ಜಗತ್ತನ ಎಲ್ಲಾ ಪ್ರಮುಖ ನಗರಗಳ ಲೋಕಲ್ ನ್ಯೂಸ್ ಪೇಪರ್ ಗಳನ್ನು ವಾರಾಂತ್ಯದಲ್ಲಿ ಗಮನಿಸುವುದು ಜೋಯಿಯ ಅಭ್ಯಾಸ.ಪ್ರಪಂಚವೇ ಹಳ್ಳಿಯಂತಾಗಿರುವ ಈ ಕಾಲದಲ್ಲೂ ಲೋಕಲ್ ಗೌರ್ನಮೆಂಟ್ ಗಳ ಸಣ್ಣಸಣ್ಣ ನಿರ್ಧಾರಗಳೂ ಕೆಲವೊಮ್ಮೆ ಗ್ಲೋಬಲ್ ಮಟ್ಟದಲ್ಲಿ ಬಿಸಿನಿಸ್ಸನ್ನು ಬದಲಾಯಿಸಲು ಶಕ್ತವೆಂದು ಜೋಯಿ ನಂಬುತ್ತಾನೆ.ಅವನ ಈ ಅಭ್ವಾಸ ಹಲವು ಬಾರಿ ಅವನಿಗೆ ಲಾಭ ಮಾಡಿಕೊಟ್ಟಿದೆ ಮತ್ತು ಅವತ್ತೂ ಹಾಗೇ ಆಯಿತು. ಬ್ಯಾಂಕಾಕ್ ನ ಆವಾರದ ವಿದ್ಯಮಾನಗಳ ಬಗ್ಗೆ ಕಣ್ಣಾಡಿಸಿ ಬೆಂಗಳೂರಿನ ಪ್ರಮುಖ ವಾರ್ತಾವತ್ರಿಕೆಗಳ ಇಂಟರ್ನೆಟ್ ಆವೃತ್ತಿ ಗಳ ಮೇಲೆ ಕಣ್ಣಾಡಿಸುತ್ತಿದ್ದ.ಕಾಂತಿ ಮಹಿಳಾ ಕಲ್ಯಾಣಮಂತ್ರಿ ಸರಳಾದೇವಿಯವರಿಗೆ ಮನವಿ ಪತ್ರ ಅರ್ಪಿಸುತ್ತಿರುವ ಫೋಟೋ ದಲ್ಲಿ ಅವಳ ಪಕ್ಕವೇ ಇದ್ದ ಪ್ರವಲ್ಲಿಕಾ ಳ ಮುಖ ಅವನ ಗಮನ ಸೆಳೆಯಿತು.ಅದಕ್ಕೆ ಕಾರಣ ಪ್ರವಲ್ಲಿಕಾಳ ಸೌಂದರ್ಯವಲ್ಲ.ಧಾರಿಣಿಗೂ ಅವಳಿಗೂ ಇದ್ದ ಹೋಲಿಕೆ!

ಅಂದ ಹಾಗೆ ಜೋಯಿ ಧಾರಿಣಿಯ ಹಿಂದೆ ಬಿದ್ದಿರುವ ಆದೈತ್ಯ ಕಂಪನಿಯ ಪ್ರಮುಖರಲ್ಲೊಬ್ಬ!!

ಧಾರಿಣಿಯನ್ನು ಮಟ್ಟ ಹಾಕಲು ತಾವುಗಳು ಕಳಿಸಿದ ತಂಡ ವೆಸ್ಟ್ ಎಂಡ್ ನಂಥಾ ಫೈವ್ ಸ್ಟಾರ್ ಹೋಟೆಲ್ನಲ್ಲಿ ಕೂತು ಏನು ಕಡಿದು ಕಟ್ಟೆ ಹಾಕುತ್ತಿದೆ ಅಂತ ಯೋಚಿಸುತ್ತಿದ್ದರೆ ಜೋಯಿಗೆ ಕೋಪ ಉಕ್ಕುಕ್ಕಿ
ಬರುತ್ತಿದೆ ಆಕ್ಷಣ ಬೆಂಗಳೂರಿನಲ್ಲಿರುವ ಟಿಮ್ ಗೆ ಪೋನ್ ಮಾಡಿ ದಬಾಯಿಸೋಣವೆಂದುಕೊಂಡ.ಆದರೆ ನ್ಯೂಯಾರ್ಕ್ ಗೂ ಬೆಂಗಳೂರಿಗೂ ಇರುವ ಸಮಯದ ವ್ಯತ್ಯಾಸ ಗಮನಿಸಿ ಅವರಿಗೆ ಬೆಳಗಾಗಲಿ ಅಂತ ಹಲ್ಲು ಕಚ್ಚಿ ಕೋಪ ಅದುಮಿಕೊಂಡ ಒಂದು ಹತ್ತು ಹದಿನೈದು ನಿಮಿಷ ತಡೆದಿರಬೇಕು ಅವನು. ಕಂಪನಿಯ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಮಜ ಮಾಡುತ್ತಿರುವ ಇವರಿಗೆ ತಾನೇಕೆ ಕರುಣೆತೋರಬೇಕು ಎಂಬ ಆಲೋಚನೆ ಬಂದಿದ್ದೇ ತಡ ಪೋನ್ ಎತ್ತಿ ನೇರ ಬೆಂಗಳೂರಿನ ಪಂಚ ತಾರಾ ಸ್ವೀಟ್ನಲ್ಲಿ ಆರಾಮವಾಗಿ ಮಲಗಿದ್ದ ಟಿಮ್ ನನ್ನು ಎಬ್ಬಿಸಿ ನೀರಿಳಿಸಿದ.

***

ಕೇಶವನ ಮನೆಯ ಹಾಲಿನಲ್ಲಿ ಸೇರಿದ್ದ ಶಾಸ್ತ್ರಿಗಳ ಕುಟುಂಬ ಸಮಾಧಾನದ ಉಸಿರು ಬಿಡುತ್ತಿತ್ತು.ಕೆಡಿ. ಶಿವಣ್ಣ ಬಾಲ ಮುದುರಿಕೊಂಡಿದ್ದ.ಭರತಖಾನ ತನ್ನನ್ನು ಹಿಡಿವ ಪೋಲೀಸರ ಜಾಲದ ವಾಸನೆ
ಹಿಡಿದು ಓಡಿಹೋಗಿ ದುಬೈ ಸೇರಿಕೊಂಡಿದ್ದ.ಸದ್ಯಕ್ಕೇನೂ ಅವನು ಭಾರತಕ್ಕೆ ಹಿಂದಿರುಗುವ ಅಪಾಯವಿಲ್ಲ. ತಮ್ಮೆದುರಿನಲ್ಲಿ ಕೂತಿದ್ದ ಧಾರಿಣಿ ಪ್ರವಲ್ಲಿಕಾ ಇಬ್ಬರನ್ನೂ ಕಣ್ತುಂಬಿಕೊಳ್ಳುತ್ತಾ ಶಾರದಮ್ಮ ಕಣ್ಣೊರೆಸಿಕೊಂಡರು. ಆಗತಾನೇ ಎಲ್ಲರಿಗೂ ಸಿಹಿ ಊಟವಾಗಿತ್ತು . ಎಲ್ಲರಿಗೂ ಹೃದಯತುಂಬಿ ಬಂದಂತಿದ್ದ ಸನ್ನಿವೇಶದಲ್ಲಿ ಮೌನವಾಗಿದ್ದರು. ಅಲ್ಲಿ ಪಟಪಟನೆ ಮಾತಾಡುತ್ತಿದ್ದದು ಅಂದರೆ ಕಾಂತಿ ಒಬ್ಬಳೇ.ಅವಳು ಅಂದು ಪ್ರವಲ್ಲಿಕಾ ಜೊತೆ ಕೇಶವನ ಮನೆಗೆ ಬಂದಿದ್ದಳು. ಶಾಸ್ರಿ ಗಳಿಗಂತೂ ಕಾಂತಿ ತುಂಬಾ ಇಷ್ಟವಾಗಿಬಿಟ್ಟಿದ್ದಳು `ಈ ಹುಡುಗಿ ಮುಖದ ಕಳೆ ನೋಡು ಶಾರದಾ..
ನನಗಿನ್ನೊಬ್ಬ ಮಗ ಇದ್ದಿದ್ದರೆ ಖಂಡಿತ ಇವಳನ್ನೇ ಸೊಸೆ ಮಾಡಿಕೊಳ್ಳುತ್ತಿದ್ದೆ…’ಅಂತ ಎಲ್ಲರ ಮುಂದೆ ಹೇಳಿಯೂ ಬಿಟ್ಟರುಅದಕ್ಕೆ ಶಾರದಮ್ಮ`ಅದಕ್ಕೇನು ಈಗ ನಿಮ್ಮ ತಮ್ಮನ ಮಗನಿಗೆ ಕೇಳಿ…’ಅಂತ ಬದಲು ಹೇಳಿದಾಗ ಕಾಂತಿ ಗಪ್ ಚಿಪ್ ಕಪ್ಪೆಚಿಪ್ ಆಗಿದ್ದಳು! ಅಷ್ಟಕ್ಕೇ ಬಿಡದೆ ಶಾಸ್ತ್ರಿಗಳು ಮೂವರು ಹುಡುಗಿಯರೂ ವಾಪಸು ಹೊರಟಾಗ` ನೀನು ಹಾಸ್ಟೆಲ್ಲಿಗೆ ಹೋದಮೇಲೆ ಕಾಂತಿ ಜಾತಕ ಪಡೆದು ಕಳಿಸಮ್ಮಾಅಂತ ಧಾರಿಣಿಗೆ ಹೇಳಿದರು`ನಿಮ್ಮಕ್ಕನ ಟೈಮ್ ಇನ್ನೂ ಸ್ವಲ್ಪ ದಿನ ಚೆನ್ನಾಗಿಲ್ಲಾ ವಲ್ಲೀ…ಗಂಡಾಂತರವಿದೆ ಸಲ್ಪ ಅಕ್ಕನ್ನ ನೋಡಿಕೋ…’ಅಂತ ಪ್ರವಲ್ಲಿಕಾ ಗೆ ನೆನಪಿಸಿದರು. ಧಾರಿಣಿ ಶಾಸ್ತ್ರಿಗಳ ಜ್ಯೋತಿಷ್ಯವನ್ನು ನಂಬುವವಳಲ್ಲವೆಂದು ಅವರಿಗೆ ಗೊತ್ತು. ಧಾರಿಣಿ ಶಾಸ್ತ್ರಿಗಳ ಮಾತಿಗೆ ಹೌದಪ್ಪಾ.. ಈ ಗಂಡಾಂತರವೆಂಬ ಗಂಡನಿಗೆ ರಾಜೀವ ಅಂತ ನಾನು ಮುದ್ದಿನಿಂದ ಕರೀತೀನೀ…ಮುಂದಿನವಾರ ಈ ನಿಮ್ಮ ಅಳಿಯ ಮನೆ ತೊಳೆಯ ಇಂಡಿಯಾದಲ್ಲಿ ಇಳೀತಿದೆ…’ಅಂತ ನಕ್ಕಳು ಅವಳು ಅಪ್ಪನ ಮಾತನ್ನು ಸೀರಿಯಸ್ಸಾಗಿ ತೊಗೊಳ್ಳೋ ಕಾಲ ಬೇಗನೇ ಬರಲಿದೆ.
***

ನೀವಿಬ್ರೂ ಹೋಗಿ ನಾನೊಂದು ರೀಡರ್ಸ್ ಡೈಜೆಸ್ಟ್ ತಗೊಂಡು ಬರ್ತೀನಿ ಅಂತ ಧಾರಿಣಿ ಹಾಸ್ಟೇಲ್ಲಿಗೆ ಐದು ನಿಮಿಶದ ನಡಿಗೆ ದೂರದಲ್ಲಿದ್ದ ಪುಸ್ತಕದ ಅಂಗಡಿಮುಂದೆ ಮೂವರೂ ಕೂತಿದ್ದ ಆಟೋದಿಂದ ಇಳಿದು ಪ್ರವಲ್ಲಿಕಾ ಕೈಗೆ ಐನೂರರ ನೋಟು ತುರುಕುತ್ತಾ ಹೇಳಿದಳು.ಏ ಇವ್ನು ಚಿಲ್ಲರೆ ಸರಿಯಾಗಿ ಕೊಡೋದಿಲ್ವೇ…’ಅಂತ ಪ್ರವಲ್ಲಿಕಾ ಹೇಳುವಷ್ಟರಲ್ಲಿ ಆಟೋ ಪುನಃ ಹೊರಟಾಗಿತ್ತು.
ಡೈಜೆಸ್ಟ್ ಮತ್ತೆರಡು ಪುಸ್ತಕ ತೊಗೊಂಡು ವಾಪಸಾಗುತ್ತಿದ್ದ ಧಾರಿಣಿ ಯ ಮನಸ್ಸು ಹಕ್ಕಿಯಂತೆ ಹಾರುತ್ತಿದೆ. `ರಾಜೀವ ಬರುತ್ತಿದ್ದಾನೆ…’ಏನೇನೋ ಕನಸು ಕಣುತ್ತಾ ನಡೆಯುತ್ತಿದ್ದವಳಿಗೆ ಹಿಂಭಾಗಕ್ಕೆ ಏನೋ ಚುಚ್ಚಿದಂತಾಗಿ`ಹಾ…’ಅಂತ ಬೆನ್ನು ಸವರಿ ಕೊಳ್ಳುತ್ತಾ ನೆಲಕ್ಕೆ ವಾಲಿದ್ದೇ ಕಣ್ಣು ಕತ್ತಲಿಟ್ಟಿತು. ಅಲ್ಲಿಂದ ಕೆಲವೇ ಮಾರು ದೂರದಲ್ಲಿ ಅವರ ಹಾಸ್ಟೆಲ್ ಮೇನ್ ಎಂಟ್ರೆನ್ಸ್..ಆದರೆ ರೂಮಿನಲ್ಲಿ
ಹರಟೆಯಲ್ಲಿ ಮಗ್ನರಾದ ಕಾಂತಿಗಾಗಲೀ ಪ್ರವಲ್ಲಿಕಾಗಾಗಲೀ ಧಾರಿಣಿಗೆ ಏನಾಯಿತೆಂದು ತಿಳಿಯುವ ಸಾದ್ಯತೆಯೇ ಇಲ್ಲಾ. ಅದನ್ನೇ ಮೋಸ್ಟ್ ಲೀ ಶಾಸ್ತ್ರಿ ಗಳು ಗಂಡಾಂತರ ಅಂದಿದ್ದು…!
ಸುತ್ತಾ ಜನ ಸೇರಿಬಿಟ್ಟರು…ಎಲ್ಲರೂ ತಲಾ ಒಂದೊಂದು ಮಾತಾಡುವವರೇ…ಯಾರೂ ಸಹಾಯಕ್ಕೆ ಬರುತ್ತಿಲ್ಲ…ಸುಮ್ಮನೇ ನೋಡುತ್ತಿದ್ದಾರೆ!
ಆಗ….ಇಮ್ಪೋರ್ಟೆಡ್ ಕಾರ್ ನಿಂದ ಇಳಿದ ಬಿಳಿಯನೊಬ್ಬ ಸಹಾಯ ಮಾಡಲು ಮುಂದಾದ ಧಾರಿಣಿಯನ್ನು ಎತ್ತಿ ಅವನ ಕಾರ್ ನಲ್ಲಿ ಮಲಗಿಸಿದ್ದಯಿತು ಯಾರಾದ್ರೂ ಆಸ್ಪತ್ರೆ ತೋರಿಸಲು ಸಹಾಯ ಮಾಡಿ ಅಂತ ಅವನು ವಿನಂತಿಸಿ ಕೊಂಡಾಗ ಒಬ್ಬಳು ಮಧ್ಯವಯಸ್ಸಿನ ಹೆಂಗಸೂ ಅವಳ ಪಡ್ಡೆ ಮಗನೂ ಕಾರಲ್ಲಿ ಕೂತರು. `ನೋಡ್ದ್ಯಾ? ಫಾರಿನರ್ಸಿ ಗೆ ಇರುವ ಒಳ್ಳೆ ಬುದ್ದಿ ನಮ್ಮವರಿಗಿಲ್ಲಾ…’ಅಂತ ಜನರೆಲ್ಲಾ
ಮಾತಾಡಿಕೊಳ್ಲುತ್ತಿದ್ದಾಗ ಕಾರು ಹೊರಟಿತು. ಅಲ್ಲಿ ಸೇರಿದ್ದ ಜನರಿಗಾಗಲೀ ಆಸ್ಪತ್ರೆ ಬಾಗಲಲ್ಲಿ ಇಳಿದು ಹೋದ ಅಮ್ಮ ಮಗನಿಗಾಗಲೀ ಗೊತ್ತಾಗದೇ ಹೋದ ವಿಪರ್ಯಾಸದ ವಿಷಯವೆಂದರೆ ಅದು ಟಿಮ್ ಧಾರಿಣಿಯನ್ನು ಅಪಹರಿಸಲು ಆಡಿದ ವ್ಯವಸ್ಥಿತ ನಾಟಕ ಎಂದು…! ಆದರೇ ಸ್ವತಃ ಟಿಮ್ ನಿಗೂ ಗೊತ್ತಿರದೇ ಇದ್ದ ವಿಷಯ ಅವನ ಪ್ಲ್ಯಾನ್ ಹಾಳು ಮಾಡಲಿರುವ ವ್ಯಕ್ತಿ ಅವನ ಕಾರ್ ನಲ್ಲೇ ಕೂತಿದ್ದಾನೆ ಎಂದು…!!

ಧಾರಿಣಿ ಕಣ್ ಬಿಡಲು ಯತ್ನಿಸಿದಾಗ ಮೊದಲು ಕೇಳಿಸಿದ್ದು ಹರಿವ ನೀರಿನ ಮಂಜುಳ ನಾದ. ಕಣ್ ಬಿಟ್ಟಾಗ ಕಾಣಿಸಿದ್ದು ಸಿ.ಸಿ ಕ್ಯಾಮೆರಾ. ಅವಳನ್ನು ಕುರ್ಚಿಗೆ ಬಿಗಿದು ಕಟ್ಟಿದ್ದರು ಮತ್ತು ಕೆಲವೇ ಗಳಿಗೆಯಲ್ಲಿ ಅವಳಿದ್ದ ಆರೂಮಿಗೆ ಗೆ ಟಿಮ್ ನ ಆಗಮನ ವಾಯಿತು. ಮಿಸ್ ಶ್ಯಾಸ್ತ್ರೀ…’ಅಂತ ಪ್ರಾರಂಭಿಸಿ ಟಿಮ್ ನೀನು ನಿನ್ನ ಪೇಟೆಂಟ್ ಬಗೆಗಿನ ವಿವರಗಳನ್ನು ನಮಗೆ ಕೊಡದಿದ್ದರೆ ಪರಿಣಾಮಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ ಅವನು ಈ ಭಾಷಣ ಹೊಡೆಯುತ್ತಿರುವಾಗ ಧಾರಿಣಿ ಅವನ ಮಾತು ಗಮನಿಸದೆ ಗಾಡವಾಗಿ ಯೋಚಿಸುತ್ತಿದ್ದಳು ಮತ್ತು ಅವನು ಮಾತು ಮುಗಿಸಿದ ನಂತರ ಕತ್ತಲಲ್ಲೊಂದು ಬಾಣ ಬಿಟ್ಟಳು
`ನೋಡೀ…ನೀವು ತಪ್ಪು ತಿಳಿದಿದ್ದೀರಾ. ನಾನು ಧಾರಿಣಿ ಅಲ್ಲಾ…ಅವಳದೇ ಹೋಲಿಕೆ ಇರುವ ಅವಳ ತಂಗಿ ಪ್ರವಲ್ಲಿಕಾ…’
ಟಿಮ್ ಅವಾಕ್ಕಾದ…ದಬ್ಬೆಂದು ಬಾಗಿಲು ಬಡಿದು ಹೊರಗೆ ಹೋದ. ಧಾರಿಣಿ ಆ ಗಳಿಗೆ ಅಪರೂಪವಾಗಿ ದೇವರನ್ನು ಪ್ರಾರ್ಥಿಸಿದಳು…`ದೇವರೇ ಇವತ್ತು ಪ್ರವಲ್ಲಿಕಾ ಹಾಸ್ಟೆಲ್ ನಿಂದ ಹೊರಗೆ ಹೋಗದೇ ಇರಲೀ ಮತ್ತು ಇಸ್ಟೊತ್ತಿಗೆ ಅವಳು ನಾನುಕೊಟ್ಟ ಪತ್ರ ಪೋಸ್ಟ್ ಮಾಡಿರಲಿ’

5 thoughts on “ಭಾಗ – 9”

  1. ಇತ್ತ ಪ್ರವಲ್ಲಿಕಾ ಮತ್ತು ಕಾಂತಿ, ಧಾರಿಣಿ ಇನ್ನೂ ಹಾಸ್ಟೆಲ್ಲಿಗೆ ಬಂದಿಲ್ಲದ ಕಾರಣ ಹೊರಗೆ ಹೊರಟರು. ದಾರಿಯಲ್ಲಿ ಹಾಸ್ಟೆಲ್ಲಿನ ಅಡುಗೆಮನೆಯ ಹುಡುಗ ಯಾವುದೋ ಕೆಂಪು ಕಾರಿನಲ್ಲಿ ಧಾರಿಣಿಯನ್ನು ಆಸ್ಪತ್ರೆ ಕಡೆ ಕರೆದೊಯ್ದ ಸುದ್ದಿ ತಿಳಿಸಿದ. ವಿಷಯ ತಿಳಿದದ್ದೇ ಗೆಳತಿಯರಿಬ್ಬರೂ ಆಸ್ಪತ್ರೆಗೆ ಓಡಿದರು, ನಿರಾಶೆ ಅವರಿಗಾಗಿ ಅಲ್ಲಿಯೇ ಕಾದಿತ್ತು. ಅಕ್ಕನ ಕಣ್ಮರೆಯಿಂದ ಪ್ರವಲ್ಲಿಕಾ ದಿಕ್ಕುಗೆಟ್ಟಳು. ಕಾಂತಿಯ ಧೈರ್ಯವೂ ಕೈಕೊಡುತ್ತಿತ್ತು, ಆದರೂ ಗೆಳತಿಗೆ ಇಂಬು ಕೊಡುವುದಕ್ಕಾಗಿ “ಬೇರೆ ಆಸ್ಪತ್ರೆಗೆ ಹೋಗಿರಬಹುದು, ಇನ್ನೇನು ಬಂದುಬಿಡುತ್ತಾಳೆ; ಸುಮ್ನಿರೇ!” ಓಲೈಸುತ್ತಾ ಹಾಸ್ಟೆಲ್ಲಿಗೆ ಎಳೆತಂದಳು. ಮತ್ತೆ ಮತ್ತೆ ಚರ್ಚೆ ನಡೆಸಿ, ಇಬ್ಬರೂ ಆಟೋ ಹಿಡಿದು ಕೇಶವ ಚಿಕ್ಕಪ್ಪನ ಮನೆಗೆ ಬಂದರು.

    ತಲೆನೋವು ಹರಿದ ಹಿಗ್ಗಿನಲ್ಲಿ ಶಾರದಮ್ಮ ಮತ್ತು ಶಾಸ್ತ್ರಿಗಳು ಊರಿನ ಬಸ್ಸು ಹತ್ತಿದ್ದರು. ಆದರೆ, ತಾಪತ್ರಯ ಮತ್ತೊಮ್ಮೆ ಮನೆ ಮುಂದೆ ಬಂದು ನಿಂತಿತ್ತು. ಕಾಂತಿಗೆ ಮಧ್ಯಾಹ್ನದ ಮಾತುಕತೆ ನೆನೆಸಿಕೊಂಡು ಸಂಕೋಚವಾದರೂ ಗೆಳತಿಗಾಗಿ ಮನೆಯೊಳಗೆ ಕಾಲಿರಿಸಿದಳು. ಎದುರಾದ ಸ್ಫುರದ್ರೂಪಿಯನ್ನು ಪ್ರವಲ್ಲಿಕಾ “ಅಣ್ಣಾ…” ಎಂದು ತಬ್ಬಿಕೊಂಡಾಗ ಗೊಂದಲದಲ್ಲೂ ಕಾಂತಿಯ ಕೆನ್ನೆ ಕೆಂಪಾಯಿತು.

    ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ-ಆಕಾಶ್- ಎಲ್ಲರ ಮುಂದೆ ತಮಗೆ ತಿಳಿದದ್ದನ್ನು ವಿವರವಾಗಿ ಹೇಳುತ್ತಿದ್ದಂತೆ, ಪ್ರವಲ್ಲಿಕಾಳಿಗೆ ಅಕ್ಕ ಕೊಟ್ಟಿದ್ದ ದಪ್ಪನೆಯ ಲಕೋಟೆಯ ನೆನಪಾಯಿತು. ಆಕಾಶನೊಂದಿಗೆ ಮತ್ತೊಮ್ಮೆ ಹಾಸ್ಟೆಲ್ಲಿಗೆ ಹೋಗಿ ಬರುವ ಎದೆಗಾರಿಕೆ ಅವಳಲ್ಲಿ ಉಳಿದಿರಲಿಲ್ಲ. ಕಾಂತಿ ಒಬ್ಬಳನ್ನೇ ಕಳಿಸಲು ಇಷ್ಟವಿಲ್ಲದ ಕೇಶವ, ಮಗನೊಂದಿಗೆ ಅವಳ ಜೊತೆ ಹೋಗಿಬರಲು ತಿಳಿಸಿದರು. ತಮ್ಮ ರೂಮಿನಲ್ಲಿ ಪ್ರವಲ್ಲಿಕಾಳ ಮೇಜಿನ ಮೇಲಿದ್ದ ಪತ್ರ ತೆಗೆದುಕೊಳ್ಳುವಾಗ ಆಕಾಶನಿಗೆ ಧಾರಿಣಿಯ ಸೆಲ್ ಫೋನ್ ಕಣ್ಣಿಗೆ ಬಿತ್ತು. ಅದನ್ನೂ ಕಿಸೆಗೆ ಸೇರಿಸಿಕೊಂಡು ಇಬ್ಬರೂ ಮನೆ ಸೇರಿದರು. ಮುಂದೇನೆಂದು ಚರ್ಚಿಸುತ್ತಿರುವಾಗ ರಾಜೀವನ ಕರೆ ಧಾರಿಣಿಯ ಫೋನಿಗೆ ದನಿ ತಂದಿತು.

  2. ಆಕಾಶ್-ನನ್ನು ನೋಡಿದ್ದೇ ಕಾಂತಿಗೆ ಅವನ ನೆನಪು ಮತ್ತೆ ಮತ್ತೆ ಬರತೊಡಗಿತು………
    ********
    “ಹಲೋ ಕಾಂತಿ”
    “ಹಾಯ್”
    “ಹೀಗೆ ಆರ್ಕುಟ್-ನಲ್ಲಿ ಒಂದು ರೌಂಡು ಬೀಟು ಹೊಡೀತಾ ಇದ್ದೆ. ನಿಮ್ಮ ಪ್ರೊಫೈಲ್-ನೋಡ್ದೆ. ತುಂಬ ಇಂಟರೆಸ್ಟಿಂಗಾಗಿದೆ. ನಿಮಗೆ ತುಂಬ ಒಳ್ಳೆಯ ಅಭಿರುಚಿಗಳಿವೆ”.
    “ಥ್ಯಾಂಕ್ಸ್”
    “ನಾನು ಸುದೀಪ್. ನಮ್ಮೂರು ನೀಲಿಕೇರಿ, ಉತ್ತರಕನ್ನಡದ ಚಂದದ ಪುಟ್ಟ ಊರು. ಇರೋದೀಗ ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ, ಕಾರ್ಯನಿಮಿತ್ತ, ಕಿರು-ಅವಧಿಗೆ.”
    “ಓಹ್. ಓಕೆ”
    “ನಿಮ್ಮನ್ನ ನನ್ನ ಸ್ನೇಹಿತರ ಬಳಗಕ್ಕೆ ಸೇರಿಸಿಕೊಳ್ಳೋಣ ಅಂತಿದ್ದೇನೆ. ನಾನು ನಿರುಪದ್ರವಿ ಅಂತನ್ನಿಸಿದರೆ ಸ್ನೇಹಹಸ್ತ ಚಾಚಿ”.
    “ಓಹ್ ಖಂಡಿತ”
    “ನಿಮ್ಮ ಬ್ಲಾಗು ಓದಿದೆ. ತುಂಬ ಚೆನ್ನಾಗಿ ಬರೀತೀರಾ”
    “ಥ್ಯಾಂಕ್ಸ್”
    “ಈಗ ಏನು ಬರೀತಿದ್ದೀರಿ?”
    “ಏನೂ ಇಲ್ಲ. ಮೂಡು ಸರಿ ಇಲ್ಲ”
    “ಯಾಕೆ? ಏನಾಯ್ತು? ಈಗ ಯಾವ ಮೂಡು ನಿಮ್ಮದು? ಪ್ರೇಮಿಯ ಉನ್ಮಾದ? ವಿರಹಿಣಿಯ ಸ್ವಗತ?”
    “ಅಯ್ಯೋ, ಹಾಗೇನಿಲ್ಲಪ್ಪ”
    “ಮತ್ತೆ? ಇನ್ನು ಹೇಗಪ್ಪ?”
    “ಸುಮ್ನೇ ಹೀಗೆ”
    “ಹ್ಮ್….ಹೋಗ್ಲಿ ಬಿಡಿ. ಮತ್ತೆ, ನೀವು ನಿಶಾಚರಿಯಾ, ಇಷ್ಟು ಹೊತ್ತಿನಲ್ಲಿ ಎದ್ದಿದ್ದೀರಲ್ಲ?”
    “ಹೂಂ. ಸ್ವಲ್ಪ ಹಾಗೇ”
    “ನಿಮಗೆ ಅನುಮಾನ ಮೂಡ್ತಿಲ್ವಾ ನನ್ನ ಮೇಲೆ? ಯಾಕೆ ಈ ವಯ್ಯ ನನ್ನ ಹಿಂದೆ ಬಿದ್ದಿದ್ದಾನೆ ಅಂತ?”
    “ಹ್ಹ..ಹ್ಹ…ಹ್ಹ್ಹ…..ಇಲ್ಲ. ಇಲ್ಲ…ತುಂಬ ಆಶ್ಚರ್ಯ ಆಯ್ತು ಮೊದ್ಲು….ಪರವಾಗಿಲ್ಲ”.
    “ಥ್ಯಾಂಕ್ಸ್”
    “ಮತ್ತೆ ನನ್ನ ಪ್ರೋಫೈಲಿನಲ್ಲಿ ಅಂಥದ್ದೇನು ಇಂಟರೆಸ್ಟಿಂಗ ಇತ್ತು?
    “ನೀವು ಸಾಹಿತ್ಯ ಪ್ರೇಮಿ, ಕನ್ನಡ ಪ್ರೇಮಿ. ನಿಮ್ಮ ಲಿಸ್ಟಿನಲ್ಲಿರೋ ಕಮ್ಯುನಿಟಿಗಳು, ನಿಮ್ಮ ಸ್ನೇಹಿತರು….ಜೊತೆಗೆ ನಿಮ್ಮ ಭಾವಚಿತ್ರ”
    “ಥ್ಯಾಂಕ್ಸ್”
    “ನೀವು ತುಂಬ ಮುದ್ದಾಗಿ ಕಾಣಿಸುತ್ತೀರಿ ಈ ಫೋಟೋದಲ್ಲಿ. ಹಸಿರು ಬಣ್ಣ ನಿಮಗೆ ಒಪ್ಪತ್ತೆ”
    “ಥ್ಯಾಂಕ್ಸ್”

  3. ಅಂದು ನಡೆದ ಈ ಸಂಭಾಷಣೆ ನೆನಪಾಗಿ ಕಾಂತಿಯ ಅಂತರಂಗದಲ್ಲಿ ಸಾವಿರ ಕ್ಯಾಂಡಲಿನ ದೀಪ ಹೊತ್ತಿಸಿದಂತಾಯಿತು. ಅಂದರೆ….ಅಂದರೆ… ಇಷ್ಟು ದಿನ ಆರ್ಕುಟಿನಲ್ಲಿ ಸುದೀಪನೆಂದು ತನ್ನನ್ನು ತಾನು ಸುಳ್ಳು ಹೆಸರಿನಿಂದ ಪರಿಚಯಿಸಿಕೊಂಡು ನನ್ನ ಹೃದಯಕ್ಕೆ ಹತ್ತಿರವಾಗಿರುವವನು ಸುದೀಪನಲ್ಲ! ಅವನು ಆಕಾಶ! ಪ್ರವಲ್ಲಿಕಾ, ಧಾರಿಣಿಯರೂ ಕೂಡ ಈ ಸಂಚಿನಲ್ಲಿ ಪಾಲುದಾರರು ಎಂಬ ಸತ್ಯ ಅವಳಿಗೆ ಅರಿವಾಗಿದ್ದೂ ಈಗಲೇ. ಆಕಾಶ ಕಾಂತಿಯ ತಬ್ಬಿಬ್ಬು ಸ್ಥಿತಿ ನೋಡಿ ಮನಸ್ಸಿನಲ್ಲಿಯೇ ನಗುತ್ತಿದ್ದ.

    ಧಾರಿಣಿಯ ಮೊಬೈಲಿಗೆ ಬಂದ ಕರೆಯನ್ನು ಆಕಾಶನೇ ತೆಗೆದುಕೊಂಡ. ತೆರೆಯ ಮೇಲೆ ರಾಜೀವನ ಹೆಸರು ಕಾಣಿಸಿತ್ತು. ರಾಜೀವನಿಗೆ ಇಲ್ಲಿ ನಡೆದಿರುವುದನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿದ. ರಾಜೀವ ತಾನು ನಾಳೆ ಸಂಜೆಯ ಹೊತ್ತಿಗೆ ಬೆಂಗಳೂರಿಗೆ ಬಂದಿಳಿಯುತ್ತೇನೆಂದೂ, ಅಲ್ಲಿಯವರೆಗೆ ಧಾರಿಣಿಯ ಪತ್ತೆಯ ಪ್ರಯತ್ನ ಮುಂದುವರೆಸಬೇಕೆಂದು ಆಕಾಶನನ್ನು ವಿನಂತಿಸಿಕೊಂಡ.

  4. ದಬ್ಬೆಂದು ಬಾಗಿಲು ತೆಗೆದುಕೊಂಡು ಹೋದ ಟಿಮ್, ತನ್ನ ಏಕಾಂತ ಕೊಠಡಿಯಲ್ಲಿ ಕುಳಿತು ಸಿಗಾರ್ ಎಳೆಯುತ್ತ ಯೋಚಿಸತೊಡಗಿದ. ಈ ಹುಡುಗಿ (“What’s her funny name?) ನಿಜ ಹೇಳುತ್ತಿದ್ದಾಳೆಯೆ? ಇವಳು ಧಾರಿಣಿಯ ಸೋದರಿಯೇ ಆಗಿದ್ದರೆ, ಇವಳ ಮೂಲಕವೇ ಧಾರಿಣಿಯನ್ನು ಬ್ಲ್ಯಾಕ್ ಮೇಲ್ ಮಾಡಬಹುದಲ್ಲ! ಈ ವಿಚಾರದಿಂದ ಅವನಿಗೆ ಮತ್ತೆ ಬೆಳಕು ಕಾಣಿಸಿದಂತಾಯಿತು. ಜೊಯಿಗೆ ಬೇಕಾದ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ತಾನು ಧಾರಿಣಿಯಿಂದ ವಶ ಪಡಿಸಿಕೊಳ್ಳದಿದ್ದರೆ, ತನ್ನ ಕೆಲಸವೂ ಹೋದಂತೆಯೆ. ಹಾಗೆಂದುಕೊಂಡ ಟಿಮ್ ಮತ್ತೆ ಧಾರಿಣಿ ಬಂಧನದಲ್ಲಿದ್ದ ಕೋಣೆಗೆ ಹೋದ. ಧಾರಿಣಿ ಹೆದರಿಕೆಯಿಂದ ತಲೆ ಎತ್ತಿದಳು.
    “ಹೇ ಬೇಬಿ, ನಿನಗೆ ಫೋನ್ ಕೊಡುತ್ತೇನೆ. ನಿನ್ನ ಸೋದರಿ ತಾನು ಪೇಟೆಂಟ್ ಮಾಡಲಿರುವ ಮಾಹಿತಿಯನ್ನು ತೆಗೆದುಕೊಂಡು ಅಶೋಕಾ ಹೊಟೆಲ್ಲಿಗೆ ಇನ್ನು ಒಂದು ಗಂಟೆಯಲ್ಲಿ ತಲುಪಬೇಕು. ಮತ್ತೆ ಯಾರಿಗಾದರೂ ಇದರ ಸುಳವು ಕೊಟ್ಟರೆ, ನಿನ್ನ ಜೀವ ಉಳಿಯುವದಿಲ್ಲ. ಇಂಗ್ಲಿಶನಲ್ಲಿ ಮಾತ್ರ ಮಾತಾಡು” , ಎಂದು ಟಿಮ್ ಎಚ್ಚರಿಕೆಯ ಮಾತು ಹೇಳಿದ.
    ಧಾರಿಣಿ ತನ್ನ ಮೊಬೈಲಿಗೇ dial ಮಾಡಿ , ಟಿಮ್ ಹೇಳಿದಂತೆಯೇ ಹೇಳಿದಳು. ಅತ್ತಲಿಂದ ಕೇಳುತ್ತಿದ್ದ ಆಕಾಶ, ಕಾಂತಿ ಹಾಗು ಪ್ರವಲ್ಲಿಕಾರಿಗೆ ದಿಗ್ಭ್ರಮೆಯಾಯಿತು.

  5. ಪ್ರವಲ್ಲಿಕ ಮತ್ತಿತರರು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ರಾಜೀವನ ಪೋನ್ ಬಂತು `ಧಾರಿಣಿಯ ವಿಶಯ ಏನಾದ್ರೂ ಗೊತ್ತಾಯಿತಾ ಅಂತ ಕೇಳಿದಾಗ ಅವರು ಧಾರಿಣಿಯಿಂದ ಹೀಗೊಂದು ವಿಚಿತ್ರ ಕರೆ ಬಂದಿತ್ತು ಎಂದು ವಿಶಯ ತಿಳಿಸಿದರು ರಾಜೀವನಿಗೂ ಧಾರಿಣಿಯ ಕರೆಯ ಮರ್ಮ ತಿಳಿಯಲಿಲ್ಲ…ಅದಕ್ಕೆ ರಾಜೀವ `ಹೌದಾ…ಸರಿ ಧಾರಿಣಿ ಗೆ ಒಲೀವಿಯಾ ಅನ್ನುವವಳು ಈಗ ಕಾಲ್ ಮಾಡಿದ್ದಳು ಅವಳಿಗೆ ಧಾರಿಣಿ ಕೆಲವು ಮುಖ್ಯಪತ್ರಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಳಂತೆ ನಿಮಗೇನಾದರೂ ಆ ವಿಶಯ ಗೊತ್ತಾ? ಅಂತ ಕೇಳಿದ ಅದಕ್ಕೆ ಕಾಂತಿ `ಹೌದು ಪ್ರವಲ್ಲಿಕಾ ಗೆ ಧಾರಿಣಿ ಪೋಸ್ಟ್ ಮಾಡಲು ಕೊಟ್ಟಿದ್ದಳು ಅದೇನೆಂದು ತೆಗೆದು ನೋಡಿದೆವು ವರ್ಜೀನಿಯಾದ ಅಲೆಕ್ಸಾಂಡ್ರಿಯಾ ದಲ್ಲಿರುವ United States Patent and Trademark Office (USPTO) ಗೆ ತಲುಪಿಸುವಂತೆ
    ಪೇಟೆಂಟ್ ಲೈಸನ್ಸ್ ಕಂಪನಿಯೊಂದಕ್ಕೆ ಧಾರಿಣಿ ಕಳಿಸಿದ ಅವಳು ಸಹಿ ಮಾಡಿದ Oath Declaration ಅದು ಆದರೆ ನನಗ್ಯಾಕೋ ಅದು ಇನ್ಕಂಪ್ಲೀಟ್ ಅನ್ನಿಸಿತು ಹೇಗಾದರೂ ಆಗ್ಲೀ ಅಂತ…ಇವತ್ತು ಪೋಸ್ಟ್ ಮಾಡಲು ಇನ್ನೂ ಕೆಲವು ಪತ್ರಗಳಿತ್ತು ಅವುಗಳೊಂದಿಗೆ ಪೋಸ್ಟ್ ಮಾಡಿಬಿಟ್ಟೆವು ಅದಾದರೂ ಇದ್ದಿದ್ದರೆ ಈಗ ಪ್ರವಲ್ಲಿಕಾ ಅದನ್ನೇ ಅಶೋಕಾ ಗೆ ತಗೊಂದು ಹೋಗಬಹುದಿತ್ತು ಅಂದಳು ಅವನು ಚಿಂತೆಯಿಂದಲೇ ಪೋನಿಟ್ಟದ್ದು ಇಲ್ಲಿವರಿಗೆ ವೇದ್ಯವಾಯಿತು

    ಮುಂದಿನ ಹೆಜ್ಜೆ ಯೋಚಿಸಲು ನೆಲೆಸಿದ್ದ ಗಂಭೀರ ವಾತಾವರಣವನ್ನು ತಿಳಿ ಮಾಡುವುದು ಅವಶ್ಯವೆಂದರಿತ ಪ್ರವಲ್ಲಿಕಾ ಕಾಂತಿಯನ್ನು ತಮಾಶೆ ಮಾಡಿದಳು`ಇವತ್ತು ಪೋಸ್ಟ್ ಮಾಡಕ್ಕೆ ಇನ್ನೂ ಕೆಲವು ಪತ್ರಗಳಿತ್ತಾ ಕಾಂತಿ…ಯಾಕಮ್ಮಾ ನಾಚ್ಕೋತೀಯಾ ನಿಮ್ಮಪ್ಪ ಮೈಲ್ ಮಾಡಿದ್ದ ನಿನ್ ಜಾತಕನ ಪ್ರಿಂಟ್ ಔಟ್ ತೆಗೆದು ಶಾಸ್ತ್ರಿ ಅಂಕಲ್ ಗೆ ಕಳಿಸಿದೆವು ಅಂತ ಹೇಳ ಬಾರದೇ….’ಎಂದಳು ಕಾಂತಿ ಅರೆ ಗಳಿಗೆ ಕೆಂಪಾದವಳು ಸುಧಾರಿಸಿಕೊಂಡು `ಈಗ ಮುಂದಿನ ದಾರಿ ಏನು…?’ಅಂದಳು ಅದಕ್ಕೆ ಆಕಾಶ್ `ಧಾರಿಣಿಯ ಆವಿಶ್ಕಾರದ ಬಗ್ಗೆ ಅಲ್ಪ ಸ್ವಲ್ಪ ನನಗೆ ಗೊತ್ತು ನಾನೊಂದು ನಕಲಿ ಪತ್ರ ತಯಾರು ಮಾಡುತ್ತೇನೆ ಪ್ರವಲ್ಲಿಕಾ ಅದನ್ನು ತೊಗೊಂಡು ಅಶೋಕ ಹೋಟೆಲ್ ಗೆ ಹೋಗಲಿ ಅಟ್ ಲೀಸ್ಟ್ ವಿ ಕ್ಯಾನ್ ಬೈ ಸಂ ಟೈಂ …’ಅಂದ

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.