ಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ

ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವು ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ;

ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;
ಮರವನಪ್ಪಿದ ಬಳ್ಳಿ ಬಳುಕುವಂತೆ ;

ನಾವು ಆಡುವ ಮಾತು ಹೀಗಿರಲಿ ಗೆಳೆಯ,
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ,
ಮೌನ ಮೊಗ್ಗೆಯನೊಡಿದು ಮಾತರಳಿ ಬರಲಿ
ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ.

***

7 thoughts on “ಮಾತು – ಚೆನ್ನವೀರ ಕಣವಿ”

  1. pArijAta says:

    ಪದ್ಯ ಬಹಳ ಚೆನ್ನಾಗಿದೆ. ಎರಡನೆಯ ನುಡಿ ಅದರಲ್ಲೂ ಬಹಳ ಸೊಗಸಾಗಿದೆ.
    ಧನ್ಯವಾದಗಳು.

  2. ತ್ರಿವೇಣಿ,

    ಈ ಹಾಡನ್ನು ತುಂಬಾ ಸಮಯದಿಂದ ಹುಡುಕ್ತಿದ್ದೆ. ಇವತ್ತು ಇಲ್ಲಿ ನೋಡಿ ತುಂಬಾ ಖುಷಿಯಾಯ್ತು. ಪಾರಿಜಾತದ ಬಗ್ಗೆ ನಾನು ಬರೆದಿದ್ದ ಪೋಸ್ಟ್ ಇಲ್ಲಿದೆ,
    http://sillylittlethings.blogspot.com/2006/05/flower-of-gods-garden.html

  3. ಸುನಾಥ says:

    ಈ ಕವಿತೆಯ ಶೀರ್ಷಿಕೆ ಸರಿಯಾಗಿಯೇ ಇದೆಃ “ಮಾತು”.
    ಈ ಕವಿತೆ ಸಹ “ಹೂವು ಹೊರಳುವವು ಸೂರ್ಯನ ಕಡೆಗೆ” ಸಂಕಲನದಲ್ಲಿ ಮರಳಿ ಸೇರ್ಪಡೆಯಾಗಿದೆ. ಕವಿತೆಯ ಎರಡನೆಯ, ಆರನೆಯ, ಒಂಬತ್ತನೆಯ ಹಾಗು ಹತ್ತನೆಯ ಸಾಲುಗಳಿಗೆ ಅಲ್ಪವಿರಾಮಗಳನ್ನು; ನಾಲ್ಕನೆಯ, ಏಳನೆಯ ಹಾಗು ಎಂಟನೆಯ ಸಾಲುಗಳಿಗೆ ಅರ್ಧವಿರಾಮವನ್ನು; ಕೊನೆಯ ಸಾಲಿಗೆ ಪೂರ್ಣವಿರಾಮವನ್ನು ಕೊಡಲಾಗಿದೆ.
    “ಮಗಮಗಿಸುತಿರಲಿ” ಎಂದು ತಿದ್ದಬೇಕು. ಕವಿ ತಮ್ಮ ಹೆಸರನ್ನು “ಚೆನ್ನವೀರ” ಎಂದು ಬರೆದುಕೊಳ್ಳುತ್ತಾರೆ,”ಚನ್ನವೀರ” ಎಂದಲ್ಲ. ಇದನ್ನು ಗಮನಿಸಬೇಕು.
    ಸುಂದರವಾದ ಕವನವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಕಣವಿಯವರ ಕವನಗಳನ್ನು ಓದುವಾಗ ಮನಸ್ಸು ತಂಪಾಗುತ್ತದೆ. ವಂದನೆಗಳು,
    -ಸುನಾಥ

  4. sritri says:

    “ಕಣವಿಯವರ ಕವನಗಳನ್ನು ಓದುವಾಗ ಮನಸ್ಸು ತಂಪಾಗುತ್ತದೆ.”

    – ನಿಜ. ಕೆ . ಎಸ್ ನರಸಿಂಹಸ್ವಾಮಿಯವರಂತೆ ಕಣವಿಯವರು ಸಹ ಆಪ್ತ ಭಾವ ಮೂಡಿಸುವ ಕವಿ.

    ಸುನಾಥರೆ, ನನ್ನ ನೆನಪಿನ ಆಧಾರದಿಂದ ಈ ಕವಿತೆಯನ್ನು ಬರೆದಿದ್ದೆ. ತಪ್ಪುಗಳನ್ನು ನೀವು ತಿದ್ದಿಕೊಡುತ್ತೀರೆಂಬ ನಂಬಿಕೆಯಿಂದ.:) ಹಾಗೆಯೇ ಕಣವಿಯವರ ಹೆಸರಿನ ಬಗ್ಗೆಯೂ ಗೊಂದಲವಿತ್ತು. ನಿಮ್ಮನ್ನೇ ಕೇಳಬೇಕೆಂದಿದ್ದೆ. ಧನ್ಯವಾದಗಳು.
    .

  5. sritri says:

    ಪಾರಿಜಾತ!! ಪಾರಿಜಾತದ ಕವಿತೆ ಕರೆಯಿತೇ ತುಳಸೀವನಕ್ಕೆ ನಿಮ್ಮನು? 🙂

    “ಪದ್ಯ ಬಹಳ ಚೆನ್ನಾಗಿದೆ. ಎರಡನೆಯ ನುಡಿ ಅದರಲ್ಲೂ ಬಹಳ ಸೊಗಸಾಗಿದೆ.”

    – ನನಗೂ ಎರಡನೆಯ ನುಡಿಯ ಮೊದಲೆರಡು ಸಾಲುಗಳು ತುಂಬಾ ಪ್ರಿಯ. “ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
    ಹೆಣ್ಣ ಕಣ್ಣಂಚಿನಲಿ ತುಳುಕುವಂತೆ” – ಈ ಸಾಲುಗಳು ಬರೆಯಲು ಕವಿಗೆ ಸಹಜ ಪ್ರತಿಭೆಯ ಜೊತೆಗೆ ನವಿರಾದ ಭಾವನೆಗಳನ್ನು ಹೊಮ್ಮಿಸುವ ಸುಕೋಮಲ ಹೃದಯವೂ ಇರಲೇಬೇಕು!

  6. sritri says:

    ಶ್ರಿಲತಾ, ಈಚೆಗೆ ಕಾಣಲಿಲ್ಲ ನೀವು. ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಪಾರಿಜಾತದ ಬಗ್ಗೆ ಏನು ಬರೆದಿದ್ದೀರಿ ಎಂದು ತಿಳಿಯುವ ಕುತೂಹಲ. ಈಗಲೇ ಓದುತ್ತೇನೆ.

  7. ಮೊನ್ನೆ ಮಧ್ಯಾಹ್ನದಿಂದ ತುಳಸೀವನ ಡಲ್ಲಾಗಿದೆಯಲ್ಲಾ? ಎಂದಿನ ಲಹರಿ ಕಳಕೊಂಡ ಹಾಗಿದೆ. ಏನಾಯ್ತು?

Leave a Reply to ಸುನಾಥ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು

ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ

ಕವಿ: ಕುವೆಂಪು ಚಿತ್ರ :ಕಾನೂರು ಹೆಗ್ಗಡತಿ ಗಾಯಕ : ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಹೋಗುವೆನು ನಾ……. ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ ಬೇಸರಾಗಿದೆ ಬಯಲು ಹೋಗುವೆ ಮಲೆಯ,

ಸಂಕ್ರಾಂತಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟಸಂಕ್ರಾಂತಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ

ಕವಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಗಾಯಕಿಯರು :ರತ್ನಮಾಲಾ ಪ್ರಕಾಶ್,ಮಾಲತಿ ಶರ್ಮ ಹಾಡು ಕೇಳಿ ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ತುಳಿದು ಆಳಲಾಗದಂಥ ಬಾಳಿಗೆ ಹೊನ್ನಿನ ತೋರಣವ ಬಿಗಿದ