ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ.
ಹಳ್ಳಿಯ ಪಂಡಿತರು ಕೊಡುತ್ತಿರುವ ಹಸಿರು ಔಷಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ. ಜೆನಿಗೆ ಮಡಿ ಹುಡಿ ಗೊತ್ತಿಲ್ಲ, ಶಾರದಮ್ಮನವರಿಗೆ ಇಂಗ್ಲಿಷ್ ಬರುವುದಿಲ್ಲ. ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ. ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ.
***
ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ…
ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ ತಂದಿತ್ತು. ಧಾರಿಣಿ ಮತ್ತು ಪ್ರವಲ್ಲಿಕಾ ಆಕೆಯನ್ನು ಅತ್ತಿಗೆ ಎಂದು ಪೂರ್ಣವಾಗಿ ಒಪ್ಪಿಕೊಂಡಿಲ್ಲದಿದ್ದರೂ, ಆದರದಿಂದ ನಡೆಸಿಕೊಳ್ಳುತ್ತಿದ್ದರು. ಆಕಾಶ್ ಯಾಕೋ ಭರತನ ಕಡೆ ಆಕರ್ಷಿತನಾಗುತ್ತಿದ್ದ, ಇದನ್ನೆಲ್ಲ ಸರೋಜಮ್ಮ ಗಮನಿಸಿದ್ದರು. ತಮ್ಮ ಹೃದಯದೊಳಗೆ ಹತ್ತಿಕೊಂಡಿದ್ದ ಜ್ವಾಲಾಮುಖಿಯನ್ನು ಹತ್ತಿಕ್ಕಲು ಹಗಲಿಡೀ ಪ್ರಯತ್ನಿಸಿ, ರಾತ್ರೆಗೆ ಅದನ್ನು ತನ್ನ ಪಾಡಿಗೆ ಹರಿಯಬಿಟ್ಟಿದ್ದರು. ಉರಿಯುವ ಭಾವಲಾವಾ ತನ್ನೊಡನೆ ಹಳೆಯ ನೆನಪುಗಳ ಮೆರವಣಿಗೆ ಹೊತ್ತು ಸೂರಿನತ್ತ ಹಾರುತ್ತಿತ್ತು…
ಕಾಲೇಜ್ ಇರದ ಸಣ್ಣ ಊರಿನ ಮಧ್ಯಮ ವರ್ಗದ ಜಾಣೆ ಸರೋಜ. ಅಪ್ಪ-ಅಮ್ಮನ ಜೊತೆ ಹಠ ಮಾಡಿ, ತನಗಾಗಿ ದೊಡ್ಡೂರಿನ ಕಾಲೇಜಿನಲ್ಲಿ ಸೀಟ್ ಪಡೆದು, ಹಾಸ್ಟೆಲ್ಲಿನಲ್ಲಿ ಸೇರಿಕೊಂಡಿದ್ದಳು. ಪ್ರೊಫೆಸರ್ ಸಮೀಯುಲ್ಲಾ ಅವಳಿಗೆ ಅಚ್ಚುಮೆಚ್ಚು. ಅವರಿಗೂ ಚುರುಕು ಬುದ್ಧಿಯ ಸರೋಜಳ ಮೇಲೆ ವಿಶೇಷ ದೃಷ್ಟಿ. ಎಲ್ಲ ಪಾಠಗಳಲ್ಲೂ ಮುಂದಿದ್ದ ಸರೋಜ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬಿದ್ದವಳಲ್ಲ. ಕಾಲೇಜಿನ ಕೊನೆಯ ವರ್ಷ… ಇದೊಂದು ಮುಗಿದರೆ ತಾನು ಪದವೀಧರೆ… ಸಂಸಾರದಲ್ಲೆಲ್ಲ ಯಾರೂ ದಾಟಿರದ ಗಡಿ ದಾಟಿದವಳು… ಸರೋಜಳ ಕನಸುಗಳಿಗೆ ಕಡಿವಾಣ ಅವಳಲ್ಲಿರಲಿಲ್ಲ. ಆದರೆ, ವಿಧಿ ಕಡಿವಾಣ ಹಿಡಿದಿತ್ತು…
ಅದೊಂದು ಸಂಜೆ, ಕಾಲೇಜಿನ ಪಕ್ಕದ ಮೈದಾನದಿಂದ ಓಟದ ತರಬೇತಿ ಮುಗಿಸಿಕೊಂಡು, ಹಾಸ್ಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದಳು. ತಡವಾದರೆ ಊಟ ಸಿಗಲಾರದು ಅನ್ನುವುದು ಒಂದು ಕಾರಣ, ಕಾಲೇಜ್ ಹಿಂದಿನ ಕಾಂಪೌಂಡ್ ಗೋಡೆಯ ಮೇಲೆ ಯಾವಾಗಲೂ ಕೂತಿರುತ್ತಿದ್ದ ಪುಂಡರ ಗುಂಪು ಇನ್ನೊಂದು ಕಾರಣ; ಅವಳ ಪಾದಗಳು ಒಂದರೊಡನೊಂದು ಪೈಪೋಟಿಯಲ್ಲಿದ್ದವು. “ಏನಮ್ಮಣ್ಣೀ, ಏನವಸರ…?” ನಿರೀಕ್ಷಿತ ಅನಿರೀಕ್ಷಿತ ದನಿ ಅವಳನ್ನು ತಟ್ಟಿತ್ತು. ಉತ್ತರಿಸದೆ, ನೋಡದೆ ಮುಂದೆ ದಾಟಿದ ಅವಳ ಮುಂದೆ ಆತ ಅಡ್ಡ ಬಂದ. ಹಿಂದೆ ಎಷ್ಟೋ ಬಾರಿ ನೋಡಿದ ಮುಖ, ಈಗ ಮತ್ತಷ್ಟು ಜಿಗುಪ್ಸೆ ತಂದಿತು. ಯಾವ ಭಾವವನ್ನೂ ತೋರಿಸದೆ, ದಾಟಿಕೊಂಡು ಸಾಗಲು ಪ್ರಯತ್ನಿಸಿದವಳನ್ನು ಅನಾಮತ್ತಾಗಿ ಎತ್ತಿಕೊಂಡೇ ಸಾಗಿದ ಕೀಚಕ. ಕೂಗಾಡಲು ಸರೋಜಳ ದನಿ ಏಳಲಿಲ್ಲ. ಅವಳ ಬುದ್ಧಿಗೆ ಮಂಕು ಬಡಿದಿತ್ತು. ಕಾಂಪೌಂಡಿನ ಆ ಕಡೆಯಲ್ಲಿ ನಡೆದಿದ್ದಕ್ಕೆ ಸಾಕ್ಷಿ ಯಾರೂ ಇರಲಿಲ್ಲ. ಸೂರ್ಯ ಕಣ್ಮರೆಯಾಗಿದ್ದ; ಚಂದ್ರ ಬಂದೇ ಇರಲಿಲ್ಲ. ಚುಕ್ಕಿಗಳಿಗೆ ದೃಷ್ಟಿ ಮಂದ; ಗಾಳಿಗೆ ಉಸಿರಿರಲಿಲ್ಲ. ಭುಮಿಗೆ ದನಿಯಿರಲಿಲ್ಲ. ಯಾರೂ ಇಲ್ಲದಲ್ಲಿ ಅನಾಥಭಾವದಿಂದ ಒಂಟಿಯಾಗಿ ಬಿದ್ದುಕೊಂಡಿದ್ದ ಸರೋಜಳಿಗೆ ಹೊತ್ತಿನ ಪರಿವೆಯಿರಲಿಲ್ಲ. ತನ್ನ ಆಷಾಢಭೂತಿತನಕ್ಕೆ ತಾನೇ ಬೆಳಕು ಹಿಡಿವಂತೆ ಸೂರ್ಯ ಮತ್ತೆ ಬೆಳಕು ತೂರಿದಾಗ ಸರೋಜಳ ಮಂಕುತನ ಬೆಚ್ಚಿತು. ತನ್ನತ್ತ ಬರುತ್ತಿದ್ದ ಆಕೃತಿಯನ್ನು ಕಂಡು ಕಣ್ಣುಮುಚ್ಚಿದಳು. ಬೆಚ್ಚನೆಯ ಕೈ ಹಣೆ ಮುಟ್ಟಿದಾಗ, “ಸರೋಜ, ಇಲ್ಲಿ ಯಾಕಿದ್ದೀ? ಏನಾಯ್ತು?” ಆರ್ದ್ರ ದನಿ ವಿಚಾರಿಸಿದಾಗ ಅವಳ ದನಿಗೆ ದಾರಿ ಸಿಕ್ಕಿತ್ತು….
“ಸರ್… ನಾನು ಕೆಟ್ಟೆ, ನನಗಿನ್ನು ಬದುಕಿಲ್ಲ… ಆ ದುರುಳ ನನ್ನ ಬಾಳು ಹಾಳು ಮಾಡಿದ…. ನನಗಿನ್ನು ಬದುಕಿಲ್ಲ…” ಪಿಸುನುಡಿಗೂ ಭಯ. ಪ್ರೊಫೆಸರ್ ಸಮೀಯುಲ್ಲಾ ಖಾನ್ ಮುಖ ಜಾಗೃತವಾಯ್ತು. ಅವಳನ್ನು ಹೇಗೋ ನಡೆಸಿಕೊಂಡು ತನ್ನ ಮನೆಗೆ ಕರೆತಂದರು. ಅವರ ಮಡದಿಯ ಮಮತೆಯಲ್ಲಿ ಸರೋಜಳ ದೇಹ ಒಂದಿಷ್ಟು ಚೇತನ ಪಡೆದರೂ ಮನಸ್ಸು ಏಳಲಿಲ್ಲ. ಸರೋಜ ಗೆಳತಿಯೊಬ್ಬಳ ಮದುವೆಗಾಗಿ ಬೇರೊಂದು ಊರಿಗೆ ಹೋಗಿದ್ದಾಳೆಂದು ಸುದ್ದಿ ಹಬ್ಬಿತು. ಸಮೀಯುಲ್ಲರ ಮನೆಯೊಳಗೆ ಜೀವನ ಬೇಡವೆನ್ನುವ ಸೆಣಸಾಟದಲ್ಲಿ ಸರೋಜ ಗೆಲ್ಲಲಿಲ್ಲ. ಸಮೀಯುಲ್ಲಾ ಮತ್ತವರ ಪತ್ನಿ ತಮ್ಮ ಮಗಳಂತೆ ಸರೋಜಳನ್ನು ಕಾಪಾಡಿದರು. ಸೂಕ್ತ ಸಮಯ ಸಿಕ್ಕಾಗ ಅವಳನ್ನು ತಮ್ಮ ಊರಿಗೆ ಕರೆದೊಯ್ದರು. ಹೊಸ ಪರಿಸರ ಸರೋಜಳ ಭೀತಿಯನ್ನು ಹೊರದಬ್ಬುವಷ್ಟರಲ್ಲಿ ಹೊಸ ಜೀವ ಮೊಳೆತ ಹೊಸ ಭೀತಿ ಅವಳನ್ನು ಸೇರಿತು. ಚುರುಕಿನ ಹುಡುಗಿ ಬರೀ ಗೊಂಬೆಯಂತಾದಳು. ಕಳೆದುಕೊಳ್ಳುವದಕ್ಕೂ ಧೈರ್ಯವಿರದೆ ಪೂರ್ತಿ ದಾರಿ ಸಾಗಿದಳು. ಕಾಲೇಜ್ ಮುಗಿಯುವ ಸಮಯಕ್ಕೆ ಈಕೆ ಸಮೀಯುಲ್ಲಾರ ಕೈಗೆ ತನ್ನ ಮಗನನ್ನು ಕೊಟ್ಟಳು. ಭರತ ಎನ್ನುವ ಹೆಸರಿನಿಂದ ಕರೆಸಿಕೊಂಡ ಮಗು ಹಿಂದೂ ಅಮ್ಮನಿಂದಲೇ ಖಾನ್ ಎನ್ನುವ ಹೆಸರನ್ನೂ ಅಂಟಿಸಿಕೊಂಡ. “ಅವನು ನಿಮ್ಮ ಮಗನಾಗಿಯೇ ಇರಲಿ. ನನ್ನ ಜೀವನ ಏನಾಗುತ್ತೋ ಹೇಳಲಾರೆ. ಅವನಾದರೂ ನೆಮ್ಮದಿಯಾಗಿರಲಿ…” ಅಮ್ಮನ ಹೃದಯ ಅವಳಲ್ಲಿ ಎಚ್ಚತ್ತಿತ್ತು. ಮತ್ತೊಂದಿಷ್ಟು ಚೇತರಿಸಿಕೊಂಡು, ಸಮೀಯುಲ್ಲಾ ಮತ್ತವರ ಪತ್ನಿಯ ಆದೇಶ, ಒತ್ತಾಸೆಗಳ ಮೇರೆಗೆ ತನ್ನೂರಿಗೆ ಮರಳಿದಳು. “ಕಾಲೇಜಿನಲ್ಲಿ ಪುಂಡನೊಬ್ಬನ ಭಯದಿಂದ ಸರಿಯಾಗಿ ಓದಲಾಗದೆ, ಯಾವುದೇ ಪರೀಕ್ಷೆ ಬರೆದಿಲ್ಲ” ಎನ್ನುವ ಅರ್ಧ ಸತ್ಯ ಅವಳ ತಂದೆ-ತಾಯಿಗೆ ಒಗಟಾದರೂ ಮಗಳ ಮಂಕುತನವನ್ನು ಕೆದಕಲು ಅವರಿಗೆ ಮನಸ್ಸಾಗಿರಲಿಲ್ಲ. ಮತ್ತೊಂದು ವರ್ಷದೊಳಗೆ ಸರೋಜ ಒತ್ತಾಯದಿಂದ ಕೇಳಿಕೊಂಡು ಬಂದ ಕೇಶವನ ಮಡದಿಯಾಗಿ, ತೀರಾ ಸಾಮಾನ್ಯ ಗೃಹಿಣಿಯಾಗಿ ಬೆಂಗಳೂರು ಸೇರಿದ್ದರು.
ಆ ಹೊಸದರಲ್ಲಿ ಕೇಶವ ಹೇಳಿದ್ದ “ನನ್ನಿಂದಾಗಿ ನೀನು ಕಾಲೇಜು ಪದವಿ ಪಡೆಯಲಾಗಿಲ್ಲ. ಪಶ್ಚಾತ್ತಾಪದ ನೋವಿನಲ್ಲಿ ಎರಡು ವರ್ಷ ಬೆಂದು, ನಿನ್ನನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದೆ” ಅನ್ನುವ ಮಾತು ಸರೋಜಳಿಗೆ ಯಾವ ಅರ್ಥವನ್ನೂ ಹೊಳೆಯಿಸಿರಲಿಲ್ಲ, ಈಗ ಹಿನ್ನೋಟದಲ್ಲಿ ಮತ್ತೆ ಕೇಳಿಸಿಕೊಂಡಾಗ ಅದರ ಆಳದ ಅರಿವಾಯಿತು, ಆದರೆ ಸಮಯ ಮೀರಿ ಹೋಗಿತ್ತು.
ಭರತ ತನ್ನ ತಂದೆ ಸಮೀಯುಲ್ಲಾ ಖಾನ್, ಆತ ಕಾಲೇಜ್ ಪ್ರೊಫೆಸರ್ ಆಗಿದ್ದರು, ಅಂತೆಲ್ಲ ರಾಜೀವನೊಡನೆ ಅಂದಾಗ ಸರೋಜಮ್ಮನ ಮಾತೃಹೃದಯ ಜಾಗೃತಗೊಂಡಿತ್ತು. ಹೇಳಲಾರದೆ, ಸುಮ್ಮನಿರಲಾರದೆ ಸಂಕಟಪಟ್ಟುಕೊಂಡಿದ್ದರು. ಭರತನೊಡನೆ ತನ್ನ ಸಂಬಂಧ ಹೇಳಿಕೊಂಡರೆ ಪ್ರವಲ್ಲಿಕಾ-ಭರತ ಸಂಬಂಧ ಏನಾಗಬಹುದು? ಶಾರದಮ್ಮ, ಕೇಶವ, ಆಕಾಶ್, ಎನನ್ನಬಹುದು? ತನ್ನ ಮುಂದಿನ ಜೀವನ ಏನಾಗಬಹುದು? ಕಳೆದುಕೊಂಡದ್ದನ್ನು, ಇಲ್ಲದ್ದನ್ನು ಪಡೆಯುವುದು ಮುಖ್ಯವೋ? ಇದ್ದದ್ದನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವುದು ಸಹ್ಯವೋ? ಈಗ ತನಗೆ ಬೇಕಾಗಿರುವುದೇನು? ತುಂಬಿದ ಈ ಮನೆಯಲ್ಲಿ ಭರತನೊಡನೆ ಮುಕ್ತವಾಗಿ ಮಾತಾಡಲು ಅವಕಾಶ ದೊರೆಯುವುದು ಕಷ್ಟ. ಏನೇನೋ ಲೆಕ್ಕಾಚಾರಗಳ ಬಳಿಕ ಯಾವುದೋ ಒಂದು ನಿರ್ಧಾರಕ್ಕೆ ಬಂದ ಅವರ ಮನಸ್ಸು ನಿರಾಳವಾಗಿ ಉಸಿರಾಡಿತು. ಬೆಳಗ್ಗೆ ಎಲ್ಲರಿಗೂ ಮೊದಲು ಎದ್ದ ಸರೋಜಮ್ಮ, ಜಗಲಿಯಲ್ಲಿ ತೂಗುಹಾಕಿದ್ದ ಭರತನ ಅಂಗಿಯ ಜೇಬಿಗೆ, “PRIVATE: To Barat Kaan” ಹೆಸರಿದ್ದ ಲಕೋಟೆಯೊಂದನ್ನು ತೂರಿಸಿಟ್ಟು ಅದೇ ಮಧ್ಯಾಹ್ನ ಬೆಂಗಳೂರಿಗೆ ಹೊರಟುಹೋದರು.