‘ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು!’
ರಾಗದಲ್ಲಿ ಜೀವತುಂಬಿ ಹಾಡುತ್ತಿದ್ದ ಸೋನು
ಎಂಥ ಸಾಲು, ಎಷ್ಟು ಚಂದ! ತಲೆದೂಗಿದೆ ನಾನು
ಮತ್ತೆ ಮತ್ತೆ ಹಿಂದೆ ಹೋಗಿ ಹಾಡ ಹಿಡಿದು ಸವಿದೆನು
ಕರೆಯಿತು ಮರುಕ್ಷಣವೇ ಫೋನು
ಹಾಡನಲ್ಲೇ ಸ್ತಬ್ಧಗೊಳಿಸಿ ಕೇಳಿದೆ ‘ಏನು?’
ಅತ್ತ ಕಡೆಯಿಂದ ಬಂತು ಎಣಿಸದೊಂದು ಸುದ್ದಿ;
ಯಾಕೆ? ಏನಾಯಿತು? ಎಲ್ಲಿ? ಹೇಗಾಯಿತು?
ಈಗ ಬರೀ ಪ್ರಶ್ನೆಗಳದೇ ಸರದಿ
ಕರಗಿ ಕಿವಿಗೆ ಹರಿಯುತಿತ್ತು
ಕಾದ ಸೀಸದಂಥ ವರದಿ.
ಫೋನ್ ತನ್ನ ಕೆಲಸ ಮುಗಿಸಿ
ಹೃದಯ ಮುರಿಸಿ ಸುಮ್ಮನಾಯಿತು
ನೋವು, ನೆನಪು ಬೆರೆತ ಚಿತ್ರ ಬಿಡಿಸಿಕೊಂಡಿತು
ಇಷ್ಟು ನಗುವಿಗೆಷ್ಟು ಅಳು
ಎಷ್ಟು ಕ್ಷಣಿಕ ನಮ್ಮ ಬಾಳು
ವಿರಾಗದ ಭಾವವೊಂದು ಮನವನಾಳಿತು.
ನಿಂತ ನೀರಿನಂತ ಟಿವಿಗೀಗ
ಚಲನೆ ನೀಡಿದೆ
ಹಾಡು ಹರಿದುಬಂತು ಮತ್ತೆ
ನಾನು ನೋಡಿದೆ
ಅದೇ ಸೋನು – ಅದೇ ನಾನು
ಈ ಬಾರಿ ಅಲ್ಲಿದ್ದೆ
ನಾನಲ್ಲದ ನಾನು!
ನೋವು-ನಲಿವುಗಳಿಗೆ ನಡುವೆ
ಕೂದಲೆಳೆಯ ಅಂತರ
ಸಹಿಸಬೇಕು ಮರೆಯಬೇಕು
ಉಂಟೇ ಗತ್ಯಂತರ?
* * * * * *
“ನೋವು-ನಲಿವುಗಳಿಗೆ ನಡುವೆ
ಕೂದಲೆಳೆಯ ಅಂತರ
ಸಹಿಸಬೇಕು ಮರೆಯಬೇಕು
ಉಂಟೇ ಗತ್ಯಂತರ?”
= ಜೀವನ
Beautiful poem!
ಜ್ಯೋತಿ, ಸುನಾಥ್ ಧನ್ಯವಾದಗಳು.
ಶತಕ ಮುಗಿಸಿರುವ ಜ್ಯೋತಿ, ಸುನಾಥ, ಮುಗಿಸಲಿರುವ ಭಾಗವತರಿಗೆ ಅಭಿನಂದನೆಗಳು.
ಸುನಾಥರೇ, ಸುನಾಥ ಮತ್ತು sunaath ಎಂಬ ಹೆಸರಿನಿಂದ ನೀವು ಹಾಕಿರುವ ಮಾಹಿತಿಪೂರ್ಣ ಕಾಮೆಂಟುಗಳ ಸಂಖ್ಯೆ ಯಾವಾಗಲೋ ಶತಕ ದಾಟಿತ್ತು. 🙂
ಹೃದಯ ಮುರಿದ ಪೋನ್ ಈಗ ಹೇಗಿದೆ
ನಿಮ್ಮ ಕಡೆ ಎಲ್ಲಾ ಸೌಖ್ಯವಲ್ಲವೇ..
ಕಾಳಜಿ ಇರಲಿ
Thanks shiv.
ಕಳೆದವಾರ ಬಂದೆರಗಿದ ಅಕಾಲ-ಅಪಮೃತ್ಯುವಿನ ವಾರ್ತೆಯಿಂದ ನಾನು ತಲ್ಲಣಿಸಿಹೋಗಿದ್ದೆ. ಈಗಲೂ ನೋವಿದ್ದೇ ಇದೆ. ಅದರ ತೀವ್ರತೆ ಕಡಿಮೆಯಾಗಿದೆ. ಎಷ್ಟೆಂದರೂ ಕಾಲಪುರುಷ ಕರುಣಾಳುವಲ್ಲವೇ!