ಪರಸ್ಪರ “ಹೇಗಿದ್ದೀ?” “ಚೆನ್ನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ ಜೊತೆ ಹೇಳಿಕೊಳ್ಳಕ್ಕೆ ನನಗೇನೂ ತೊಂದರೆಯಿಲ್ಲ. ಸುದೀಪ, ನೀನಾದರೂ ನನ್ನ ಕಥೆ ಕೇಳುತ್ತೀ ಅನ್ನುವ ನಂಬಿಕೆ ನನಗಿತ್ತು. ಅಪ್ಪ-ಅಮ್ಮನಿಗೂ ಇದನ್ನ ಹೇಳಿಲ್ಲ, ನೊಂದುಕೊಳ್ತಾರೆ ಅಂತ. ನಿನಗೆ ಸಮಯವಿದ್ದರೆ ನಾಳೆ ಸಂಜೆ ಭೇಟಿಯಾಗುತ್ತೀಯಾ?”
“ನಾಳೆ ಯಾಕೆ? ಈಗಲೇ ಹೇಳು, ನಿನಗೆ ಅಭ್ಯಂತರ ಇಲ್ಲದಿದ್ರೆ…”
“ಈಗಲೇ….! ಸರಿ ಹೇಳ್ತೇನೆ. ಅನಿಲ್ ಒಳ್ಳೆ ವ್ಯಕ್ತಿಯೇ. ಆದ್ರೆ ಮದುವೆ ಬಗ್ಗೆ ಏನೇನೂ ಆಸಕ್ತಿಯಿರಲಿಲ್ಲ. ಪಕ್ಕಾ ಸನ್ಯಾಸಿ ಆತ. ಅಂಥವನನ್ನು ಹಿಡಿದಿಟ್ಟ ಹಾಗೆ ಮದುವೆ ಮಾಡಿಸಿದ್ರು ಅವನ ಅಪ್ಪ-ಅಮ್ಮ. ಮದುವೆಗೆ ಮೊದಲು ನನ್ನ ಜೊತೆ ಮಾತಾಡಿ ಎಲ್ಲ ಹೇಳಿ, ನಾನೇ ಅವನನ್ನು ನಿರಾಕರಿಸುವಂತೆ ಕೇಳಬೇಕು ಅಂತ ಇದ್ದನಂತೆ, ಅದಕ್ಕೂ ಅವರು ಅವಕಾಶ ಕೊಡಲಿಲ್ಲ. ಮದುವೆಯಾಗಿ ಅವನೂರಿಗೆ ಹೋದ ಮೇಲೆಯೇ ನನಗಿದೆಲ್ಲ ಗೊತ್ತಾಗಿದ್ದು. ನನ್ನನ್ನ ಚೆನ್ನಾಗಿಯೇ ನೋಡಿಕೊಂಡ; ತಂಗಿ ಥರ, ಹೆಂಡತಿ ಥರ ಅಲ್ಲ. ಹೇಳು, ಅಂಥ ಬಾಳು ಎಷ್ಟು ದಿನ ನಡೆದೀತು? `ನಾನು ಊರಿಗೆ ಹೋಗುತ್ತೇನೆ’ ಅಂದೆ. ಮರುದಿನವೇ ಟಿಕೆಟ್ ತಂದುಕೊಟ್ಟ. `ನಿನಗೆ ಅನ್ಯಾಯ ಆಗಿದೆ, ಅದನ್ನು ಸರಿಪಡಿಸುವ ಶಕ್ತಿ ನನಗಿಲ್ಲ’ ಅಂತ ನೊಂದುಕೊಂಡ. ಹಿಂದೆ ನೋಡದೆ ಬಂದುಬಿಟ್ಟೆ. ಎರಡು ವಾರ ಆಯ್ತು. ಇನ್ನೂ ಊರಿಗೆ ಹೋಗಿಲ್ಲ, ಅಪ್ಪ-ಅಮ್ಮನಿಗೆ ನಾನು ಬಂದಿರೋದು ಗೊತ್ತಿಲ್ಲ. ಇಲ್ಲಿ ಗೆಳತಿ ಮನೆಯಲ್ಲಿದ್ದೇನೆ. ಇನ್ನೇನು ಮಾಡೋದೋ ಗೊತ್ತಿಲ್ಲ. ವಿಷಯ ಗೊತ್ತಾದ್ರೆ ಅಪ್ಪ ಹಾರಾಡ್ತಾರೆ, ನನ್ನದೇ ತಪ್ಪು, ನಾನು ಕಾಯಬೇಕಿತ್ತು ಅಂತಾರೆ, ನನಗ್ಗೊತ್ತು. ಅಮ್ಮ ಸುಮ್ಮನೆ ಕಣ್ಣೀರು ಹಾಕ್ತಾರೆ. ಅದಕ್ಕೇ ಅವರಿಗೆ ಹೇಳಿಲ್ಲ, ಊರಿಗೆ ಹೋಗಿಲ್ಲ. ಏನು ಮಾಡಕ್ಕೂ ದಿಕ್ಕೇ ತೋಚುತ್ತಿಲ್ಲ ಸುದೀಪ. ನೀನೇ ಹೇಳು ಏನಾದ್ರೂ ಪರಿಹಾರ…..” ಯಾರದ್ದೋ ಕಥೆ ಅನ್ನುವಂತೆ ಹೇಳಿ ಮುಗಿಸಿದ ಅವಳ ಮುಖ ಕಲ್ಪಿಸಿಕೊಂಡ. ಒಂದೇ ಕ್ಷಣ. ಖುಷಿಯಿಂದ ಹಾರಿ ಕುಳಿತ. ಮದುವೆಯಾದರೂ ನನ್ನ ಸುನಿ ನನ್ನವಳೇ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೀಯಾ ಅನ್ನುವ ಧೈರ್ಯ ಇಲ್ಲದಿದ್ದರೂ “ಇದಂತೂ ಮುಗಿದ ಕಥೆ ಸುನೀ. ಈಗಲಾದರೂ ಕೇಳ್ತೇನೆ, ನನ್ನ ಮದುವೆ ಆಗ್ತೀಯಾ?” ಕೇಳಿಯೇಬಿಟ್ಟ. ಆದರೆ ಅಲ್ಲಿಂದ ಉತ್ತರ ಬರಲಿಲ್ಲ. ಮೊಬೈಲ್ “ನೋ ಸಿಗ್ನಲ್” ತೋರಿಸಿ ಕಣ್ಣು ಮಿಟುಕಿಸಿತು.
***
ಸರಿಯಾದ ಸಮಯಕ್ಕೇ ಕೈ ಕೊಡುವುದನ್ನೇ `ಸುದೀಪನ ಅದೃಷ್ಟ’ ಅಂತಾ ಕರಿಬಹುದೇನೋ ಅಂತ ಗೊಣಗಿಕೊಳ್ಳುತ್ತಾ ಮೇಲೆದ್ದ ಸುದೀಪ…
ಮನವೆಲ್ಲಾ ಗೊಂದಲದ ಗೂಡು…ಕಾಫೀ ಮಾಡಿಕೊಳ್ಳುತ್ತಿರುವಾಗಲೇ ಮತ್ತೆ ಮೊಬೈಲ್ ಗುಣುಗುಣಿಸಿತು
ಓ ಸುನಯನಾ… ಛಂಗನೆ ಹಾರಿಹೋಗಿ`ಹಲೋ.. ಎಂದು ಕಿರುಚಿದ
ಯಾರೋ ವೃದ್ದರ ಕಂಠ… ಗುರುತಿನ ಸ್ವರ…ಯಾರೆಂದು ನೆನಪಾಗುತ್ತಿಲ್ಲ…
ನಿಮ್ ಹತ್ರ ಸ್ವಲ್ಪ ಮಾತಾಡ್ ಬೇಕಿತ್ತಪ್ಪಾ ಐದು ನಿಮಿಷ ಸಮಯ ಇದ್ಯೇ..?
ಸುನಯನಳ ಕರೆ ನಿರೀಕ್ಷಿಸಿದ್ದವನಿಗೆ ಸಿಟ್ಟು ರೇಗಿ `ರಾಂಗ್ ನಂಬರ್…’ ಎಂದು ಕಾಲ್ ಕಟ್ ಮಾಡಿ ಮೊಬೈಲ್ ಕುಕ್ಕಿದ
ಆ ತುದಿಯಿಂದ ವೃದ್ದರು `ಸುದೀಪಾ.. ನಾನು… ನನ್ನ ಮಗಳ ಬಗ್ಗೆ ನಿನ್ ಹತ್ರ ಮಾತಾಡ್ ಬೇಕಿತ್ತೂ…’
ಅವನ ಕಿವಿಗೆ ತಾಕಿ ತಲೆಗೆ ಹೋಗಿ ಅರ್ಥ ಹೊಳೆಸುವಷ್ಟರಲ್ಲಿ ಅವನು ಕಟ್ ಮಾಡಿ ಆಗಿತ್ತು
ಯಾರದೂ…?
ನಂಬರ್ ಕೂಡಾ ಪರಿಚಿತವಲ್ಲ…ಯಾವುದೋ ಪಬ್ಲಿಕ್ ಬೂತ್ ನಿಂದ ಮಾಡಿರುವುದು…ಬಹುಷಃ ಮಗಳಿಗೆ ತಿಳಿಯಬಾರದೆಂದು…!
ನಾರ್ಣಪ್ಪನವರೇ…?ಕನ್ನಿಕಾ ಬಗ್ಗೆ ಮಾತಾಡಲು ಕರೆ ಮಾಡಿದರೇ?
ಅಥವಾ ಯಾಮಿನಿಯ ತಂದೆಯೇ…?ಸ್ವಾಭಿಮಾನಿ ಮಗಳ ಬಾಳು ಹಸನಾಗಲೆಂದು ಆಶಿಸಿ ಸುದೀಪನ ನೆರವು ,ಆಸರೆ ಬೇಡಿದರೇ…?
ಆತುರಗಾರನ ಬುದ್ದಿ ಮಟ್ಟ ಎಂದು ತನ್ನನ್ನು ತಾನೇ ಬೈದುಕೊಂಡ…
ಈ ಗಡಿಬಿಡಿಯಲ್ಲಿ ಸುನಯನ ಚಿತ್ತದಿಂದ ಮರೆಯಾದಳು
ಯಾಮಿನಿಯ ನಗುಮೊಗವನ್ನೇ ಮನದತುಂಬಾ ತುಂಬಿಕೊಳ್ಳುತ್ತಾ ನಿದ್ದೆಗೆ ಜಾರಿದ ಸುದೀಪ
ಎಂದೋ ಕನ್ನಿಕಾ ಹಾಡುತ್ತಿದ್ದ ಪದ್ಯವೊದರ ಸಾಲು ನೆನಪಿಗೆ ಬಂತು…
ಕಣಿವೆಯೊಳು ತೊರೆಬನಕೆ ಜೋಗುಳವನುಲಿಯೇ
ಯಾಮಿನಿಗೆ ಮುತ್ತಿಡುತ ಚಂದಿರನು ಮೆರೆಯೇ…
ತಾನೇ ಯಾಕೆ ಯಾಮಿನಿಯ ಬಾಳ ಬಾನಿನ ಚಂದಿರನಾಗ ಬಾರದೂ…?
ಸವಿಗನಸುಗಳಿಗೆ ಸುಂಕವೇನೂ ಇಲ್ಲವಲ್ಲ!
***