ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಕವನ ಸಂಕಲನ : ನಲ್ವಾಡುಗಳು

-ಪಲ್ಲವಿ-
ನಮ್ಮ ಹಳ್ಳಿಯೂರಽ ನಮಗ ಪಾಡಽ-
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಊರಮುಂದ ತಿಳಿನೀರಿನ ಹಳ್ಳಽ-
ಬೇವು ಮಾವು ಹುಲಗಲ ಮರಚೆಳ್ಳಽ-
ದಂಡಿಗುಂಟ ನೋಡು ನೆಳ್ಳಽ ನೆಳ್ಳಽ-

ನೀರ ತರುವಾಗ ಗೆಣತ್ಯಾರ ಜೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ—


ನಮ್ಮ ಹಳ್ಳ ಕಾಶಿಯ ಹಿರಿಹೊಳಿಯ
ಒಮ್ಮ್ಯಾದರು ಬತ್ತಿಲ್ಲದು ತಿಳಿಯ-
ಬದಿಯ ತ್ವಾಟಗಳ ಬೆಳಸಿಗೆ ಕಳಿಯ-

ಹ್ಯಾಂಗ ಕೊಡತೈತಿ ಬಂದೊಮ್ಮೆ ನೋಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪಡಿವಿಯ ತುಂಬಾ ಕಾಳಿನ ಚೀಲಾ-
ನಡುಮನಿಯೊಳಗಽ ಗಳಿಗಿಯ ಸಾಲಾ-
ತುಂಬಿ ಸೂಸತಾವ ಗಡಿಗಿಯಡಕಲಾ-

ಖಾಲಿ ಇಲ್ಲವ್ವಾ ಒಂದೂ ಮನಿ-ಮಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೈನದೆಮ್ಮಿ ನೋಡ ಹಾಲ ಸಮುದರಾ-
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ-
ಮಜ್ಜಿಗಿ ಒಯ್ತಾರ ಊರಂತೂರಾ-

ಸೂಲಕ್ಕೊಂದು ಬಂಗಾರ್‌ಬಳಿ ಜೋಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಹೂಡುವೆತ್ತು ಹಕ್ಕಿಗೆ ಸಿಂಗಾರಾ-
ತಿಂದ ರಿಣಾ ತೀರಸತಾವ ಪೂರಾ-
ಎತ್ತು ಅಲ್ಲ ನಮ್ಮನಿ ದೇವ್ರಾ-

ಬಸವಣ್ಣಿರದಂಥಾ ಮನಿಯದು ಕಾಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಗರಡಿಯ ಹುಡುಗರ ಹುರುಪು ಅದೇನಽ
ಕರಡಿ-ಹಲಿಗಿಮಜಲಿನ ಮೋಜೇನಽ-
ಬಯಲಾಟದ ಸುಖಕಿಲ್ಲ ಸಮಾನ-

ಕೇಳಿಲ್ಲೇನಽ ಲಾವಣಿ ಗೀಗೀ ಹಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ರಾಯ ಅರಸು ನಾನಾತಗ ರಾಣಿ-
ನಮ್ಮ ಪ್ರೀತಿಯೊಳು ಸ್ವಲ್ಪೂ ಕಾಣಿ-
ಬಂದೆ ಇಲ್ಲ ನೋಡ ನನ್ನ ತವರಾಣಿ-

ನಮ್ಮ ಸಂಸಾರ ಜೇನಿನ ಗೂಡಽ
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಪ್ಯಾಟಿಯೂರಿನಾ ಬಣ್ಣದ ಹೆಣ್ಣಽ-
ಮಾಟ ಮಾಡದಲೆ ಬಿಟ್ಟಾವೇನಽ-
ನಮ್ಮ ರಾಯ ನಮಗ ದಕ್ಕ್ಯಾನೇನಽ-

ಪ್ಯಾಟೀ ಊರಂಬ ಸುದ್ದೀ ತಗಿಬ್ಯಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!


ಊರಕಾವಲಿಗೆ ಸೀಮಿಯ ಭರಮಾ-
ಪಾರೆ ಮಾಡತಾನ ಶ್ರೀ ಬಲಭೀಮಾ-
ಮೀರಿದ ದೇವತಿ ಗುಡಿಯೆಲ್ಲಮ್ಮಾ-

ಇವರಽ ಕರುಣಾ ತಪ್ಪಿದರೆಲ್ಲಾ ಕೇಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!

* * *

ನಮ್ಮ ಹಳ್ಳಿ ನಮಗ ಬಲೆ ಪಾಡಽ. . .
ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ!
————————————————————

6 thoughts on “ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ”

  1. ತ್ರಿವೇಣೀ ನಿಮಗೂ ಕುಟುಂಬದವರಿಗೂ ಹೊಸವರ್ಷದ ಶುಭಾಷಯಗಳು
    ಕಥಾಕಾನನದಲ್ಲಿ ಹಾಸ್ಯದ ಮಿಣುಕುಗಳಿವೆ ಒಮ್ಮೆ ಬನ್ನಿ…

  2. ನಿಮಗೇ ಹೊಸ ವರ್ಷದ ಶುಭಾಶಯಗಳು .
    ‘ಎಂಥಾ ಚಂದ ಬೆಳದಿಂಗಳ , ಜಗದ ಜನಕ ಮಂಗಳ’
    ಕೇಳೀರೆನ್ರಿ ? ಅದೂ ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಅವರದೇ . ಬಾಳಪ್ಪ ಹುಕ್ಕೇರಿ ಭಾಳ ಚಂದ ಹಾಡ್ಯಾರ .

  3. sritri says:

    ಮಿಶ್ರಿಕೋಟಿಯವ್ರೇ, ನೀವು ಹೇಳಿದ ಹಾಡು ಕೇಳಿಲ್ಲ. ನಿಮ್ಮಲ್ಲಿದ್ದರೆ ಕೊಡ್ರಿ.

    ”ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೇ ನನ್ ಹೆಣ್ತಿಯಾಗು ಅಂದನಂತೆ’ – ಗಾದೆ ನೆನೆಸ್ಕೋಬ್ಯಾಡ್ರಿ ಮತ್ತ 🙂

  4. Shreekant Mishrikoti says:

    ನೀವು ಹೋದ್ ವರ್ಷ ಕೇಳಿದ್ದನ್ನ ಈ ವರ್ಷ ಕೊಡಲಿಕ್ಕೆ ಹತ್ತೇನಿ!
    ಸಾಲು ಹೆಚ್ಚು ಕಡಿಮೆ ಆಗಿರಬಹುದು – ನೆನಪಿನಿಂದ ಬರೆಯುತ್ತಿದ್ದೇನೆ

    ಎಂಥಾ ಛಂದ ಬೆಳದಿಂಗಳ
    ಜಗದ ಜನಕ ಮಂಗಳ

    ರಂಗೋಲಿ ಹಾಕ್ಯಾರ್ ಯಾರ್ ಹೇಳ
    ಮುಟ್ಟಿದರ ಮಾಸುವದೇನ

    ಹಿಟ್ಟ ಚೆಲ್ಲಿ ಬಿಟ್ಟಾರಂದ್ರ
    ಬೆಣ್ಣಿ ಹಾಂಗ ಮಿದುವೇನ ?
    ಹಾಲಿನ ಕೊಡಾ ಸೋರಿ ಸೋರಿ ಬಂತೇನ ?

    ಕಾದಾರಿದ ಹಾಲಿನೊಳಗ ಕೇಸರಿಯ ಕಂಪೇನ
    ಯಾಲಕ್ಕಿ ಕಂಪ ತಂಪೇನ ?
    ಸ್ವರ್ಗದ ತೆರಿ ತುಳುಕ್ಯಾಡತಾವೇನ ?

    ನೀವು ಆ ಹಾಡು ಬಾಳಪ್ಪ ಹುಕ್ಕೇರಿಯವರ ಜೇನುದನಿಯೊಳಗ ಕೇಳಿದ್ರ ಇನ್ನೂ ಛಲೋ !

  5. sritri says:

    ಶ್ರೀಕಾಂತ್, ಸರಿಯಾಗಿ ಒಂದು ವರ್ಷದ ನಂತರ ಕವನ ಹುಡುಕಿ ತಂದಿದ್ದೀರಿ. ಧನ್ಯವಾದಗಳು. ತಡವಾದರೂ, ನಿಮ್ಮಿಂದ ಸಕಾರಾತ್ಮಕ ಉತ್ತರ ಸಿಗುತ್ತದೆಂದು ಮತ್ತೊಮ್ಮೆ ಖಾತರಿಯಾಯಿತು. 🙂

  6. Shreekant Mishrikoti says:

    ಅದು ಹಂಗಲ್ರೀ , ಹಾಡು ಕೇಳಿ ನೀವು ಹಾಕಿದ ಕಮೆಂಟು ನಾನು ನೋಡಿದ್ದೇ ನಿನ್ನೆ !

Leave a Reply to ಕಥಾ ಕಾನನ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿನ್ನ ಕರುಣೆಗೆ – ಚೆನ್ನವೀರ ಕಣವಿನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು

ಮೋಹನ ಮುರಲಿ – ಗೋಪಾಲಕೃಷ್ಣ ಅಡಿಗಮೋಹನ ಮುರಲಿ – ಗೋಪಾಲಕೃಷ್ಣ ಅಡಿಗ

ಕವಿ – ಗೋಪಾಲಕೃಷ್ಣ ಅಡಿಗ ೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ ೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? ಹೂವು

ಇಳಿದು ಬಾ ತಾಯೆ ಇಳಿದು ಬಾ – ಕುವೆಂಪುಇಳಿದು ಬಾ ತಾಯೆ ಇಳಿದು ಬಾ – ಕುವೆಂಪು

ಕವಿ – ಕುವೆಂಪು ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||