ಎಲ್ಲೋ ಕಗ್ಗತ್ತಲು ತುಂಬಿದ ಕಾಡಲ್ಲಿ
ಕತ್ತದುಮಿ, ಉಸಿರುಗಟ್ಟಿಸುವ ಗೂಡಲ್ಲಿ,
ಮಾನವೀಯತೆ ಮಾರಿಕೊಂಡ
ಕಾಡುಜನಗಳ ನಡುವೆ
ಅವಮಾನ, ಆತಂಕ, ನೋವು ತುಂಬಿ
ಜಿಗುಟು ಜಿಗುಟಾದ ಕಪ್ಪು ನೆಲದಲ್ಲಿ
ಜಾರದಂತೆ ಗಟ್ಟಿಯಾಗಿ ಕಾಲೂರಿ ನಿಂತು
ಭರವಸೆಯ ಬೆಳಕಿಗಾಗಿ ದಿಕ್ಕುಗಳೆಡೆಗೆ
ಅಸೆ ನೋಟ ಹರಿಸುತ್ತಾ
ಮೈ ಮರೆತು ಕಾದುಕೂತು,
ಮನದೆಲ್ಲಾ ಮಧುರ ಭಾವನೆಗಳ
ಬಂಡವಾಳ ಹೂಡಿ
ಸುಂದರ ಕವಿತೆ ಬರೆವ
ನನ್ನ ಪ್ರೇಮದ ಕವಿ,
ನಿನ್ನ ಮಾಯಾ ಹಸ್ತದಿಂದ ಮೂಡಿ ಬಂದ
ಈ ಜಡಕವಿತೆಗಳೇ ಇಷ್ಟೊಂದು
ಚಂದವಿರುವಾಗ
ಇವುಗಳ ಉಗಮಸ್ಥಾನವಾದ
ನಿನ್ನ ಹಿಡಿಯಾಕಾರದ ಹೃದಯ
ಎಷ್ಟು ಚಂದವಿರಬಹುದು?
ಆ ಹೃದಯಕ್ಕೆ ತೆರೆತೆರೆಯಾಗಿ ಅಪ್ಪಳಿಸುವ
ಬೆಚ್ಚನೆ ಕೆಂಪು ರಕ್ತದ
ಅಚ್ಚ ಬಿಳುಪು ಜೀವನಪ್ರೇಮ
ಮತ್ತೆಷ್ಟು ಚಂದವಿರಬಹುದು?
************* ************
ಬೆಚ್ಚನೆ ಕೆಂಪು ರಕ್ತದಿಂದ ಉಕ್ಕುವ ಅಚ್ಚ ಬಿಳುಪು ಜೀವನ ಪ್ರೇಮದ ಚಂದ ಹುಟ್ಟಿಸಿದ ಅಚ್ಚರಿಯೇ ಇಷ್ಟು ಅಂದವಿರುವಾಗ, ಇವೆಲ್ಲದರ ಉಗಮ ಸ್ಥಾನ ಇನ್ನೆಂಥಾದ್ದಿರಬಹುದು?
ಕವಿತೆ ಸೊಗಸಾಗಿದೆ, ಮನೋವೇಧಕವಾಗಿದೆ. ಸಣ್ಣದೊಂದು ವಿರೋಧ, ‘ ಅಚ್ಚು ಬಿಳುಪು ಜೀವನ ಪ್ರೇಮ’ ಅಂತ ಹೇಳಲಿಕ್ಕೆ. ಹಾಗೆ ಹೇಳುವದು ಬಿಳಿಯರ ವರ್ಣೋತ್ತಮಿಕೆಯ ಘೋಷಣೆಯನ್ನು ಒಪ್ಪಿಕೊಂಡಂತಲ್ಲವೆ?
ಓಹೋ! ಸುನಾಥರೇ, ಈ ಕವನ ನನ್ನ ಚಿಕ್ಕ ವಯಸ್ಸಿನಲ್ಲಿ ಬರೆದಿದ್ದು. ಆಗ ನನಗೆ ವರ್ಣ ಭೇದ, ವರ್ಗ ಭೇದಗಳ ಬಗೆಗೆ ಅಷ್ಟಾಗಿ ತಿಳಿದೇ ಇರಲಿಲ್ಲವೆಂದುಕೊಳ್ಳುತ್ತೇನೆ. ಬಹುಶಃ ಅಚ್ಚ ಬಿಳುಪು ಎಂಬುದನ್ನು ನಿಷ್ಕಳಂಕ, ಶುದ್ಧ ಎಂಬ ಅರ್ಥದಲ್ಲಿ ಬಳಸಿರಬಹುದೇನೋ. 🙂 ಕವನದ ಜೊತೆಗೆ ಬರೆದ ದಿನಾಂಕ ಕೂಡ ಹಾಕಬೇಕಿತ್ತು. ಆದರೆ ನನ್ನಲ್ಲಿ ಪತ್ರಿಕೆಯ ಕತ್ತರಿಸಿದ ತುಣುಕುಗಳು ಮಾತ್ರ ಇವೆ. ಅದರಲ್ಲಿ ದಿನಾಂಕ ಲಭ್ಯವಿಲ್ಲ.
ಜ್ಯೋತಿ, ಪ್ರತಿಕ್ರಿಯೆಗೆ ಧನ್ಯವಾದಗಳು.
Sorry, ತ್ರಿವೇಣಿಯವರೆ! ಕವಿತೆ ತುಂಬಾ ಚೆನ್ನಾಗಿದೆ. ಈ ಕವಿತೆ ಚಿಕ್ಕ ವಯಸ್ಸಿನಲ್ಲಿಯೆ ನೀವು ಬೆಳೆಯಿಸಿಕೊಳ್ಳುತ್ತಿದ್ದ ಸಾಮಾಜಿಕ ಪ್ರಜ್ಞೆಯನ್ನು ತೋರಿಸುತ್ತದೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು.