ಕವಿ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) – (೧೮೫೬-೧೯೩೦)
ಬೇಡಲು ಕನ್ನಡ ದಾಸಯ್ಯ ಬಂದಿಹ
ನೀಡಿರಮ್ಮ ; ತಡಮಾಡದಲೇ||ಪ||
ಹಾಡೊಂದನಾತನು ಹೊಸದಾಗಿ ಮಾಡಿಹ
ಕೂಡಿರಿ ಕೇಳಿರಿ ಹಾಡುವೆನು||ಅನು||
ಕನ್ನಡ ಮಾತಿನ ತಂದೆತಾಯಿಗಳಿಂದ
ಚೆನ್ನ ಚೆನ್ನೆಯರೆಲ್ಲ ಹುಟ್ಟಿದಿರಿ.
ಕನ್ನಡ ಮಾತಿನ ಜೋಗುಳವನು ಕೇಳಿ
ಕನ್ನಡ ತೊಟ್ಟಿಲೊಳಾಡಿದಿರಿ,
ಕನ್ನಡ ದೇಶದೆ ದೊಡ್ಡವರಾದಿರಿ
ಕನ್ನಡ ವಿದ್ಯೆಯ ಗಳಿಸಿದಿರಿ
ಕನ್ನಡದಿಂದಲೆ ಸಿರಿವಂತರಾದಿರಿ
ಕನ್ನಡ ದೇಶದೆ ಹೆಸರಾದಿರಿ.
ಅನ್ಯ ಭಾಷೆಗಳಂತೆ ಕನ್ನಡ ಭಾಷೆಗೆ
ಉನ್ನತಿಕೆಯ ತರೆಬೇಕೆಂದು
ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು
ಮನ್ನಿಸಿ ಹಣವನು ಕೊಡಿರಮ್ಮ.
ಹೊಟ್ಟೆಗಿಲ್ಲದೆ ಬಂದ ದಾಸಯ್ಯನಿವನಲ್ಲ
ಕೊಟ್ಟುದ ಬಿಟ್ಟು ಹೋಗುವನಲ್ಲವು
ದಿಟ್ಟಿಸಿ ದಿಟ್ಟಿಸಿ ಕೊಡಬಂದ ಕೈಗಳ
ನೊಟ್ಟುಗೂಡಿಸಿ ಪದ ಕಟ್ಟುವನು,
ಚಿನ್ನದ ಕಡಗದ ಕೈ ಕಾಸನಿತ್ತಿತು
ರನ್ನದುಂಗುರದ ಕೈ ಇಲ್ಲೆಂದಿತು
ಹೊನ್ನ ವಂಕಿಯ ಕೈ ಸುಮ್ಮನೆ ಕುಳಿತಿತು
ಇನ್ನೊಂದು ಬಳೆಗೈ ಹಣ ಕೊಟ್ಟಿತು.
ಕೊಟ್ಟರೆ ಹಿಗ್ಗುವ ಕೊಡದಿರೆ ಕುಗ್ಗುವ
ಕೆಟ್ಟ ಮನದ ಗುರುತಿವಗಿಲ್ಲವು
ಕೊಟ್ಟ ಕಾಸುಗಳೆಲ್ಲ ಹೆಡಿಗೆ ತುಂಬುವ ಹೊನ್ನು
ಇಟ್ಟಂಥ ನಿಧಿ ಕೊಡದಿಹ ದ್ರವ್ಯವು.
ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ
ಕಾಸಲ್ಲವೇ ಕೋಟಿಯ ಮೂಲವು
ಈ ಶಾಸ್ತ್ರವ ಶಾಂತವಿಟ್ಠಲನೋಳ್ ಕಲಿತನು
ಸಾಸಿರವಿದರಂತೆ ತಂದಿಹನು.
ತ್ರಿವೇಣಿಯವರೆ,
ಪ್ರಾತಹ ಸ್ಮರಣೀಯರಾದ ಶಾಂತಕವಿಗಳ ಕನ್ನಡ ಕೀರ್ತನೆಯನ್ನು ಒದಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡಿದ್ದೀರಿ.
ವಂದನೆಗಳು.
ಸುನಾಥರೆ, ಶಾಂತಕವಿಗಳ ಮತ್ತಾವುದಾದರೂ ಕವನವಿದ್ದರೆ ತಿಳಿಸಿ.
ಕನ್ನಡ ದಾಸಯ್ಯ
ಕನ್ನಡಕ್ಕೆ ಇದೊಂದು ಮೆಚ್ಚಿನ ಕೊಡುಗೆ