ಮಧ್ಯರಾತ್ರಿಯ ಸಮಯ.ಕವಿತಾಳ ಪರೀಕ್ಷೆಗಳು ಹತ್ತಿರದಲ್ಲಿಯೇ ಇದ್ದುದರಿಂದ ಓದಿಕೊಳ್ಳುತ್ತಿದ್ದಳು. ಮನೆಯ ಜನರೆಲ್ಲ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಅವಳಿಗೆ ಬಾಯಾರಿಕೆ ಎನ್ನಿಸಿತು. ನೀರು ಕುಡಿಯಲೆಂದು ನೋಡಿದಾಗ ನೀರಿನ ಬಾಟಲಿ ಖಾಲಿಯಾಗಿದ್ದು ತಿಳಿಯಿತು. ಅದನ್ನು ತುಂಬಿಸಿಕೊಂಡು ಬರಲು ಅಡಿಗೆ ಮನೆಯ ಕಡೆಗೆ ನಡೆದಳು.

ಅವರದ್ದು ಹಳೆಯ ಕಾಲದ ದೊಡ್ಡ ಮನೆ. ಕವಿತಾಳ ರೂಮಿಗೂ ಅಡಿಗೆ ಮನೆಗೂ ನಡುವೆ ದೊಡ್ದದಾದ ಓಣಿ ಇದೆ.  ಅಡಿಗೆ ಮನೆಯನ್ನು ತಲುಪಲು ಅದನ್ನು ಹಾದು ಹೋಗಬೇಕು. 

ಕತ್ತಲೆಯಿದ್ದರೂ, ಚಿರಪರಿಚಿತವಾದ ಜಾಗವಾಗಿದ್ದರಿಂದ ಸಲೀಸಾಗಿ ನಡೆದು ಅಡಿಗೆ ಮನೆಯನ್ನು ತಲುಪಿದಳು. ಅಡಿಗೆ ಮನೆಯ ಬಾಗಿಲು ಮುಚ್ಚಿತ್ತು. ಮೆಲ್ಲಗೆ ತಳ್ಳಿದಳು. ಕೀರಲು ಶಬ್ದದೊಂದಿಗೆ ತೆರೆದುಕೊಂಡಿತು.  ಬಾಗಿಲಿನ ಎಡಭಾಗದಲ್ಲಿದ್ದ ಸ್ವಿಚ್ ಹುಡುಕಲು ಕತ್ತಲೆಯಲ್ಲಿಯೇ ಗೋಡೆಯನ್ನು ತಡವಿ, ಸ್ವಿಚ್ ಒತ್ತಿದಳು.  ಯಾಕೋ ದೀಪ ಬೆಳಗಲಿಲ್ಲ.  ಅಲ್ಲಿದ್ದ ಬಲ್ಬ್ ಸುಟ್ಟು ಹೋಗಿದ್ದು, ಇನ್ನೂ ಬದಲಾಯಿಸಿಲ್ಲವೆಂದು ನೆನಪಾಯಿತು. ನಾಳೆ ಮೊದಲು ಈ ಕೆಲಸ ಮರೆಯದೆ ಮಾಡಿ ಮುಗಿಸಬೇಕು ಅಂದುಕೊಂಡಳು. 

ಅಷ್ಟರಲ್ಲಿ ಅಲ್ಲಿದ್ದ ಕಿಟಕಿಯ ಕಡೆ ಅವಳ ದೃಷ್ಟಿ ಹರಿಯಿತು. ಗಾಜಿನ ಕಿಟಕಿಗಳ ಹಿಂದೆ ಯಾವುದೋ ಆಕೃತಿ ಅಲುಗಾಡಿದಂತಾಯಿತು.  ಕಿಟಕಿ ಪೂರ್ತಿಯಾಗಿ ಮುಚ್ಚಿರಲಿಲ್ಲ. ಅರೆತೆರೆದಿದ್ದ ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅಮಾವಾಸ್ಯೆ ಹತ್ತಿರವಿದ್ದುದರಿಂದ ಹೊರಗೆ ಅಷ್ಟಾಗಿ ಬೆಳಕಿರಲಿಲ್ಲ. ಹಿತ್ತಲಿನಲ್ಲಿದ್ದ ಮಲ್ಲಿಗೆಯ ಗಿಡದ ಕೆಳಗೆ ಯಾವುದೋ ಆಕೃತಿ ಕುಳಿತಿರುವಂತೆ ಭಾಸವಾಗಿ ಬೆಚ್ಚಿ ಬಿದ್ದಳು. ಬಿಳಿಯ ಉಡುಗೆಯನ್ನು ಧರಿಸಿದಂತೆ ಕಾಣುತ್ತಿದ್ದ ಆಕೃತಿಯನ್ನು ಇನ್ನಷ್ಟು ದಿಟ್ಟಿಸಿ ನೋಡಲು ಅವಳಿಗೆ ಭಯವಾಯಿತು.

ಭಯದಲ್ಲಿಯೇ ಬೆಂಕಿಪೆಟ್ಟಿಗೆಯನ್ನು ಹುಡುಕಲು ಪ್ರಯತ್ನಿಸಿದಳು. ನಡುಗುತ್ತಿದ್ದ ಕೈಗಳಿಗೆ ಬೆಂಕಿಪೆಟ್ಟಿಗೆ ಎಟುಕಲಿಲ್ಲ.  ಕತ್ತಲೆಯಲ್ಲಿ ಕಾಲಿಗೆ ಏನೋ ತೊಡರಿತು.  ಕವಿತಾ ಮುಗ್ಗರಿಸಿ ಕೆಳಗೆ ಬಿದ್ದುಬಿಟ್ಟಳು.  ಕವಿತಾಳಿಗೆ ತನ್ನ ಕೈಗೆ ಮೆತ್ತಗಿನ ಯಾವುದೋ ವಸ್ತು ತಗುಲಿದಂತಾಗಿ ಕಿಟಾರನೆ ಕಿರುಚಿದಳು.  ಅಡಿಗೆ ಮನೆಯಲ್ಲಿದ್ದ ಹಾಲನ್ನು ಕದ್ದು ಕುಡಿಯಲು ಬಂದಿದ್ದ ಕಳ್ಳ ಬೆಕ್ಕು ಕವಿತಾಳ ಕೂಗಿಗೆ ಹೆದರಿ,ಅಲ್ಲಿದ್ದ ಕಿಟಕಿಯಿಂದ ಹಾರಿ ಹೊರಗೆ ಓಡಿ ಹೋಯಿತು. ಹೆದರಿಕೆಯಿಂದ ಅರೆಜೀವವಾಗಿದ್ದ ಕವಿತಾ ಅದನ್ನು ಗಮನಿಸಲಿಲ್ಲ.

ಅವಳಿಗೆ ಅಲ್ಲಿಂದ ಹೇಗಾದರೂ ಹೊರಗೆ ಹೋಗಿ ತನ್ನ ಕೋಣೆಯನ್ನು ತಲುಪಿದರೆ ಸಾಕೆನಿಸಿತ್ತು.  ಓಡಲು ಕಾಲುಗಳಿಗೆ ಬಲವೇ ಇರಲಿಲ್ಲ.  ಕತ್ತಲೆಯಲ್ಲಿ ಯಾವ ಕಡೆಗೆ ಹೋಗಬೇಕೆಂದು ನಿರ್ಧರಿಸದಾದಳು. ತನ್ನ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು “ಅಮ್ಮಾ…ಅಮ್ಮಾ…” ಎಂದು ಕೂಗಲು ಯತ್ನಿಸಿದಳು.   ಭಯದಿಂದ ಆ ಕೂಗು ಹೊರಗೇ ಬರಲಿಲ್ಲ.  ಮೊದಲೇ ಬಾಯಾರಿದ್ದ ಅವಳಿಗೆ ನಾಲಿಗೆಯಲ್ಲಿದ್ದ ದ್ರವವೂ ಆರಿಹೋಗಿ ಜೋರಾಗಿ ಕೂಗಲೂ ಶಕ್ತಿ ಇಲ್ಲದಂತಾಗಿತ್ತು.  ತಂದೆ, ತಾಯಿ ಮಹಡಿಯ ಮೇಲಿದ್ದ ಕೋಣೆಯಲ್ಲಿ ಮಲಗಿದ್ದರು.  ಕವಿತಾಳ ಕರೆ ಅವರಿಗೆ ಕೇಳಿಸುವುದು ಸಾಧ್ಯವಿರಲಿಲ್ಲ.  ಕವಿತಾಳ ತಂದೆ ರಾಮನಾಥ ಅವರಿಗಂತೂ ಒಮ್ಮೆ ನಿದ್ದೆ ಹತ್ತಿದರೆ ಮುಗಿಯಿತು.  ಎಂತಹ ಸದ್ದಿಗೂ ಅವರಿಗೆ ಎಚ್ಚರವಾಗುತ್ತಿರಲಿಲ್ಲ.

ಕವಿತಾ ಅಮ್ಮ ಹೇಳುತ್ತಲೇ ಇದ್ದರು – “ಕವಿತಾ, ಈ ದೊಡ್ಡ ಮನೆಯಲ್ಲಿ ನೀನೊಬ್ಬಳೇ ಕೆಳಗೆ ಯಾಕೆ ಮಲಗುತ್ತೀಯಾ? ನೀನೂ ಮಹಡಿ ಮೇಲೆ ಮಲಗಿಕೋ.”

ಕವಿತಾಳಿಗೆ ಮಹಡಿಯ ಮೇಲೆ ಸೆಕೆಗೆ ಉಸಿರು ಕಟ್ಟಿದಂತಾಗುತ್ತಿತ್ತು.  ಹಾಗಾಗಿ ಅವಳು ಅಲ್ಲಿ ಮಲಗಲು ಬಯಸುತ್ತಿರಲಿಲ್ಲ. ಕೆಳಗಿನ ಕೋಣೆ ತುಂಬಾ ತಂಪಾಗಿರುತ್ತಿತ್ತು. ಸುತ್ತಲೂ ಇದ್ದ ಹೂತೋಟದಿಂದ ತಣ್ಣನೆಯ ಗಾಳಿ ಬೀಸುತ್ತಿತ್ತು.  ಅಲ್ಲದೆ ಅಡಿಗೆಯಾಳು ಸೀತಮ್ಮ ಕೂಡ ಕವಿತಾ ಕೋಣೆಯ ಪಕ್ಕದಲ್ಲೇ ಇರುವ ಸಣ್ಣ ಕೋಣೆಯಲ್ಲಿ ಮಲಗುತ್ತಿದ್ದರು.  ಹಾಗಾಗಿ ಕವಿತಾಳಿಗೆ ಭಯವೇನೂ ಇರಲಿಲ್ಲ. ಸೀತಮ್ಮ ಮಗಳ ಮದುವೆಗೆಂದು ಒಂದು ತಿಂಗಳು ರಜ ತೆಗೆದುಕೊಂಡು ಹೋಗಿದ್ದುದರಿಂದ ಇವತ್ತು ಕವಿತಾ ಒಬ್ಬಂಟಿಯಾಗಿದ್ದಳು.

ಕವಿತಾ ಸ್ವಭಾವತ: ಅಂಜುಬುರುಕಿಯಲ್ಲ. ಸೀತಮ್ಮ ಇಲ್ಲದಿದ್ದರೂ, ಪರೀಕ್ಷೆಗೆ ಬಹಳ ಓದುವುದಿದ್ದರಿಂದ ಧೈರ್ಯವಾಗಿ ಒಬ್ಬಳೇ ಕೆಳಗೆ ಮಲಗಲು ಸಿದ್ಧಳಾಗಿದ್ದಳು.

ಆದರೆ ಈಗ ಕವಿತಾಳಿಗೆ ತುಂಬಾ ಭಯವಾಗುತ್ತಿತ್ತು. ಅವಳ ಹೃದಯ ಡವಡವ ಎಂದು ಹೊಡೆದುಕೊಳ್ಳುತ್ತಿತ್ತು. ಕಾಲುಗಳಲ್ಲಿದ್ದ ಶಕ್ತಿಯೇ ಸೋರಿಹೋದಂತಾಗಿತ್ತು. ಕತ್ತಲೆಯಲ್ಲಿಯೇ ತೆವಳುತ್ತಾ ಎತ್ತ ಹೋಗಲೂ ತೋರದೆ, ಹೊರಗಿನ ಬೆಳಕು ಕಾಣಿಸುತ್ತಿದ್ದ ಕಿಟಕಿಯ ಸನಿಹ ಬಂದಳು.  ಹೆದರುತ್ತಲೇ ಹೊರಗೆ ಕಣ್ಣು ಹಾಯಿಸಿದಳು. ಮಲ್ಲಿಗೆಯ ಗಿಡದ ಕೆಳಗೆ ಇದ್ದ ಆಕೃತಿ ಈಗ ಅಲ್ಲಿರಲಿಲ್ಲ. ಕವಿತಾಳಿಗೆ ತಾನು ಈ ಮೊದಲು ಅಲ್ಲಿ ಕಂಡ ಆಕೃತಿ ತನ್ನ ಭ್ರಮೆಯೇನೋ ಅಂದುಕೊಂಡಳು.  “ದೆವ್ವಾನೂ ಇಲ್ಲ, ಭೂತನೂ ಇಲ್ಲ. ಅವೆಲ್ಲ ಈಗೆಲ್ಲಿರುತ್ತವೆ? ನಾನು ಸುಮ್ಮನೆ ಹೆದರಿದೆ ಅಷ್ಟೆ” ಎಂದು ಧೈರ್ಯ ತಂದುಕೊಳ್ಳಲು ನೋಡಿದಳು.

ಕವಿತಾ ಹಾಗೆಂದುಕೊಂಡು ಧೈರ್ಯ ತಂದುಕೊಳ್ಳಲು ಯತ್ನಿಸಿರುವಂತೆಯೇ ಕಿಟಕಿಯ ಬಲಭಾಗದಲ್ಲಿ ಯಾರೋ ನಡೆದಾಡುತ್ತಿರುವ ಸಪ್ಪಳ ಕೇಳಿಸಿತು. ಅದರ ಜೊತೆಗೆ ಗೆಜ್ಜೆಯ ದನಿ!  ಕವಿತಾಳಿಗೆ ಈಗಂತೂ ಆ ಸದ್ದು ತನ್ನ ಭ್ರಮೆಯಲ್ಲ ಎಂದು ಚೆನ್ನಾಗಿ ಗೊತ್ತಾಯಿತು. ಆದರೂ ಅದನ್ನು ದೆವ್ವವೆಂದೋ, ಮೋಹಿನಿಯೆಂದೋ ನಂಬಲು ಅವಳು ಸಿದ್ಧಳಿರಲಿಲ್ಲ. ಅದೇನೆಂದು ಪರೀಕ್ಷೆ ಮಾಡಿ ನೋಡಲೇಬೇಕೆಂದು ಗೆಜ್ಜೆ ಸದ್ದು ಎಲ್ಲಿಂದ ಬರುತ್ತಿದೆಯೆಂದು ಪರೀಕ್ಷಿಸುವಂತೆ ಕಿಟಕಿಗೆ ಕಿವಿಗೊಟ್ಟು ನಿಂತಳು.

ಕಿಟಕಿಗೆ ಆತುಕೊಂಡು ನಿಂತಿದ್ದ ಕವಿತಾಳಿಗೆ ಯಾರೋ ತಾನಿದ್ದ ಕಿಟಕಿಯ ಕಡೆಗೆ ನಡೆದು ಬರುತ್ತಿರುವ ಸದ್ದು ಸ್ಪಷ್ಟವಾಗಿ ಕೇಳಿಸಿತು. ಕಳ್ಳರಿರಬಹುದೇ ಎಂಬ ಅನುಮಾನವೂ ತಲೆ ಎತ್ತಿತು. ಕಳ್ಳರಾದರೆ ಈ ಗೆಜ್ಜೆ ಸದ್ದು, ಬಿಳಿಯ ಸೀರೆ ಎಲ್ಲಾ ಅವರಿಗೆ ಯಾಕೆ? ಕವಿತಾ ತಂದೆ ಹಣ,ಒಡವೆಗಳನ್ನೆಲ್ಲ ಬ್ಯಾಂಕಿನ ಲಾಕರಿನಲ್ಲಿ ಇರಿಸುತ್ತಿದ್ದುದರಿಂದ ಕಳ್ಳರಿಗೆ ತಮ್ಮ ಮನೆಯಲ್ಲೇನೂ ಸಿಕ್ಕದು ಎಂದು ಕವಿತಾಳಿಗೆ ತಿಳಿದಿತ್ತು.  ಕವಿತಾಳ ಎದೆ ಬಡಿತ ಅವಳ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಹೆದರಿಕೆಯನ್ನು ಹತ್ತಿಕ್ಕುತ್ತಾ, “ಇವತ್ತು ಈ ಗೆಜ್ಜೆ ಸದ್ದಿನ ಮೂಲವನ್ನು ಪತ್ತೆ ಹಚ್ಚಿಯೇ ಬಿಡುತ್ತೇನೆ” ಎಂದು ಮೊಂಡು ಧೈರ್ಯದಿಂದ ಅಲ್ಲೇ ನಿಂತಳು.

ತನ್ನತ್ತ ಬರುತ್ತಿದ್ದ ಹೆಜ್ಜೆಯ ಸದ್ದಿನತ್ತ ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿದ್ದ ಅವಳಿಗೆ ಆ ಆಕೃತಿ ತನ್ನ ಕಿಟಕಿಯ ಎದುರಿಗೆ ಬಂದು ನಿಂತಿದ್ದು ತಿಳಿಯಲಿಲ್ಲ. ಒಮ್ಮೆಲೇ ಆ ಬಿಳಿಸೀರೆಯುಟ್ಟಂತೆ ಕಾಣುತ್ತಿದ್ದ ಆಕೃತಿಯು ಕವಿತಾ ನಿಂತಿದ್ದ ಕಿಟಕಿಯ ಬಳಿಯೇ ಬಂದಿತ್ತು. ಅದು ಗಾಜಿನ ಕಿಟಕಿಯಾದ್ದರಿಂದ, ಕಿಟಕಿಯಾಚೆ ಇರುವ ಆಕಾರ ಕವಿತಾಳಿಗೆ ಈಗ ಚೆನ್ನಾಗಿ ಕಾಣುತ್ತಿತ್ತು.  ಈಗಂತೂ ಜೀವವೇ ಬಾಯಿಗೆ ಬಂದಂತಾಯಿತು ಅವಳಿಗೆ.

ಉಸಿರಾಡಿದರೆ ಎಲ್ಲಿ ಅದು ಆಕೃತಿಗೆ ಕೇಳಿಸೀತೋ ಎಂದು ಹೆದರಿ ಉಸಿರು ಬಿಗಿ ಹಿಡಿದು ನಿಂತುಕೊಂಡಳು ಕವಿತಾ.  ಅವಳ ಹಣೆಯ ಮೇಲೆ ಬೆವರ ಹನಿ ಸಾಲುಗಟ್ಟಿತ್ತು. ಅವಳಲ್ಲಿದ್ದ ಧೈರ್ಯವೆಲ್ಲಾ ಯಾವಾಗಲೋ ಮಂಗಮಾಯವಾಗಿ ಹೋಗಿತ್ತು.  ಮೈಯಿಡೀ ಬೆವರಿನಿಂದ ತೊಯ್ದುತೊಪ್ಪೆಯಾಗಿ ಹೋಗಿತ್ತು. ನಾಲಿಗೆಯಂತೂ ರಟ್ಟಿನ ಚೂರಿನಂತೆ ಒಣಗಿ ಹೋಗಿತ್ತು.  ಯಾರಾದರೂ ಕುಡಿಯಲು ನೀರು ಕೊಡಬಾರದೇ? ಎಂದು ಅವಳ ಮನಸ್ಸು ಹಂಬಲಿಸುತ್ತಿತ್ತು.

“ಯಾರು ನೀನು?” ಎಂದು ಜೋರಾಗಿ ಕಿರುಚಿ ಕೇಳಬೇಕೆನಿಸರೂ, ಗಂಟಲಿನಿಂದ ಸಣ್ಣನೆಯ ಸ್ವರವೂ ಹೊರಡಲಿಲ್ಲ. ಕಣ್ಣುಗಳು ಭಯದಿಂದ ಆಕೃತಿಯನ್ನೇ ದಿಟ್ಟಿಸುತ್ತಿದ್ದವು. ಕವಿತಾಳ ಮುಖ ಹತ್ತಿಯಂತೆ ಬಿಳುಚಿ ಹೋಗಿತ್ತು.

ಬಿಳಿ ಸೀರೆಯುಟ್ಟಿದ್ದ ಆಕೃತಿ ಈಗ ಸುಮ್ಮನಿರಲಿಲ್ಲ. ಅರೆ ತೆರೆದಿದ್ದ ಕಿಟಕಿಯ ಒಳಗೆ ಕೈಹಾಕಿ ಕಿಟಕಿ ಬಾಗಿಲನ್ನು ಮತ್ತಷ್ಟು ಅಗಲವಾಗಿ ತೆರೆಯಿತು. ತನ್ನೆರಡು ಕೈಗಳನ್ನು ಕಿಟಕಿಯ ಒಳಗೆ ಚಾಚಿತು. ಆ ಉದ್ದವಾದ ಕೈಗಳು ಕಿಟಕಿಗೆ ಒತ್ತಿಕೊಂಡು ಗರಬಡಿದವಳಂತೆ ನಿಂತಿದ್ದ ಕವಿತಾಳ ಕುತ್ತಿಗೆಯನ್ನು ಸಮೀಪಿಸಿತು. ಕವಿತಾ ನೋಡನೋಡುತ್ತಿದ್ದಂತೆ ಆ ಕೈಗಳು ಅವಳ ಕುತ್ತಿಗೆಯನ್ನು ಬಲವಾಗಿ ಒತ್ತಿ ಹಿಡಿದವು.

“ಬಿಡು ಬಿಡು, ನನ್ನನ್ನು ಕೊಲ್ಲಬೇಡ” ಎಂದು ಕವಿತಾ ಕಿರುಚಿದಳು.  ಆದರೆ ಹಿಡಿತ ಕಡಿಮೆಯಾಗಲಿಲ್ಲ. ಕೊಸರಿಕೊಂಡು ಓಡಿ ಹೋಗಲು ಪ್ರಯತ್ನಪಟ್ಟಳು. ನಿತ್ರಾಣಳಾಗಿದ್ದ ಅವಳಿಗೆ ಅದು ಸಾಧ್ಯವಾಗಲಿಲ್ಲ.  ಕತ್ತಿನ ಮೇಲಿನ ಹಿಡಿತ ಬಿಗಿಯಾಗುತ್ತಿದ್ದಂತೆ ಕವಿತಾ ತನ್ನ ಕತೆ ಮುಗಿದೇ ಹೋಯಿತು ಅಂದುಕೊಂಡಳು.  ಅವಳಿಗರಿವಿಲ್ಲದಂತೆ ಹಿಂದಕ್ಕೆ ಕುಸಿದು ಬಿದ್ದು, ಎಚ್ಚರ ತಪ್ಪಿದಳು.

*                         *
ಕವಿತಾ ತನ್ನ ಮಂಚದ ಮೇಲೆ ಕಣ್ಮುಚ್ಚಿ ಮಲಗಿದ್ದಳು. ತಂದೆ, ತಾಯಿಗಳು ಆಡುತ್ತಿರುವ ಮಾತುಗಳು ಅವಳ ಕಿವಿಯ ಮೇಲೆ ಅಸ್ಪಷ್ಟವಾಗಿ ಕೇಳಿಸುತ್ತಿದ್ದವು.  ಅಪ್ಪ, ಅಮ್ಮನ ಜೊತೆಗೆ ಮಾತನಾಡುತ್ತಿರುವ ಇನ್ನೊಂದು ಚಿರಪರಿಚಿತ ದನಿ.

ಆತಂಕ ತುಂಬಿದ ಧ್ವನಿಯಲ್ಲಿ ಅಮ್ಮ ಹೇಳುತ್ತಿದ್ದರು –

“ಏನನ್ನೋ ನೋಡಿ ಹೆದರಿದ್ದಾಳೆ ಅನ್ನಿಸುತ್ತದೆ. ಒಬ್ಬಳೇ ಕೆಳಗೆ ಮಲಗಬೇಡ ಎಂದು ಎಷ್ಟು ಹೇಳಿದರೂ ಕೇಳಲೇ ಇಲ್ಲ. ಮೊದಲೇ ಪರೀಕ್ಷೆಗೆಂದು ಹಗಲಿರುಳು ಓದಿ ಆಯಾಸಗೊಂಡಿದ್ದಳು. ಸ್ವಲ್ಪ ಜ್ವರವೂ ಇರುವ ಹಾಗಿದೆ”

“ಏನೂ ಆಗಿಲ್ಲ, ಸ್ವಲ್ಪ ರೆಸ್ಟ್ ತೊಗೊಂಡರೆ ಎಲ್ಲ ಸರಿಯಾಗುತ್ತದೆ, ಬಿಡು” –  ಅಮ್ಮನನ್ನು ಸಮಾಧಾನಿಸುತ್ತಿದ್ದರು ತಂದೆ.

ಕವಿತಾಳಿಗೆ ಈಗ ಚೆನ್ನಾಗಿ ಎಚ್ಚರವಾಯಿತು. ಮೆಲ್ಲಗೆ ಏಳಲು ಪ್ರಯತ್ನಿಸಿದಳು. ತಾಯಿ ಧಾವಿಸಿ ಬಂದು ದಿಂಬಿಗೆ ಒರಗಿ ಕುಳಿತುಕೊಳ್ಳಲು ಅವಳಿಗೆ ಸಹಾಯ ಮಾಡಿದರು. ಕವಿತಾ ಒಮ್ಮೆ ಸುತ್ತಲೂ ಕಣ್ಣಾಡಿಸಿದಳು.  “ಅರೆರೆ ಅಣ್ಣ ರಾಜೀವ! ಯಾವಾಗ ಬಂದ ಇವನು? ಅಣ್ಣ ಬಂದಿದ್ದು ತನಗೆ ಗೊತ್ತೇ ಆಗಲಿಲ್ಲವಲ್ಲ. ತುಂಬಾ ಹೊತ್ತು ಮಲಗಿಬಿಟ್ಟಿರಬೇಕು ನಾನು” – ಎಂದು ಮನದಲ್ಲೇ ಪೇಚಾಡಿಕೊಳ್ಳುತ್ತಾ – 

“ಅಣ್ಣ, ಡೆಲ್ಲಿಯಿಂದ ಯಾವಾಗ ಬಂದೆ? ನೀನು ಬರುವ ವಿಷಯವನ್ನು ನನಗೆ ಮೊದಲೇ ಯಾಕೆ ತಿಳಿಸಲಿಲ್ಲ?” – ಎಂದಳು ಹುಸಿ ಕೋಪದಿಂದ.

ಕವಿತಾಳ ಅಣ್ಣ ರಾಜೀವ ಮಿಲಿಟರಿ ಸೇವೆಯಲ್ಲಿದ್ದ. ಕವಿತಾಳನ್ನು ಕಂಡರೆ ಅವನಿಗೆ ಬಹಳ ಪ್ರೀತಿ. ಕವಿತಾಳಿಗೂ ಅಷ್ಟೆ. ಅಣ್ಣ ರಾಜೀವನಲ್ಲಿ ಬಹಳ ಸಲಿಗೆ.

ರಾಜೀವ ಸೋಫಾದಿಂದ ಎದ್ದು ಬಂದು ತಂಗಿಯ ಬಳಿ ಕುಳಿತ. ಅವನ ಮುಖದಲ್ಲಿ ತುಂಟ ನಗೆಯೊಂದು ತೇಲುತ್ತಿತ್ತು.

“ನಾನು ನಿನ್ನೆ ರಾತ್ರಿನೇ ಬಂದೆ. ಅದೇ ಒಂದು ಭೂತ ಬಂದು ನಿನ್ನ ಕುತ್ತಿಗೆಯನ್ನು ಹಿಸುಕುತ್ತಿತ್ತಲ್ಲಾ ಆಗ” ಎಂದ ಕೀಟಲೆಯ ಧ್ವನಿಯಲ್ಲಿ.

ಕವಿತಾಳಿಗೆ ಏನೂ ಅರ್ಥವಾಗದೆ ಅಣ್ಣನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದಳು.

ರಾಜೀವ ಹೇಳಿದ –

“ನನಗೆ ಒಂದು ತಿಂಗಳು ರಜ ಸಿಕ್ಕಿತ್ತು. ನಿಮಗೆಲ್ಲಾ ಆಶ್ಚರ್ಯ ಉಂಟು ಮಾಡಬೇಕು ಎಂದು ಇಲ್ಲಿಗೆ ಬರುವ ವಿಷಯ ಮೊದಲೇ ತಿಳಿಸಲಿಲ್ಲ. ನಾನು ನಿನ್ನೆ ಮಧ್ಯರಾತ್ರಿ ಇಲ್ಲಿಗೆ ಬಂದಾಗ ನಿನ್ನ ಕೋಣೆಯಲ್ಲಿ ದೀಪ ಉರಿಯುತ್ತಿದ್ದುದನ್ನು ಕಿಟಕಿಯಿಂದ ನೋಡಿದೆ. ಆಮೇಲೆ ನೀನು ನೀರಿನ ಬಾಟಲಿಯೊಡನೆ ಅಡಿಗೆ ಮನೆಯತ್ತ ನಡೆದಿದ್ದನ್ನು ನೋಡಿ, ಒಂದು ಸಣ್ಣ ನಾಟಕ ಮಾಡಿದೆ ಅಷ್ಟೆ.  ಯಾವಾಗಲೂ ನೀನು  “ನಾನು ತುಂಬಾ ಧೈರ್ಯವಂತೆ, ಯಾರಿಗೂ ಭಯ ಪಡುವುದಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆ. ಇವತ್ತು ನಿನ್ನ ಧೈರ್ಯ ಎಷ್ಟಿದೆ ಎಂದು ಪರೀಕ್ಷೆ ಮಾಡಿದಂತಾಯಿತು”  – ಎಂದು ಜೋರಾಗಿ ನಕ್ಕ ರಾಜೀವ.

ಕವಿತಾಳಿಗೆ ಈಗಲೂ ಅಣ್ಣನ ಮಾತಿನ ಮೇಲೆ ನಂಬಿಕೆ ಬರಲಿಲ್ಲ – “ಮತ್ತೆ ಆ ಬಿಳಿ ಸೀರೆ? ಗೆಜ್ಜೆ ಸದ್ದು?”

“ಓ ಅದಾ? ನೀನು ಅಡಿಗೆ ಮನೆ ಕಡೆಗೆ ಹೊರಟ ಕೂಡಲೇ ನಾನು ಹಿತ್ತಲಿನ ಕಾಂಪೋಂಡ್ ಹಾರಿ ಒಳ ಬಂದೆ. ಅಲ್ಲಿ ತಂತಿಯ ಮೇಲೆ ಒಣಗಲು ಹಾಕಿದ್ದ ಅಮ್ಮನ ಹಳೆಯ ಬಿಳಿ ಸೀರೆ ಕಾಣಿಸಿತು.  ಅದನ್ನು ತೆಗೆದುಕೊಂಡು ಸುಮ್ಮನೆ ಹಾಗೆ ಸುತ್ತಿಕೊಂಡೆ.  ಇನ್ನು ಗೆಜ್ಜೆ ಸದ್ದಿಗೆ ಉತ್ತರ ನೋಡು ಇಲ್ಲಿದೆ” – ಎನ್ನುತ್ತಾ ಜೇಬಿನಿಂದ ಹೊಸದಾದ ಒಂದು ಜೊತೆ ಗೆಜ್ಜೆಯನ್ನು ಹೊರತೆಗೆದ.

“ಇದರ ಡಿಸೈನ್ ತುಂಬಾ ಚೆನ್ನಾಗಿದೆ ನೋಡು.  ಈ ತರದ ಗೆಜ್ಜೆ ಇಲ್ಲಿ ಸಿಗುವುದಿಲ್ಲ. ಇದನ್ನು ನಿನಗೆ ಕೊಡಲೆಂದು ತೆಗೆದುಕೊಂಡು ಬಂದಿದ್ದೆ. ತೆಗೆದುಕೋ” ಎಂದು ಗೆಜ್ಜೆಯನ್ನು ಕವಿತಾಳಿಗೆ ಕೊಟ್ಟ. ಅವನ ಕಣ್ಣುಗಳಲ್ಲಿ ವಾತ್ಸಲ್ಯ ಜಿನುಗುತ್ತಿತ್ತು.

“ನನ್ನ ಕುತ್ತಿಗೆಯನ್ನು ಯಾರೋ ಬಿಗಿಯಾಗಿ ಅದುಮಿ ಹಿಡಿದ ಅನುಭವವಾಯಿತು. ಅದು ಹೇಗೆ?” – ಮತ್ತೊಂದು ಪ್ರಶ್ನೆ ಎದುರಾಯಿತು ಕವಿತಾಳಿಂದ.

“ನಾನು ನಿನ್ನ ಕುತ್ತಿಗೆಯನ್ನು ಮೆಲ್ಲನೆ ಮುಟ್ಟಿದೆ ಅಷ್ಟೆ.  ನಿನ್ನ ಮನಸ್ಸಿನಲ್ಲಿ ತುಂಬಿದ್ದ ಭೂತದ ಭಯ ನಿನ್ನಲ್ಲಿ ಆ ಭ್ರಾಂತಿಯನ್ನು ಉಂಟು ಮಾಡಿರಬೇಕು. ನನ್ನ ಮುದ್ದು ತಂಗಿಯ ಕುತ್ತಿಗೆಯನ್ನು ನಾನು ಹಿಸುಕುವುದುಂಟೇ?” – ರಾಜೀವ ಉತ್ತರಿಸಿದ.

ರಾಜೀವ-ಕವಿತಾರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಇಂದಿರಮ್ಮ –

“ರಾಜೀವ, ನಿನ್ನದೇನೋ ಇದೆಲ್ಲಾ ಕಿತಾಪತಿ? ನಿನ್ನದು ತುಂಬಾ ಅತಿಯಾಯಿತು. ಪಾಪ ಎಷ್ಟು ಹೆದರಿ ಬಿಟ್ಟಿದ್ದಾಳೆ ನೋಡು. ಅವಳು ಸುಧಾರಿಸಿಕೊಳ್ಳಲು ಇನ್ನೂ ಒಂದು ವಾರವಾದರೂ ಬೇಕು,  ಇನ್ನು ಮುಂದೆ ಇಂತಹ ತಮಾಷೆಗಳನ್ನು ಮಾಡಬೇಡಪ್ಪಾ ನೀನು” ಎಂದು ಮಗನನ್ನು ಗದರಿದರು.

ಅವಳಿಗೆ ಏನೂ ಆಗಿಲ್ಲಮ್ಮ. ಈಗ ನಾನು ಬಂದಿದೀನಲ್ಲಾ, ಸರಿಯಾಗುತ್ತಾಳೆ ನೋಡ್ತಿರು. ಅವಳು ತಾನು ತುಂಬಾ ಧೈರ್ಯವಂತೆ ಎಂದು ಗರ್ವ ಪಡುತ್ತಿದ್ದಳು. ಈಗ ಅದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಅಷ್ಟೆ” – ಎಂದ ಕವಿತಾಳನ್ನು ಕೆಣಕುವ ಧ್ವನಿಯಲ್ಲಿ.

ರಾತ್ರಿಯ ಘಟನೆ ಮತ್ತೊಮ್ಮೆ ಕಣ್ಮುಂದೆ ಬಂದಂತಾಗಿ ಭಯದಿಂದ ನಡುಗಿದಳು ಕವಿತಾ. ಅವಳಲ್ಲಿ ಧೈರ್ಯ ತುಂಬುವವಂತೆ ರಾಜೀವ ಕವಿತಾಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡ.

***

11 thoughts on “ಭಯದ ನೆರಳಿನಲ್ಲಿ ಒಂದು ರಾತ್ರಿ”

  1. ಕಥೆ ಚೆನ್ನಾಗಿದೆ. ಭಯ ಎನ್ನುವುದು ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬ ಸೈಕಲಾಜಿಕಲ್ ಎಚ್ಚರಿಕೆಯೂ ಇದೆ.

    ಆಮೇಲೆ, ನಿಮ್ಮ ತುಳಸಿವನದಲ್ಲಿ ನನ್ನ ಬೊಗಳೆ ಗಿಡಕ್ಕೊಂದು ಸ್ಥಳ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ.

  2. ಅಸತ್ಯಾನ್ವೇಷಿಗಳೇ, ನಿಮ್ಮ ತಾಣಕ್ಕೆ ಭೇಟಿ ನೀಡಿದ ನಾನು ಅಲ್ಲಿ ನಿಮ್ಮ ಸ್ವರೂಪ ಕಂಡು ಭಯಗೊಂಡು ಸುಸ್ತಾಗಿ ಸುಧಾರಿಸಿಕೊಳ್ಳಲು ತುಳಸೀವನಕ್ಕೆ ಬಂದರೆ ಇಲ್ಲಿಯೂ ನಿಮ್ಮ ಬೊಗಳೆ ಜಾ(ಬಾ)ಲ ಹರಡಿದೆಯಲ್ಲ… ಸರಿ, ಒಂದು ಪ್ರಶ್ನೆ… ಅಶೋಕವನಕ್ಕೆ ಹೋಗುವುದು ಬಿಟ್ಟು ತುಳಸೀವನಕ್ಕೆ ಬಂದದ್ದೇಕೆ?

    ತುಳಸೀವನದ ಕಾವಲುಗಾರರೇ… ಬೊಗಳೆ ಪಂಡಿತರ ಬಾಲ ಬಿಚ್ಚಲು ಅವಕಾಶ ನೀಡಿದರೆ ವನಕ್ಕೆ ವನವೇ ಹೊತ್ತಿಉರಿದೀತು ಜೋಕೆ!!! ;+)

  3. ಬೊಗಳೆ ಪಂಡಿತರೇ, ಕತೆ ಓದಿದ್ದಕ್ಕೆ, ಅಥವಾ ಓದಿದೆನೆಂದು ಬೊಗಳೆ ಬಿಟ್ಟಿದ್ದಕ್ಕೆ ಧನ್ಯವಾದಗಳು.

    ಸಾರಥಿಯವರಿಗೆ, ತುಳಸಿವನದ ಏಳಿಗೆಗೆ ನೀವೂ ಕೂಡ ಕಾರಣ. ಹೇಗೆನ್ನುತ್ತೀರಾ? ಮೊನ್ನೆ ನಿಮ್ಮ ತಾಣಕ್ಕೆ ಹೇಗೋ ಬಂದು ತಲುಪಿದಾಗ, ಅಲ್ಲಿ ನನ್ನ “ತುಳಸಿವನ”ಕ್ಕಿದ್ದ ಲಿಂಕ್ ನೋಡಿ ಬೆಚ್ಚಿ ಬಿದ್ದೆ. ತುಳಸಿವನದಲ್ಲಿ ಸಸಿ ನೆಡಲು ನಡೆಸಿದ ತಯಾರಿಗಳ ಹೊರತು ಬೇರೇನೂ ಇರಲಿಲ್ಲ. ಕೂಡಲೇ ಬಂದು ಕೆಲವು updates ಮಾಡಿದೆ. ನಿಮಗೆ ಧನ್ಯವಾದ ಹೇಳದಿದ್ದರೆ ಹೇಗೆ?

  4. ಕತೆ ಓದುತ್ತಿದ್ದಂತೆ ತುಂಬ ಭಯವಾಯಿತು. ಮುಕ್ತಾಯ ನೋಡಿದ ಬಳಿಕ ನೆಮ್ಮದಿಯಾಯಿತು. ಒಳ್ಳೆ ಕತೆಗಾಗಿ ಅಭಿನಂದನೆಗಳು.

  5. ಈ ಕಥೆಗ ನೀವು ಇಷ್ಟೊಂದು ಭಯ ಪಟ್ಟರೆ ಹೇಗೆ? ನಾನು ಇನ್ನಷ್ಟು ಭಯಾನಕ ಕಥೆಗಳನ್ನು ಬರೆಯಬೇಕೆಂದಿದ್ದೇನಲ್ಲ?

    ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು!

  6. ಕಥೆಗಳೆಂದರೆ ನನಗೆ ತುಂಬಾ ಇಷ್ಟ. ಈ ಕಥೆ ತುಂಬಾ ರೋಚಕವಾಗಿತ್ತು.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.