ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಕವನ ಸಂಕಲನ : ನಲ್ವಾಡುಗಳು

-ಪಲ್ಲವಿ-
ನಮ್ಮ ಹಳ್ಳಿಯೂರಽ ನಮಗ ಪಾಡಽ-
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಊರಮುಂದ ತಿಳಿನೀರಿನ ಹಳ್ಳಽ-
ಬೇವು ಮಾವು ಹುಲಗಲ ಮರಚೆಳ್ಳಽ-
ದಂಡಿಗುಂಟ ನೋಡು ನೆಳ್ಳಽ ನೆಳ್ಳಽ-

ನೀರ ತರುವಾಗ ಗೆಣತ್ಯಾರ ಜೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ—


ನಮ್ಮ ಹಳ್ಳ ಕಾಶಿಯ ಹಿರಿಹೊಳಿಯ
ಒಮ್ಮ್ಯಾದರು ಬತ್ತಿಲ್ಲದು ತಿಳಿಯ-
ಬದಿಯ ತ್ವಾಟಗಳ ಬೆಳಸಿಗೆ ಕಳಿಯ-

ಹ್ಯಾಂಗ ಕೊಡತೈತಿ ಬಂದೊಮ್ಮೆ ನೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪಡಿವಿಯ ತುಂಬಾ ಕಾಳಿನ ಚೀಲಾ-
ನಡುಮನಿಯೊಳಗಽ ಗಳಿಗಿಯ ಸಾಲಾ-
ತುಂಬಿ ಸೂಸತಾವ ಗಡಿಗಿಯಡಕಲಾ-

ಖಾಲಿ ಇಲ್ಲವ್ವಾ ಒಂದೂ ಮನಿ-ಮಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೈನದೆಮ್ಮಿ ನೋಡ ಹಾಲ ಸಮುದರಾ-
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ-
ಮಜ್ಜಿಗಿ ಒಯ್ತಾರ ಊರಂತೂರಾ-

ಸೂಲಕ್ಕೊಂದು ಬಂಗಾರ್‌ಬಳಿ ಜೋಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೂಡುವೆತ್ತು ಹಕ್ಕಿಗೆ ಸಿಂಗಾರಾ-
ತಿಂದ ರಿಣಾ ತೀರಸತಾವ ಪೂರಾ-
ಎತ್ತು ಅಲ್ಲ ನಮ್ಮನಿ ದೇವ್ರಾ-

ಬಸವಣ್ಣಿರದಂಥಾ ಮನಿಯದು ಕಾಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಗರಡಿಯ ಹುಡುಗರ ಹುರುಪು ಅದೇನಽ
ಕರಡಿ-ಹಲಿಗಿಮಜಲಿನ ಮೋಜೇನಽ-
ಬಯಲಾಟದ ಸುಖಕಿಲ್ಲ ಸಮಾನ-

ಕೇಳಿಲ್ಲೇನಽ ಲಾವಣಿ ಗೀಗೀ ಹಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ರಾಯ ಅರಸು ನಾನಾತಗ ರಾಣಿ-
ನಮ್ಮ ಪ್ರೀತಿಯೊಳು ಸ್ವಲ್ಪೂ ಕಾಣಿ-
ಬಂದೆ ಇಲ್ಲ ನೋಡ ನನ್ನ ತವರಾಣಿ-

ನಮ್ಮ ಸಂಸಾರ ಜೇನಿನ ಗೂಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪ್ಯಾಟಿಯೂರಿನಾ ಬಣ್ಣದ ಹೆಣ್ಣಽ-
ಮಾಟ ಮಾಡದಲೆ ಬಿಟ್ಟಾವೇನಽ-
ನಮ್ಮ ರಾಯ ನಮಗ ದಕ್ಕ್ಯಾನೇನಽ-

ಪ್ಯಾಟೀ ಊರಂಬ ಸುದ್ದೀ ತಗಿಬ್ಯಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಊರಕಾವಲಿಗೆ ಸೀಮಿಯ ಭರಮಾ-
ಪಾರೆ ಮಾಡತಾನ ಶ್ರೀ ಬಲಭೀಮಾ-
ಮೀರಿದ ದೇವತಿ ಗುಡಿಯೆಲ್ಲಮ್ಮಾ-

ಇವರಽ ಕರುಣಾ ತಪ್ಪಿದರೆಲ್ಲಾ ಕೇಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!

* * *

ನಮ್ಮ ಹಳ್ಳಿ ನಮಗ ಬಲೆ ಪಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!
————————————————————

6 thoughts on “ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ”

 1. ತ್ರಿವೇಣೀ ನಿಮಗೂ ಕುಟುಂಬದವರಿಗೂ ಹೊಸವರ್ಷದ ಶುಭಾಷಯಗಳು
  ಕಥಾಕಾನನದಲ್ಲಿ ಹಾಸ್ಯದ ಮಿಣುಕುಗಳಿವೆ ಒಮ್ಮೆ ಬನ್ನಿ…

 2. ನಿಮಗೇ ಹೊಸ ವರ್ಷದ ಶುಭಾಶಯಗಳು .
  ‘ಎಂಥಾ ಚಂದ ಬೆಳದಿಂಗಳ , ಜಗದ ಜನಕ ಮಂಗಳ’
  ಕೇಳೀರೆನ್ರಿ ? ಅದೂ ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಅವರದೇ . ಬಾಳಪ್ಪ ಹುಕ್ಕೇರಿ ಭಾಳ ಚಂದ ಹಾಡ್ಯಾರ .

 3. ಮಿಶ್ರಿಕೋಟಿಯವ್ರೇ, ನೀವು ಹೇಳಿದ ಹಾಡು ಕೇಳಿಲ್ಲ. ನಿಮ್ಮಲ್ಲಿದ್ದರೆ ಕೊಡ್ರಿ.

  ”ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೇ ನನ್ ಹೆಣ್ತಿಯಾಗು ಅಂದನಂತೆ’ – ಗಾದೆ ನೆನೆಸ್ಕೋಬ್ಯಾಡ್ರಿ ಮತ್ತ 🙂

 4. ನೀವು ಹೋದ್ ವರ್ಷ ಕೇಳಿದ್ದನ್ನ ಈ ವರ್ಷ ಕೊಡಲಿಕ್ಕೆ ಹತ್ತೇನಿ!
  ಸಾಲು ಹೆಚ್ಚು ಕಡಿಮೆ ಆಗಿರಬಹುದು – ನೆನಪಿನಿಂದ ಬರೆಯುತ್ತಿದ್ದೇನೆ

  ಎಂಥಾ ಛಂದ ಬೆಳದಿಂಗಳ
  ಜಗದ ಜನಕ ಮಂಗಳ

  ರಂಗೋಲಿ ಹಾಕ್ಯಾರ್ ಯಾರ್ ಹೇಳ
  ಮುಟ್ಟಿದರ ಮಾಸುವದೇನ

  ಹಿಟ್ಟ ಚೆಲ್ಲಿ ಬಿಟ್ಟಾರಂದ್ರ
  ಬೆಣ್ಣಿ ಹಾಂಗ ಮಿದುವೇನ ?
  ಹಾಲಿನ ಕೊಡಾ ಸೋರಿ ಸೋರಿ ಬಂತೇನ ?

  ಕಾದಾರಿದ ಹಾಲಿನೊಳಗ ಕೇಸರಿಯ ಕಂಪೇನ
  ಯಾಲಕ್ಕಿ ಕಂಪ ತಂಪೇನ ?
  ಸ್ವರ್ಗದ ತೆರಿ ತುಳುಕ್ಯಾಡತಾವೇನ ?

  ನೀವು ಆ ಹಾಡು ಬಾಳಪ್ಪ ಹುಕ್ಕೇರಿಯವರ ಜೇನುದನಿಯೊಳಗ ಕೇಳಿದ್ರ ಇನ್ನೂ ಛಲೋ !

 5. ಶ್ರೀಕಾಂತ್, ಸರಿಯಾಗಿ ಒಂದು ವರ್ಷದ ನಂತರ ಕವನ ಹುಡುಕಿ ತಂದಿದ್ದೀರಿ. ಧನ್ಯವಾದಗಳು. ತಡವಾದರೂ, ನಿಮ್ಮಿಂದ ಸಕಾರಾತ್ಮಕ ಉತ್ತರ ಸಿಗುತ್ತದೆಂದು ಮತ್ತೊಮ್ಮೆ ಖಾತರಿಯಾಯಿತು. 🙂

 6. ಅದು ಹಂಗಲ್ರೀ , ಹಾಡು ಕೇಳಿ ನೀವು ಹಾಕಿದ ಕಮೆಂಟು ನಾನು ನೋಡಿದ್ದೇ ನಿನ್ನೆ !

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.