು ಅವನು ಎಂದೂ ಮುದ್ದು ತಂಗಿಯ ಸ್ಥಾನದಲ್ಲಿಟ್ಟು ನೋಡಿದ್ದಾನೆಯೇ ಹೊರತು ಅದಕ್ಕೆ ಬೇರಾವ ಪರ್ಯಾಯವಿಲ್ಲ. ತಾಯಿಗೆ ಈ ವಿಷಯ ಮನವರಿಕೆ ಮಾಡಿಸದೆ ಅವರ ಆಶಾಗೋಪುರವನ್ನು ಇಷ್ಟೆಲ್ಲಾ ಎತ್ತರಕ್ಕೆ ಬೆಳೆಸಬಾರದಿತ್ತು ಅನಿಸಿತು.

    ಯಾಮಿನಿಯನ್ನು ಮುಗಿಲ ಮಲ್ಲಿಗೆಯೆಂದು ಎಂದೋ ನಿರ್ಧರಿಸಿದ್ದಾಗಿದೆ. ಯಾಮಿನಿ ತನ್ನನ್ನು ಪ್ರೀತಿಸಿರಬಹುದೆಂಬುದು ತನ್ನ ಭ್ರಮೆ ಮಾತ್ರ. ಜಗವನ್ನೇ ಪ್ರೀತಿಸಿ, ಎದೆಗಪ್ಪಿಕೊಳ್ಳುವ ಅವಳ ಕರುಣೆಯ ಕಡಲಿನಲ್ಲಿ ತಾನಗೂ ಒಂದು ಬಿಂದುವಾಗುವ ಭಾಗ್ಯವಿರಬಹುದು ಅಷ್ಟೆ. ಆದರೆ ಸುನಯನಾ? ಅವನಲ್ಲಿ ಇನ್ನು ಯಾವ ಅನುಮಾನವೂ ಉಳಿಯಲಿಲ್ಲ. ಸುನಯನ ನೊಂದಿದ್ದಾಳೆ. ಯಾಕೆ? ಆ ನೀಲಿ ಕಣ್ಣಿನಲ್ಲೆದ್ದಿರುವ ನೋವಿನಲೆಗಳಿಗೆ ಮೊದಲು ಕಾರಣ ಹುಡುಕಬೇಕು. ಸಮಸ್ಯೆಯ ಮೂಲ ತಿಳಿದರೆ ತಾನೇ ಪರಿಹಾರ?

    ಮೊಬೈಲ್ ತೆಗೆದುಕೊಂಡು ಸುನಯನಾಳ ನಂಬರಿಗಾಗಿ ಅರಸಿದ. ಅವಳೇ ಕೊಟ್ಟಿದ್ದಳು ಆದಿನ. ಕರೆ ಮಾಡಿದ. ಆ ಕಡೆಯಿಂದ ಮಾರುತ್ತರ ಬಂದಿತು. ಧ್ವನಿ ಇಷ್ಟೊಂದು ಸಿಹಿಯಾಗಿರುತ್ತದೆಯೇ?

  5. ಪರಸ್ಪರ “ಹೇಗಿದ್ದೀ?” “ಚೆನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ ಜೊತೆ ಹೇಳಿಕೊಳ್ಳಕ್ಕೆ ನನಗೇನೂ ತೊಂದರೆಯಿಲ್ಲ. ಸುದೀಪ, ನೀನಾದರೂ ನನ್ನ ಕಥೆ ಕೇಳುತ್ತೀ ಅನ್ನುವ ನಂಬಿಕೆ ನನಗಿತ್ತು. ಅಪ್ಪ-ಅಮ್ಮನಿಗೂ ಇದನ್ನ ಹೇಳಿಲ್ಲ, ನೊಂದುಕೊಳ್ತಾರೆ ಅಂತ. ನಿನಗೆ ಸಮಯವಿದ್ದರೆ ನಾಳೆ ಸಂಜೆ ಭೇಟಿಯಾಗುತ್ತೀಯಾ?”

    “ನಾಳೆ ಯಾಕೆ? ಈಗಲೇ ಹೇಳು, ನಿನಗೆ ಅಭ್ಯಂತರ ಇಲ್ಲದಿದ್ರೆ…”
    “ಈಗಲೇ….! ಸರಿ ಹೇಳ್ತೇನೆ. ಅನಿಲ್ ಒಳ್ಳೆ ವ್ಯಕ್ತಿಯೇ. ಆದ್ರೆ ಮದುವೆ ಬಗ್ಗೆ ಏನೇನೂ ಆಸಕ್ತಿಯಿರಲಿಲ್ಲ. ಪಕ್ಕಾ ಸನ್ಯಾಸಿ ಆತ. ಅಂಥವನನ್ನು ಹಿಡಿದಿಟ್ಟ ಹಾಗೆ ಮದುವೆ ಮಾಡಿಸಿದ್ರು ಅವನ ಅಪ್ಪ-ಅಮ್ಮ. ಮದುವೆಗೆ ಮೊದಲು ನನ್ನ ಜೊತೆ ಮಾತಾಡಿ ಎಲ್ಲ ಹೇಳಿ, ನಾನೇ ಅವನನ್ನು ನಿರಾಕರಿಸುವಂತೆ ಕೇಳಬೇಕು ಅಂತ ಇದ್ದನಂತೆ, ಅದಕ್ಕೂ ಅವರು ಅವಕಾಶ ಕೊಡಲಿಲ್ಲ. ಮದುವೆಯಾಗಿ ಅವನೂರಿಗೆ ಹೋದ ಮೇಲೆಯೇ ನನಗಿದೆಲ್ಲ ಗೊತ್ತಾಗಿದ್ದು. ನನ್ನನ್ನ ಚೆನ್ನಾಗಿಯೇ ನೋಡಿಕೊಂಡ; ತಂಗಿ ಥರ, ಹೆಂಡತಿ ಥರ ಅಲ್ಲ. ಹೇಳು, ಅಂಥ ಬಾಳು ಎಷ್ಟು ದಿನ ನಡೆದೀತು? `ನಾನು ಊರಿಗೆ ಹೋಗುತ್ತೇನೆ’ ಅಂದೆ. ಮರುದಿನವೇ ಟಿಕೆಟ್ ತಂದುಕೊಟ್ಟ. `ನಿನಗೆ ಅನ್ಯಾಯ ಆಗಿದೆ, ಅದನ್ನು ಸರಿಪಡಿಸುವ ಶಕ್ತಿ ನನಗಿಲ್ಲ’ ಅಂತ ನೊಂದುಕೊಂಡ. ಹಿಂದೆ ನೋಡದೆ ಬಂದುಬಿಟ್ಟೆ. ಎರಡು ವಾರ ಆಯ್ತು. ಇನ್ನೂ ಊರಿಗೆ ಹೋಗಿಲ್ಲ, ಅಪ್ಪ-ಅಮ್ಮನಿಗೆ ನಾನು ಬಂದಿರೋದು ಗೊತ್ತಿಲ್ಲ. ಇಲ್ಲಿ ಗೆಳತಿ ಮನೆಯಲ್ಲಿದ್ದೇನೆ. ಇನ್ನೇನು ಮಾಡೋದೋ ಗೊತ್ತಿಲ್ಲ. ವಿಷಯ ಗೊತ್ತಾದ್ರೆ ಅಪ್ಪ ಹಾರಾಡ್ತಾರೆ, ನನ್ನದೇ ತಪ್ಪು, ನಾನು ಕಾಯಬೇಕಿತ್ತು ಅಂತಾರೆ, ನನಗ್ಗೊತ್ತು. ಅಮ್ಮ ಸುಮ್ಮನೆ ಕಣ್ಣೀರು ಹಾಕ್ತಾರೆ. ಅದಕ್ಕೇ ಅವರಿಗೆ ಹೇಳಿಲ್ಲ, ಊರಿಗೆ ಹೋಗಿಲ್ಲ. ಏನು ಮಾಡಕ್ಕೂ ದಿಕ್ಕೇ ತೋಚುತ್ತಿಲ್ಲ ಸುದೀಪ. ನೀನೇ ಹೇಳು ಏನಾದ್ರೂ ಪರಿಹಾರ…..” ಯಾರದ್ದೋ ಕಥೆ ಅನ್ನುವಂತೆ ಹೇಳಿ ಮುಗಿಸಿದ ಅವಳ ಮುಖ ಕಲ್ಪಿಸಿಕೊಂಡ. ಒಂದೇ ಕ್ಷಣ. ಖುಷಿಯಿಂದ ಹಾರಿ ಕುಳಿತ. ಮದುವೆಯಾದರೂ ನನ್ನ ಸುನಿ ನನ್ನವಳೇ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೀಯಾ ಅನ್ನುವ ಧೈರ್ಯ ಇಲ್ಲದಿದ್ದರೂ “ಇದಂತೂ ಮುಗಿದ ಕಥೆ ಸುನೀ. ಈಗಲಾದರೂ ಕೇಳ್ತೇನೆ, ನನ್ನ ಮದುವೆ ಆಗ್ತೀಯಾ?” ಕೇಳಿಯೇಬಿಟ್ಟ. ಆದರೆ ಅಲ್ಲಿಂದ ಉತ್ತರ ಬರಲಿಲ್ಲ. ಮೊಬೈಲ್ “ನೋ ಸಿಗ್ನಲ್” ತೋರಿಸಿ ಕಣ್ಣು ಮಿಟುಕಿಸಿತು.

  6. ಸುನಾಥರೆ,
    ತುಳಸಿಯಮ್ಮನವರಲ್ಲಿ ನನಗೆ ಅಚಲ ವಿಶ್ವಾಸವಿದೆ. ಪಾಂಡವರಿಗೆ ಶ್ರೀಕೃಷ್ಣನಿದ್ದಂತೆ, ನಮಗೆ ತುಳಸಿಯಮ್ಮ. ಕೇಳಿದ್ದನ್ನ ಕರುಣಿಸುತ್ತಾರೆ. ಶಾನುಭೋಗರ ಮಗಳು, ಸುಬ್ಬಾಭಟ್ಟರ ಮಗಳು, ಕಾರಿ ಹೆಗ್ಗಡೆ ಮಗಳು…ಈಗ ಸುನಿಃ-))

  7. ಸರಿಯಾದ ಸಮಯಕ್ಕೇ ಕೈ ಕೊಡುವುದನ್ನೇ `ಸುದೀಪನ ಅದೃಷ್ಟ’ ಅಂತಾ ಕರಿಬಹುದೇನೋ ಅಂತ ಗೊಣಗಿಕೊಳ್ಳುತ್ತಾ ಮೇಲೆದ್ದ ಸುದೀಪ…
    ಮನವೆಲ್ಲಾ ಗೊಂದಲದ ಗೂಡು…ಕಾಫೀ ಮಾಡಿಕೊಳ್ಳುತ್ತಿರುವಾಗಲೇ ಮತ್ತೆ ಮೊಬೈಲ್ ಗುಣುಗುಣಿಸಿತು
    ಓ ಸುನಯನಾ… ಛಂಗನೆ ಹಾರಿಹೋಗಿ`ಹಲೋ.. ಎಂದು ಕಿರುಚಿದ
    ಯಾರೋ ವೃದ್ದರ ಕಂಠ… ಗುರುತಿನ ಸ್ವರ…ಯಾರೆಂದು ನೆನಪಾಗುತ್ತಿಲ್ಲ…
    ನಿಮ್ ಹತ್ರ ಸ್ವಲ್ಪ ಮಾತಾಡ್ ಬೇಕಿತ್ತಪ್ಪಾ ಐದು ನಿಮಿಷ ಸಮಯ ಇದ್ಯೇ..?
    ಸುನಯನಳ ಕರೆ ನಿರೀಕ್ಷಿಸಿದ್ದವನಿಗೆ ಸಿಟ್ಟು ರೇಗಿ `ರಾಂಗ್ ನಂಬರ್…’ ಎಂದು ಕಾಲ್ ಕಟ್ ಮಾಡಿ ಮೊಬೈಲ್ ಕುಕ್ಕಿದ
    ಆ ತುದಿಯಿಂದ ವೃದ್ದರು `ಸುದೀಪಾ.. ನಾನು… ನನ್ನ ಮಗಳ ಬಗ್ಗೆ ನಿನ್ ಹತ್ರ ಮಾತಾಡ್ ಬೇಕಿತ್ತೂ…’
    ಅವನ ಕಿವಿಗೆ ತಾಕಿ ತಲೆಗೆ ಹೋಗಿ ಅರ್ಥ ಹೊಳೆಸುವಷ್ಟರಲ್ಲಿ ಅವನು ಕಟ್ ಮಾಡಿ ಆಗಿತ್ತು
    ಯಾರದೂ…?
    ನಂಬರ್ ಕೂಡಾ ಪರಿಚಿತವಲ್ಲ…ಯಾವುದೋ ಪಬ್ಲಿಕ್ ಬೂತ್ ನಿಂದ ಮಾಡಿರುವುದು…ಬಹುಷಃ ಮಗಳಿಗೆ ತಿಳಿಯಬಾರದೆಂದು…!

    ನಾರ್ಣಪ್ಪನವರೇ…?ಕನ್ನಿಕಾ ಬಗ್ಗೆ ಮಾತಾಡಲು ಕರೆ ಮಾಡಿದರೇ?
    ಅಥವಾ ಯಾಮಿನಿಯ ತಂದೆಯೇ…?ಸ್ವಾಭಿಮಾನಿ ಮಗಳ ಬಾಳು ಹಸನಾಗಲೆಂದು ಆಶಿಸಿ ಸುದೀಪನ ನೆರವು ,ಆಸರೆ ಬೇಡಿದರೇ…?

    ಆತುರಗಾರನ ಬುದ್ದಿ ಮಟ್ಟ ಎಂದು ತನ್ನನ್ನು ತಾನೇ ಬೈದುಕೊಂಡ…
    ಈ ಗಡಿಬಿಡಿಯಲ್ಲಿ ಸುನಯನ ಚಿತ್ತದಿಂದ ಮರೆಯಾದಳು

    ಯಾಮಿನಿಯ ನಗುಮೊಗವನ್ನೇ ಮನದತುಂಬಾ ತುಂಬಿಕೊಳ್ಳುತ್ತಾ ನಿದ್ದೆಗೆ ಜಾರಿದ ಸುದೀಪ
    ಎಂದೋ ಕನ್ನಿಕಾ ಹಾಡುತ್ತಿದ್ದ ಪದ್ಯವೊದರ ಸಾಲು ನೆನಪಿಗೆ ಬಂತು…

    ಕಣಿವೆಯೊಳು ತೊರೆಬನಕೆ ಜೋಗುಳವನುಲಿಯೇ
    ಯಾಮಿನಿಗೆ ಮುತ್ತಿಡುತ ಚಂದಿರನು ಮೆರೆಯೇ…

    ತಾನೇ ಯಾಕೆ ಯಾಮಿನಿಯ ಬಾಳ ಬಾನಿನ ಚಂದಿರನಾಗ ಬಾರದೂ…?
    ಸವಿಗನಸುಗಳಿಗೆ ಸುಂಕವೇನೂ ಇಲ್ಲವಲ್ಲ!

  8. ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ!
    ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ…
    `ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ
    ಅದಕ್ಕವರು `ಇಲ್ಲಪ್ಪಾ…ಕೆಲವು ಕೆಲಸ ಮಾಡುವಾಗ ಯಾವುದು ಸಂಪ್ರದಾಯವೋ ಹಾಗೇ ಮಾಡಬೇಕೂ.. ಈಗ ನಾನೇ ನಿಮ್ಮನೆಗೆ ಬರಬೇಕಿತ್ತು …ಹಾಗೆಲ್ಲಾ
    ನಿಮಗೆ ಹೇಳಿಕರೆಸಿ ಹೇಳಲಾಗುವಂಥಾ ಸಮಾಚಾರವಲ್ಲ ಇದೂ…’ ಎನ್ನುತ್ತಾ ಕುರ್ಚಿಯ ಮೇಲಿನ ಧೂಳು ಜಾಡಿಸಿ ಕೂತೇ ಬಿಟ್ಟರು

    `ನಿನ್ನನ್ನೊಂದು ಮಾತು ಕೇಳಬಹುದೇ ಸುದೀಪಾ…’ಎಂದು ಅವನ ಭುಜದ ಮೇಲೆ ಕೈ ಇಟ್ಟು ಕೇಳಿದ ಆ ವೃದ್ದರಿಗೆ ಏನೆಂದು ಉತ್ತರಿಸುವುದೋ ಅವನಿಗೆ ತಿಳಿಯಲಿಲ್ಲ
    ಕೊನೆಗೆ ಅವನು ಹೇಳಿದ್ದು` ನಾನು ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಬೆಳೆದವನು ನೀವು ನನ್ನ ತಂದೆ ಸಮಾನವೆಂದು ತಿಳಿಯುತ್ತೇನೆ ನೀವೇನು ಹೇಳಬೇಕೆಂದಿದ್ದೀರೋ
    ಸಂಕೋಚವಿಲ್ಲದೇ ಹೇಳಿ… ನನ್ನ ಕೈಲಾದ್ದನ್ನು ನಾನು ಖಂಡಿತಾ ನಡೆಸಿ ಕೊಡುತ್ತೇನೆ’ ತನ್ನ ಅಕೌಂಟ್ನಲ್ಲಿ ಎಷ್ಟು ಹಣವಿದೆ ಮನದಲ್ಲೇ ಲೆಕ್ಕ ಹಾಕುತ್ತಾ ನುಡಿದ
    `ಮುದ್ದಿನ ಗಿಣಿ ಸೃಷ್ಟಿಗಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲಾ’ ಅಂದಿತು ಮನಸ್ಸು.ಸ್ವಾಭಿಮಾನಿ ಯಾಮಿನೀ ನನ್ನಿಂದ ಹಣ ತೆಗೆದು ಕೊಳ್ಳಲು ಒಪ್ಪುತ್ತಾಳೇಯೇ?ಅವನ ಮನ ಪ್ರಶ್ಣಿಸಿತು

    ಸುದೀಪನ ಮನ ಈ ಎಲ್ಲಾ ತರ್ಕ ಮಾಡುತ್ತಿರುವಾಗ ಯಾಮಿನಿಯ ತಂದೆ ಕೇಳಿದ ಮಾತು ಅವನನ್ನು ಅಚ್ಚರಿಯ ಸಾಗರದಲ್ಲಿ ತೇಲಿಸಿ ಮುಳುಗಿಸಿತು!ಮುಳುಗಿಸಿ ತೇಲಿಸಿತು!
    `ನನ್ನ ಮಗಳು ಯಾಮಿನಿಗೆ ಬಾಳು ಕೊಡುತ್ತೀಯಾ ಸುದೀಪಾ..’
    ಕನಸೇ… ಇಲ್ಲಾ ಇದು ನನಸು!
    `ನೀನು ನನಗಿಂತಾ ವಯಸ್ಸಿನಲ್ಲಿ ಚಿಕ್ಕವನು ಆದರೂ ಬೇಡುತ್ತಿದ್ದೇನೆ …ಅವಳು ಮಹಾ ಸ್ವಾಭಿಮಾನಿ ನಿನ್ನನ್ನು ಎಂದಿಗೂ ತಾನೇ ಬಾಯಿ ಬಿಟ್ಟು ಕೇಳಲಾರಳು
    ಯಾಮಿನೀ ನಿನ್ನನ್ನು ಪ್ರಾಣಪದಕದಂತೆ ಪ್ರೀತಿಸುತ್ತಾಳೆ ಸುದೀಪ…ಇದು ಬಲವಂತವಲ್ಲ ನಿನ್ನಂಥ ಯೋಗ್ಯ,ಗುಣಿಯೊಬ್ಬನ ಕೈಗೆ ನನ್ನ ಮಗಳನ್ನು ಒಪ್ಪಿಸ ಬೇಕೆಂಬ
    ತಂದೆಯೊಬ್ಬನ ಸಹಜ ಬಯಕೆ…’

    ಸುದೀಪನಿಗೆ ಮನಸ್ಸೆಲ್ಲಾ ಅಯೋಮಯ… ಸುಮ್ಮನೇ ಕೂತುಬಿಟ್ಟ!
    ಮೌನವಾದ ಸುದೀಪನನ್ನು ನೋಡಿ ಬೇರೆಯದೇ ಅರ್ಥ ಮಾಡಿಕೊಂಡ ಯಾಮಿನಿಯ ತಂದೆ ಹೀಗೆಂದರು` ತಿಳಿಯಿತು… ಸೃಷ್ಟಿಯ ಬಗ್ಗೆ ಅಲ್ಲವೇ ನಿನ್ನ ಪ್ರಶ್ನೆ..?
    ಯಾಮಿನಿಗೆ ಭಾಷೆ ಕೊಟ್ಟಿರುವುದರಿಂದ ಸೃಷ್ಟಿಯ ಹಿನ್ನಲೆಯ ಬಗ್ಗೆ ಜಾಸ್ತಿ ವಿವರ ಹೇಳಲಾರೆ ಆದರೆ ಇಷ್ಟು ಮಾತ್ರ ನಿಜ… ಸೃಷ್ಟಿ ಬೇರೊಂದು ಅಂಗಳದ ಹೂವು…
    ನಮ್ಮ ಮನೆ ಅಂಗಳದಲ್ಲಿ ನಲಿದು ಬೆಳೆಯುತ್ತಿದೆ ಯಾಮಿನಿಯ ಆಕಾಶದಂತೆ ವಿಶಾಲವಾದ ಮನದ ಕುರುಹೋ ಎಂಬಂತೆ ನಕ್ಷತ್ರವಾಗಿ ಮಿನುಗುತ್ತಿದೆ…’

    ಇದು ಇನ್ನೊಂದು ಆನಂದದ ಅಭಿಷೇಕ!ಸುದೀಪ ವಿಸ್ಮಿತನಾಗಿ ಹೋದ!
    `ಹೇಳು ದೇವರ ರೂಪದಂತಿರುವ ಕಂದಮ್ಮ ಸೃಷ್ಟಿಯ ಅಪ್ಪನಾಗುತ್ತೀಯಾ?ಆ ಮಗುವಿಗೊಂದು ಅಪ್ಪನ ಹೆಸರು ಕೊಡುತ್ತೀಯಾ?
    ಅವರು ಅವನ ಕೈ ಹಿಡಿದು ಕೇಳಿದಾಗ ಸುದೀಪ ಹಣೆಯಲ್ಲಿ ನೆರಿಗೆ ,ತುಟಿಯಲ್ಲಿ ಮಂದ ಸ್ಮಿತ,ಮನದ ತುಂಬಾ ಆನಂದದ ಅಲೆಗಳ ನಡುವೆ ಕೊಚ್ಚಿ ಹೋಗುತ್ತಿದ್ದ

    `ನೀನು ಯೋಚನೆ ಮಾಡಿ ಹೇಳಪ್ಪಾ…ನೀನು ಒಪ್ಪದೇ ಹೋದರೂ ನೀನು ಎಂದೆಂದಿಗೂ ನನ್ನ ಸ್ನೇಹಿತನೇ… ಸೃಷ್ಟಿಯ ಮುದ್ದಿನ ಮಾಮಾನೇ.. ಇಷ್ಟು ನೆನಪಿರಲಿ’ಎನ್ನುತ್ತಾ
    ಯಾಮಿನಿಯ ತಂದೆ ನಿರ್ಗಮಿಸಿದ್ದೂ ಅವನಿಗೆ ತಿಳಿಯಲಿಲ್ಲ

    *****************
    ಕಣ್ನಮುಂದೆ ನಾರ್ಣಪ್ಪನವರ ಚಿತ್ರ ತೇಲಿ ಬಂತು. ತಂದೆ ಇಲ್ಲದೇ ಬೆಳೆದ ತನ್ನನ್ನು ತಂದೆಯಂತೆ ನೋಡಿಕೊಂಡ ದೊಡ್ಡ ಮನಸ್ಸಿನ ವ್ಯಕ್ತಿ…
    ತನ್ನ ಹದಿಹರೆಯದಲ್ಲಿ ಇವರಂತೆ ತಾನಾಗುವುದು,ಇಷ್ಟು ವಿಶಾಲ ಮನಸ್ಸು ಹೊಂದುವುದು ತನ್ನ ಬಾಳಿನ ಗುರಿಗಳಲ್ಲೊಂದು ಎಂದು ತಾನು ಯೋಚಿಸುತ್ತಿದ್ದದು ನೆನಪಿಗೆ ಬಂತು
    ತನಗೆ ನಾರ್ಣಪ್ಪನವರು ತೋರಿಸಿದ ಮಮತೆ ತಾನು ಏಕೆ ಮುದ್ದು ಸೃಷ್ಟಿಗೆ ತೋರ ಬಾರದೂ…?

    ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ!ಮಮತೆ ,ವಾತ್ಸಲ್ಯ ಕುಡಿಯೊಡೆದು ಬೆಳೆಯ ಬೇಕಾದ್ದೇ ಹಾಗಲ್ಲವೇ? ಯಾವುದೇ ಬಂಧನವಿಲ್ಲದೇ..?

    ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ…
    ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ…

    ಬೀದಿಯಲ್ಲಿ ಯಾರೋ ಹಾಡಿಕೊಂಡು ಹೋಗುತ್ತಿದ್ದರು…

  9. ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ
    `ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ
    ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ ಕಾಫಿಗೆ ,ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ
    ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ
    ಅಮ್ಮನ ಕಾಗದ…ಊರಿಂದ ಬಂದಿದೆ…
    ಅವನ ಮನ ಅಮ್ಮನ ನೆನಪಿಂದ ತುಂಬಿಹೋಯಿತು!
    ಆ ಕ್ಷಣ ಅವನಿಗೆ ಅಮ್ಮನನ್ನು ನೋಡ ಬೇಕೆನಿಸಿ ಬಿಟ್ಟಿತು!
    ಏನ್ ಸಾ ಕಾಗಜ ಕೈಲಿ ಹಿಡ್ಕೊಂಡು ಸುಮ್ನೆ ನಿಂತ್ ಬಿಟ್ರಲ್ಲಾ… ಏನ್ ಬರ್ದವ್ರೆ ಅಂತ ವಸಿ ಒಡುದ್ ನೋಡೀ..’ ರಂಗ ಎಚ್ಚರಿಸಿದಾಗಲೇ ಇಹಕ್ಕೆ ಮರಳಿದ್ದು ಸುದೀಪ
    ಅಮ್ಮ ಕಾಗದ ಬರೆಯುವುದೇ ಅಪರೂಪ ಈಗಂತೂ ಎಲ್ಲ ಮಾತೂ ಪೋನ್ ನಲ್ಲೇ ಆಗಿ ಬಿಡುತ್ತೆ ಅಂತ ಅಂದುಕೊಳ್ಳುತ್ತಾ ಕಾಗದ ಓದಿದ ಕಾಗದದಲ್ಲಿ ವಿಶೇಷವೇನೂ ಇಲ್ಲ
    ಏನೋ ಅಮ್ಮನಿಗೆ ಕಾಗದ ಬರೆಯುವ ಮೂಡು ಬಂದಿರಬೇಕು ಬರೆದಿದ್ದಾರೆ ಎಂದುಕೊಳ್ಲುತ್ತಾ ಕೊನೆಯ ಸಾಲುಗಳನ್ನು ಓದತೊಡಗಿದ
    ಅಮ್ಮ ಬರೆದಿದ್ದರು
    `ಇಷ್ಟು ದಿನದಿಂದ ನೀನು ಬೆಂಗಳೂರಿಗೆ ಬಂದು ನಿನ್ ಜೊತೆಲಿ ಸ್ವಲ್ಪ ದಿನ ಇರು ಅಂತ ಹೇಳುತ್ತಿದ್ದೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಅಂತ ಕಾಣುತ್ತೆ ಹನ್ನೆರಡನೇ ತಾರೀಕು ಸಂಜೆ
    ನಾವಿಬ್ಬರೂ ಬೆಂಗಳೂರು ತಲುಪುತ್ತಿದ್ದೇವೆ ಸಂಜೆ ಬೇಗ ಮನೆಗೆ ಬರುವುದು…’
    `ನಾವಿಬ್ಬರೂ’ ಅಂದ್ರೆ ಯಾರು?
    `ಕನ್ನಿಕಾಗೆ ಇಲ್ಲಿನ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸವಾಗಿದೆ ಟ್ರೈನಿಂಗ್ ಗೆ ಅಂತ ಎರಡು ತಿಂಗಳು ಬೆಂಗಳೂರಿಗೆ ಹಾಕಿದ್ದಾರೆ ಬೆಂಗಳೂರಲ್ಲಿ ಮನೆಯೇ ಇರಬೇಕಾದ್ರೆ
    ಅವಳು ಹಾಸ್ಟೇಲ್ನಲ್ಲಿ ಇರುವುದು ಯಾಕೆ ಅಂತ ನಾನೇ ನಾರ್ಣಪ್ಪನವರನ್ನು ಬಲವಂತವಾಗಿ ಒಪ್ಪಿಸಿದೆ.ಆರು ತಿಂಗಳ ಪ್ರೊಬೆಷನ್ ಮುಗಿದ ಮೇಲೆ ಬೆಂಗಳೂರಿಗೇ
    ಬೇಕಾದ್ರೆ ಹಾಕಿ ಕೊಡ್ತಾರಂತೆ.. ಮದ್ವೆ ಆದಮೇಲೂ ಏನೂ ತೊಂದರೆ ಇಲ್ಲಾ…’ ಅಮ್ಮ ಬರೆದಿದ್ದರು

    ಸುದೀಪನಿಗೆ ಸರ್ಪ್ರೈಸ್ ಮಾಡೋಣಾ ಅತ್ತೆ’ ಅಂತ ಕನ್ನಿಕಾ ಈ ವಿಶ್ಯ ಪೋನ್ ನಲ್ಲಿ ಹೇಳಲು ಬಿಡಲಿಲ್ಲ
    ನಂಗೆ ತಡೀಲಿಲ್ಲ ಬರೆದು ಬಿಟ್ಟಿದ್ದೇನೆ ಕನ್ನಿಕಾಗೆ ನಾನು ನಿನಗೆ ಮೊದಲೇ ತಿಳಿಸಿದ್ದೆ ಅಂತ ಗೊತ್ತಾಗೋದು ಬೇಡಾ ಸಣ್ಣಹುಡುಗಿ ಪಾಪ ಬೇಜಾರು ಮಾಡಿ ಕೊಳ್ಳುತ್ತೆ…’

    ಸುದೀಪನ ಎದೆ ದಸಕ್ ಅಂತು!
    ಅಮ್ಮನನ್ನು ಕಂಡರೆ ಸುದೀಪನಿಗೆ ಪ್ರಾಣ… ಕನ್ನಿಕ ಎಂಬ ಚಿನಕುರುಳಿ ಮಾತಿನ ಪಟಾಕಿ ಕಂಡರೂ ಅವನಿಗೆ ಇಷ್ಟವೇ…

    ಆದರೆ……..

    ಆದರೆ ನಾಳೆ ಸುನಯನಳೊಂದಿಗೆ ತನ್ನ ಭೇಟಿ…ನೆನ್ನೆ ಅನಿರೀಕ್ಷಿತವಾಗಿ ಯಾಮಿನಿಯ ತಂದೆ ತಂದ ಒಸಗೆ..
    ಇವುಗಳ ಮಧ್ಯೆ ತಾನು ಸಿಕ್ಕು ದಿಕ್ಕು ತಪ್ಪಿದಂತಾಗಿರುವಾಗ ಕನ್ನಿಕಾ ಮತ್ತು ಅಮ್ಮನ ಬರವು ಯಾಕೋ ಆತಂಕ ತರುತ್ತಿದೆ…

    ಉಸಿರು ಬಿಡುತ್ತಾ ತಲೆ ಅಲುಗಿಸಿದ ಸುದೀಪ
    `ಯಾಕೆ ಸಾ ಎಲ್ಲಾ ಚೆಂದಾಗವ್ರಂತಾ…’ ರಂಗ ಕೇಳಿದಾಗ ಅವನನ್ನೇ ದುರುಗುಟ್ಟಿಕೊಂಡು ನೋಡಿದ
    ರಂಗ ತಲೆ ಕೆರೆದು ಕೊಳ್ಳುತ್ತಾ `ಸಾ… ಅದು ಕಾಜಗ ಬಂದು ಒಂದು ಹತ್ತು ದಿನ ಆಯ್ತು ನಿಮಗೆ ಕೊಡವಾ ಅಂತ ಜೋಬಲ್ಲಿ ಇಟ್ಕೊಂಡು ಮರ್ತುಬಿಟ್ಟೆ
    ಇವತ್ತು ಪ್ಯಾಂಟ್ ಜೋಬಲ್ಲಿ ಸಿಕ್ತು ನೋಡಿ… ಬಡಾನೆ ತಂದೆ…’ ಅಂತ ಹಲ್ಲು ಕಿರಿದ!

    ಸುದೀಪನ ಎದೆ ಎರಡನೇ ಬಾರಿಗೆ ದಸಕ್ ಅಂತು!

    ಇವತ್ತು ಎಷ್ಟು ತಾರೀಕೋ ರಂಗ? ಏನೋ ಅನುಮಾನದಿಂದ ಬಿಸಿಲಿಳಿಯುತ್ತಿದ್ದ ಸಂಜೆ ಐದರ ಮರದ ನೆರಳು ನೋಡುತ್ತಾ ಕೇಳಿದ

    ಇವತ್ತು ಅನ್ನೆರಡು ಅಲ್ವರಾ..?ರಂಗ ಕೈ ತುರಿಸುತ್ತಾ ಹೇಳಿದಾಗ…

    ಸುದೀಪನ ಎದೆ ಮೂರನೇ ಬಾರಿಗೆ ದಸಕ್ ಅಂತು!

    ಈ ಹಾಳು ಮೂತಿಯ ರಂಗನ ಮುಂದೆ ನಿಂತಿದ್ದರೆ ನನ್ನ ಎದೆ ಒಡೆದೇ ಹೋಗುತ್ತೆ ಅಂತ ಗೊಣಗಿ ಕೊಳ್ಳುತ್ತಾ ಮನೆ ಕಡೆಗೆ ಓಡಿದ ಸುದೀಪ

  10. ಸುನಾಥ – ಜಮಾನಾ ಖರಾಬ ಹೈ!

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಇವತ್ತು ವಾಕಿಂಗ ಹೋಗ್ತಾ ಬೋಧಿ ಮರದ ಕೆಳಗೆ ೨ ನಿಮಿಷ ನಿಂತಿದ್ದೆ. ಎಲ್ಲ ಗೊತ್ತಾಯ್ತುಃ-)) ದೋಡ್ಡವ್ರ ಮಾತು ಕೇಳ್ಬೇಕು ಅನ್ನೋದು ಇದ್ಕೆ ಇರ್ಬೇಕುಃ-)

    ಈ ಕಲಿಗಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ ಮಾರಾಯ್ರೇ. ನೀವು ಏನೇ ಹೇಳಿ, ನಮ್ಮ ಕಾಲನೇ ಚೆನ್ನಾಗಿತ್ತು. ಪ್ಚ…ಪ್ಚ….ಃ-))

Leave a Reply to ಜ್ಯೋತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.