ಕವಿ : ಎಂ. ಗೋಪಾಲಕೃಷ್ಣ ಅಡಿಗ
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯಕಿ : ರತ್ನಮಾಲಾ ಪ್ರಕಾಶ್
ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು
ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು
ಎದೆಯು ಮರಳಿ ತೊಳಲುತಿದೆ….
ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿದೆ ಮನದಲಿ
ಎದೆಯು ಮರಳಿ ತೊಳಲುತಿದೆ….
ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ ?
ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ ?
ಎದೆಯು ಮರಳಿ ತೊಳಲುತಿದೆ….
ನಮಸ್ಕಾರ ತ್ರಿವೇಣಿಯವರಿಗೆ ,
ಒಳ್ಳೆ ಕವನ ಆಯ್ಕೆ ಮಾಡಿದೀರಾ..
>>ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿದೆ ಮನದಲಿ
ವೀಚಿ ವೀಚಿ ಅಂದ್ರೇನು?
೧. ವೀಚಿ (ಸಂ) (ನಾ) ಸಣ್ಣಅಲೆ, ತರಂಗ