ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ ತಂದಿತ್ತು. ಧಾರಿಣಿ ಮತ್ತು ಪ್ರವಲ್ಲಿಕಾ ಆಕೆಯನ್ನು ಅತ್ತಿಗೆ ಎಂದು ಪೂರ್ಣವಾಗಿ ಒಪ್ಪಿಕೊಂಡಿಲ್ಲದಿದ್ದರೂ, ಆದರದಿಂದ ನಡೆಸಿಕೊಳ್ಳುತ್ತಿದ್ದರು. ಆಕಾಶ್ ಯಾಕೋ ಭರತನ ಕಡೆ ಆಕರ್ಷಿತನಾಗುತ್ತಿದ್ದ, ಇದನ್ನೆಲ್ಲ ಸರೋಜಮ್ಮ ಗಮನಿಸಿದ್ದರು. ತಮ್ಮ ಹೃದಯದೊಳಗೆ ಹತ್ತಿಕೊಂಡಿದ್ದ ಜ್ವಾಲಾಮುಖಿಯನ್ನು ಹತ್ತಿಕ್ಕಲು ಹಗಲಿಡೀ ಪ್ರಯತ್ನಿಸಿ, ರಾತ್ರೆಗೆ ಅದನ್ನು ತನ್ನ ಪಾಡಿಗೆ ಹರಿಯಬಿಟ್ಟಿದ್ದರು. ಉರಿಯುವ ಭಾವಲಾವಾ ತನ್ನೊಡನೆ ಹಳೆಯ ನೆನಪುಗಳ ಮೆರವಣಿಗೆ ಹೊತ್ತು ಸೂರಿನತ್ತ ಹಾರುತ್ತಿತ್ತು…

ಕಾಲೇಜ್ ಇರದ ಸಣ್ಣ ಊರಿನ ಮಧ್ಯಮ ವರ್ಗದ ಜಾಣೆ ಸರೋಜ. ಅಪ್ಪ-ಅಮ್ಮನ ಜೊತೆ ಹಠ ಮಾಡಿ, ತನಗಾಗಿ ದೊಡ್ಡೂರಿನ ಕಾಲೇಜಿನಲ್ಲಿ ಸೀಟ್ ಪಡೆದು, ಹಾಸ್ಟೆಲ್ಲಿನಲ್ಲಿ ಸೇರಿಕೊಂಡಿದ್ದಳು. ಪ್ರೊಫೆಸರ್ ಸಮೀಯುಲ್ಲಾ ಅವಳಿಗೆ ಅಚ್ಚುಮೆಚ್ಚು. ಅವರಿಗೂ ಚುರುಕು ಬುದ್ಧಿಯ ಸರೋಜಳ ಮೇಲೆ ವಿಶೇಷ ದೃಷ್ಟಿ. ಎಲ್ಲ ಪಾಠಗಳಲ್ಲೂ ಮುಂದಿದ್ದ ಸರೋಜ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬಿದ್ದವಳಲ್ಲ. ಕಾಲೇಜಿನ ಕೊನೆಯ ವರ್ಷ… ಇದೊಂದು ಮುಗಿದರೆ ತಾನು ಪದವೀಧರೆ… ಸಂಸಾರದಲ್ಲೆಲ್ಲ ಯಾರೂ ದಾಟಿರದ ಗಡಿ ದಾಟಿದವಳು… ಸರೋಜಳ ಕನಸುಗಳಿಗೆ ಕಡಿವಾಣ ಅವಳಲ್ಲಿರಲಿಲ್ಲ. ಆದರೆ, ವಿಧಿ ಕಡಿವಾಣ ಹಿಡಿದಿತ್ತು…

ಅದೊಂದು ಸಂಜೆ, ಕಾಲೇಜಿನ ಪಕ್ಕದ ಮೈದಾನದಿಂದ ಓಟದ ತರಬೇತಿ ಮುಗಿಸಿಕೊಂಡು, ಹಾಸ್ಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದಳು. ತಡವಾದರೆ ಊಟ ಸಿಗಲಾರದು ಅನ್ನುವುದು ಒಂದು ಕಾರಣ, ಕಾಲೇಜ್ ಹಿಂದಿನ ಕಾಂಪೌಂಡ್ ಗೋಡೆಯ ಮೇಲೆ ಯಾವಾಗಲೂ ಕೂತಿರುತ್ತಿದ್ದ ಪುಂಡರ ಗುಂಪು ಇನ್ನೊಂದು ಕಾರಣ; ಅವಳ ಪಾದಗಳು ಒಂದರೊಡನೊಂದು ಪೈಪೋಟಿಯಲ್ಲಿದ್ದವು. “ಏನಮ್ಮಣ್ಣೀ, ಏನವಸರ…?” ನಿರೀಕ್ಷಿತ ಅನಿರೀಕ್ಷಿತ ದನಿ ಅವಳನ್ನು ತಟ್ಟಿತ್ತು. ಉತ್ತರಿಸದೆ, ನೋಡದೆ ಮುಂದೆ ದಾಟಿದ ಅವಳ ಮುಂದೆ ಆತ ಅಡ್ಡ ಬಂದ. ಹಿಂದೆ ಎಷ್ಟೋ ಬಾರಿ ನೋಡಿದ ಮುಖ, ಈಗ ಮತ್ತಷ್ಟು ಜಿಗುಪ್ಸೆ ತಂದಿತು. ಯಾವ ಭಾವವನ್ನೂ ತೋರಿಸದೆ, ದಾಟಿಕೊಂಡು ಸಾಗಲು ಪ್ರಯತ್ನಿಸಿದವಳನ್ನು ಅನಾಮತ್ತಾಗಿ ಎತ್ತಿಕೊಂಡೇ ಸಾಗಿದ ಕೀಚಕ. ಕೂಗಾಡಲು ಸರೋಜಳ ದನಿ ಏಳಲಿಲ್ಲ. ಅವಳ ಬುದ್ಧಿಗೆ ಮಂಕು ಬಡಿದಿತ್ತು. ಕಾಂಪೌಂಡಿನ ಆ ಕಡೆಯಲ್ಲಿ ನಡೆದಿದ್ದಕ್ಕೆ ಸಾಕ್ಷಿ ಯಾರೂ ಇರಲಿಲ್ಲ. ಸೂರ್ಯ ಕಣ್ಮರೆಯಾಗಿದ್ದ; ಚಂದ್ರ ಬಂದೇ ಇರಲಿಲ್ಲ. ಚುಕ್ಕಿಗಳಿಗೆ ದೃಷ್ಟಿ ಮಂದ; ಗಾಳಿಗೆ ಉಸಿರಿರಲಿಲ್ಲ. ಭುಮಿಗೆ ದನಿಯಿರಲಿಲ್ಲ. ಯಾರೂ ಇಲ್ಲದಲ್ಲಿ ಅನಾಥಭಾವದಿಂದ ಒಂಟಿಯಾಗಿ ಬಿದ್ದುಕೊಂಡಿದ್ದ ಸರೋಜಳಿಗೆ ಹೊತ್ತಿನ ಪರಿವೆಯಿರಲಿಲ್ಲ. ತನ್ನ ಆಷಾಢಭೂತಿತನಕ್ಕೆ ತಾನೇ ಬೆಳಕು ಹಿಡಿವಂತೆ ಸೂರ್ಯ ಮತ್ತೆ ಬೆಳಕು ತೂರಿದಾಗ ಸರೋಜಳ ಮಂಕುತನ ಬೆಚ್ಚಿತು. ತನ್ನತ್ತ ಬರುತ್ತಿದ್ದ ಆಕೃತಿಯನ್ನು ಕಂಡು ಕಣ್ಣುಮುಚ್ಚಿದಳು. ಬೆಚ್ಚನೆಯ ಕೈ ಹಣೆ ಮುಟ್ಟಿದಾಗ, “ಸರೋಜ, ಇಲ್ಲಿ ಯಾಕಿದ್ದೀ? ಏನಾಯ್ತು?” ಆರ್ದ್ರ ದನಿ ವಿಚಾರಿಸಿದಾಗ ಅವಳ ದನಿಗೆ ದಾರಿ ಸಿಕ್ಕಿತ್ತು….

“ಸರ್… ನಾನು ಕೆಟ್ಟೆ, ನನಗಿನ್ನು ಬದುಕಿಲ್ಲ… ಆ ದುರುಳ ನನ್ನ ಬಾಳು ಹಾಳು ಮಾಡಿದ…. ನನಗಿನ್ನು ಬದುಕಿಲ್ಲ…” ಪಿಸುನುಡಿಗೂ ಭಯ. ಪ್ರೊಫೆಸರ್ ಸಮೀಯುಲ್ಲಾ ಖಾನ್ ಮುಖ ಜಾಗೃತವಾಯ್ತು. ಅವಳನ್ನು ಹೇಗೋ ನಡೆಸಿಕೊಂಡು ತನ್ನ ಮನೆಗೆ ಕರೆತಂದರು. ಅವರ ಮಡದಿಯ ಮಮತೆಯಲ್ಲಿ ಸರೋಜಳ ದೇಹ ಒಂದಿಷ್ಟು ಚೇತನ ಪಡೆದರೂ ಮನಸ್ಸು ಏಳಲಿಲ್ಲ. ಸರೋಜ ಗೆಳತಿಯೊಬ್ಬಳ ಮದುವೆಗಾಗಿ ಬೇರೊಂದು ಊರಿಗೆ ಹೋಗಿದ್ದಾಳೆಂದು ಸುದ್ದಿ ಹಬ್ಬಿತು. ಸಮೀಯುಲ್ಲರ ಮನೆಯೊಳಗೆ ಜೀವನ ಬೇಡವೆನ್ನುವ ಸೆಣಸಾಟದಲ್ಲಿ ಸರೋಜ ಗೆಲ್ಲಲಿಲ್ಲ. ಸಮೀಯುಲ್ಲಾ ಮತ್ತವರ ಪತ್ನಿ ತಮ್ಮ ಮಗಳಂತೆ ಸರೋಜಳನ್ನು ಕಾಪಾಡಿದರು. ಸೂಕ್ತ ಸಮಯ ಸಿಕ್ಕಾಗ ಅವಳನ್ನು ತಮ್ಮ ಊರಿಗೆ ಕರೆದೊಯ್ದರು. ಹೊಸ ಪರಿಸರ ಸರೋಜಳ ಭೀತಿಯನ್ನು ಹೊರದಬ್ಬುವಷ್ಟರಲ್ಲಿ ಹೊಸ ಜೀವ ಮೊಳೆತ ಹೊಸ ಭೀತಿ ಅವಳನ್ನು ಸೇರಿತು. ಚುರುಕಿನ ಹುಡುಗಿ ಬರೀ ಗೊಂಬೆಯಂತಾದಳು. ಕಳೆದುಕೊಳ್ಳುವದಕ್ಕೂ ಧೈರ್ಯವಿರದೆ ಪೂರ್ತಿ ದಾರಿ ಸಾಗಿದಳು. ಕಾಲೇಜ್ ಮುಗಿಯುವ ಸಮಯಕ್ಕೆ ಈಕೆ ಸಮೀಯುಲ್ಲಾರ ಕೈಗೆ ತನ್ನ ಮಗನನ್ನು ಕೊಟ್ಟಳು. ಭರತ ಎನ್ನುವ ಹೆಸರಿನಿಂದ ಕರೆಸಿಕೊಂಡ ಮಗು ಹಿಂದೂ ಅಮ್ಮನಿಂದಲೇ ಖಾನ್ ಎನ್ನುವ ಹೆಸರನ್ನೂ ಅಂಟಿಸಿಕೊಂಡ. “ಅವನು ನಿಮ್ಮ ಮಗನಾಗಿಯೇ ಇರಲಿ. ನನ್ನ ಜೀವನ ಏನಾಗುತ್ತೋ ಹೇಳಲಾರೆ. ಅವನಾದರೂ ನೆಮ್ಮದಿಯಾಗಿರಲಿ…” ಅಮ್ಮನ ಹೃದಯ ಅವಳಲ್ಲಿ ಎಚ್ಚತ್ತಿತ್ತು. ಮತ್ತೊಂದಿಷ್ಟು ಚೇತರಿಸಿಕೊಂಡು, ಸಮೀಯುಲ್ಲಾ ಮತ್ತವರ ಪತ್ನಿಯ ಆದೇಶ, ಒತ್ತಾಸೆಗಳ ಮೇರೆಗೆ ತನ್ನೂರಿಗೆ ಮರಳಿದಳು. “ಕಾಲೇಜಿನಲ್ಲಿ ಪುಂಡನೊಬ್ಬನ ಭಯದಿಂದ ಸರಿಯಾಗಿ ಓದಲಾಗದೆ, ಯಾವುದೇ ಪರೀಕ್ಷೆ ಬರೆದಿಲ್ಲ” ಎನ್ನುವ ಅರ್ಧ ಸತ್ಯ ಅವಳ ತಂದೆ-ತಾಯಿಗೆ ಒಗಟಾದರೂ ಮಗಳ ಮಂಕುತನವನ್ನು ಕೆದಕಲು ಅವರಿಗೆ ಮನಸ್ಸಾಗಿರಲಿಲ್ಲ. ಮತ್ತೊಂದು ವರ್ಷದೊಳಗೆ ಸರೋಜ ಒತ್ತಾಯದಿಂದ ಕೇಳಿಕೊಂಡು ಬಂದ ಕೇಶವನ ಮಡದಿಯಾಗಿ, ತೀರಾ ಸಾಮಾನ್ಯ ಗೃಹಿಣಿಯಾಗಿ ಬೆಂಗಳೂರು ಸೇರಿದ್ದರು.

ಆ ಹೊಸದರಲ್ಲಿ ಕೇಶವ ಹೇಳಿದ್ದ “ನನ್ನಿಂದಾಗಿ ನೀನು ಕಾಲೇಜು ಪದವಿ ಪಡೆಯಲಾಗಿಲ್ಲ. ಪಶ್ಚಾತ್ತಾಪದ ನೋವಿನಲ್ಲಿ ಎರಡು ವರ್ಷ ಬೆಂದು, ನಿನ್ನನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದೆ” ಅನ್ನುವ ಮಾತು ಸರೋಜಳಿಗೆ ಯಾವ ಅರ್ಥವನ್ನೂ ಹೊಳೆಯಿಸಿರಲಿಲ್ಲ, ಈಗ ಹಿನ್ನೋಟದಲ್ಲಿ ಮತ್ತೆ ಕೇಳಿಸಿಕೊಂಡಾಗ ಅದರ ಆಳದ ಅರಿವಾಯಿತು, ಆದರೆ ಸಮಯ ಮೀರಿ ಹೋಗಿತ್ತು.

ಭರತ ತನ್ನ ತಂದೆ ಸಮೀಯುಲ್ಲಾ ಖಾನ್, ಆತ ಕಾಲೇಜ್ ಪ್ರೊಫೆಸರ್ ಆಗಿದ್ದರು, ಅಂತೆಲ್ಲ ರಾಜೀವನೊಡನೆ ಅಂದಾಗ ಸರೋಜಮ್ಮನ ಮಾತೃಹೃದಯ ಜಾಗೃತಗೊಂಡಿತ್ತು. ಹೇಳಲಾರದೆ, ಸುಮ್ಮನಿರಲಾರದೆ ಸಂಕಟಪಟ್ಟುಕೊಂಡಿದ್ದರು. ಭರತನೊಡನೆ ತನ್ನ ಸಂಬಂಧ ಹೇಳಿಕೊಂಡರೆ ಪ್ರವಲ್ಲಿಕಾ-ಭರತ ಸಂಬಂಧ ಏನಾಗಬಹುದು? ಶಾರದಮ್ಮ, ಕೇಶವ, ಆಕಾಶ್, ಎನನ್ನಬಹುದು? ತನ್ನ ಮುಂದಿನ ಜೀವನ ಏನಾಗಬಹುದು? ಕಳೆದುಕೊಂಡದ್ದನ್ನು, ಇಲ್ಲದ್ದನ್ನು ಪಡೆಯುವುದು ಮುಖ್ಯವೋ? ಇದ್ದದ್ದನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವುದು ಸಹ್ಯವೋ? ಈಗ ತನಗೆ ಬೇಕಾಗಿರುವುದೇನು? ತುಂಬಿದ ಈ ಮನೆಯಲ್ಲಿ ಭರತನೊಡನೆ ಮುಕ್ತವಾಗಿ ಮಾತಾಡಲು ಅವಕಾಶ ದೊರೆಯುವುದು ಕಷ್ಟ. ಏನೇನೋ ಲೆಕ್ಕಾಚಾರಗಳ ಬಳಿಕ ಯಾವುದೋ ಒಂದು ನಿರ್ಧಾರಕ್ಕೆ ಬಂದ ಅವರ ಮನಸ್ಸು ನಿರಾಳವಾಗಿ ಉಸಿರಾಡಿತು. ಬೆಳಗ್ಗೆ ಎಲ್ಲರಿಗೂ ಮೊದಲು ಎದ್ದ ಸರೋಜಮ್ಮ, ಜಗಲಿಯಲ್ಲಿ ತೂಗುಹಾಕಿದ್ದ ಭರತನ ಅಂಗಿಯ ಜೇಬಿಗೆ, “PRIVATE: To Barat Kaan” ಹೆಸರಿದ್ದ ಲಕೋಟೆಯೊಂದನ್ನು ತೂರಿಸಿಟ್ಟು ಅದೇ ಮಧ್ಯಾಹ್ನ ಬೆಂಗಳೂರಿಗೆ ಹೊರಟುಹೋದರು.

3 thoughts on “ಭಾಗ – 20”

  1. ಭರತ ಪತ್ರವನ್ನು ಓದಿ ಮುಗಿಸಿದ. ಅವನನ್ನು ಬಹುದಿನಗಳಿಂದ ಕಾಡುತ್ತಿದ್ದ “ನಾನಾರು?” ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಿತ್ತು. ಸಮೀಯುಲ್ಲಾ ತನ್ನ ಹೆತ್ತ ತಂದೆ ಇರಲಾರರು ಎಂಬ ಅನುಮಾನ ಅವನಿಗೆ ಮೊದಲೇ ಇತ್ತು. ಸಮೀಯುಲ್ಲಾರ ಸಾತ್ವಿಕ ಸ್ವಭಾವಕ್ಕೂ, ತನ್ನಲ್ಲಿದ್ದ ಉಗ್ರ ಗುಣಕ್ಕೂ ಹೋಲಿಕೆಯೇ ಇಲ್ಲದ್ದು ಅವನ ಗಮನಕ್ಕೂ ಎಷ್ಟೋ ಬಾರಿ ಬಂದಿತ್ತು. ಯಾರನ್ನೂ ನೋಯಿಸೆನೆನ್ನುವ ಸಮೀಯುಲ್ಲಾರನ್ನು ನೋಡಿದಾಗ – “ಇಂತಹ ತಂದೆಗೆ ಮುಟ್ಟಿದ್ದೆಲ್ಲ ಸುಟ್ಟುಹಾಕುವ ಭಸ್ಮಾಸುರ ಪ್ರವೃತ್ತಿಯ ತಾನು ಮಗನಾಗಿ ಹೇಗೆ ತಾನೇ ಹುಟ್ಟಿದೆ?” ಎಂದು ಅವನಿಗೆ ಎಷ್ಟೋ ಬಾರಿ ಅನ್ನಿಸಿತ್ತು. ತಂದೆ ಯಾರೆಂದೇ ತಿಳಿದಿರದ, ತಾಯಿಯಿದ್ದೂ ಅವಳಿಂದ ದೂರವಿದ್ದ, ಸಾಕು ತಂದೆಯನ್ನು ತನ್ನ ಕೈಯಾರೆ ಕೊಂದ ತನ್ನ ದುರದೃಷ್ಟಕರ ಬದುಕಿಗಾಗಿ ಮನಸಾರೆ ಅಳಬೇಕೆನ್ನಿಸಿತು.

    ಭರತನಿಗೆ ಪ್ರವಲ್ಲಿಕಾ ಸಂಬಂಧದಲ್ಲಿ ತಂಗಿಯಾಗುವುದರಿಂದ ಅವಳೊಡನೆ ಮದುವೆಯಾಗುವ ಯೋಚನೆಯನ್ನು ಕೈಬಿಡುವಂತೆ ಸರೋಜಮ್ಮ ತಿಳಿಸಿದ್ದರು. ಈ ವಿಷಯವನ್ನು ಪ್ರವಲ್ಲಿಕಾಳಿಗಾಗಲೀ, ಧಾರಿಣಿಗಾಗಲೀ ಹೇಳುವುದು ಸಾಧ್ಯವಿರಲಿಲ್ಲ. ಅವರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುವುದು ತನ್ನಿಂದಾಗದು ಎಂಬ ಅಳುಕು ಮೂಡಿತು. ಯಾರಿಗೂ ಹೇಳದೆ, ಕೇಳದೆ ಈ ಜಾಗದಿಂದ ಮರೆಯಾಗಿ ಹೋಗುವುದೇ ತನಗಿರುವ ಕೊನೆಯ ದಾರಿ ಎಂದು ನಿರ್ಧರಿಸಿದ. ಮಧ್ಯರಾತ್ರಿ ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿ ಮುಳುಗಿದ್ದಾಗ ಮನೆಯಿಂದ ಹೊರಬಿದ್ದ. ಕಾರು ಸ್ಟಾರ್ಟ್ ಆದ ಸದ್ದಿಗೆ ಮನೆಯವರಿಗೆ ಎಚ್ಚರವಾದೀತೇನೋ ಎಂದು ಹೆದರಿದ. ಹಾಗೇನೂ ಆಗಲಿಲ್ಲ. ಕತ್ತಲೆಯಲ್ಲಿ ಮುಳುಗಿದ್ದ ಮನೆ ಹಿಂದೆ ಉಳಿಯಿತು. ಯಾರೊಬ್ಬರಿಗೂ ಬೇಕಾಗದೆ ಈ ಲೋಕಕ್ಕೆ ಬಂದಿಳಿದ ಈ ಭರತಖಾನನೆಂಬ ಜೀವಿಯನ್ನು ಗಮನಿಸುವವರಾದರೂ ಯಾರು? ತಾನು ಎಲ್ಲಿಗೆ ಹೋದರೂ ಯಾರಿಗೆ ಏನಾಗಬೇಕು ಎಂಬ ನಿರಾಸೆಯ ನಗು ಅವನ ಮುಖದಲ್ಲಿ ಹರಡಿಕೊಂಡಿತು.

    ಸರೋಜಮ್ಮನವರನ್ನು ಕೆಲವು ದಿನಗಳಿಂದ ನೋಡಿದ್ದರೂ, ಈಗ ಅವರೇ ತಾಯಿಯೆಂದು ತಿಳಿದ ಮೇಲೆ ತನ್ನ ಪಾಪಗಳನ್ನೆಲ್ಲಾ ಅವರಲ್ಲಿ ನಿವೇದಿಸಬೇಕೆಂಬ ಬಯಕೆ ಮೂಡಿತು. ಆದರೆ ಸರೋಜಮ್ಮ ಭರತ ತಮ್ಮನ್ನೆಂದೂ ನೋಡುವ ಪ್ರಯತ್ನ ಮಾಡಬಾರದೆಂದು ಪತ್ರದಲ್ಲಿ ಕಟ್ಟುನಿಟ್ಟಾಗಿ ತಿಳಿಸಿದ್ದರು. ಇಷ್ಟು ದಿನ ಬಚ್ಚಿಟ್ಟಿದ್ದ ಗುಟ್ಟು ಹೊರಗೆ ಬಂದರೆ ಅದರ ಪರಿಣಾಮ ಏನಾಗಬಹುದೆಂಬ ಅರಿವು ಭರತನಿಗೂ ಇತ್ತು. ಆದರೂ ತನ್ನ ತಾಯಿಯಾದ ಆಕೆಯನ್ನು ಒಂದೇ ಒಂದು ಬಾರಿ ನೋಡಲೇಬೇಕೆನ್ನಿಸಿತು. ಹುಟ್ಟಿದಾಗಲೇ ತನ್ನನ್ನು ತೊರೆದು ಹೋಗಿದ್ದರೂ ಆ ತಾಯಿಯ ಬಗ್ಗೆ ಅವನ ಹೃದಯದಲ್ಲಿ ಪ್ರೀತಿ ತುಂಬಿಕೊಂಡಿತು. ಒಂದೇ ಬಾರಿ ಅಮ್ಮನನ್ನು ನೋಡುತ್ತೇನೆ. ಅವಳಿಗೆ ಯಾವ ಕೇಡನ್ನೂ ಬಯಸಲಾರೆ. ದೂರದಿಂದಲಾದರೂ ಅವಳನ್ನು ಒಮ್ಮೆ ನೋಡಿ ಎಲ್ಲರಿಂದಲೂ ದೂರ.. ಬಹುದೂರ …ಹೋಗಿಬಿಡುತ್ತೇನೆ ಎಂದುಕೊಂಡ.

    ಭರತನ ಮನಸ್ಸಿನ ಆಲೋಚನೆಗಳಂತೆಯೇ ಅವನ ಕಾರು ಶರವೇಗದಿಂದ ಬೆಂಗಳೂರಿನ ಕಡೆಗೋಡುತ್ತಿತ್ತು. ಆ ಕ್ಷಣ ಅವನ ಮನದಲ್ಲಿ ತಾಯಿಯ ಮಮತಾಮಯ ರೂಪವನ್ನು ಕಣ್ತುಂಬ ಕಾಣುವ ಹಂಬಲ ತುಂಬಿಹೋಗಿತ್ತು. ಅವ್ಯಕ್ತ ಖುಷಿ ಅವನ ನರನಾಡಿಗಳಲ್ಲಿ ಹರಿಯುತ್ತಿತ್ತು. ಕಾರಿನಲ್ಲಿದ್ದ ಸ್ಪೀಕರಿಗೆ ಚಾಲನೆ ಕೊಟ್ಟ. ಎದೆಯಲ್ಲಿರುವ ದೇಶಭಕ್ತಿಯನ್ನೆಲ್ಲಾ ಕಂಠಕ್ಕಿಳಿಸಿ ಹಾಡುತ್ತಿದ್ದ ರೆಹಮಾನ್ ಭರತನಲ್ಲಿ ತುಡಿಯುತ್ತಿದ್ದ ಆವೇಗಕ್ಕೆ ದನಿಯಾಗಿದ್ದ.

    “ತೇರೆ ಪಾಸ್ ಹಿ ಮೈ ಆ ರಹಾ ಹೂ
    ಅಪ್ನಿ ಬಾಹೇ ಖೋಲ್ ದೆ
    ಜೋರ್ ಸೆ ಮುಜಕೊ ಗಲೆ ಲಗಾ ಲೊ
    ಮುಜಕೊ ಫಿರ್ ವೊ ಪ್ಯಾರ್ ದೇ
    ತು ಹಿ ಜಿಂದಗಿ ಹೈ, ತು ಹಿ ಮೇರಿ ಮೊಹಬ್ಬತ್ ಹೈ
    ತೇರೆ ಹಿ ಪೈರೋ ಮೇ ಜನ್ನತ್ ಹೈ
    ತು ಹಿ ದಿಲ್, ತು ಜಾನ್, ಅಮ್ಮಾ
    ಮಾ ತುಝೆ ಸಲಾಮ್, ಮಾ ತುಝೆ ಸಲಾಮ್
    ಅಮ್ಮ ತುಝೆ ಸಲಾಮ್, ಮಾ ತುಝೆ ಸಲಾಮ್!”
    **** ************ *** *********************

  2. ಅಮ್ಮನನ್ನು ನೋಡುವ ತವಕದಲ್ಲಿ ಹಳ್ಳಿ ಬಿಟ್ಟಾಗ ಭರತನ ಮನದ ತುಂಬಾ ಸರೋಜಮ್ಮನವರ ರೂಪವೇ ತುಂಬಿ ಹೋಗಿತ್ತು ಇಹದ ಅರಿವೇ ಇರಲಿಲ್ಲದವನಿಗೆ ಅವನ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರಿದ್ದಾರೆ ಎಂಬ ಗಮನ ಹೋಗುವುದು ಹೇಗೆ?

    ಕೇಶವನ ಮನೆಯನ್ನು ಹಿಂಭಾಗದಿಂದ ಹೊಕ್ಕು ಕಿಟಕಿಂದಲೇ ಸರೋಜಮ್ಮನ ದರ್ಶನ ಮಾಡಿಕೊಂಡು ಭಾರವಾದ ಮನಸ್ಸಿನಿಂದ ಹೊರಬಂದು ಕಾರು ಓಡಿಸತೊಡಗಿದ ಭರತ ಖಾನ ಕಾರು ಬಾಂಬೆ ಕಡೇಗೆ ಶರವೇಗದಿಂದ ಓಡುತ್ತಿತ್ತು
    ಭರತ ನ ಮನ ವ್ಯಗ್ರ ವಾಗಿತ್ತು ತನ್ನ ಮುಂದಿನ ದಾರಿ ಏನು ಎಂದು ಚಿಂತಿಸುತ್ತಿದ್ದ ಅವನು ಸುಸ್ತಾದರೂ ಲೆಕ್ಕಿಸದೇ ಮಧ್ಯಾನ್ಹ ದ ವರೆಗೂ ಒಂದೇ ಸಮನೆ ಕಾರು ಓಡಿಸಿದ ಹೊಟ್ಟೆಯಲ್ಲಿ ಹಸಿವು ಬಡಬಾಗ್ನಿಯಂತೆ ಮೇಲೆದ್ದಾಗ ಯಾವುದೋ ಢಾಬಾ ದ ಬಳಿ ಕಾರು ನಿಲ್ಲಿಸಿ ಹೊಟ್ತೆಗೆ ಹಾಕಿಕೊಂಡು ಮತ್ತೆ ಕಾರಿಗೆ ಬಂದಾಗ ಅವನಿಗೆ ಶಾಕ್! ಹಿಂದಿನ ಸೀಟಿನಲ್ಲಿ ಬೆಕ್ಕಿನ ಮರಿಯಂತೆ ಮುದುರಿ ಕೂತಿದ್ದಳು ಕವಿತಾ

  3. ಭರತನಿಗೆ ಅಚ್ಚರಿಯಾದರೂ ತೋರ್ಪಡಿಸಿ ಕೊಳ್ಳದೆ ಕವಿತಾಳನ್ನು ಕೆಳಗಿಳಿಯಲು ಸೂಚಿಸಿದ ಹಸಿವಿನಿಂದ ಕಂಗಾಲಾಗಿ ಹೋಗಿದ್ದಳು ಕವಿತಾ. ಕಾರಿನಿಂದ ಹೊರಗೆ ಹೆಜ್ಜೆ ಇಟ್ಟವಳೇ ಕಣ್ಣು ಕತ್ತಲಿಟ್ಟು ನೆಲಕ್ಕೆ ವಾಲುತ್ತಿದ್ದವಳನ್ನು ಭುಜ ಹಿಡಿದು ಕರೆದೊಯ್ಯದ

    ಭರತ .ಸ್ವಲ್ಪ ತಿಂಡಿ ತಿಂದ ಮೇಲೆ ಗೆಲುವಾದಳು ಕವಿತಾ
    ಯಾಕೆ ನೀನು ನನ್ನ ಹಿಂದೆ ಬಂದಿದ್ದು…? ಭರತನ ಕೋಪ ತುಂಬಿದ ವಿಚಾರಣೆಗೆ ಕವಿತಾಳ ಮೌನವೇ ಉತ್ತರವಾಗಿತ್ತು.
    `ನಡೆ ನಿನ್ನನ್ನು ವಾಪಸ್ಸು ಊರಿಗೆ ಕಳಿಸುವ ಏರ್ಪಾಡು ಮಾಡುತ್ತೇನೆ…’ ಭುಸುಗುಟ್ಟುತ್ತಾ ಎದ್ದು ಹೊರಟವನ ತೋಳು ಜಗ್ಗಿ ವಾಪಸ್ಸು ಕೂರಿಸಿ ಉಸುರಿದಳು`ನಾನು ನಿನ್ನೊಂದಿಗೇ ಬರುವವಳು…’
    ಏನು ಹೇಳ್ತಿದೀಯಾ…ನನ್ನ ಪಾಸ್ಟ್ ನಿನಗೆ ಗೊತ್ತಾ…?
    ಗೊತ್ತು…
    ಗೊತ್ತಿದ್ದೇ ಬಂದೆಯಾ…?
    ಹೌದು…
    ಭರತ ನಿರುತ್ತರನಾದ
    ಭರತನಿಗೆ ಕವಿತ ಮಾರು ಹೋದಂತೆ ಈ ಜೇನುದನಿಯ ಜಿಂಕೆ ಕಣ್ಣಿನ ಚೆಲುವೆಯೆಡೆಗೆ ಭರತನೂ ಸೆಳೆಯಲ್ಪಟ್ಟಿದ್ದ ಆದರೆ ತನ್ನ ಜೀವನ ಬೆಂಕಿಯೊಂದಿಗೆ ಸರಸ ಎಂದು ಅವನಿಗೆ ಗೊತ್ತಿತ್ತಾದ್ದರಿಂದ
    ಯಾರನ್ನೂ ತನ್ನ ಜೀವನದಲ್ಲಿ ಒಳಗೊಳ್ಳಲು ಅವನಿಗೆ ಮನಸಾಗುತ್ತಿಲ್ಲ
    ಕವಿತಾಳಿಗೂ ಈಮಾತನ್ನು ಸ್ಪಷ್ಟವಾಗಿ ಹೇಳಿದ`ಭಾರತ ಸರ್ಕಾರದ ಸೇವೆಯಲ್ಲಿ ನಾನು ಸೇರಿರುವುದಂತೂ ನಿಜ ಆದರೆ ಒಮ್ಮೆ ಪ್ಯಾನ್ ಇಸ್ಲಾಮಿಕ್ ಮೂಮೆಂಟಿನಲ್ಲಿ ಸಕ್ರಿಯನಾಗಿದ್ದ ನನ್ನನ್ನು
    ಹೇಗಾದರೂ ಓಸಾಮಾನ ಭಂಟರು ಪತ್ತೆ ಹಚ್ಚುತ್ತಾರೆ ಒಸಾಮ ನನಗೇನೂ ಮಾಡಲಾರ ಆದರೆ ಮಿಕ್ಕವರು ನನ್ನನ್ನು ಉಳೀಸುವುದಿಲ್ಲ ಅದಕ್ಕೇ ಇಲ್ಲಿಂದ ದೂರ ಓದಿ ಹೋಗೋಣ ವೆಂದಿದ್ದೇನೆ ಅಮೇರಿಕಾ ಅಥ್ವಾ ಯೂರೋಪ್ ನಲ್ಲಿ ನನಗೆ ವಿಶ್ವಾಸವಿಲ್ಲ

    ಬಹುಷಃ ನ್ಯೂಝೀಲ್ಯಾಂಡ್ ಅಥ್ವಾ ಆಸ್ಟ್ರೇಲಿಯಾಕ್ಕೆ…
    ಅಥ್ವಾ ಕೆರೆಬಿಯನ್…?ನೀನು ನನ್ನೊಂದಿಗೆ ಬಂದರೆ ಇನ್ನು ಕೆಲವು ವರ್ಷ ಭಾರತಕ್ಕೆ ಬರಲಾಗದು
    ಬರುವುದು ಹಾಗಿರಲಿ ನಿಮ್ಮವರೊಂದಿಗೆ ಸಂಪರ್ಕ ಸಹ ಇಟ್ಟುಕೊಳ್ಳಲಾಗದು ಹೇಳು ಇದಕ್ಕೆಲ್ಲಾ ರೆಡಿ ಇದ್ದೀಯಾ…?ಅಷ್ಟಕ್ಕೂ ನೀನು ಇಷ್ಟೇಲ್ಲಾ ಕಷ್ಟ ಪಟ್ಟು ನನ್ನೊಂದಿಗೆ ಬರುವ ಅಗತ್ಯ ಇದೆಯಾ ಅಂತ
    ಮೊದಲು ಯೋಚಿಸು…ಸುಮ್ಮನೆ ವಾಪಸು ಮನೆಗೆ ಹೋಗು.. ಮನೆಯವರು ತೋರಿಸುವ ಹುಡುಗನನ್ನು ಮದುವೆಯಾಗಿ ಸುಖವಾಗಿರು…ನನ್ನೊಂದಿಗೆ ಬಂದು ಮುಳ್ಳೀನ ಹಾದಿಯಲ್ಲಿ ನೀನು ಕಷ್ಟಪಡುವುದು ನಾ ನೋಡಲಾರೆ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.